ಬುಧವಾರ, ಸೆಪ್ಟೆಂಬರ್ 22, 2021
23 °C

PV Web Exclusive: ದೇಹದಾರ್ಢ್ಯ ಚಾಂಪಿಯನ್ನರಿಗೆ ಒಳ್ಳೆಯ ಪಾತ್ರಗಳು ಸಿಗದ ಕೊರಗು

ನಾಗೇಶ್ ಶೆಣೈ ಪಿ. Updated:

ಅಕ್ಷರ ಗಾತ್ರ : | |

ಭಾರತೀಯ ಚಿತ್ರರಂಗದಲ್ಲಿ ದೇಹದಾರ್ಢ್ಯ ಕ್ಷೇತ್ರದ ಸಾಧಕರು ಯಶಸ್ಸು ಗಳಿಸಿದ್ದು ತೀರಾ ವಿರಳ. ಇಲ್ಲವೇ ಇಲ್ಲ ಎನ್ನುವುದು ಹೆಚ್ಚು ಒಪ್ಪುತ್ತದೆ. ಈಗ ಹೀರೊಗಳೇ ಅಂಗಸೌಷ್ಟವಕ್ಕೆ ಹೆಚ್ಚು ಗಮನ ನೀಡುತ್ತಾರೆ.

ಕೋಟಿ ಚೆನ್ನಯ್ಯ (1973) ತುಳುವಿನ ಸೂಪರ್‌ ಹಿಟ್‌ ಚಿತ್ರ. ಇದರಲ್ಲಿ ‘ಕೋಟಿ’ ಪಾತ್ರ ಮಾಡುವಂತೆ ಚಿತ್ರದ ನಿರ್ದೇಶಕ ವಿಷು ಕುಮಾರ್‌ ಅವರು ಮಂಗಳೂರಿನ ಪಾಂಡೇಶ್ವರದಲ್ಲಿರುವ ಎಂ.ಸುಮಿತ್ರ ಕುಮಾರ್‌ ಅವರ ಮನೆಗೆ ಹೋಗಿದ್ದರು. ಪಾಡ್ದನದಲ್ಲಿ ಬರುವ ವೀರಯೋಧರಾದ ಕೋಟಿ, ಚೆನ್ನಯ್ಯ ಅವರದು ಗರಡಿಯಲ್ಲಿ ಹುರಿಗೊಂಡ ಗಟ್ಟಿ ದೇಹ. ಕರಾವಳಿಯಲ್ಲಿ ಆಗಿನ ಕಾಲದಲ್ಲಿ ದೇಹದಾರ್ಢ್ಯ ಕ್ಷೇತ್ರದ ದಿಗ್ಗಜರಾಗಿದ್ದ ಕುಮಾರ್‌ ಅವರ ಅಂಗಸೌಷ್ಟವ ಅವರನ್ನು ಸಂಪರ್ಕಿಸಲು ಕಾರಣ ಇರಬಹುದು. ಕುಮಾರ್‌ ಅವರು ಪಾಲಿಗೆ ಬಂದ ಅವಕಾಶ ಒಪ್ಪಿಕೊಳ್ಳಲಿಲ್ಲ. ಈ ಚಿತ್ರ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತು.

‘ಅದರಲ್ಲಿ ನಟಿಸಲು ಒಪ್ಪಿದ್ದರೆ ಸುಮಿತ್ರ ಕುಮಾರ್‌ ದೊಡ್ಡ ಮಟ್ಟಕ್ಕೆ ಬೆಳೆಯುತ್ತಿದ್ದರೇನೊ? ಬೇರೆ ಭಾಷೆಯ ಚಿತ್ರಗಳಲ್ಲೂ  ಅವಕಾಶಗಳು ಅರಸಿ ಬರುತ್ತಿದ್ದವೇನೊ? ಅದರೆ ತಾವು ಕೈಚೆಲ್ಲಿದ ಅವಕಾಶದ ಬಗ್ಗೆ ಅವರಲ್ಲಿ ಎಳ್ಳಷ್ಟೂ ಬೇಸರ ಇರಲಿಲ್ಲ’ ಎನ್ನುತ್ತಾರೆ ಅವರ ಶಿಷ್ಯರಾಗಿರುವ ಮಾಜಿ ಅಂತರರಾಷ್ಟ್ರೀಯ ದೇಹದಾರ್ಢ್ಯ ಪಟು ಭಾಸ್ಕರ ತೊಕ್ಕೊಟ್ಟು.

ತುಳು ಅಷ್ಟೇ ಏಕೆ, ಭಾರತೀಯ ಚಿತ್ರರಂಗದಲ್ಲಿ ದೇಹದಾರ್ಢ್ಯ ಕ್ಷೇತ್ರದ ಸಾಧಕರು ಯಶಸ್ಸು ಗಳಿಸಿದ್ದು ತೀರಾ ವಿರಳ. ಇಲ್ಲವೇ ಇಲ್ಲ ಎನ್ನುವುದು ಹೆಚ್ಚು ಒಪ್ಪುತ್ತದೆ. ಈಗ ಹೀರೊಗಳೇ ಅಂಗಸೌಷ್ಟವಕ್ಕೆ ಹೆಚ್ಚು ಗಮನ ನೀಡುತ್ತಾರೆ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ಅಧಿಕಾರಿಯೂ ಆಗಿರುವ ಭಾಸ್ಕರ್‌.

ಹಿಂದಿ ಚಿತ್ರರಂಗದಲ್ಲಿ 1970ರ ದಶಕದ ಸುಮಾರಿಗೆ ತಮ್ಮ ಕಟ್ಟುಮಸ್ತು ದೇಹದಿಂದ ದಾರಾ ಸಿಂಗ್‌ ರಾಂಧವಾ ನೆಲೆ ಕಂಡುಕೊಂಡಿದ್ದರು. ಕುಸ್ತಿಪಟುವಾಗಿದ್ದ ಅವರು ಕಿರುತೆರೆಯಲ್ಲಿ ಮೋಡಿ ಮಾಡಿದ್ದ ‘ರಾಮಾಯಣ’ ಧಾರಾವಾಹಿಯಲ್ಲಿ ಹನುಮಂತನ ಪಾತ್ರದಲ್ಲಿ ನಟಿಸಿ ಮನೆಮಾತಾಗಿದ್ದರು.


ಚಿತ್ರದ ದೃಶ್ಯವೊಂದರಲ್ಲಿ ರೇಮಂಡ್‌ ಡಿಸೋಜ

ಬಣ್ಣಹಚ್ಚಿದ ಕನ್ನಡದ ಬಾಡಿಬಿಲ್ಡರ್‌ಗಳು: 1990ರಲ್ಲಿ ಜಪಾನ್‌ನ ನೆಬೊಕಾದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ‘ಮಿಸ್ಟರ್‌ ವರ್ಲ್ಡ್‌’ ಕಿರೀಟ ಧರಿಸಿದ್ದ ರೇಮಂಡ್‌ ಡಿಸೋಜ ಕನ್ನಡದ ಕೆಲವು ಮತ್ತು ತುಳು ಭಾಷೆಯ ಎರಡು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಮಂಗಳೂರಿನಲ್ಲಿ ಕಾರ್ಪೊರೇಷನ್‌ ಬ್ಯಾಂಕ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ರೇಮಂಡ್‌, ಚಿತ್ರರಂಗದಲ್ಲಿ ಹೆಚ್ಚು ಅವಕಾಶ ಪಡೆಯಲಿಲ್ಲ. ಬ್ಯಾಂಕ್‌ ಕೆಲಸದಲ್ಲಿ ತೊಡಗುತ್ತಿದ್ದ ಕಾರಣ ಅದರ ಬೆನ್ನೂ ಬೀಳಲಿಲ್ಲ.

ರೇಮಂಡ್‌ ‘ಮಿಸ್ಟರ್ ವರ್ಲ್ಡ್‌’ ಆದಾಗ, ಅದೇ ವರ್ಷ ತಮ್ಮ ವಿಭಾಗದಲ್ಲಿ ವಿಶ್ವದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಎ.ವಿ. ರವಿ ಅವರು ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವ ಪ್ರಯತ್ನ ಬಿಟ್ಟಂತೆ ಕಾಣುತ್ತಿಲ್ಲ. ಅವರು ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಬಾಡಿಬಿಲ್ಡರ್‌ ಎನಿಸಿದ್ದಾರೆ. ಕನ್ನಡ– ತೆಲುಗಿನಲ್ಲಿ 130 ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಸುಮಾರು 35 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿರಂಜೀವಿ, ಪವನ್‌ ಕಲ್ಯಾಣ್ ಮೊದಲಾದವರ ಜೊತೆಗೆ ನಟಿಸಿದ್ದಾರೆ.

ವಿಶೇಷ ಎಂದರೆ, 1998ರಲ್ಲಿ ತೆರೆಕಂಡ ಥ್ರಿಲ್ಲರ್‌ ಮಂಜು ನಿರ್ದೇಶನದ ‘ಥ್ರಿಲ್ಲರ್‌ ಕಿಲ್ಲರ್‌’ ಚಿತ್ರದಲ್ಲಿ ರೇಮಂಡ್‌– ಎ.ವಿ. ರವಿ ಇಬ್ಬರೂ ನಟಿಸಿದ್ದರು.

ರಾಷ್ಟ್ರೀಯ, ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಹಲವು ಪದಕ, ಪ್ರಶಸ್ತಿಗಳನ್ನು ಬಾಚಿಕೊಂಡಿರುವ  ಇವರಿಬ್ಬರಿಗೆ, ಚಿತ್ರಗಳಲ್ಲಿ ದೇಹದಾರ್ಢ್ಯ ಪಟುಗಳಿಗೆ ಜನ ನೆನಪಿನಲ್ಲಿಟ್ಟುಕೊಳ್ಳುವಂಥ ಪಾತ್ರಗಳು ದೊರೆತಿಲ್ಲ ಎಂಬ ಕೊರಗು ಕಾಡುತ್ತಿದೆ.

‘ಕನ್ನಡ ಚಿತ್ರರಂಗ ನಮ್ಮ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ನೆನಪಿನಲ್ಲಿ ಅಚ್ಚೊತ್ತುವಂಥ  ಪಾತ್ರಗಳನ್ನೂ ನೀಡಲಿಲ್ಲ. ಅಂಗಸೌಷ್ಟವ ಉತ್ತಮವಾಗಿ ಕಾಣುವಂಥ ದೃಶ್ಯಗಳನ್ನು ಕತ್ತರಿಸಿ ಹಾಕಿದ್ದೂ ಇದೆ’ ಎನ್ನುತ್ತಾರೆ ರೇಮಂಡ್‌.


ರೇಮಂಡ್‌ ಡಿಸೋಜ

1995ರಲ್ಲಿ ತೆರೆಕಂಡ ‘ಅಣ್ಣಾಜಿ’ ಅವರು ಕಾಣಿಸಿಕೊಂಡ ಬೆಳ್ಳಿತೆರೆಯ ಮೊದಲ ಕನ್ನಡ ಚಿತ್ರ. ಬಿ.ಸಿ. ಪಾಟೀಲ ನಾಯಕರಾಗಿದ್ದ ‘ದಳವಾಯಿ’, ಜಗ್ಗೇಶ್ ಹೀರೊ ಆಗಿದ್ದ ‘ಸಾಫ್ಟ್‌ವೇರ್‌ ಗಂಡ’ ಚಿತ್ರದಲ್ಲೂ ಅವರು ನಟಿಸಿದ್ದರು. ಆದರೆ ಅವರಿಗೆ ಖುಷಿಕೊಟ್ಟಿರುವ ಪಾತ್ರ, ಸಾಯಿಕುಮಾರ್‌ ಅವರ ‘ಪೊಲೀಸ್‌ ಸ್ಟೋರಿ’ ಚಿತ್ರದ್ದು. ಇದರಲ್ಲಿ ಸಿಬಿಐ ಅಧಿಕಾರಿಯ ಪಾತ್ರವನ್ನು ರೇಮಂಡ್‌ ನಿರ್ವಹಿಸಿದ್ದರು.

‘ಮಾರಿಬಲೆ‘, ‘ಒರಿಯೊರ್ದರಿ ಅಸಲ್‌’ ಅವರು ನಟಿಸಿರುವ ತುಳು ಚಿತ್ರಗಳು. ವಿಜಯಕುಮಾರ್‌ ಕೊಡಿಯಾಲ್‌ಬೈಲ್‌ ನಿರ್ದೇಶನದ ಒರಿಯೊರ್ದರಿ ಅಸಲ್‌ (2011) ಚಿತ್ರ ದೊಡ್ಡಮಟ್ಟಿಗೆ ಹೆಸರು ಮಾಡಿತ್ತು. ಆದರೆ ರೇಮಂಡ್‌ ಅವರಿಗೆ ವೈಯಕ್ತಿಕವಾಗಿ ಬ್ರೇಕ್‌ ನೀಡಲಿಲ್ಲ.

ರವಿಚಂದ್ರನ್‌ ನಾಯಕರಾಗಿದ್ದ ಯಶಸ್ವಿ ಚಿತ್ರ ಸಿಪಾಯಿ (1996) ಮೂಲಕ ಎ.ವಿ. ರವಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದರು. ರವಿಮಾಮ, ಶ್ರೀಮತಿ ಕಲ್ಯಾಣ, ಸೆಂಟ್ರಲ್‌ ಜೈಲ್‌, ಮುಂದೈತೆ ಊರಹಬ್ಬ, ನನ್ನವನು, ಅಪ್ಪು–ಪಪ್ಪು.... ಹೀಗೆ ಸಾಲುಸಾಲು ಚಿತ್ರಗಳಲ್ಲಿ  ಅವರು ನಟಿಸಿದ್ದಾರೆ. ಆದರೆ ಮೈಕಟ್ಟು ಪ್ರದರ್ಶನಕ್ಕೆ ಸೀಮಿತವಾದ ಪಾತ್ರಗಳು ಅವರು ನಿರೀಕ್ಷಿಸಿದಷ್ಟು ಹೆಸರು ತಂದುಕೊಡಲಿಲ್ಲ.

‘ಸಾಯಿಕುಮಾರ್‌ ಅಭಿನಯದ ‘ಸೆಂಟ್ರಲ್‌ ಜೈಲ್‌’ನಲ್ಲಿ ಪ್ರೈವೇಟ್‌ ಡಿಟೆಕ್ಟಿವ್‌ ಆಫೀಸರ್‌ ಪಾತ್ರ ತಮಗೆ ಹೆಚ್ಚು ಖುಷಿ ನೀಡಿತ್ತು. ಅಂಬರೀಷ್, ವಿಷ್ಣುವರ್ಧನ್‌ ಪಾತ್ರವರ್ಗವಿದ್ದ ‘ಹಬ್ಬ‘ ಚಿತ್ರದಲ್ಲೂ ತಮಗೆ ವಹಿಸಿದ್ದ ಪಾತ್ರ ಸ್ವಲ್ಪ ತೃಪ್ತಿ ಕೊಟ್ಟಿತ್ತು’ ಎಂದು ಹೇಳುತ್ತಾರೆ ರವಿ.

ಬೆಂಗಳೂರಿನಲ್ಲಿ ನೆಲೆಸಿರುವ ಕೋಲಾರ ಮೂಲದ ರವಿ, ‘ಜಿಮ್‌ ರವಿ’ ಎಂದೇ ಹೆಸರುವಾಸಿ. ಆದಾಯ ತೆರಿಗೆ ಇಲಾಖೆಯಲ್ಲಿ ಪ್ರಸ್ತುತ ಇನ್‌ಸ್ಪೆಕ್ಟರ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಅವರು ಕಳೆದ ತಿಂಗಳಷ್ಟೇ ರಾಜ್ಯ ಜಿಮ್‌ ಮಾಲೀಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

‌ಮೂರು ದಶಕಗಳಿಂದ ರವಿ, ಭಾರತ ತಂಡವನ್ನು ಹಲವು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪ್ರತಿನಿಧಿಸಿದ್ದಾರೆ. ನಾಯಕ, ಕೋಚ್‌ ಆಗಿಯೂ ಯಶಸ್ಸು ಕಂಡಿದ್ದಾರೆ.


ಎ.ವಿ.ರವಿ

‘ಜನ ಗುರುತಿಸುವಂಥ ಪಾತ್ರಗಳು ಸಿಗುತ್ತಿಲ್ಲ. ಹೆಚ್ಚಿನ ಚಿತ್ರಗಳಲ್ಲಿ ವಿಲನ್‌ ಪಾತ್ರಗಳು ದೊರೆತವು. ಹೀರೊ ಕೈಲಿ ಪೆಟ್ಟು ತಿನ್ನುವ ಪಾತ್ರಗಳಿಗೆ ನಮ್ಮಂಥ ನಟರನ್ನು ಬಳಸುತ್ತಾರಷ್ಟೇ. ಒಳ್ಳೆಯ ಪೋಷಕ ನಟನ ಪಾತ್ರ ದೊರೆತರೂ ಖುಷಿಯಾಗುತಿತ್ತು’ ಎನ್ನುವುದು ಅವರ ಮನಸ್ಸಿನಾಳದ ಭಾವನೆ.

ರವಿ, ರೇಮಂಡ್‌ ಅವರನ್ನು ಬಿಟ್ಟರೆ ಕನ್ನಡದಲ್ಲಿ ಸಾಧಕ ದೇಹದಾರ್ಢ್ಯಪಟುಗಳು ಚಿತ್ರರಂಗಕ್ಕೆ ಕಾಲಿಡಲಿಲ್ಲ. ಅವರು ಯಶಕಂಡಿದ್ದರೆ, ಬಹುಶಃ ಇನ್ನಷ್ಟು ಮಂದಿ ದೇಹದಾರ್ಢ್ಯಪಟುಗಳು ಬೆಳ್ಳಿತೆರೆಯತ್ತ ಮುಖ ಮಾಡುತ್ತಿದ್ದರೇನೊ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು