ಗುರುವಾರ , ಮಾರ್ಚ್ 30, 2023
24 °C

Tokyo Olympics: ಸಿರಿಯಾ ಪೋರಿಯ ಹೆಜ್ಜೆಗುರುತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ ಒಲಿಂಪಿಕ್ ಕೂಟದ ಟೇಬಲ್‌ ಟೆನಿಸ್‌ನಲ್ಲಿ ಅವತ್ತು 12 ವರ್ಷದ ಪೋರಿ ಹೆಂಡ್‌ ಜಾಜಾ, ಪಿಂಗ್‌ ಪಾಂಗ್ ಚೆಂಡನ್ನು ಚುರುಕಾಗಿ ಹೊಡೆಯುತ್ತಿದ್ದರೆ ನೋಡುಗರ ಕಂಗಳಲ್ಲಿ ಆನಂದಬಾಷ್ಪ ತುಳುಕುತ್ತಿತ್ತು.

ರಕ್ತಸಿಕ್ತ ಅಧ್ಯಾಯಗಳೇ ತುಂಬಿರುವ ಸಿರಿಯಾ ದೇಶದ ಈ ಬಾಲೆ ಭವಿಷ್ಯದ ಬೆಳದಿಂಗಳಂತೆ ಕಂಡಿದ್ದಳು. ತನ್ನ ದೇಶದ ಕರಾಳ ಸ್ಥಿತಿಯ ನಡುವೆಯೂ ಟೇಬಲ್ ಟೆನಿಸ್‌ ಆಟಗಾರ್ತಿಯಾಗಿ ಒಲಿಂಪಿಕ್ ಮಟ್ಟಕ್ಕೆ ಬೆಳೆದಿರುವ ಹೆಂಡ್‌  ಆಟಕ್ಕೆ ಅನುಭವಿ ಆಟಗಾರರೂ ಮನಸೋತರು. ಅವತ್ತು ಆಸ್ಟ್ರಿಯಾದ 39 ವರ್ಷದ ಆಟಗಾರ್ತಿ ಲಿಯು ಜಿಯಾ 4–0 ಗೇಮ್‌ಗಳಿಂದ ಹೆಂದ್ ವಿರುದ್ಧ ಜಯಿಸಿದರು. ಆದರೆ ಅವರ ಕಣ್ಣುಗಳಲ್ಲಿ ತಾವು ಗೆದ್ದ ಖುಷಿ ಇರಲಿಲ್ಲ. ಜಾಜಾ ಬಗ್ಗೆ ಮೆಚ್ಚುಗೆಯ ಭಾವ ಇತ್ತು. ಪ್ರೀತಿಯ ಮಿಂಚಿತ್ತು. ಜಾಜಾ ತಲೆಯನ್ನು ನೇವರಿಸಿ ಅಪ್ಪಿಕೊಂಡ ದೃಶ್ಯ ಮನಮಿಡಿಯುವಂತಿತ್ತು.

‘ಪಂದ್ಯಕ್ಕೂ ಮುನ್ನ ನನ್ನ ಮಗಳೊಂದಿಗೆ ಮಾತನಾಡಿದ್ದೆ. ನಾನು ಇವತ್ತು ನಿನಗಿಂತ ಕೇವಲ ಎರಡು ವರ್ಷ ಹಿರಿಯಳಾದ ಹುಡುಗಿಯ ಎದುರು ಆಡುತ್ತಿದ್ದೇನೆಂದು ಗೊತ್ತಾ ಎಂದು ಕೇಳಿದ್ದೆ. ಅದಕ್ಕವಳು, ಹಾಗಿದ್ದರೆ ಇವತ್ತು ನೀನು ಸೋಲುವಂತೆಯೇ ಇಲ್ಲ ಎಂದಿದ್ದಳು. ಅದಕ್ಕೆ ಪ್ರತಿಕ್ರಿಯೆಯಾಗಿ, ನನ್ನನ್ನು ಒತ್ತಡಕ್ಕೆ ತಳ್ಳಬೇಡವೆಂದಿದ್ದೆ. ಆದರೆ ಆಕೆ ಬಹಳ ಚೆನ್ನಾಗಿ ಆಡಿದಳು’ ಎಂದು ಲಿಯು ಜಿಯಾ ಹೇಳಿದ್ದರು. ಲಿಯು ಪಂದ್ಯ ಗೆದ್ದಿರಬಹುದು. ಆದರೆ, ಜಾಜಾ ಎಲ್ಲರ ಮನ ಗೆದ್ದಿದ್ದಳು. 

ಒಲಿಂಪಿಕ್ಸ್‌ ಉದ್ಘಾಟನೆಯ ಪಥಸಂಚಲನದಲ್ಲಿ ತನ್ನ ದೇಶದ ಆರು ಕ್ರೀಡಾಪಟುಗಳ ತಂಡವನ್ನು ಧ್ವಜಧಾರಿಯಾಗಿ ಈ ಬಾಲೆ ಮುನ್ನಡೆಸಿದ್ದಳು. ಈ ಕೂಟದಲ್ಲಿ ಭಾಗವಹಿಸಿದ ಅತಿ ಕಿರಿಯ ಕ್ರೀಡಾಪಟು ಎಂಬ ಹೆಗ್ಗಳಿಕೆಯೂ ಜಾಜಾಳದ್ದು.  2011ರಿಂದ ಸದಾ ಯುದ್ಧ ಭೀತಿ, ಬಾಂಬ್ ದಾಳಿ, ಕಗ್ಗೊಲೆಗಳನ್ನೇ ಕಂಡಿರುವ ದೇಶ ಸಿರಿಯಾದಲ್ಲಿ ಬದುಕುಳಿಯುವುದೇ ದೊಡ್ಡ ಸವಾಲೆಂಬ ಪರಿಸ್ಥಿತಿ ಇದೆ. ಅಂಥದ್ದರಿಂದ ಒಲಿಂಪಿಕ್ ಮಟ್ಟಕ್ಕೆ ಬೆಳೆಯುವುದು ಇನ್ನೆಷ್ಟು ಕಷ್ಟದ ಕೆಲಸವಾಗಿರಬೇಕಲ್ಲವೇ?

ಹಾಮಾ ನಗರದಲ್ಲಿ ಜನಿಸಿದ ಹೆಂಡ್‌ ಜಾಜಾ ಬಾಂಬ್‌ ಸದ್ದು, ಬೆಂಕಿ, ಹೊಗೆ, ಹೆಣಗಳನ್ನು ನೋಡಿಕೊಂಡೇ ಬೆಳೆದ ಹುಡುಗಿ. ಹೆಜ್ಜೆಹೆಜ್ಜೆಗೂ ಅನುಭವಿಸಿದ ಸವಾಲುಗಳಿಗೆ ಲೆಕ್ಕವಿಲ್ಲ. ಎಷ್ಟೋ ದಿನಗಳವರೆಗೆ ಟೇಬಲ್ ಟೆನಿಸ್ ಪ್ಯಾಡಲ್ ಮತ್ತು ಚೆಂಡು ಕೂಡ ಸಿಗದೇ ಪರದಾಡಿದ್ದಳು. ಒಂದು ಜಾಗದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದೇ ದುಸ್ತರವಾದಾಗ ತರಬೇತಿ ಪಡೆಯುವುದೂ ಕಷ್ಟವಾಗಿತ್ತು. ಕಾಂಕ್ರೀಟ್ ನೆಲದ ಮೇಲೆ ಟಿಟಿ ಅಭ್ಯಾಸ ನಡೆಸಿದ ದಿನಗಳಿಗೆ ಲೆಕ್ಕವಿಲ್ಲ. ಹಲವು ಬಾರಿ ವಿದ್ಯುತ್ ಕಡಿತ ಮತ್ತು ಇಂಟರ್‌ನೆಟ್‌ ಸಂಪರ್ಕವಿಲ್ಲದೇ ಅನುಭವಿಸಿದ ತೊಂದರೆಗಳು ಅನೇಕ. 

ಯುದ್ಧದಿಂದಾಗಿ ಸ್ಥಳೀಯ ಟೂರ್ನಿಗಳೂ ಇಲ್ಲ. ವಿದೇಶಗಳಿಗೆ ಹೋಗಲು ಆಸ್ಪದವೂ ಇರಲಿಲ್ಲ. ಆಗೆಲ್ಲ ಮನೆಯೊಳಗಿನ ಗೋಡೆಗೆ ಚೆಂಡು ಹೊಡೆಯುತ್ತ ಅಭ್ಯಾಸ ಮಾಡಿದ್ದಳು. ಪರಿಸ್ಥಿತಿ ತಾತ್ಕಾಲಿಕವಾಗಿ ತಿಳಿಯಾದಾಗ ವೀಸಾ, ಪಾಸ್‌ಪೋರ್ಟ್ ಸಿದ್ಧ ಮಾಡಿಕೊಂಡು ವಿದೇಶಗಳಿಗೆ ಟೂರ್ನಿಗಳಲ್ಲಿ ಆಡಲು ಹೋಗುವ ತಯಾರಿ ಮಾಡಿಕೊಂಡದ್ದು ಕೂಡ ಹತ್ತಾರು ಬಾರಿ ರದ್ದಾಗಿದ್ದೂ ಇದೆ.


ಸಿರಿಯಾದ ಹೆಂಡ್‌ ಜಾಜಾ ಅವರೊಂದಿಗೆ ಆಸ್ಟ್ರಿಯಾದ ಲಿಯು ಜಿಯಾ

‘ಕಳೆದ ಐದು ವರ್ಷಗಳಲ್ಲಿ ಹಲವು ಬಗೆಯ ಅನುಭವಗಳಾಗಿವೆ. ಅದರಲ್ಲೂ ದೇಶದಲ್ಲಿ ಮತ್ತು ಸುತ್ತಮುತ್ತಲು ಯುದ್ಧ, ಸಂಘರ್ಷಗಳು ನಡೆದಾಗ ಒಲಿಂಪಿಕ್ ಸಹಾಯಧನ ಕೊಡುವುದನ್ನು ಮುಂದೆ ಹಾಕುತ್ತಿದ್ದರು. ಆಗ ಬಹಳ ಕಷ್ಟಪಡುತ್ತಿದ್ದೆ. ಆದರೆ ನಮ್ಮ ಕನಸುಗಳಿಗಾಗಿ ಹೋರಾಡಲೇಬೇಕು. ಅದೆಷ್ಟೇ ಕಷ್ಟವಾದರೂ ಸರಿ. ಗುರಿ ಮುಟ್ಟುವವರೆಗೂ ಹೋರಾಡುವುದನ್ನು ಬಿಡಲೇಬಾರದು. ನನ್ನಂತೆ ಬಹಳಷ್ಟು ಜನ ಸಂಕಷ್ಟದಲ್ಲಿದ್ದಾರೆ. ಅವರಿಗೆಲ್ಲ ಇದೇ ನನ್ನ ಸಂದೇಶ’ ಎಂದು ಜಾಜಾ ಹೇಳುತ್ತಾಳೆ.

ಅವಳೀಗ ಟೋಕಿಯೊದಿಂದ ಒಲಿಂಪಿಯನ್ ಆಗಿ ಮರಳುತ್ತಿದ್ದಾಳೆ. ಭವಿಷ್ಯದಲ್ಲಿ ಪದಕ ಜಯಿಸುವ ಎಲ್ಲ ಸಾಮರ್ಥ್ಯವೂ ಆಕೆಗೆ ಇದೆ. ಸಾಗಬೇಕಾದ ಹಾದಿಯೂ ಬಹಳಷ್ಟಿದೆ. ಆದರೆ ತನ್ನ ಸಾಧನೆ ಮತ್ತು ಛಲದ ಮೂಲಕ ಸಿರಿಯಾದ ಮಕ್ಕಳ ಕಣ್ಣುಗಳಿಂದ ಭಯದ ಛಾಯೆ ಸರಿಸಿ, ಭರವಸೆಯ ಬೆಳಕು ತುಂಬುವ ಶಕ್ತಿಯೂ ಜಾಜಾಗೆ ಇದೆ.  

(ಮೂಲ: ಎಎಫ್‌ಪಿ, ಪಿಟಿಐ, ರಾಯಿಟರ್ಸ್)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು