ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶದಲ್ಲಿ ಸ್ಪರ್ಧೆಗಾಗಿ ಶ್ರೀಶಂಕರ್‌ಗೆ ಕಾತರ

Last Updated 22 ಮೇ 2021, 11:12 IST
ಅಕ್ಷರ ಗಾತ್ರ

ಮುಂಬೈ: ಫೆಡರೇಷನ್ ಕಪ್ ಕ್ರೀಡಾಕೂಟದಲ್ಲಿ ಗಳಿಸಿದ ಅನುಭವದ ಆಧಾರದಲ್ಲಿ ಅಭ್ಯಾಸ ಮಾಡುತ್ತಿದ್ದು ವಿದೇಶದಲ್ಲಿ ಯಾವುದಾದರೂ ಕೂಟದಲ್ಲಿ ಪಾಲ್ಗೊಳ್ಳಲು ಕಾತರನಾಗಿರುವುದಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಲಾಂಗ್‌ಜಂಪ್ ಪಟು ಮುರಳಿ ಶ್ರೀಶಂಕರ್ ತಿಳಿಸಿದ್ದಾರೆ.

ಕೇರಳದ 22 ವರ್ಷದ ಶ್ರೀಶಂಕರ್ ಮಾರ್ಚ್‌ನಲ್ಲಿ ಪಟಿಯಾಲದಲ್ಲಿ ನಡೆದ ಫೆಡರೇಷನ್ ಕಪ್ ಕೂಟದಲ್ಲಿ 8.26 ಮೀಟರ್ ದೂರ ಜಿಗಿದು ತಮ್ಮದೇ ರಾಷ್ಟ್ರೀಯ ದಾಖಲೆ ಮುರಿಯುವುದರೊಂದಿಗೆ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದರು.

‘ಫೆಡರೇಷನ್ ಕಪ್ ಮುಗಿದ ಕೂಡಲೇ ನಾನು ಮತ್ತು ಕೋಚ್ ಕುಳಿತು ಚರ್ಚಿಸಿ ಎಲ್ಲ ದೌರ್ಬಲ್ಯಗಳನ್ನು ಪಟ್ಟಿ ಮಾಡಿದೆವು. ತಾಂತ್ರಿಕವಾಗಿ ಯಾವ ರೀತಿಯ ಸಮಸ್ಯೆಗಳಿಗೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ನಡೆಸಿದೆವು. ಅದರ ಆಧಾರದಲ್ಲಿ ಈಗ ಅಭ್ಯಾಸ ನಡೆಯುತ್ತಿದೆ’ ಎಂದು ಭಾರತ ಕ್ರೀಡಾ ಪ್ರಾಧಿಕಾರ ಶನಿವಾರ ಆಯೋಜಿಸಿದ್ದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದ್ದಾರೆ.

‘ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಆದರೆ ಭಾರತದ ಅಥ್ಲೀಟ್‌ಗಳಿಗೆ ವಿದೇಶ ಪ್ರಯಾಣ ನಿರ್ಬಂಧಗಳಿರುವುದರಿಂದ ದೇಶದಿಂದ ಹೊರಗೆ ಅಭ್ಯಾಸ ಮಾಡಲು ಅಥವಾ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಅಗುತ್ತಿಲ್ಲ ಎಂಬ ಕೊರಗು ಕಾಡುತ್ತಿದೆ. ಈ ಸವಾಲನ್ನು ಮೀರಿ ಮುಂದೆ ಸಾಗಬೇಕಾಗಿದೆ. ಅದರಲ್ಲಿ ಯಶಸ್ವಿಯಾಗುವ ಭರವಸೆ ಇದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ನಿರ್ಬಂಧಗಳನ್ನು ತೆಗೆದುಹಾಕಿದ ಕೂಡಲೇ ಒಲಿಂಪಿಕ್ಸ್‌ಗೂ ಮೊದಲು ಯುರೋಪ್‌ನಲ್ಲಿ ಅಥವಾ ಕನಿಷ್ಠ ಏಷ್ಯಾಮಟ್ಟದಲ್ಲಾದರೂ ಸ್ಪರ್ಧೆಯೊಂದರಲ್ಲಿ ಪಾಲ್ಗೊಳ್ಳಬೇಕು. ಒಲಿಂಪಿಕ್ಸ್‌ಗೆ ಮುನ್ನ ಮೂರರಿಂದ ನಾಲ್ಕು ಸ್ಪರ್ಧೆಗಳಾದರೂ ಸಿಗುವ ನಿರೀಕ್ಷೆ ಇದೆ’ ಎಂದು ಅವರು ಹೇಳಿದ್ದಾರೆ.

ಮಾಜಿ ಟ್ರಿಪಲ್ ಜಂಪ್ ಪಟುವಾಗಿರುವ ತಂದೆಯ ಜೊತೆ ಶ್ರೀಶಂಕರ್ ಪಾಲಕ್ಕಾಡ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಕ್ರೀಡಾಂಗಣದಲ್ಲಿ ಈಗ ಅಭ್ಯಾಸದಲ್ಲಿ ತೊಡಗಿದ್ದಾರೆ. ಮುಂದಿನ ತಿಂಗಳಲ್ಲಿ ನಡೆಯಲಿರುವ ಇಂಡಿಯನ್ ಗ್ರ್ಯಾನ್‌ಪ್ರಿಗೆ ಸಜ್ಜಾಗುತ್ತಿರುವ ಅವರು ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಮರ್ಥ್ಯ ತೋರಲು ಸಾಧ್ಯವಾದರೆ ಅದು ಕೂಡ ಒಲಿಂಪಿಕ್ಸ್‌ಗೆ ಅನುಕೂಲ ಆಗಲಿದೆ. ಟೋಕಿಯೊದಲ್ಲಿ8.35 ಮೀಟರ್‌ನಿಂದ 8.40 ಮೀಟರ್ ವರೆಗೂ ಜಿಗಿಯಲು ಸಾಧ್ಯವಾಗಲಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT