ಮಂಗಳವಾರ, ಸೆಪ್ಟೆಂಬರ್ 21, 2021
26 °C
ಮೊದಲ ದಿನ ಅಮೆರಿಕದ ಈಜುಪಟುಗಳ ಪ್ರಾಬಲ್ಯ

ಚಿನ್ನ ಗೆದ್ದು ಬೆರಗು ಮೂಡಿಸಿದ ಅಹ್ಮದ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಒಲಿಂಪಿಕ್ಸ್‌ ಈಜುಕೊಳದಲ್ಲಿ ಭಾನುವಾರ ಅಚ್ಚರಿಯ ಫಲಿತಾಂಶ ಹೊರಬಿದ್ದಿತು.

ಟ್ಯುನಿಷಿಯಾದ ಚಿಗುರು ಮೀಸೆಯ ಹುಡುಗ ಅಹ್ಮದ್‌ ಹಫ್ನಾವುಯಿ 400 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ಚಿನ್ನದ ಪದಕ ಜಯಿಸಿ ಬೆರಗು ಮೂಡಿಸಿದರು.

ಹಿಂದಿನ ಒಲಿಂಪಿಕ್ಸ್‌ಗಳಲ್ಲಿ ಅಮೆರಿಕದವರೇ ಪ್ರಾಬಲ್ಯ ಮೆರೆದಿದ್ದರು. ಹೀಗಾಗಿ ಎಲ್ಲರ ಕಣ್ಣುಗಳೂ ಈ ದೇಶದ ಈಜುಪಟುಗಳ ಮೇಲೆಯೇ ನೆಟ್ಟಿದ್ದವು. ಎಂಟು ಲ್ಯಾಪ್‌ಗಳ ರೇಸ್‌ನಲ್ಲಿ ತನಗಿಂತಲೂ ಹಿರಿಯ ಹಾಗೂ ಅನುಭವಿ ಈಜುಪಟುಗಳನ್ನು ಹಿಂದಿಕ್ಕಿದ 18 ವರ್ಷದ ಅಹ್ಮದ್‌ ಖುಷಿಯಿಂದ ಹಿಗ್ಗಿದರು.

ಈಜುಕೊಳಕ್ಕೆ ಧುಮುಕಿದ ಕ್ಷಣದಿಂದಲೇ ವೇಗವಾಗಿ ನೀರನ್ನು ಸೀಳಿಕೊಂಡು ಮುಂದೆ ಸಾಗಿದ ಅವರು 3 ನಿಮಿಷ 43.36 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು.

ಆಸ್ಟ್ರೇಲಿಯಾದ ಜಾಕ್‌ ಮೆಕ್‌ಲಾಹ್ಲಿನ್‌ ಈ ವಿಭಾಗದ ಬೆಳ್ಳಿಯ ಪದಕ ಪಡೆದರು. ಅವರು ನಿಗದಿತ ಗುರಿ ಮುಟ್ಟಲು 3 ನಿಮಿಷ 43.52 ಸೆಕೆಂಡು ತೆಗೆದುಕೊಂಡರು. ಅಮೆರಿಕದ ಕೀರನ್‌ ಸ್ಮಿತ್‌ (3:43.94) ಕಂಚಿನ ಪದಕಕ್ಕೆ ತೃಪ್ತರಾದರು. 

‘ನೀರಿಗೆ ಧುಮುಕಿದ ಕೂಡಲೇ ಪದಕದ ಬಗ್ಗೆಯೇ ಯೋಚಿಸುತ್ತಿದೆ. ಸಮಯದ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ’ ಎಂದು ಅಹ್ಮದ್‌ ಪ್ರತಿಕ್ರಿಯಿಸಿದರು.

ಅಹ್ಮದ್‌, ಅವಸ್‌ ಮೆಲೌಲಿ ನಂತರ ಒಲಿಂಪಿಕ್ಸ್‌ ಈಜು ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ ಟ್ಯುನಿಷಿಯಾದ ಕ್ರೀಡಾಪಟು ಎಂಬ ಹಿರಿಮೆ ತಮ್ಮದಾಗಿಸಿಕೊಂಡರು. 37 ವರ್ಷದ ಮೆಲೌಲಿ, 2008ರ ಬೀಜಿಂಗ್‌ ಒಲಿಂಪಿಕ್ಸ್‌ನ 1,500 ಮೀಟರ್ಸ್‌ ಸ್ಪರ್ಧೆಯಲ್ಲಿ ಚಿನ್ನಕ್ಕೆ ಮುತ್ತಿಟ್ಟಿದ್ದರು.   

ಚೇಸ್‌ಗೆ ಚಿನ್ನ: ಪುರುಷರ 400 ಮೀಟರ್ಸ್‌ ವೈಯಕ್ತಿಕ ಮೆಡ್ಲೆಯಲ್ಲಿ ಅಮೆರಿಕದ ಚೇಸ್‌ ಕಲಿಸ್‌ ಚಿನ್ನ ಜಯಿಸಿದರು. ಅವರು 4 ನಿಮಿಷ 09.42 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು. ಅಮೆರಿಕದವರೇ ಆದ ಜೇ ಲಿದರ್‌ಲ್ಯಾಂಡ್‌ (4:10.28) ಮತ್ತು ಆಸ್ಟ್ರೇಲಿಯಾದ ಬ್ರೆಂಡನ್‌ ಸ್ಮಿತ್‌ (4:10.38) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಪಡೆದರು.

ಮಹಿಳೆಯರ 400 ಮೀಟರ್ಸ್‌ ವೈಯಕ್ತಿಕ ಮೆಡ್ಲೆ ಸ್ಪರ್ಧೆಯಲ್ಲಿ ಜಪಾನ್‌ನ ಯೂಹಿ ಒಹಾಶಿ (4:32.08) ಚಿನ್ನದ ಪದಕ ಗೆದ್ದರು. ಅಮೆರಿಕದ ಎಮಾ ಯೆಮಂಟ್‌ (4:32.76) ಬೆಳ್ಳಿ ಮತ್ತು ಹ್ಯಾಲಿ ಫ್ಲಿಂಕಿಂಗರ್‌ (4:34.90) ಕಂಚು ಜಯಿಸಿದರು.

ಮಹಿಳೆಯರ 4X100 ಮೀ. ಫ್ರೀಸ್ಟೈಲ್‌ ರಿಲೆ ಸ್ಪರ್ಧೆಯ ಚಿನ್ನ ಆಸ್ಟ್ರೇಲಿಯಾದ ಪಾಲಾಯಿತು. ಈ ತಂಡ 3 ನಿಮಿಷ 29.69 ಸೆಕೆಂಡುಗಳಲ್ಲಿ ಗುರಿ ತಲುಪಿ ವಿಶ್ವ ದಾಖಲೆ ನಿರ್ಮಿಸಿತು. ಕೆನಡಾ (3:32.78) ಮತ್ತು ಅಮೆರಿಕ (3:32.81) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದವು.

ಮಾನಾ, ಶ್ರೀಹರಿಗೆ ನಿರಾಸೆ

ಭಾರತದ ಈಜುಪಟುಗಳಾದ ಶ್ರೀಹರಿ ನಟರಾಜನ್‌ ಹಾಗೂ ಮಾನಾ ಪಟೇಲ್‌ ಸೆಮಿಫೈನಲ್‌ ಪ್ರವೇಶಿಸಲು ವಿಫಲರಾದರು. 100 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ನ ಹೀಟ್ಸ್‌ನಲ್ಲಿ ಶ್ರೀಹರಿ ಆರನೇ ಸ್ಥಾನ (54.31ಸೆ) ಪಡೆದರು. ಒಟ್ಟಾರೆ ಅವರು 27ನೇಯವರಾದರು. ಈ ವಿಭಾಗದಲ್ಲಿ ಒಟ್ಟು 40 ಈಜುಪಟುಗಳು ಪಾಲ್ಗೊಂಡಿದ್ದರು. ಮಾನಾ 1 ನಿಮಿಷ 05.20 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಅವರು ಒಟ್ಟಾರೆ 39ನೇಯವರಾಗಿ ಸ್ಪರ್ಧೆ ಕೊನೆಗೊಳಿಸಿದರು. 

***

ಪದಕವನ್ನು ಟ್ಯುನಿಷಿಯಾದ ಜನರಿಗೆ ಅರ್ಪಿಸುತ್ತೇನೆ. ವಿಜಯ ವೇದಿಕೆಯಲ್ಲಿ ರಾಷ್ಟ್ರಗೀತೆ ಮೊಳಗಿದ ವೇಳೆ ಖುಷಿಯಿಂದ ಕಣ್ಣುಗಳು ತೇವಗೊಂಡವು. ಈ ಸಾಧನೆ ಹೆಮ್ಮೆಯ ಭಾವ ಮೂಡಿಸಿದೆ.

- ಅಹ್ಮದ್‌ ಹಫ್ನಾವುಯಿ, ಟ್ಯುನಿಷಿಯಾದ ಈಜುಪಟು

***

ಅಹ್ಮದ್‌ ಅವರು ಅದ್ಭುತ ರೀತಿಯಲ್ಲಿ ಈಜಿದರು. ಒಲಿಂಪಿಕ್ಸ್‌ನಲ್ಲಿ ಯಾರು ಬೇಕಾದರೂ ಪದಕ ಗೆಲ್ಲಬಹುದು ಎಂಬುದನ್ನು ಅವರು ನಿರೂಪಿಸಿದ್ದಾರೆ.

- ಮೈಕಲ್‌ ಫೆಲ್ಪ್ಸ್‌, ಅಮೆರಿಕದ ಹಿರಿಯ ಈಜುಪಟು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು