ಕೊಚ್ಚಿಯಲ್ಲಿ ಇಂದಿನಿಂದ ವಾಲಿಬಾಲ್ ಹಬ್ಬ

7
ಚೊಚ್ಚಲ ಲೀಗ್‌ಗೆ ಚಾಲನೆ: ಸೂಪರ್‌ ಸರ್ವ್‌, ಸೂಪರ್ ಪಾಯಿಂಟ್‌‌ಗಳ ರೋಮಾಂಚನ

ಕೊಚ್ಚಿಯಲ್ಲಿ ಇಂದಿನಿಂದ ವಾಲಿಬಾಲ್ ಹಬ್ಬ

Published:
Updated:

ಕೊಚ್ಚಿ: ಕ್ರೀಡಾಪ್ರಿಯರು ಕಾತರದಿಂದ ಕಾಯುತ್ತಿರುವ ಪ್ರೊ ವಾಲಿಬಾಲ್ ಲೀಗ್‌ಗೆ (ಪಿವಿಎಲ್‌) ಇಲ್ಲಿ ಶನಿವಾರ ಚಾಲನೆ ಸಿಗಲಿದೆ.

ಆರು ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು ಮೊದಲ 12 ಪಂದ್ಯಗಳು ಕೊಚ್ಚಿಯಲ್ಲಿ ನಡೆಯಲಿವೆ. ಸೆಮಿಫೈನಲ್‌ ಮತ್ತು ಫೈನಲ್ ಸೇರಿದಂತೆ ಆರು ಪಂದ್ಯಗಳಿಗೆ ಚೆನ್ನೈ ಆತಿಥ್ಯ ವಹಿಸಲಿದೆ. ಅಂತಿಮ ಪಂದ್ಯ ಇದೇ 22ರಂದು ನಡೆಯಲಿದೆ.

ರಾಜೀವಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಕೊಚ್ಚಿ ಬ್ಲೂ ಸ್ಪೈಕರ್ಸ್ ಮತ್ತು ಯು ಮುಂಬಾ ವಾಲಿ ತಂಡಗಳು ಸೆಣಸಲಿವೆ. ವಿದೇಶಿ ಆಟಗಾರರಾದ ಒಲಿಂಪಿಕ್ ಪದಕ ವಿಜೇತ ಡೇವಿಡ್ ಲೀ, ನೋವಿಕಾ ಜೆಲಿಕಾ,ಪಾಲ್‌ ಲೋಟ್‌ಮನ್‌, ರೂಡಿ ವೆರೋಫ್‌ ಮುಂತಾದವರು ಲೀಗ್‌ಗೆ ಕಳೆ ತುಂಬುವ ನಿರೀಕ್ಷೆ ಇದೆ.

ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯುವ ಪಂದ್ಯಗಳು ಐದು ಸೆಟ್ ಒಳಗೊಂಡಿರುತ್ತವೆ. ಮೊದಲು 15 ಪಾಯಿಂಟ್ ಗಳಿಸುವ ತಂಡ ಸೆಟ್‌ ಗೆಲ್ಲಲಿದೆ. ಗೆದ್ದ ತಂಡಕ್ಕೆ ಎರಡು ಪಾಯಿಂಟ್‌ಗಳು ಲಭಿಸಲಿವೆ. ತಂಡವೊಂದು 5–0ಯಿಂದ ಗೆದ್ದರೆ ವೈಟ್‌ವಾಷ್ ಎಂದು ಹೇಳಲಾಗುವುದು. ಈ ಸಾಧನೆ ಮಾಡಿದ ತಂಡಕ್ಕೆ ಮೂರು ಪಾಯಿಂಟ್ ನೀಡಲಾಗುವುದು. ಪ್ಲೇ ಆಫ್‌ ಪಂದ್ಯಗಳ ಪ್ರತಿ ಸೆಟ್‌ಗಳು 25 ಪಾಯಿಂಟ್‌ಗಳಿಗೆ ನಿರ್ಣಯವಾಗಲಿವೆ.

ಸೂಪರ್‌ ಸರ್ವ್‌, ಸೂಪರ್ ಪಾಯಿಂಟ್‌: ಲೀಗ್‌ನಲ್ಲಿ ಸೂಪರ್ ಸರ್ವ್‌ ಮತ್ತು ಸೂಪರ್ ಪಾಯಿಂಟ್‌ ಎಂಬ ಹೊಸ ಪರಿಕಲ್ಪನೆಯನ್ನು ಜಾರಿಗೆ ತರಲಾಗಿದೆ. ಏಸ್‌ ಸರ್ವ್ ಮಾಡಿದರೆ ಅದನ್ನು ಸೂಪರ್ ಸರ್ವ್ ಎಂದು ಕರೆಯಲಾಗುವುದು. ಅದಕ್ಕೆ ಎರಡು ಪಾಯಿಂಟ್‌ಗಳು ಸಿಗಲಿವೆ. 

‘ಇದು ಅತ್ಯುತ್ತಮ ಪ್ರಯತ್ನ. ಯುವ ಆಟಗಾರರಿಗೆ ಈ ಲೀಗ್‌ನಿಂದ ಭಾರಿ ಪ್ರೇರಣೆ ಸಿಗಲಿದೆ. ವಿದೇಶಿ ಆಟಗಾರರ ಜೊತೆ ಆಡುವುದರಿಂದ ಅವರ ಅನುಭವ ಹೆಚ್ಚಲಿದೆ’ ಎಂದು ಯು ಮುಂಬಾ ವಾಲಿ ತಂಡದ ನಾಯಕ ದೀಪೇಶ್ ಸಿನ್ಹಾ ಅಭಿಪ್ರಾಯಪಟ್ಟರು.

ಇಂದಿನ ಪಂದ್ಯ
ಕೊಚ್ಚಿ ಬ್ಲೂ ಸ್ಪೈಕರ್ಸ್‌–ಯು ಮುಂಬಾ ವಾಲಿ
ಸಮಯ: ಸಂಜೆ 7.00
ಸ್ಥಳ: ರಾಜೀವಗಾಂಧಿ ಕ್ರೀಡಾಂಗಣ, ಕೊಚ್ಚಿ
ನೇರ ಪ್ರಸಾರ: ಸೋನಿ ನೆಟ್‌ವರ್ಕ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !