ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics| ಈಜುಕೊಳದಲ್ಲಿ ಚಿನ್ನ ಹೆಕ್ಕುವ ನಿರೀಕ್ಷೆ

Last Updated 23 ಜುಲೈ 2021, 18:38 IST
ಅಕ್ಷರ ಗಾತ್ರ

ಟೋಕಿಯೊ: ಕೋವಿಡ್ ಆರಂಭಗೊಂಡ ನಂತರ ಕ್ರೀಡಾಕ್ಷೇತ್ರದಲ್ಲಿ ಹೆಚ್ಚು ತೊಂದರೆಗೆ ಒಳಗಾದವರು ಈಜುಪಟುಗಳು. ಭಾರತದಲ್ಲೂ ಲಾಕ್‌ಡೌನ್ ಆರಂಭವಾದ ನಂತರ ಈಜುಕೊಳಗಳಲ್ಲಿ ಚಟುವಟಿಕೆ ನಡೆದದ್ದು ಕಡಿಮೆ. ಕರ್ನಾಟಕದಲ್ಲಂತೂ ಒಂದೂವರೆ ವರ್ಷದಿಂದ ಈಜು ಆರಂಭಿಸುವ ಪ್ರಯತ್ನಕ್ಕೆ ಆಗಾಗ ಸ್ವಲ್ಪ ಫಲ ಸಿಕ್ಕಿದ್ದು ಬಿಟ್ಟರೆ ಮಿಕ್ಕಂತೆ ನಿರಾಸೆಯೇ ಕಾದಿತ್ತು.

ಇಂಥ ಸಂದರ್ಭದಲ್ಲಿ ಒಲಿಂಪಿಕ್ಸ್‌ಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಭಾರತ ಮತ್ತು ಕರ್ನಾಟಕದ ಈಜು ಕ್ಷೇತ್ರದಲ್ಲಿ ಬೆಳ್ಳಿ ಬೆಳಕು ಮೂಡಿತ್ತು. ಮೊದಲು ಸಜನ್ ಪ್ರಕಾಶ್, ನಂತರ ಬೆಂಗಳೂರಿನ ಶ್ರೀಹರಿ ನಟರಾಜ್ ‘ಎ’ ಅರ್ಹತೆಯೊಂದಿಗೆ ಟೋಕಿಯೊ ಟಿಕೆಟ್ ಗಳಿಸಿದ್ದರು. ಮಹಿಳಾ ವಿಭಾಗದಲ್ಲಿ ಮಾನಾ ಪಟೇಲ್ ಕೂಡ ಸ್ಥಾನ ಗಳಿಸಿ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದರು. 2008ರ ಬೀಜಿಂಗ್ ಒಲಿಂಪಿಕ್ಸ್‌ ನಂತರ ಎರಡಕ್ಕಿಂತ ಹೆಚ್ಚು ಈಜುಪಟುಗಳನ್ನು ಭಾರತ ಕಳುಹಿಸಿದ್ದು ಇದೇ ಮೊದಲು.

ಪುರುಷರ 100 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಶ್ರೀಹರಿ, 200 ಮೀಟರ್ಸ್ ಫ್ರೀಸ್ಟೈಲ್‌, 100 ಹಾಗೂ 200 ಮೀಟರ್ಸ್ ಬಟರ್‌ಫ್ಲೈನಲ್ಲಿ ಸಜನ್ ಪ್ರಕಾಶ್‌, ಮಹಿಳೆಯರ 100 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಮನಾ ಪಟೇಲ್ ಪದಕದ ಮೇಲೆ ಗುರಿ ಇಟ್ಟು ಕೊಳಕ್ಕೆ ಇಳಿಯಲಿದ್ದಾರೆ.

ಒಲಿಂಪಿಕ್ಸ್‌ನ ಮೊದಲ ಆವೃತ್ತಿಯಿಂದಲೇ ಈಜು ಕ್ರೀಡೆಗೆ ಸ್ಥಾನ ಇದೆ. ಭಾರತ 1932ರ ಲಾಸ್ ಏಂಜಲೀಸ್ ಕೂಟದಲ್ಲಿ ಒಬ್ಬರು ಈಜುಪಟುವನ್ನು ಕಳುಹಿಸಿ ಪದಾರ್ಪಣೆ ಮಾಡಿತ್ತು. ನಂತರದ ಆವೃತ್ತಿಯಲ್ಲಿ ದೇಶವನ್ನು ಯಾರೂ ಪ್ರತಿನಿಧಿಸಲಿಲ್ಲ. ಆದರೆ 1948ರ ಲಂಡನ್ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಏಳು ಮಂದಿ ಪ್ರತಿನಿಧಿಸಿದ್ದರು. ಅದು, ಈ ವರೆಗೆ ಭಾರತವನ್ನು ಪ್ರತಿನಿಧಿಸಿದವರ ಗರಿಷ್ಠ ಸಂಖ್ಯೆ. ಮುಂದಿನ ಬಾರಿ ಐವರು ಮತ್ತು ಅದರ ನಂತರ ಇಬ್ಬರನ್ನು ಕಳುಹಿಸಲಾಗಿತ್ತು. ಆದರೆ ಇದಾಗಿ ಏಳು ಆವೃತ್ತಿಗಳಲ್ಲಿ ಭಾರತಕ್ಕೆ ಈಜಿನಲ್ಲಿ ಪಾಲ್ಗೊಳ್ಳಲು ಆಗಲಿಲ್ಲ.

1996ರಿಂದ ಪ್ರತಿ ಒಲಿಂಪಿಕ್ಸ್‌ನಲ್ಲೂ ಭಾರತದ ಈಜುಪಟುಗಳು ಪಾಲ್ಗೊಳ್ಳುತ್ತಿದ್ದಾರೆ. ಆದರೆ ಆರಂಭದಿಂದ ಇಲ್ಲಿಯ ವರೆಗೆ ಒಮ್ಮೆಯೂ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಬಾರಿ ‘ಎ’ ಅರ್ಹತೆ ಗಳಿಸಿರುವ ಇಬ್ಬರೂ ಭರವಸೆ ಮೂಡಿಸಿದ್ದಾರೆ. ‘ಎ’ ಅರ್ಹತೆ ಗಳಿಸಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತದ ಮೊದಲ ಈಜುಪಟು ಎಂದೆನಿಸಿಕೊಂಡಿರುವ ಸಜನ್ ಪ್ರಕಾಶ್ 200 ಮೀಟರ್ಸ್ ಬಟರ್‌ಫ್ಲೈನಲ್ಲಿ ರಾಷ್ಟ್ರೀಯ ದಾಖಲೆ ಮುರಿದಿದ್ದಾರೆ.

ಶ್ರೀಹರಿ ನಟರಾಜ್‌ಗೆ ದಾಖಲೆಗಳು ಹೊಸದೇನೂ ಅಲ್ಲ. ವಿವಿಧ ಟೂರ್ನಿಗಳಲ್ಲಿ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಗಳನ್ನು ಮುರಿಯುತ್ತ ಬಂದಿರುವ ಅವರು ‘ಎ’ ಅರ್ಹತೆಯೊಂದಿಗೆ ಒಲಿಂಪಿಕ್ಸ್ ಕೂಟದಲ್ಲಿ ಭಾಗವಹಿಸುವ ಭಾರತದ ಎರಡನೇ ಆಟಗಾರ. ಈ ಅಪರೂಪದ ಸಾಧನೆಯನ್ನು ಪದಕವಾಗಿ ಪರಿವರ್ತಿಸಿ ದೇಶಕ್ಕೆ ಗೌರವ ತಂದುಕೊಡಲು ಅವರು ಸಜ್ಜಾಗಿದ್ದಾರೆ.

ಮಾನಾ ಪಟೇಲ್ 50, 100 ಮತ್ತು 200 ಮಿಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಕೇವಲ 15 ವರ್ಷದವರಾಗಿದ್ದಾಗ 50 ಮತ್ತು 200 ಮೀಟರ್ಸ್‌ನಲ್ಲಿ ದಾಖಲೆ ಬರೆದ ಸಾಧಕಿ ಅವರು. ಈ ವರ್ಷದ ಜೂನ್‌ನಲ್ಲಿ 100 ಮೀಟರ್ಸ್ ದಾಖಲೆ ಬರೆದಿದ್ದಾರೆ. ಅದು ಅವರ ಭರವಸೆಯನ್ನು ಇನ್ನಷ್ಟು ಹೆಚ್ಚಿಸಿದೆ. ಹೀಗಾಗಿ ಭಾರತದ ಪದಕದ ನಿರೀಕ್ಷೆಯೂ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT