ಮಂಗಳವಾರ, ಮಾರ್ಚ್ 28, 2023
31 °C

ಮನುಕುಲದ ಹಬ್ಬ!

ವಿಜಯ್‌ ಲೋಕಪಲ್ಲಿ Updated:

ಅಕ್ಷರ ಗಾತ್ರ : | |

ಭೂಮಿಯ ಮೇಲಿನ ಅತಿದೊಡ್ಡ ಕ್ರೀಡಾ ಮೇಳ ಎನಿಸಿರುವ ಒಲಿಂಪಿಕ್‌ ಕೂಟ ಇನ್ನೇನು ಟೋಕಿಯೊದಲ್ಲಿ ಆರಂಭವಾಗಲಿದೆ. ಭ್ರಾತೃತ್ವದ ಸಂದೇಶ ಸಾರುವ ಈ ಕೂಟವು ಕೋವಿಡ್‌ನ ನೋವನ್ನು ಮರೆಸಲಿದೆ ಎಂದು ಪ್ರಪಂಚವೇ ಕಾದಿದೆ. ‘ಇನ್ನಷ್ಟು ವೇಗ, ಇನ್ನಷ್ಟು ಎತ್ತರ, ಇನ್ನಷ್ಟು ಬಲಿಷ್ಠ’ ಮಂತ್ರ ಜಪಿಸುವ ಅಥ್ಲೀಟ್‌ಗಳು ಯಾವ ಹೊಸ ಸಾಹಸ ಮೆರೆಯಬಹುದು ಎಂದು ಕ್ರೀಡಾಪ್ರೇಮಿಗಳೂ ಕಾದಿದ್ದಾರೆ...

ಬಾರೊನ್‌ ಪಿಯರ್‌ ಡಿ ಕೌಬರ್ಟನ್ನನ ನೆನಪು ಈಗ ಜಗತ್ತಿನಿಂದ ಸಂಪೂರ್ಣ ಮಾಸಿ ಹೋಗಿದೆಯೇ? 1896ರಲ್ಲಿ ಆಧುನಿಕ ಒಲಿಂಪಿಕ್‌ ಕ್ರೀಡಾಕೂಟಕ್ಕೆ ಜನ್ಮ ನೀಡಿದ ವ್ಯಕ್ತಿ ಆತ. ಈ ದೊಡ್ಡ ಕ್ರೀಡಾ ಉತ್ಸವ ಹೇಗೆ ನಡೆಯಬೇಕು ಎನ್ನುವುದರ ಬಗೆಗಿನ ಆತನ ಆಗಿನ ದೃಷ್ಟಿಕೋನವು ಅದು ಸದ್ಯ ಪಡೆದಿರುವ ಸ್ವರೂಪಕ್ಕಿಂತಲೂ ಭಿನ್ನವಾಗಿದ್ದಿತೇನೋ. ‘ಯಾವುದೇ ಬೆಲೆ ತೆತ್ತಾದರೂ ಗೆಲ್ಲು’ ಎನ್ನುವುದು ಒಲಿಂಪಿಕ್‌ ಕ್ರೀಡೆಯ ಈಗಿನ ಮಂತ್ರ. ವಾಸ್ತವವಾಗಿ, ಈ ಜಿದ್ದು ನಾವು ಬದುಕುತ್ತಿರುವ ಸಮಾಜದ ಯಥಾವತ್‌ ಪ್ರತಿಬಿಂಬ. ಸಹಿಷ್ಣುತೆ ಹಾಗೂ ಸೌಹಾರ್ದದ ಮಹತ್ವವನ್ನು ಸಾರಲು, ಮಾನವೀಯತೆಯ ಸಂದೇಶವನ್ನು ಮೊಳಗಿಸಲು ಜಗತ್ತಿನ ಅತ್ಯಂತ ಶ್ರೇಷ್ಠ ಕ್ರೀಡಾಪಟುಗಳೆಲ್ಲ ಕ್ರೀಡಾಜಾತ್ರೆಯ ನೆಪದಲ್ಲಿ ಪ್ರತೀ ನಾಲ್ಕು ವರ್ಷಗಳಿಗೊಮ್ಮೆ ಒಂದೆಡೆ ಸೇರುತ್ತಾರೆ. ಒಂದೊಂದು ಒಲಿಂಪಿಕ್‌ ಕ್ರೀಡಾಕೂಟವೂ ಹೊಸ ಹೊಸ ಸಾಧನೆಗಳ ಹೊಳಪಿಗೆ ಕಾರಣವಾಗುತ್ತಾ, ಚಿನ್ನದ ಬಣ್ಣವನ್ನು ಮತ್ತಷ್ಟು ಮೈಗೆ ಮೆತ್ತಿಕೊಳ್ಳುತ್ತಾ ಝಗಮಗಿಸುತ್ತಲೇ ಹೊರಟಿದೆ.

ಒಲಿಂಪಿಕ್‌ ಕ್ರೀಡೆ ಹಲವು ಕಾರಣಗಳಿಂದ ಮಹತ್ವ ಪಡೆದಿದೆ. ಕ್ರೀಡೆಯ ಉತ್ಕೃಷ್ಟ ಸೇನಾನಿಗಳೆಲ್ಲ ಚಾಂಪಿಯನ್ನರಾಗಿ ಹೊರಹೊಮ್ಮಲು ನಡೆಸುವ ಈ ಆರೋಗ್ಯಕರ ಸಮರದ ಕಡೆಗೆ, ಬರೋಬ್ಬರಿ ಹದಿನೈದು ದಿನಗಳವರೆಗೆ, ಜಗತ್ತಿನ ಗಮನವೆಲ್ಲ ಕೇಂದ್ರೀಕೃತವಾಗಿರುತ್ತದೆ. ಹಾಗೆಂದ ಮಾತ್ರಕ್ಕೆ ಈ ಕೂಟವನ್ನು ಚಾಂಪಿಯನ್ನರ ಸಾಹಸಗಾಥೆಗಳ ತೊಟ್ಟಿಲು ಎಂದಷ್ಟೇ ಕರೆಯಬೇಕಿಲ್ಲ. ಸೋತ ಅಥ್ಲೀಟ್‌ಗಳ ಹೃದ್ಯ ಕಥೆಗಳೂ ಅಲ್ಲಿ ಹರಳುಗಟ್ಟಿರುತ್ತವೆ – ತೊಟ್ಟಿಲು ತೂಗುವಾಗ ಹಾಡುವ ಲಾಲಿ ಹಾಡುಗಳಂತೆ! ಕೂಟದ ಪ್ರತಿಯೊಂದು ಸ್ಪರ್ಧೆಯಲ್ಲೂ ಕ್ರೀಡಾಸ್ಫೂರ್ತಿಯ ಚಿಲುಮೆ ಪುಟಿದೇಳುತ್ತದೆ.


ರಿಯೊ ಡಿ ಜನೈರೊ ಕೂಟದಲ್ಲಿ ನಡೆಸಿದ ಸೆಣಸಾಟದಿಂದ ಗಮನಸೆಳೆದ ಪಿ.ವಿ.ಸಿಂಧು. ಈ ಬಾರಿಯೂ ದೇಶ ಅವರಿಂದ ಪದಕದ ನಿರೀಕ್ಷೆಯಲ್ಲಿದೆ. – ಪ್ರಜಾವಾಣಿ ಚಿತ್ರ: ಕೆ.ಎನ್‌. ಶಾಂತಕುಮಾರ್‌

ಅಥೆನ್ಸ್‌ನಲ್ಲಿ 1896ರಲ್ಲಿ ನಡೆದ ಮೊದಲ ಕೂಟದಿಂದ ಇಂದಿನವರೆಗೆ ಒಲಿಂಪಿಕ್ಸ್‌ನಲ್ಲಿ ಗೆದ್ದವರು ಹಾಗೂ ಬಿದ್ದವರ ಕಥೆಗಳು ಮುಂದಿನ ಕೂಟದ ‘ಕದನ ಕುತೂಹಲ’ವನ್ನು ಹೆಚ್ಚಿಸುತ್ತಲೇ ಹೋಗುತ್ತವೆ. ನಿಮಗೆ ಗೊತ್ತೆ? ಮೊತ್ತಮೊದಲ ಕೂಟದಲ್ಲಿ ಭಾಗವಹಿಸಿದ್ದು 13 ದೇಶಗಳ 250 ಕ್ರೀಡಾಪಟುಗಳು ಮಾತ್ರ. ಅಲ್ಲದೆ, ಅವರೆಲ್ಲರೂ ಪುರುಷ ಕ್ರೀಡಾಪಟುಗಳೇ ಆಗಿದ್ದರು. ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯನ್ನು (ಐಒಸಿ) ಕೌಬರ್ಟನ್‌ 1894ರಲ್ಲಿ ಸ್ಥಾಪಿಸಿದ. ಐಒಸಿ ಸ್ಥಾಪನೆಯಾದ ಎರಡು ವರ್ಷಗಳ ಬಳಿಕ ನಡೆದ ಕ್ರೀಡಾಕೂಟ ಅದಾಗಿತ್ತು. ಅಂದಿನಿಂದ ಇಂದಿನವರೆಗೆ ಕ್ರೀಡೆಯನ್ನು ವ್ಯವಸ್ಥಿತವಾಗಿ ಸಂಘಟಿಸುವ ಆಡಳಿತ ಮಂಡಳಿ ಎನಿಸಿದ ಐಒಸಿ, ‘ಆರೋಗ್ಯಕರ ಜೀವನಕ್ಕಾಗಿ ಕ್ರೀಡೆ’ ಎಂಬ ಸಂದೇಶವನ್ನು ಜಗತ್ತಿನಾದ್ಯಂತ ಹರಡುತ್ತಲೇ ಬಂದಿದೆ.

ಮೊದಲ ಜಾಗತಿಕ ಸಮರದ ಕಾರಣಕ್ಕಾಗಿ 1916 ಹಾಗೂ ಎರಡನೇ ಜಾಗತಿಕ ಸಮರದ ಕಾರಣಕ್ಕಾಗಿ 1940 ಮತ್ತು 1944ರಲ್ಲಿ –ಹೀಗೆ ಒಟ್ಟು ಮೂರು ಬಾರಿ– ರದ್ದಾಗಿರುವುದನ್ನು ಹೊರತುಪಡಿಸಿದರೆ ಒಲಿಂಪಿಕ್‌ ಕೂಟ ಪ್ರತೀ ನಾಲ್ಕು ವರ್ಷಗಳಿಗೊಮ್ಮೆ ಅಬಾಧಿತವಾಗಿ ನಡೆಯುತ್ತಲೇ ಬಂದಿದೆ. ಆ್ಯಂಟ್‌ವರ್ಪ್‌ನಲ್ಲಿ ನಡೆದ 1920ರ ಕೂಟ ಹಾಗೂ ಪ್ಯಾರಿಸ್‌ನಲ್ಲಿ ನಡೆದ 1924ರ ಕೂಟ ಒಲಿಂಪಿಕ್ಸ್‌ಗೆ ಜಗತ್ತಿನ ಅತಿದೊಡ್ಡ ಕ್ರೀಡಾಜಾತ್ರೆ ಎನ್ನುವ ಗೌರವವನ್ನು ತಂದುಕೊಟ್ಟಿದ್ದು ಈಗ ಇತಿಹಾಸ. 1924ರಲ್ಲಿ ಮೂರು ಸಾವಿರ ಚಿಲ್ಲರೆ ಕ್ರೀಡಾಪಟುಗಳು ಭಾಗವಹಿಸಿದ್ದರು. 2004ರ ಅಥೆನ್ಸ್‌ ಕೂಟದ ವೇಳೆಗೆ ಆ ಸಂಖ್ಯೆ ಹನ್ನೊಂದು ಸಾವಿರಕ್ಕೆ ಜಿಗಿದಿತ್ತು. ಇಂತಹ ಭವ್ಯ ಚರಿತ್ರೆಯ ಒಲಿಂಪಿಕ್‌ ಕೂಟ ಕೋವಿಡ್‌ ಸಾಂಕ್ರಾಮಿಕದ ಈ ಕಾಲಘಟ್ಟದಲ್ಲಿ ನಿಗದಿಗಿಂತ ತುಸು ತಡವಾಗಿ ಮತ್ತೆ ಬಂದಿದೆ.


ರಿಯೊ ಡಿ ಜನೈರೊ ಕೂಟದ (2016) ಮಹಿಳೆಯರ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದ ಸಾಕ್ಷಿ ಮಲ್ಲಿಕ್‌, ತಮ್ಮ ಕೋಚ್‌ ಕುಲದೀಪ್‌ ಸಿಂಗ್‌ ಜತೆ ಸಂಭ್ರಮಿಸಿದ ಪರಿ –ಪ್ರಜಾವಾಣಿ ಚಿತ್ರ: ಕೆ.ಎನ್‌. ಶಾಂತಕುಮಾರ್‌

ಭ್ರಾತೃತ್ವ ಹಾಗೂ ಸ್ನೇಹದ ಹರವನ್ನು ವಿಸ್ತರಿಸುವುದೇ ಈ ಕ್ರೀಡಾಕೂಟದ ಮುಖ್ಯ ಉದ್ದೇಶವಾದರೂ ಅದಕ್ಕೆ ಪ್ರತಿಕೂಲವಾದ ಸನ್ನಿವೇಶಗಳು ಎದುರಾಗಿದ್ದನ್ನು ಮರೆಯುವಂತಿಲ್ಲ. ಜಗತ್ತಿನ ಮೇಲೆ ಹಿಡಿತ ಸಾಧಿಸುವ ದುರಾಸೆಯಿಂದ ನಡೆದ ಜಾಗತಿಕ ಸಮರಗಳ ಕಾರಣಕ್ಕಾಗಿ ಕ್ರೀಡಾಕೂಟವನ್ನೇ ರದ್ದುಗೊಳಿಸಬೇಕಾದ ಸಂದರ್ಭ ಎದುರಾದ ಆ ಕಹಿ ನೆನಪಂತೂ ಸದಾ ಕಾಡುತ್ತಿರುತ್ತದೆ. 2020ರಲ್ಲಿ ನಡೆಯಬೇಕಿದ್ದ ಟೋಕಿಯೊ ಕೂಟ, ಮನುಕುಲವನ್ನೇ ಕಾಡಿದ ಮಹಾಮಾರಿ ಕೋವಿಡ್‌ನಿಂದಾಗಿ ಮುಂದೂಡಲ್ಪಟ್ಟು ಈಗ ನಡೆಯುತ್ತಿದೆ.

ಜಗತ್ತಿನ ಹಲವೆಡೆ ನಡೆದ ರಾಜಕೀಯ ಬೆಳವಣಿಗೆಗಳಿಂದ ಒಲಿಂಪಿಕ್‌ ಕೂಟದ ಮೇಲೆ ಆಗಾಗ ಕಾರ್ಮೋಡ ದಟ್ಟೈಸುವಂತೆ ಆಗಿದ್ದು ಸುಳ್ಳಲ್ಲ. 1916ರಲ್ಲಿ ಮೊದಲ ಬಾರಿಗೆ ಕೂಟವೇ ರದ್ದಾದ ಘಟನೆಗೆ ಸಾಕ್ಷಿಯಾದ ಜಗತ್ತು, 1936ರ ಬರ್ಲಿನ್‌ ಕೂಟ ನಡೆಯುವ ಸಾಧ್ಯತೆಯೂ ಕಡಿಮೆ ಎನ್ನುವ ಭೀತಿಯನ್ನು ಅನುಭವಿಸಿತ್ತು. ನಾಜಿ ಆಡಳಿತದ ಜರ್ಮನಿಯನ್ನು ಸೌಹಾರ್ದದ, ಗೌರವದ ಆತಿಥೇಯ ಎಂದು ಒಪ್ಪಲು ಸಿದ್ಧವಿರದ ವಾತಾವರಣ ಆಗ ನಿರ್ಮಾಣವಾಗಿತ್ತು. ಅಮೆರಿಕದ ಯಹೂದಿ ಗುಂಪುಗಳಂತೂ ದೇಶದ ಅಥ್ಲೀಟ್‌ಗಳನ್ನು ಹಿಂದೆ ಕರೆಯಿಸುವಂತೆ ಅಲ್ಲಿನ ಸರ್ಕಾರದ ಮೇಲೆ ತೀವ್ರವಾಗಿ ಒತ್ತಡ ಹೇರಿದ್ದವು. ಅಮೆರಿಕದ ಒಲಿಂಪಿಕ್‌ ಸಮಿತಿಯ ಆಗಿನ ಅಧ್ಯಕ್ಷ ಅವೆರಿ ಬ್ರಂಡೇಜ್‌ ಅವರ ಭಾರಿ ಪ್ರಯತ್ನದಿಂದಾಗಿ ಆ ದೇಶ ಕೂಟವನ್ನು ಬಹಿಷ್ಕರಿಸಿ ಹೊರನಡೆಯುವ ಸಂದರ್ಭ ತಪ್ಪಿತು. ಅಬಾಧಿತವಾಗಿ ನಡೆದ ಬರ್ಲಿನ್‌ ಕೂಟದಲ್ಲಿ ಹಲವು ಹೊಳೆಯುವ ತಾರೆಗಳು ಉದಯಿಸಿದವು.


ಬೀಜಿಂಗ್‌ ಒಲಿಂಪಿಕ್‌ ಕೂಟದಲ್ಲಿ ಭಾರತದ ವೈಯಕ್ತಿಕ ಸ್ವರ್ಣ ಪದಕದ ಬರ ನೀಗಿಸಿದ ಅಭಿನವ್‌ ಬಿಂದ್ರಾ – ಪ್ರಜಾವಾಣಿ ಚಿತ್ರ: ಕೆ.ಎನ್‌. ಶಾಂತಕುಮಾರ್‌

ಆಧುನಿಕ ಒಲಿಂಪಿಕ್‌ ಕ್ರೀಡೆಯ ಚರಿತ್ರೆಯಲ್ಲಿ ಬರ್ಲಿನ್‌ ಕೂಟವು ಅತ್ಯಂತ ವಿವಾದಾತ್ಮಕ ಕೂಟ ಎಂಬ ಹಣೆಪಟ್ಟಿಯನ್ನೂ ಅಂಟಿಸಿಕೊಂಡಿದೆ. ಆಗ ಜರ್ಮನಿಯ ಸರ್ವಾಧಿಕಾರಿಯಾಗಿದ್ದ ಅಡಾಲ್ಫ್‌ ಹಿಟ್ಲರ್‌ನ ಕರಿನೆರಳು ಈ ಕೂಟದುದ್ದಕ್ಕೂ ಹರಡಿತ್ತು. ಕ್ರೀಡಾಂಗಣದಲ್ಲಿ ಕೂಡ ವಿಜಯ ಪತಾಕೆ ಹಾರಿಸುವ ಮೂಲಕ ನಾಜಿಗಳು ಪ್ರಾಬಲ್ಯ ಮೆರೆಯಬೇಕು ಎಂಬ ಆತನ ಹಪಹಪಿ ಎದ್ದು ಕಂಡಿತ್ತು. ಈ ಕೂಟದ ಸಂಘಟನಾ ಸಮಿತಿಯ ಪದಾಧಿಕಾರಿಗಳ ಮೇಲೆ ಭ್ರಷ್ಟಾಚಾರದ ಆರೋಪಗಳು ಜೋರಾಗಿಯೇ ಕೇಳಿಬಂದಿದ್ದವು. ರಾಜಕಾರಣಿಗಳ ಅತಿಯಾದ ಮೂಗು ತೂರಿಸುವ ಪ್ರವೃತ್ತಿ ಕುರಿತೂ ದೂರುಗಳು ಪ್ರತಿಧ್ವನಿಸಿದ್ದವು. ಹಿಟ್ಲರ್‌ ಹಿಡಿತದ ಕುರಿತು ಏನೇ ಮಾತುಗಳಿರಲಿ, ಕೂಟದಲ್ಲಿ ನಿಜಕ್ಕೂ ಫಳಫಳ ಹೊಳೆದಿದ್ದು ಜೆಸ್ಸಿ ಓವೆನ್ಸ್‌ ಎಂಬ ಅಮೆರಿಕದ ಕಪ್ಪು ಜನಾಂಗೀಯ ಕ್ರೀಡಾಪಟು. ತನ್ನ ಮಾಂತ್ರಿಕ ಓಟದ ಮೂಲಕ ಕ್ರೀಡಾಕೂಟವನ್ನು ‘ಗೆಲುವಿನ ಗೆರೆ’ವರೆಗೆ ಮುನ್ನಡೆಸಿದವನು ಆತ!

ನಾಲ್ಕು ಸ್ವರ್ಣ ಪದಕಗಳನ್ನು ಗೆದ್ದ ಓವೆನ್ಸ್‌ನ ಸಾಧನೆ ಅಸಾಧಾರಣವಾದುದು. ಅತಿರೇಕಗಳಿಗೆ ಹೆಸರಾಗಿದ್ದ ಹಿಟ್ಲರ್‌ನನ್ನು ಆತನ ಜನರ ಎದುರೇ ಮುಜುಗರಕ್ಕೆ ಈಡುಮಾಡಿದ ಸಾಧಕ ಎಂದು ಇಡೀ ಜಗತ್ತು ಓವೆನ್ಸ್‌ನನ್ನು ಕೊಂಡಾಡಿತು. ಬರ್ಲಿನ್‌ನಲ್ಲಿ ಕೊನೆಗೆ ಗೆದ್ದುದು ಕ್ರೀಡೆಯೇ. ಒಲಿಂಪಿಕ್‌ ಚಳವಳಿಯ ಶಾಂತಿ ಹಾಗೂ ಭ್ರಾತೃತ್ವದ ಸಂದೇಶವನ್ನು ಜಗತ್ತಿಗೆಲ್ಲ ಸಾರುವ ಪ್ರವಾದಿಯಾಗಿ ಓವೆನ್ಸ್‌ ಗೋಚರಿಸಿದ. ಲಾಂಗ್‌ ಜಂಪ್‌ ಸ್ಪರ್ಧೆ ಮುಗಿದ ಮೇಲೆ ಓವೆನ್ಸ್‌, ಜರ್ಮನಿಯ ತನ್ನ ಸಹಸ್ಪರ್ಧಿ ಲುಜ್‌ ಲಾಂಗ್‌ನ ಭುಜದ ಮೇಲೆ ಕೈಹಾಕಿ ಜತೆಯಲ್ಲಿ ಹೆಜ್ಜೆಹಾಕಿದ್ದು ಬರ್ಲಿನ್‌ ಕೂಟದ ಅಮರ ಕ್ಷಣವಾಗಿ ಚರಿತ್ರೆಯಲ್ಲಿ ದಾಖಲಾಯಿತು.

ಭಾರತೀಯ ಅಭಿಮಾನಿಗಳಿಗೂ ಬರ್ಲಿನ್‌ ಸ್ಮರಣೀಯ ಕ್ಷಣಗಳನ್ನು ಮೊಗೆದುಕೊಟ್ಟಿತು. ಭಾರತ ಹಾಕಿ ತಂಡ ತನ್ನ ಸತತ ಮೂರನೇ ಒಲಿಂಪಿಕ್‌ ಬಂಗಾರದ ಪದಕವನ್ನು ಹೆಕ್ಕಿ ತೆಗೆದಿದ್ದು ಇದೇ ಕೂಟದಲ್ಲಿ. ಹಾಕಿ ಮಾಂತ್ರಿಕ ಧ್ಯಾನ್‌ಚಂದ್‌ ನೇತೃತ್ವದ ತಂಡ ಕೂಟ ಶುರುವಾಗುವ ಮುನ್ನ ಜರ್ಮನಿ ವಿರುದ್ಧದ ಸ್ನೇಹಪರ ಪಂದ್ಯದಲ್ಲಿ 1–4 ಗೋಲುಗಳಿಂದ ಪರಾಭವಗೊಂಡಿತ್ತು. ಆದರೆ, ಭಾರತೀಯ ಹಾಕಿ ತಾರೆಗಳು ತಮ್ಮ ಭವ್ಯ ಪರಂಪರೆಯನ್ನು ಮತ್ತೆ ಜಗತ್ತಿನ ಮುಂದೆ ತೆರೆದು ತೋರಿದ್ದರಲ್ಲದೆ ಹಿಟ್ಲರ್‌ನ ಗಮನವನ್ನೂ ಸೆಳೆದಿದ್ದರು. ಒಲಿಂಪಿಕ್ಸ್‌ ಹಾಕಿ ಫೈನಲ್‌ ಪಂದ್ಯದಲ್ಲಿ ಭಾರತ ತಂಡ 8–1ರಿಂದ ಜರ್ಮನಿ ತಂಡವನ್ನು ಪರಾಭವಗೊಳಿಸುವ ಮೂಲಕ ತನ್ನ ಪ್ರಾಬಲ್ಯವನ್ನು ತೋರಿಸಿತ್ತು.

ಬರ್ಲಿನ್‌ನ ಕೂಟದ ಕೆಲವು ಕುತೂಹಲಕಾರಿ ಸಂಗತಿಗಳು ಬಹುತೇಕರಿಗೆ ಗೊತ್ತಿಲ್ಲ. ಭಾರತದ ಹನುಮಾನ್‌ ವ್ಯಾಯಾಮ ಪ್ರಸಾರಕ ಮಂಡಳದ ಕ್ರೀಡಾಪಟುಗಳು ಈ ಕೂಟದಲ್ಲಿ ಕುಸ್ತಿಪಟುಗಳ ಅಂಗಸಾಧನೆ ಹಾಗೂ ಮಲ್ಲಕಂಬದ ಪ್ರದರ್ಶನ ನೀಡುವ ಮೂಲಕ ಜಗತ್ತಿನ ಗಮನ ಸೆಳೆದಿದ್ದರು.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಮರುವರ್ಷವೇ ಲಂಡನ್‌ನಲ್ಲಿ ನಡೆದ (1948) ಒಲಿಂಪಿಕ್‌ ಕೂಟ ಭಾರತೀಯರ ಪಾಲಿಗೆ ಅವಿಸ್ಮರಣೀಯವಾದುದು. ಏಕೆಂದರೆ, ಹಾಕಿ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನೇ ಸೋಲಿಸಿದ ಭಾರತ ಚಿನ್ನದ ಪದಕಕ್ಕೆ ಕೊರಳೊಡ್ಡಿತ್ತು. ಆ ವೇಳೆಗೆ ಧ್ಯಾನ್‌ಚಂದ್‌ ಅವರಿಂದ ನಾಯಕತ್ವದ ಹೊಣೆಯನ್ನು ಪಡೆದಿದ್ದವರು ಬಲ್ಬೀರ್‌ ಸಿಂಗ್‌ (ಸೀನಿಯರ್‌). ಇಂತಹ ವೈಭೋಗದ ದಿನಗಳಿಂದ ಭಾರತ ಹಾಕಿ ತಂಡ ಮುಂದೆ ಸೋಲಿನ ಪ್ರಪಾತಕ್ಕೆ ಬಿದ್ದಮೇಲೆ ನಡೆಯುತ್ತಿದ್ದ ಚರ್ಚೆಗಳ ಸಮಯದಲ್ಲಿ ಈ ಫೈನಲ್‌ ಪಂದ್ಯದ ರೋಚಕ ಕ್ಷಣಗಳನ್ನು ಎಷ್ಟು ಸಲ ಕಟ್ಟಿಕೊಟ್ಟರೂ ಬಲ್ಬೀರ್‌ ಸಿಂಗ್‌ ದಣಿಯುತ್ತಿರಲಿಲ್ಲ.

ಭಾರತದ ಹಾಕಿ ಯಶಸ್ಸಿನ ಓಟಕ್ಕೆ ಮೊದಲ ಸಲ ಕಡಿವಾಣ ಬಿದ್ದಿದ್ದು 1960ರ ರೋಮ್‌ ಒಲಿಂಪಿಕ್‌ ಕೂಟದಲ್ಲಿ. ಪಾಕಿಸ್ತಾನ ತಂಡ ಆಗ ಚಿನ್ನದ ಪದಕಕ್ಕೆ ಮುತ್ತು ನೀಡಿತ್ತು. ಟೋಕಿಯೊದಲ್ಲಿ ನಡೆದ ಮುಂದಿನ ಕೂಟದಲ್ಲಿ ಭಾರತ ಮತ್ತೆ ರಾಜನಾಗಿ ವಿರಾಜಮಾನವಾಯಿತು. 1980ರ ಮಾಸ್ಕೊ ಕೂಟದಲ್ಲಿ ಭಾರತ ಹಾಕಿಯಲ್ಲಿ ಚಿನ್ನ ಗೆದ್ದರೂ ಆ ವೇಳೆಗೆ ಇತರ ದೇಶಗಳೂ ಈ ಕ್ರೀಡೆಯಲ್ಲಿ ಬಲಿಷ್ಠವಾಗಿ ಬೆಳೆದಿದ್ದವು. ಅದೇ ಕೊನೆ. ಅಲ್ಲಿಂದ ಈಚೆಗೆ ಭಾರತಕ್ಕೆ ಹಾಕಿಯಲ್ಲಿ ಒಲಿಂಪಿಕ್‌ ಚಿನ್ನದ ಪದಕ ಎನ್ನುವುದು ಮರೀಚಿಕೆಯೇ ಆಗಿಬಿಟ್ಟಿದೆ (ಆದರೆ, ಈ ಬಾರಿ ಹಾಕಿಯಲ್ಲೂ ಪದಕ ಗೆಲ್ಲುವ ಅವಕಾಶವಿದೆ ಎಂದು ಹೇಳಲಾಗುತ್ತಿದೆ). ಮಾಸ್ಕೊ ಕೂಟವನ್ನು ಅಮೆರಿಕ ಬಹಿಷ್ಕರಿಸಿದರೆ, ನಾಲ್ಕು ವರ್ಷಗಳ ಬಳಿಕ ನಡೆದ ಲಾಸ್‌ ಏಂಜಲೀಸ್‌ ಕೂಟವನ್ನು ಸೊವಿಯತ್‌ ಒಕ್ಕೂಟ ಬಹಿಷ್ಕರಿಸಿತ್ತು.

ಜನಪ್ರಿಯತೆಯ ವಿಷಯದಲ್ಲಿ 1960ರ ರೋಮ್‌ ಕೂಟ ಅತ್ಯಂತ ಸ್ಮರಣೀಯವಾದುದು. ಹೆಸರಾಂತ ಲೇಖಕ ಡೆವಿಡ್‌ ಮ್ಯಾರನಿಸ್‌ ಅವರಂತೂ ಆ ಕೂಟವನ್ನು ‘ಜಗತ್ತನ್ನೇ ಬದಲಾಯಿಸಿದ ಒಲಿಂಪಿಕ್‌ ಕೂಟ’ ಎಂದು ಕರೆದಿದ್ದಾರೆ. ಟಿವಿಯಲ್ಲಿ ಪ್ರಸಾರವಾದ ಮೊದಲ ಒಲಿಂಪಿಕ್‌ ಕೂಟವಿದು. ಉದ್ದೀಪನ ಮದ್ದು ಸೇವನೆಯ ಹಗರಣ ಸದ್ದು ಮಾಡಿದ ಕೂಟವೂ ಹೌದು. ಕೆಲವು ಅಥ್ಲೀಟ್‌ಗಳ ವಾಣಿಜ್ಯ ಒಪ್ಪಂದಕ್ಕೆ ವೇದಿಕೆಯಾದದ್ದು ಕೂಡ ಇದೇ ಕ್ರೀಡಾಜಾತ್ರೆ. ಪೂರ್ವ ಮತ್ತು ಪಶ್ಚಿಮ ಜರ್ಮನಿಗಳು ಒಂದಾಗಿ ಸ್ಪರ್ಧಿಸಿದ ಮೊದಲ ಕೂಟವೂ ಇದಾಗಿತ್ತು. ವರ್ಣಭೇದ ನೀತಿಯ ಕಾರಣಕ್ಕಾಗಿ ದಕ್ಷಿಣ ಆಫ್ರಿಕಾಕ್ಕೆ ನಿರ್ಬಂಧ ವಿಧಿಸಿದ ಘಟನೆಗೂ ಈ ಕೂಟ ಸಾಕ್ಷಿಯಾಗಿತ್ತು (1992 ಬಾರ್ಸಿಲೋನಾ ಕೂಟದವರೆಗೆ ದಕ್ಷಿಣ ಆಫ್ರಿಕಾ ದೇಶ ಒಲಿಂಪಿಕ್‌ ಕ್ರೀಡೆಯಿಂದ ದೂರ ಉಳಿದಿತ್ತು). ಕ್ಯಾಸಿಸ್‌ ಕ್ಲೇ ಎಂಬ ವ್ಯಕ್ತಿಯ ಕೊರಳನ್ನು ಅಲಂಕರಿಸಿದ ಬಾಕ್ಸಿಂಗ್‌ ಚಿನ್ನವು, ಆ ಕ್ರೀಡೆಯಲ್ಲಿ ಮುಂದೆ ಮೊಹಮ್ಮದ್‌ ಅಲಿ ಎಂದು ಹೆಸರಾದ ದಂತಕಥೆಯೊಂದರ ಉದಯಕ್ಕೂ ಕಾರಣವಾಯಿತು.

ಒಲಿಂಪಿಕ್‌ ಕೂಟವು ರಕ್ತಸಿಕ್ತ ಅಧ್ಯಾಯವನ್ನೂ ತನ್ನ ಚರಿತ್ರೆಯಲ್ಲಿ ಹುದುಗಿರಿಸಿಕೊಂಡಿದೆ. 1972ರ ಕೂಟದಲ್ಲಿ ಪ್ಯಾಲಿಸ್ಟೇನ್‌ ಉಗ್ರರ ದಾಳಿಯಿಂದ ಹನ್ನೊಂದು ಜನ ಇಸ್ರೇಲ್‌ ಅಥ್ಲೀಟ್‌ಗಳು ದುರಂತ ಸಾವನ್ನಪ್ಪಬೇಕಾಯಿತು. 34 ಗಂಟೆಗಳ ಕಾಲ ಸ್ಪರ್ಧೆಗಳೆಲ್ಲ ಸ್ಥಗಿತಗೊಂಡಿದ್ದವು. ಬಳಿಕ ಕೂಟ ಮತ್ತೆ ನಡೆಯಿತು. 1996ರ ಅಟ್ಲಾಂಟಾ ಕೂಟದ ಸಮಯದಲ್ಲಿ ಒಲಿಂಪಿಕ್‌ ಪಾರ್ಕ್‌ ಹತ್ತಿರವೇ ಬಾಂಬ್‌ ಸ್ಫೋಟದ ಘಟನೆ ನಡೆದಿತ್ತು. ಇಬ್ಬರು ಮೃತಪಟ್ಟಿದ್ದರು. ಇಂತಹ ಹಿಂಸೆಯ ಘಟನೆಗಳಿಂದ ಒಲಿಂಪಿಕ್‌ ಕ್ರೀಡಾ ಜ್ಯೋತಿಗೆ ಯಾವುದೇ ಧಕ್ಕೆ ಉಂಟುಮಾಡಲು ಸಾಧ್ಯವಾಗಿಲ್ಲ. ಅದು ಇನ್ನಷ್ಟು ದೇದಿಪ್ಯಮಾನವಾಗಿ ಬೆಳಗುತ್ತಲೇ ಇದೆ.

ಒಲಿಂಪಿಕ್‌ ಕ್ರೀಡೆಯಲ್ಲಿ ವಿವಾದದ ಬಿರುಗಾಳಿ ಎದ್ದಿದ್ದೂ ಇದೆ. ಅದರಲ್ಲಿ ಬೆನ್‌ ಜಾನ್ಸನ್‌ ಪ್ರಕರಣ ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ಸಿಯೊಲ್‌ ಕೂಟದಲ್ಲಿ ಆತ 100 ಮೀ ಓಟದಲ್ಲಿ ಚಿನ್ನದ ಪದಕ ಜಯಿಸಿದ್ದ. ಆತ ಉದ್ದೀಪನ ಮದ್ದು ಸೇವನೆ ಮಾಡಿರುವುದು ದೃಢಪಟ್ಟಿದ್ದರಿಂದ ಎರಡನೇ ಸ್ಥಾನ ಗಳಿಸಿದ್ದ ಕಾರ್ಲ್‌ ಲೂಯಿಸ್‌ ಕೊರಳಲ್ಲಿ ಆ ಪದಕ ಹೊಳೆಯಿತು. ಒಲಿಂಪಿಕ್‌ ಕೂಟದಲ್ಲಿ ಸಿಗುವ ಚಿನ್ನದ ಪದಕ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸಿಗುವ ಪದಕಕ್ಕಿಂತಲೂ ಮಿಗಿಲಾದುದು ಎನ್ನುವುದು ಲೂಯಿಸ್‌ ಸಂಭ್ರಮದಲ್ಲಿ ಎದ್ದು ಕಾಣುತ್ತಿತ್ತು.

ಹೌದು, ಇದೀಗ ಮತ್ತೆ ಒಲಿಂಪಿಕ್‌ ಕೂಟದ ಸಮಯ. ಮತ್ತೆ ಭಾರತೀಯ ಕ್ರೀಡಾಪಟುವಿಗೆ ವೈಯಕ್ತಿಕ ಬಂಗಾರ ಪದಕ ಸಿಗುವಂತಹ ಕನಸು ಕಾಣುವ ಸಮಯ. ಈ ಕನಸು 2008ರ ಬೀಜಿಂಗ್‌ ಕೂಟದಲ್ಲಿ ಅಭಿನವ್‌ ಬಿಂದ್ರಾ ಅವರ ಮೂಲಕ ನನಸಾಗಿತ್ತು (ಒಲಿಂಪಿಕ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ಹಾಕಿ ತಂಡ ಅರ್ಹತೆ ಗಿಟ್ಟಿಸದೆ ಕೂಟದಿಂದಲೇ ಹೊರಗುಳಿದಿದ್ದು ಕೂಡ ಇದೇ ಸಂದರ್ಭದಲ್ಲಿ). ಪಿ.ವಿ.ಸಿಂಧು, ನೀರಜ್‌ ಚೋಪ್ರಾ, ಮೀರಾಬಾಯಿ ಚಾನು, ವಿನೇಶ್‌ ಪೋಗಾಟ್‌ ಹಾಗೂ ಶೂಟರ್‌ಗಳು ಭಾರತೀಯರ ಪದಕಗಳ ಆಸೆಗೆ ಭರವಸೆಯಾಗಿ ನಿಂತಿದ್ದಾರೆ.


ಎಂದೂ ಮಾಸದ ಚಿತ್ರ... ಬರ್ಲಿನ್‌ ಒಲಿಂಪಿಕ್‌ ಕೂಟದಲ್ಲಿ ಗಮನಸೆಳೆದ ಜೋಡಿ ಜರ್ಮನಿಯ ಲುಜ್‌ ಲಾಂಗ್‌ ಮತ್ತು ಅಮೆರಿಕದ ಜೆಸ್ಸಿ ಓವೆನ್ಸ್‌

ಕೋವಿಡ್‌ನಿಂದ ಈ ಸಲ ಅಥ್ಲೀಟ್‌ಗಳು ಹಲವು ನಿರ್ಬಂಧಗಳ ನಡುವೆ ಸ್ಪರ್ಧಿಸಬೇಕಿದೆ. ವೈಯಕ್ತಿಕ ಅಂತರವನ್ನು ಕಾಯ್ದುಕೊಳ್ಳಬೇಕಾದ ಕಾರಣ ಕ್ರೀಡಾಗ್ರಾಮದಲ್ಲಿ ಸಂಭ್ರಮದ ವಾತಾವರಣ ಕಾಣುತ್ತಿಲ್ಲ. ಪ್ರೇಕ್ಷಕರ ಗೈರು ಸಹ ಪೇಲವ ವಾತಾವರಣವನ್ನು ಸೃಷ್ಟಿಸಿದೆ. ಆದರೆ, ಎಲ್ಲ ಪ್ರತಿಕೂಲ ಸನ್ನಿವೇಶದಲ್ಲಿ ಸಂಘಟನಾ ಶಕ್ತಿಯನ್ನು ಜಪಾನ್‌ ಪ್ರದರ್ಶಿಸಿದೆ.

ಭೂಮಿಯ ಮೇಲಿನ ಅತ್ಯಂತ ಪುರಾತನವಾದ ಉತ್ಸವ ಎನಿಸಿರುವ ಈ ಕ್ರೀಡಾಜಾತ್ರೆಗೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಯಾತನಾಮಯವಾದ ಈ ಸನ್ನಿವೇಶದಲ್ಲಿ ಹಾಯ್‌ ಎನಿಸುವಂತಹ ತಂಗಾಳಿಯನ್ನು ಬೀಸಲು ಟೋಕಿಯೊದ ಕ್ರೀಡಾಂಗಣ ಸಜ್ಜಾಗಿದೆ. ‘ಇನ್ನಷ್ಟು ವೇಗ, ಇನ್ನಷ್ಟು ಎತ್ತರ, ಇನ್ನಷ್ಟು ಬಲಿಷ್ಠ’ ಎನ್ನುವ ಒಲಿಂಪಿಕ್‌ ಧ್ಯೇಯವಾಕ್ಯದಂತೆ ಅಥ್ಲೀಟ್‌ಗಳು ನಡೆಸುವ ಅಸಾಮಾನ್ಯ ಹೋರಾಟವನ್ನು ಕಣ್ತುಂಬಿಕೊಳ್ಳಲು ಜಗತ್ತು ಉಸಿರು ಬಿಗಿಹಿಡಿದು ಕಾಯುತ್ತಿದೆ.

ಲೇಖಕ: ಹಿರಿಯ ಕ್ರೀಡಾ ಪತ್ರಕರ್ತ

ಕನ್ನಡಕ್ಕೆ: ಪ್ರವೀಣ ಕುಲಕರ್ಣಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು