ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮೋಟಾರ್‌ ರೇಸ್‌ಗೂ ಹಂಪಿ ಅಚ್ಚುಮೆಚ್ಚು

Last Updated 2 ಫೆಬ್ರುವರಿ 2021, 11:37 IST
ಅಕ್ಷರ ಗಾತ್ರ

ಹೊಸಪೇಟೆ: ವಿಶಿಷ್ಟ ವಾಸ್ತುಶಿಲ್ಪದಿಂದ ಜಗತ್ತಿನ ಪ್ರವಾಸಿಗರ ಆಕರ್ಷಣೆಯ ತಾಣವಾಗಿರುವ ವಿಶ್ವವಿಖ್ಯಾತ ಹಂಪಿ ಸುತ್ತಮುತ್ತಲಿನ ಪರಿಸರ ಈಗ ಮೋಟಾರ್‌ ರೇಸ್‌ ಪ್ರಿಯರಿಗೂ ಅಚ್ಚುಮೆಚ್ಚಿನ ತಾಣವಾಗಿದೆ.

ತಾಲ್ಲೂಕಿನ ಹಂಪಿ, ಜಂಬುನಾಥಹಳ್ಳಿ, ಸಂಕ್ಲಾಪುರ, ಕಲ್ಲಹಳ್ಳಿ–ರಾಜಪುರ, ಧರ್ಮಸಾಗರ ಭೌಗೋಳಿಕವಾಗಿ ಭಿನ್ನವಾಗಿರುವ ಪ್ರದೇಶಗಳು. ಕಣ್ಣು ಹಾಯಿಸಿದ ಕಡೆಗೆಲ್ಲ ಕಾಣುವ ಬಯಲು, ಗುಡ್ಡಗಾಡು, ಕುರುಚಲು ಹುಲ್ಲುಗಾವಲು. ಇದುವರೆಗೆ ಯಾರ ಗಮನಕ್ಕೂ ಬಾರದ, ಬಳಕೆಗೆ ಅಯೋಗ್ಯವೆಂದು ತೀರ್ಮಾನಿಸಿ ಅವುಗಳತ್ತ ಸುಳಿಯದ ಕಡೆಗೆ ಈಗ ಸ್ಥಳೀಯರಷ್ಟೇ ಅಲ್ಲ, ದೇಶದ ನಾನಾ ಭಾಗಗಳ ಜನ ಬರುತ್ತಿರುವುದು ವಿಶೇಷ.

ಅಂದಹಾಗೆ, ಈ ಪ್ರದೇಶಗಳಿಗೆ ಹೆಚ್ಚಿನ ಮಹತ್ವ ಬರುವುದಕ್ಕೆ ಇಲ್ಲಿನ ‘ಮೋಟಾರ್‌ ಸ್ಪೋರ್ಟ್ಸ್‌ ಅಕಾಡೆಮಿ ಆಫ್‌ ವಿಜಯನಗರ’ ಸಂಸ್ಥೆಯ ಪಾತ್ರ ಹಿರಿದಾಗಿದೆ. ಸಣ್ಣ ಅಳುಕಿನಿಂದಲೇ ಈ ಸಂಸ್ಥೆ 2019ರಲ್ಲಿ ಮೊದಲ ಬಾರಿಗೆ ‘ಹಂಪಿ ಮೋಟಾರ್‌ ರೇಸ್‌’ ಸ್ಪರ್ಧೆ ಆಯೋಜಿಸಿತ್ತು. ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಆ ಹುಮ್ಮಸ್ಸಿನಲ್ಲಿ 2020ನೇ ಸಾಲಿನಲ್ಲೂ ರೇಸ್‌ ಆಯೋಜನೆಗೆ ಮುಂದಾಗಿತ್ತು. ಆದರೆ, ಕೊರೊನಾ ಅದಕ್ಕೆ ಅಡ್ಡಿಪಡಿಸಿತ್ತು. ತಡವಾದರೂ ಸ್ಪರ್ಧೆ ನಡೆಸಿಯೇ ತೀರಬೇಕೆಂದು ಹಟಹಿಡಿದು ಈ ವರ್ಷ ಹಮ್ಮಿಕೊಂಡಿದೆ.

ಮೊದಲ ವರ್ಷ ಬೈಕ್‌ ರೇಸ್, ಕಾರು ರೇಸ್‌ ಸ್ಪರ್ಧೆಯಲ್ಲಿ 30ರಿಂದ 40 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಈ ವರ್ಷ ಆ ಸಂಖ್ಯೆ ಹೆಚ್ಚಾಗಿದೆ. ಇಷ್ಟಕ್ಕೆ ಸೀಮಿತವಾಗಿಲ್ಲ. ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ರೇಸರ್‌ಗಳು ಈ ಸಲದ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ವಿಶೇಷ. ಈ ವರ್ಷ 4X4 ಆಫ್‌ ರೋಡ್‌ ಸ್ಪರ್ಧೆ ಹಮ್ಮಿಕೊಂಡಿರುವುದು ಮತ್ತೊಂದು ವಿಶೇಷ.

‘ಮೋಟಾರ್‌ ರೇಸ್‌ ದೇಶದ ಕೆಲವೇ ಭಾಗಗಳಲ್ಲಿ ನಡೆಯುತ್ತದೆ. ಅರುಣಾಚಲ ಪ್ರದೇಶ, ಗೋವಾ, ರಾಜ್ಯದ ಚಿಕ್ಕಮಗಳೂರು, ಬೆಂಗಳೂರು, ಮಂಗಳೂರು, ತಮಿಳುನಾಡಿನ ಕೊಯಮತ್ತೂರು ರೇಸ್ ನಡೆಯುವ ಪ್ರಮುಖ ಸ್ಥಳಗಳು. ಆದರೆ, ಹಂಪಿ ಸುತ್ತಮುತ್ತಲಿನ ಪರಿಸರ ರೇಸ್‌ಗೆ ಹೇಳಿಮಾಡಿಸಿದ ಜಾಗ. ಅದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಆದರೆ, 2019ರಲ್ಲಿ ಮೊದಲ ಸಲ ಪ್ರಾಯೋಗಿಕ ಎಂಬಂತೆ ಸ್ಪರ್ಧೆ ಆಯೋಜಿಸಿ ಯಶ ಕಂಡೆವು. ಸ್ಪರ್ಧಿಗಳು ಸಹ ಇಲ್ಲಿನ ಭೌಗೋಳಿಕ ಪರಿಸರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹೀಗಾಗಿ ಪ್ರತಿ ವರ್ಷ ಆಯೋಜಿಸುವ ಮನಸ್ಸು ಮಾಡಿದ್ದೇವೆ’ ಎಂದು ಅಕಾಡೆಮಿಯ ಎಚ್‌.ಎಂ. ಸಂತೋಷ್‌ ಹೇಳಿದರು.

‘ಹಂಪಿ ಪ್ರವಾಸಿ ತಾಣವಾಗಿ ಜಗತ್ತಿನಲ್ಲಿ ಗುರುತಿಸಿಕೊಂಡಿದೆ. ಈ ರೀತಿಯ ಚಟುವಟಿಕೆಗಳಿಂದ ಸ್ಥಳೀಯ ಪ್ರವಾಸೋದ್ಯಮ ಮತ್ತಷ್ಟು ಬೆಳವಣಿಗೆ ಹೊಂದಲಿದೆ. ಇದು ದುಬಾರಿ ಕ್ರೀಡೆ ಆಗಿರುವುದರಿಂದ ಸಹಜವಾಗಿಯೇ ಸಿರಿವಂತರೂ ಹೆಚ್ಚಾಗಿ ಭಾಗವಹಿಸುತ್ತಾರೆ. ಅವರಿಗೆ ತಕ್ಕಂತೆ ಹೊಸಪೇಟೆ ಸುತ್ತಮುತ್ತ ಅನೇಕ ಐಷಾರಾಮಿ ಹೋಟೆಲ್‌ಗಳಿವೆ. ರೈಲು, ವಿಮಾನ ಸಂಪರ್ಕವೂ ಇದೆ. ಇದೆಲ್ಲವೂ ದೇಶದ ಬೇರೆ ಬೇರೆ ಭಾಗದ ಸ್ಪರ್ಧಿಗಳು ಪಾಲ್ಗೊಳ್ಳಲು ಪೂರಕವಾಗಿದೆ’ ಎಂದು ಹೇಳಿದರು.

‘ಬೈಕ್‌ ರೇಸ್‌ಗೆ ಹಂಪಿ ಸುತ್ತಮುತ್ತಲಿನ ಪ್ರದೇಶಗಳು ಹೇಳಿ ಮಾಡಿಸಿದಂತಿದೆ. ಬರುವ ದಿನಗಳಲ್ಲಿ ರೇಸ್‌ ಪ್ರಿಯರ ನೆಚ್ಚಿನ ತಾಣ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ನನಗಂತೂ ಈ ಜಾಗ ಬಹಳ ಹಿಡಿಸಿದೆ’ ಎಂದು ರಾಷ್ಟ್ರೀಯ ಬೇಕ್‌ ರೇಸ್‌ ಪಟು ಐಶ್ವರ್ಯ ಪಿಸ್ಸೆ ಹೇಳಿದರು.

ಜೀಪ್‌ ರೇಸ್‌ ದೃಶ್ಯ
ಜೀಪ್‌ ರೇಸ್‌ ದೃಶ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT