ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ ಕ್ರೀಡಾಕೂಟಕ್ಕಾಗಿ ಜಪಾನ್‌ಗೆ ಬಂದ ಯುಗಾಂಡಾ ಕೋಚ್‌ಗೆ ಡೆಲ್ಟಾ: ತಳಮಳ

ಒಲಿಂಪಿಕ್ಸ್‌ ಆರಂಭಕ್ಕೆ ದಿನಗಣನೆ
Last Updated 25 ಜೂನ್ 2021, 6:10 IST
ಅಕ್ಷರ ಗಾತ್ರ

ಟೋಕಿಯೊ (ರಾಯಿಟರ್ಸ್): ಒಲಿಂಪಿಕ್‌ ಕ್ರೀಡೆಗಳಿಗಾಗಿ ಜ‍ಪಾನ್‌ಗೆ ಬಂದಿರುವ ಯುಗಾಂಡ ತಂಡದ ಸದಸ್ಯನಿಗೆ ಸೋಂಕು ಪತ್ತೆ ಪರೀಕ್ಷೆಯಲ್ಲಿ ಡೆಲ್ಟಾ ರೂಪಾಂತರ ವೈರಸ್‌ ಇರುವುದು ದೃಢಪಟ್ಟಿದೆ. ಕ್ರೀಡೆಗಳ ಆರಂಭಕ್ಕೆ ಒಂದು ತಿಂಗಳೂ ಇಲ್ಲ. ಅಷ್ಟರಲ್ಲಿ ಹೊಸ ಅಲೆಯ ತಳಮಳ ಶುರುವಾಗಿದೆ.

ಆಫ್ರಿಕಾ ಖಂಡದ ಈ ತಂಡ, ತನಗೆ ಆತಿಥ್ಯದ ತಾಣವಾಗಿರುವ ಇಝುಮಿಸಾನೊ ನಗರದಲ್ಲಿ ಉಳಿದುಕೊಂಡಿದೆ. ಕಳೆದ ಶನಿವಾರ ಬಂದಿಳಿದ ತಂಡದ ಕೋಚ್‌ ಒಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಬುಧವಾರ ಬಂದಿಳಿದ ಇದೇ ದೇಶದ ಅಥ್ಲೀಟ್‌ ಒಬ್ಬರಲ್ಲೂ ಸೋಂಕು ಖಚಿತಪಟ್ಟಿದೆ. ಇದರ ವಿಶ್ಲೇಷಣೆ ನಡೆಯುತ್ತಿದೆ.

‘ಶನಿವಾರ ಪತ್ತೆಯಾದ ಸೋಂಕು ರೂಪಾಂತರಿತ ಡೆಲ್ಟಾ ಎನ್ನುವುದು ಖಚಿತಪಟ್ಟಿದೆ ಎಂದು ಒಲಿಂಪಿಕ್‌ ಸಚಿವೆ ಟಮಾಯೊ ಮಾರುಕಾವಾ ತಿಳಿಸಿದ್ದಾರೆ. ಖಚಿತಪಟ್ಟ ಎರಡನೇ ಪ್ರಕರಣದ ವಿಶ್ಲೇಷಣೆ ಪ್ರಗತಿಯಲ್ಲಿದೆ’ ಎಂದು ಎನ್‌ಎಚ್‌ಕೆ ಪಬ್ಲಿಕ್‌ ಟಿ.ವಿ. ವರದಿ ಮಾಡಿದೆ.

‘ಈ ಸಂಬಂಧ ಇತರ ಸಚಿವರ ಜೊತೆ ಸಮಾಲೋಚನೆ ನಡೆಸಲಾಗುವುದು. ಮುಂದೆ ಏನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ವೈದ್ಯ ಸಿಬ್ಬಂದಿ ಜೊತೆ ಚರ್ಚೆ ನಡೆಸಲಾಗುವುದು’ ಎಂದು ಮಾರುಕಾವಾ ತಿಳಿಸಿದ್ದಾರೆ.

ಈ ಹಿಂದೆ ಇತರ ದೇಶಗಳನ್ನು ಪೀಡಿಸಿದ ರೀತಿ ಕೊರೊನಾ ಸೋಂಕು ಜಪಾನ್‌ನಲ್ಲಿ ಸ್ಫೋಟಗೊಂಡಿರಲಿಲ್ಲ. ಆದರೆ ನಾಲ್ಕನೇ ಅಲೆ ಆರಂಭವಾದ ಮೇಲೆ ಪರದಾಟ ಕಾಣುತ್ತಿದೆ. ಒಟ್ಟಾರೆ ಸೋಂಕು ಪ್ರಮಾಣ ಅಂಕೆಯಲ್ಲಿರುವ ಕಾರಣ ಮತ್ತು ಲಸಿಕೆ ನೀಡುವ ಪ್ರಕ್ರಿಯೆ ಚುರುಕಾಗಿರುವುದರಿಂದ ಟೋಕಿಯೊದಲ್ಲಿ ಹೇರಲಾಗಿದ್ದ ತುರ್ತುಸ್ಥಿತಿಯನ್ನು ಸಡಿಲಗೊಳಿಸಲಾಗುತ್ತಿದೆ.

ಆದರೆ ಪ್ರಕರಣಗಳು ಮತ್ತೆ ಏರುಗತಿ ಕಾಣಬಹುದು ಹಾಗೂ ಹೊಸ ತಳಿ ವೇಗವಾಗಿ ಹಬ್ಬುವ ಸಾಮರ್ಥ್ಯ ಹೊಂದಿರುವ ಕಾರಣ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಟೋಕಿಯೊದಲ್ಲಿ ಗುರುವಾರ 570 ಕೋವಿಡ್‌ ಪ್ರಕರಣಗಳು ಖಚಿತಗೊಂಡಿವೆ. ವಾರದ ಹಿಂದೆ ಇದೇ ದಿನ 452 ಪ್ರಕರಣಗಳು ವರದಿಯಾಗಿದ್ದು, ಏರಿಕೆಯನ್ನು ಸೂಚಿಸುತ್ತಿದೆ.

ಸುರಕ್ಷಿತ ಮತ್ತು ನಿರಾತಂಕದ ವಾತಾವರಣದಲ್ಲಿ ಕ್ರೀಡೆಗಳನ್ನು ನಡೆಸಲಾಗುವುದು ಎಂದು ಜಪಾನ್‌ ಭರವಸೆ ನೀಡಿದೆ. ಜುಲೈ 23ರಂದು ಕ್ರೀಡೆಗಳು ಆರಂಭವಾಗಲಿವೆ. ಆದರೆ ಒಲಿಂಪಿಕ್ಸ್‌, ಸರಳವಾಗಿ ನಡೆಸುವ ಸಾಧ್ಯತೆಯ ಬಗ್ಗೆಯೂ ಜಪಾನೀಯರು ಸಂದೇಹ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT