ಭಾನುವಾರ, ಸೆಪ್ಟೆಂಬರ್ 19, 2021
24 °C

Tokyo Olympics: ಫೈನಲ್‌ ಪ್ರವೇಶವಿಲ್ಲದಿದ್ದರೂ ರೋಯಿಂಗ್ ‘ಯೋಧರ’ ಶ್ರೇಷ್ಠ ಸಾಧನೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಟೋಕಿಯೊ: ಭಾರತದ ಅರ್ಜುನ್ ಲಾಲ್ ಜಾಟ್‌ ಹಾಗೂ ಅರವಿಂದ್ ಸಿಂಗ್ ಒಲಿಂಪಿಕ್ಸ್ ರೋಯಿಂಗ್‌ನಲ್ಲಿ ಫೈನಲ್‌ಗೆ ಅರ್ಹತೆ ಗಳಿಸಲಿಲ್ಲ. ಆದರೆ ಅವರು ತೋರಿದ ದಿಟ್ಟ ಹೋರಾಟ ದೇಶದ ಪರ ಶ್ರೇಷ್ಠ ಸಾಧನೆಯಾಗಿ ದಾಖಲಾಯಿತು.

ಪುರುಷರ ಡಬಲ್‌ ಸ್ಕಲ್ಸ್ ವಿಭಾಗದಲ್ಲಿ ನೀರಿಗಿಳಿದಿದ್ದ ಈ ಜೋಡಿಯು ಎರಡನೇ ಸೆಮಿಫೈನಲ್‌ನಲ್ಲಿ ಆರನೇ ಸ್ಥಾನ ಗಳಿಸಿತು. ಸೀ ಫಾರೆಸ್ಟ್ ವಾಟರ್‌ವೇನಲ್ಲಿ ನಡೆದಿದ್ದ ರೇಸ್‌ನಲ್ಲಿ 6 ನಿಮಿಷ 24.41 ಸೆಕೆಂಡುಗಳಲ್ಲಿ ಗುರಿ ಮುಟ್ಟಿತು.

ಇದನ್ನೂ ಓದಿ: 

ಈ ವಿಭಾಗದ ಸೆಮಿಫೈನಲ್‌ನಲ್ಲಿ ವಿಶ್ವ ಚಾಂಪಿಯನ್‌ಗಳಾದ ಐರ್ಲೆಂಡ್‌ನ ಫಿಂಟನ್‌ ಮೆಕಾರ್ಥಿ– ಪಾಲ್‌ ಓಡೊನೊವನ್‌ ಅವರು ವಿಶ್ವ ಶ್ರೇಷ್ಠ ಸಾಧನೆಯೊಂದಿಗೆ (6 ನಿ, 5.33 ಸೆ.) ಅಗ್ರಸ್ಥಾನ ಗಳಿಸಿದರು. ಇಟಲಿಯ ಸ್ಟೆಫಾನೊ ಒಪ್ಪೊ ಮತ್ತು ಪಿಯಟ್ರೊ ರುಟಾ ಎರಡನೇ ಸ್ಥಾನ ಮತ್ತು ಬೆಲ್ಜಿಯಂನ ನೀಲ್ಸ್ ವ್ಯಾನ್‌ ಜಾಂಡ್ವೆಗೆ ಮತ್ತು ಟಿಮ್‌ ಬ್ರಿಸ್‌ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.

ಎರಡು ಸೆಮಿಫೈನಲ್‌ಗಳಲ್ಲಿ ತಲಾ ಆರು ಜೋಡಿಗಳು ಸ್ಪರ್ಧಿಸುತ್ತವೆ. ಎರಡರಲ್ಲಿಯೂ ಮೊದಲ ಮೂರು ಸ್ಥಾನ ಗಳಿಸುವ ಜೋಡಿಗಳು ಫೈನಲ್‌ ಪ್ರವೇಶಿಸುತ್ತವೆ. ಎರಡನೇ ಸೆಮಿಫೈನಲ್‌ನಲ್ಲಿ ಕೊನೆಯ ಸ್ಥಾನ ಗಳಿಸಿದರೂ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಜೋಡಿಯಿಂದ ದಾಖಲಾದ ಅತ್ಯುತ್ತಮ ಸಾಧನೆ ಇದಾಗಿದೆ. ಈ ಕ್ರೀಡಾಕೂಟದಲ್ಲಿ ಅರ್ಜುನ್ ಹಾಗೂ ಅರವಿಂದ್ ಒಟ್ಟಾರೆ ಕನಿಷ್ಠ 12ನೇ ಸ್ಥಾನವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.

ವೇಗ ಪಡೆಯದ ಸೇಲಿಂಗ್‌

ಎನೊಶಿಮಾ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಸೇಲಿಂಗ್ ಪಟುಗಳ ನೌಕೆಗಳು ಬುಧವಾರವೂ ವೇಗ ಪಡೆದುಕೊಳ್ಳಲಿಲ್ಲ. ನೀರಸ ಸಾಮರ್ಥ್ಯ ಮುಂದುವರಿಯಿತು. ಪುರುಷರ 49ಇಆರ್ ವಿಭಾಗದ ನಾಲ್ಕು ರೇಸ್‌ಗಳ ಬಳಿಕ ಭಾರತದ ಕೆ.ಗಣಪತಿ ಚೆಂಗಪ್ಪ ಮತ್ತು ವರುಣ್ ಠಕ್ಕರ್‌ ಜೋಡಿಯು 18ನೇ ಸ್ಥಾನದಲ್ಲಿತ್ತು.

ಬುಧವಾರ ನಡೆದ ಮೂರು ರೇಸ್‌ಗಳಲ್ಲಿ ಈ ಜೋಡಿಯು 18, 17 ಮತ್ತು 19ನೇ ಸ್ಥಾನ ಗಳಿಸಿತು. ಮಂಗಳವಾರ 19 ತಂಡಗಳಿದ್ದ ಮೊದಲ ರೇಸ್‌ನಲ್ಲಿ ಭಾರತದ ಜೋಡಿಯು 18ನೇ ಸ್ಥಾನ ಗಳಿಸುವ ಮೂಲಕ ನಿರಾಸೆ ಮೂಡಿಸಿತ್ತು.

ಕ್ರೀಡಾಕೂಟದಲ್ಲಿ ಇನ್ನೂ ಎಂಟು ರೇಸ್‌ಗಳು ಹಾಗೂ ಪದಕದ ಸುತ್ತುಗಳು ಬಾಕಿ ಇದ್ದು, ಭಾರತದ ಸೇಲಿಂಗ್ ಪಟುಗಳ ಅದೃಷ್ಟ ಪರೀಕ್ಷೆ ಮುಂದುವರಿಯಲಿದೆ.

ಮಂಗಳವಾರ ನಡೆದ ರೇಸ್‌ಗಳಲ್ಲಿ ವಿಷ್ಣು ಸರವಣನ್‌ ಮತ್ತು ನೇತ್ರಾ ಕುಮನನ್ ಅವರಿಗೂ ಮಿಂಚಲು ಸಾಧ್ಯವಾಗಿರಲಿಲ್ಲ. ಪುರುಷರ ಲೇಸರ್ ವಿಭಾಗದಲ್ಲಿ ವಿಷ್ಣು 22ನೇ ಸ್ಥಾನ ಗಳಿಸಿದರೆ, ನೇತ್ರಾ ಅವರು ಮಹಿಳೆಯರ ಲೇಸರ್ ರೇಡಿಯಲ್ ವಿಭಾಗದಲ್ಲಿ 33ನೇ ಸ್ಥಾನಕ್ಕೆ ಕುಸಿದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು