ಸೋಮವಾರ, ಆಗಸ್ಟ್ 15, 2022
24 °C

‘ಪೊಲೀಸ್‌’ ಸುಪರ್ದಿಗೆ ಸೆಪಕ್‌ ಟಕ್ರಾ...

ಪ್ರಮೋದ‌ Updated:

ಅಕ್ಷರ ಗಾತ್ರ : | |

Prajavani

ರಾಜ್ಯದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಆಡುವ ಸೆಪಕ್‌ ಟಕ್ರಾ ಕ್ರೀಡೆ ನಿಧಾನವಾಗಿ ತನ್ನ ವಿಸ್ತಾರ ಹೆಚ್ಚಿಸಿಕೊಳ್ಳುತ್ತಿದೆ. ಇದೇ ವರ್ಷದ ಫೆಬ್ರುವರಿಯಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಅಂತರ ಕಾಲೇಜುಗಳ ವಾರ್ಷಿಕ ಕ್ರೀಡಾಕೂಟದಲ್ಲಿ ಈ ಕ್ರೀಡೆ ಸೇರ್ಪಡೆಯಾಗಿತ್ತು. ಈಗ ಮೊದಲ ಬಾರಿಗೆ ಅಖಿಲ ಭಾರತ ಪೊಲೀಸ್‌ ಕ್ರೀಡಾಕೂಟದಲ್ಲಿ ಸ್ಥಾನ ಪಡೆದುಕೊಂಡಿದ್ದು, ಹೊಸ ಕ್ರೀಡಾಪಟುಗಳು ಹಾಗೂ ಆಟದ ಖ್ಯಾತಿ ಹೆಚ್ಚಾಗುವ ಭರವಸೆ ಮೂಡಿದೆ.

ಈ ಕ್ರೀಡೆಯನ್ನು ಸಿಂಗಪುರ, ಇಂಡೊನೇಷ್ಯಾದಲ್ಲಿ ‘ಕಿಕ್‌ ವಾಲಿಬಾಲ್‌’ ಮತ್ತು ಮಲೇಷ್ಯಾದಲ್ಲಿ ‘ಸೆಪಕ್‌ ರಾಗ’ ಎಂದು ಕರೆಯುತ್ತಾರೆ. ಬೀಜಿಂಗ್‌ನಲ್ಲಿ 1990ರಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಈ ಕ್ರೀಡೆಯನ್ನು ಸೇರ್ಪಡೆ ಮಾಡಲಾಗಿತ್ತು. ಭಾರತದಲ್ಲಿ  ಅಸ್ಸಾಂ, ಮೇಘಾಲಯ, ಮಹಾರಾಷ್ಟ್ರ, ಮಣಿಪುರ, ತ್ರಿಪುರ, ತೆಲಂಗಾಣ, ಉತ್ತರ ಪ್ರದೇಶ, ನಾಗಾಲ್ಯಾಂಡ್‌ ರಾಜ್ಯಗಳಲ್ಲಿ ಈ ಕ್ರೀಡೆಗೆ ಸಂಬಂಧಿಸಿದ ಚಟುವಟಿಕೆಗಳು ಸಕ್ರಿಯವಾಗಿವೆ. ಕರ್ನಾಟಕದಲ್ಲಿ ಧಾರವಾಡ, ಬೆಳಗಾವಿ, ದಾವಣಗೆರೆ, ಶಿವಮೊಗ್ಗ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಹೆಚ್ಚು ಕ್ರೀಡಾಪಟುಗಳಿದ್ದಾರೆ.

ಕರ್ನಾಟಕ ತಂಡ 2002ರಲ್ಲಿ ಒಡಿಶಾದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಜೂನಿಯರ್‌ ಟೂರ್ನಿಯಲ್ಲಿ ಬೆಳ್ಳಿ, 2015ರಲ್ಲಿ ಧಾರವಾಡದಲ್ಲಿ ಜರುಗಿದ್ದ ಸಬ್‌ ಜೂನಿಯರ್‌ ಟೂರ್ನಿಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿತ್ತು. ವಾಲಿಬಾಲ್‌ ಮಾದರಿಯಲ್ಲಿ ಈ ಕ್ರೀಡೆ ಆಡಲಾಗುತ್ತದೆ. ಚೆಂಡನ್ನು ಎದುರಾಳಿಯ ಅಂಕಣದಲ್ಲಿ ಕಾಲಿನಿಂದ ಒದೆಯಬೇಕು ಎಂಬುದು ಪ್ರಮುಖ ನಿಯಮ. ಪ್ರತಿ ಪಂದ್ಯ ಮೂರು ಸೆಟ್‌ಗಳಿಂದ ಕೂಡಿದ್ದು, ಮೊದಲು 21 ಅಂಕಗಳನ್ನು ಗಳಿಸುವ ತಂಡ ಸೆಟ್‌ ಜಯಿಸಿದಂತೆ.

ಸರಳ ನಿಯಮ ಹಾಗೂ ವಾಲಿಬಾಲ್‌ ಅಂಕಣದಷ್ಟೇ ಜಾಗ ಬೇಕಾಗುವ ಸೆಪಕ್‌ ಟಕ್ರಾ ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎಂದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಬರುತ್ತಿದ್ದಾರೆ. ಆದರೆ, ಹೆಚ್ಚು ಟೂರ್ನಿಗಳು ನಡೆಯದ ಕಾರಣ ಸ್ಪರ್ಧಿಗಳ ಸಂಖ್ಯೆ ಹೆಚ್ಚಾಗುತ್ತಿಲ್ಲ, ಸ್ಪರ್ಧಾತ್ಮಕತೆಯೂ ಬೆಳೆಯುತ್ತಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಅಮೆಚೂರ್‌ ಸೆಪಕ್‌ಟಕ್ರಾ ಸಂಸ್ಥೆ ಜಂಟಿ ಕಾರ್ಯದರ್ಶಿ ಪಿ. ಮಂಜುನಾಥ ‘ಅಖಿಲ ಭಾರತ ಪೊಲೀಸ್‌ ಕ್ರೀಡಾಕೂಟದಲ್ಲಿ ಸೆಪಕ್‌ ಟಕ್ರಾಕ್ಕೆ ಅವಕಾಶ ಲಭಿಸಿದ್ದು ಮಹತ್ವದ ಮೈಲಿಗಲ್ಲು ಆಗಲಿದೆ. ಪೊಲೀಸ್ ಕ್ರೀಡಾಕೂಟಕ್ಕೆ ಪಂಜಾಬ್‌, ಹರಿಯಾಣ ಮತ್ತು ದೆಹಲಿಯಿಂದ ಹೆಚ್ಚು ಕ್ರೀಡಾಪಟುಗಳು ಬರುತ್ತಾರೆ. ಆ ರಾಜ್ಯಗಳಲ್ಲಿ ಕ್ರೀಡೆ ಬೆಳೆದರೆ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಟೂರ್ನಿಗಳನ್ನು ಆಯೋಜಿಸಲು ಸಾಧ್ಯವಾಗುತ್ತದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು