ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕಿಯೊ ಒಲಿಂಪಿಕ್ಸ್ | ಹಾಕಿ: ಭಾರತಕ್ಕೆ ನ್ಯೂಜಿಲೆಂಡ್ ಮೊದಲ ಎದುರಾಳಿ

ನೆದರ್‌ಲೆಂಡ್‌ ವಿರುದ್ಧ ಮಹಿಳಾ ತಂಡದ ಪೈಪೋಟಿ
Last Updated 17 ಡಿಸೆಂಬರ್ 2019, 12:20 IST
ಅಕ್ಷರ ಗಾತ್ರ

ಟೋಕಿಯೊ:ಮುಂದಿನ ವರ್ಷ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಕ್ರಿಡಾಕೂಟದಲ್ಲಿಭಾರತ ಪುರುಷ ಮತ್ತು ಮಹಿಳಾ ಹಾಕಿ ತಂಡಗಳು ತಮ್ಮ ಮೊದಲ ಪಂದ್ಯದಲ್ಲಿ ಕ್ರಮವಾಗಿ ನ್ಯೂಜಿಲೆಂಡ್‌ ಹಾಗೂ ನೆದರ್‌ಲೆಂಡ್‌ ತಂಡಗಳ ಎದುರು ಸೆಣಸಲಿವೆ.

ಸ್ಪರ್ಧೆ ಸಂಬಂಧ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ (ಎಫ್‌ಐಎಚ್‌) ಹೊರಡಿಸಿರುವ ಪ್ರಕಟಣೆ ಪ್ರಕಾರ, ಹಾಕಿ ಪಂದ್ಯಗಳು ಜುಲೈ 25ರಿಂದ ಆರಂಭವಾಗಲಿದ್ದು, ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಮೊದಲ ದಿನವೇ ಕಣಕ್ಕಿಳಿಯಲಿವೆ.

‘ಎ’ ಗುಂಪಿನಲ್ಲಿರುವ ಭಾರತ ಪುರುಷರ ತಂಡ ತನ್ನ ಎರಡನೇ ಪಂದ್ಯದಲ್ಲಿ ಎಂಟು ಬಾರಿಯ ಚಾಂಪಿಯನ್‌ ಹಾಗೂ ಸದ್ಯ ನಂ. 1ರ‌್ಯಾಂಕ್ನಲ್ಲಿರುವ ಆಸ್ಟ್ರೇಲಿಯಾ ವಿರುದ್ಧ ಜುಲೈ 26ರಂದು ಸೆಣಸಲಿದೆ. ಬಳಿಕ ಕ್ರಮವಾಗಿ ಸ್ಪೇನ್‌ (ಜು.28), ಹಾಲಿ ಚಾಂಪಿಯನ್‌ ಅರ್ಜೆಂಟಿನಾ (ಜು.30) ಹಾಗೂ ಆತಿಥೇಯ ಜಪಾನ್‌ (ಜು.31) ವಿರುದ್ಧ ಹೋರಾಟ ನಡೆಸಲಿದೆ.

ಮಹಿಳಾ ತಂಡವೂ ‘ಎ’ ಗುಂಪಿನಲ್ಲಿಯೇ ಸ್ಥಾನ ಪಡೆದಿದೆ. ಕ್ರಮವಾಗಿ ಜರ್ಮನಿ (ಜು.27), ಇಂಗ್ಲೆಂಡ್‌ (ಜು.29) ಹಾಗೂ ಐರ್ಲೆಂಡ್ (ಜು.31) ಹಾಗೂ ದಕ್ಷಿಣ ಆಫ್ರಿಕಾ (ಆ.1) ವಿರುದ್ಧ ಸೆಣಸಲಿದೆ.

ಭಾರತ ಪುರುಷರ ತಂಡವು ಅಂತರರಾಷ್ಟ್ರೀಯರ‌್ಯಾಂಕಿಂಗ್‌ನಲ್ಲಿ ಐದನೇ ಸ್ಥಾನದಲ್ಲಿದೆ. ರಷ್ಯಾ ವಿರುದ್ಧ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ 11–3ರ ಅಂತರದಿಂದ ಗೆದ್ದು ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿತ್ತು. 9ನೇ ರ‌್ಯಾಂಕ್ ಹೊಂದಿರುವ ಮಹಿಳಾ ತಂಡ ಅಮೆರಿಕತಂಡವನ್ನು 6–5ರಿಂದ ಮಣಿಸಿ ಅರ್ಹತೆ ಪಡೆದಿತ್ತು. ಈ ಎರಡೂ ಪಂದ್ಯಗಳು ಕಳೆದ ತಿಂಗಳು ಭುವನೇಶ್ವರದಲ್ಲಿ ನಡೆದಿದ್ದವು.

ಪುರುಷ ಮತ್ತು ಮಹಿಳಾ ಹಾಕಿ ಫೈನಲ್‌ ಪಂದ್ಯಗಳು ಆಗಸ್ಟ್‌ 6 ಮತ್ತು 7ರಂದು ನಡೆಯಲಿವೆ.

2020ರ ಒಲಿಂಪಿಕ್ಸ್‌ನಲ್ಲಿ ಹಾಕಿ ಪಂದ್ಯಾವಳಿಯ ವೇಳಾಪಟ್ಟಿ ಬಿಡುಗಡೆ ಮಾಡುವ ಸಂಬಂಧ ಟೋಕಿಯೊದಲ್ಲಿ ನಡೆದ ಮಾಧ್ಯಮಗೊಷ್ಠಿಯಲ್ಲಿ ಎಫ್‌ಐಎಚ್‌ ಕಾರ್ಯಕಾರಿಣಿ ಮಂಡಳಿ ಸದಸ್ಯ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಐಕ್ಯತಾ ಆಯೋಗದ ಸದಸ್ಯ ತಯ್ಯಬ್‌ ಇಕ್ರಮ್, ಟೋಕಿಯೊ–2020 ಕ್ರೀಡಾ ನಿರ್ದೇಶಕ ಕೋಜಿ ಮುರೋಫುಶಿ, ಜಪಾನ್‌ ಮಹಿಳಾ ಹಾಕಿ ಆಟಗಾರ್ತಿ ಶಿಹೋರಿ ಒಯಿಕವಾ ಹಾಗೂ ಪುರುಷ ತಂಡದ ಆಟಗಾರ ಸೆರೆನ ತನಕ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT