ಶುಕ್ರವಾರ, ಜೂನ್ 5, 2020
27 °C
ಪಿಎಚ್‌ಎಫ್‌ ಮಹಾ ಕಾರ್ಯದರ್ಶಿ ಆಸೀಫ್‌ ಬಾಜ್ವಾ ಹೇಳಿಕೆ

ಕೊರೊನಾದಿಂದಾಗಿ ಪಾಕ್‌ ಹಾಕಿಗೆ ಆಪತ್ತು

ಪಿಟಿಐ Updated:

ಅಕ್ಷರ ಗಾತ್ರ : | |

ಕರಾಚಿ: ‘ಕೋವಿಡ್‌–19 ಪಿಡುಗಿನಿಂದಾಗಿ ಪಾಕಿಸ್ತಾನದಲ್ಲಿ ಹಾಕಿ ಕ್ರೀಡೆಯು ಅವಸಾನದತ್ತ ಸಾಗಿದೆ’ ಎಂದು ಪಾಕಿಸ್ತಾನ ಹಾಕಿ ಫೆಡರೇಷನ್‌ನ (ಪಿಎಚ್‌ಎಫ್‌) ಮಹಾ ಕಾರ್ಯದರ್ಶಿ ಆಸೀಫ್‌ ಬಾಜ್ವಾ ಆತಂಕ ವ್ಯಕ್ತಪಡಿಸಿದ್ದಾರೆ.

‘ಪಾಕ್‌ ಹಾಕಿಯು ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿತ್ತು. ಕೊರೊನಾದಿಂದಾಗಿ ಎಲ್ಲಾ ಚಟುವಟಿಕೆಗಳೂ ಸ್ತಬ್ಧಗೊಂಡಿರುವುದರಿಂದ ಅಲ್ಪ ಸ್ವಲ್ಪ ಆದಾಯಕ್ಕೂ ಕುತ್ತು ಬಂದಿದೆ. ಹೀಗಾಗಿ ಹಣಕಾಸಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿದೆ’ ಎಂದಿದ್ದಾರೆ.

‘ಪಾಕ್‌ ಹಾಕಿಗೆ ವಿಶಿಷ್ಟ ಪರಂಪರೆ ಇದೆ. ನಮ್ಮ ತಂಡವು ಒಲಿಂಪಿಕ್ಸ್‌ನಲ್ಲಿ ಮೂರು ಚಿನ್ನದ ಪದಕಗಳನ್ನು ಜಯಿಸಿದೆ. ನಾಲ್ಕು ಬಾರಿ ವಿಶ್ವಕಪ್‌ ಗೆದ್ದಿದೆ. ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ತಂಡದಿಂದ ಈಗ ಹೇಳಿಕೊಳ್ಳುವಂತಹ ಸಾಮರ್ಥ್ಯ ಮೂಡಿಬರುತ್ತಿಲ್ಲ. ಹೀಗಾಗಿ ಪ್ರಾಯೋಜಕತ್ವ ನೀಡಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದೆ’ ಎಂದು ಅವರು ಹೇಳಿದ್ದಾರೆ.

‘ಹಾಕಿ ಚಟುವಟಿಕೆಗಳು ನಿಂತು ಹೋಗಿರುವುದರಿಂದ ಬಹುತೇಕ ಆಟಗಾರರು ನಿರುದ್ಯೋಗಿಗಳಾಗಿದ್ದಾರೆ. ಅವರಿಗೆ ನೆರವು ನೀಡಲೂ ಈಗ ನಮ್ಮ ಬಳಿ ಹಣ ಇಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

‘ಕೊರೊನಾ ಬಿಕ್ಕಟ್ಟು ಬಗೆಹರಿದು ಜನಜೀವನ ಸಹಜ ಸ್ಥಿತಿಗೆ ಮರಳಿದ ಬಳಿಕ ಹಾಕಿ ಚಟುವಟಿಕೆಗಳು ಗರಿಗೆದರಬಹುದು. ಆಗ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ನಮ್ಮ ಸೀನಿಯರ್‌ ಹಾಗೂ ಜೂನಿಯರ್‌ ತಂಡಗಳನ್ನು ವಿದೇಶಗಳಿಗೆ ಕಳುಹಿಸಬೇಕಾಗುತ್ತದೆ. ಅದಕ್ಕೆ ಸಾಕಷ್ಟು ಹಣ ಬೇಕಾಗುತ್ತದೆ. ಹೀಗಾಗಿ ಸರ್ಕಾರ ಹಾಗೂ ಕಾರ್ಪೊರೇಟ್‌ ವಲಯದವರು ನೆರವಿನ ಹಸ್ತ ಚಾಚಬೇಕು’ ಎಂದು ಮನವಿ ಮಾಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು