ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics: ಎಲೈನ್ ‘ಡಬಲ್‌’ ದಾಖಲೆ

ಹರ್ಡಲ್ಸ್‌ನಲ್ಲಿ ವಿಶ್ವ ದಾಖಲೆ; ಮಹಿಳೆಯರ 800 ಮೀಟರ್ಸ್ ಓಟದಲ್ಲಿ ಅಮೆರಿಕ ಪ್ರಾಬಲ್ಯ
Last Updated 3 ಆಗಸ್ಟ್ 2021, 19:41 IST
ಅಕ್ಷರ ಗಾತ್ರ

ಟೋಕಿಯೊ: ಜಮೈಕಾದ ಎಲೈನ್ ಥಾಮ್ಸ್‌ನ್ ಹೆರಾ ಅವರು ಒಲಿಂಪಿಕ್ಸ್‌ನಲ್ಲಿ ‘ಡಬಲ್‌’ ಡಬಲ್ ಸಾಧನೆ ಮಾಡಿ ಇತಿಹಾಸ ರಚಿಸಿದರು.

100 ಮೀಟರ್ಸ್‌ ಓಟದಲ್ಲಿ ಚಾಂಪಿಯನ್ ಆಗಿದ್ದ ಅವರು ಮಂಗಳವಾರ 200 ಮೀಟರ್ಸ್‌ನಲ್ಲೂ ಮೊದಲಿಗರಾದರು. ರಿಯೊ ಒಲಿಂಪಿಕ್ಸ್‌ನಲ್ಲೂ ಈ ಎರಡು ವಿಭಾಗಗಳ ಚಿನ್ನದ ಪದಕ ಅವರ ಕೊರಳಿಗೇರಿದ್ದವು. ಮಂಗಳವಾರ 21.53 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು ರಾಷ್ಟ್ರೀಯ ದಾಖಲೆಯನ್ನೂ ಬರೆದರು.

ನಮೀಬಿಯಾದ 18ರ ವರ್ಷದ ಕ್ರಿಸ್ಟಿನ್ ಬೋಮಾ21.81 ಸೆಕೆಂಡುಗಳ ಸಾಧನೆಯೊಂದಿಗೆ ಚಿನ್ನ ಗೆದ್ದು 20 ವರ್ಷದೊಳಗಿನವರ ವಿಶ್ವದಾಖಲೆ ಮುರಿದರು. ಜಮೈಕಾದ ಶೆಲ್ಲಿ ಆ್ಯನ್ ಫ್ರೇಸರ್‌ ಪ್ರೈಸ್‌ ಅವರನ್ನು ಹಿಂದಿಕ್ಕಿ ಅಮೆರಿಕದ ಗಾಬ್ರಿಯೆಲಿ ಥಾಮಸ್ (21.87ಸೆ) ಕಂಚಿನ ಪದಕ ಗೆದ್ದರು.

ಮಹಿಳೆಯರ 800 ಮೀಟರ್ಸ್ ಓಟದಲ್ಲಿ ಅಮೆರಿಕ ಪ್ರಾಬಲ್ಯ ಮೆರೆಯಿತು. ಅತಿಂಗ್ ಮೂ 1 ನಿಮಿಷ 55.21 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದರೆ ರೆವಿನ್ ರೋಜರ್ಸ್‌ ವೈಯಕ್ತಿಕ ಶ್ರೇಷ್ಠ 1 ನಿಮಿಷ 56.81 ಸೆಕೆಂಡುಗಳ ಸಾಧನೆಯೊಂದಿಗೆ ಕಂಚು ಗಳಿಸಿದರು. ಬೆಳ್ಳಿ ಪದಕ ಬ್ರಿಟನ್‌ನ ಕೀಲಿ ಹೊಂಕಿನ್ಸನ್ (1 ನಿ 55.88ಸೆ) ಪಾಲಾಯಿತು.

ಹರ್ಡಲ್ಸ್‌ನಲ್ಲಿ ಕರ್ಸ್ಟನ್‌ ವಿಶ್ವ ದಾಖಲೆ: ಪುರು ಷರ 400 ಮೀಟರ್ಸ್ ಹರ್ಡಲ್ಸ್‌ನಲ್ಲಿ ನಾರ್ವೆಯ ವಾರ್‌ಹಲ್ಮ್‌ ಕರ್ಸ್ಟನ್‌ (45.94 ಸೆಕೆಂಡು) ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದರು. ಅಮೆರಿಕದ ಬೆಂಜಿಮಿನ್ ರೇ (46.17 ಸೆ) ಮತ್ತು ಜಮೈಕಾದ ಅಲಿಸನ್ (46.72 ಸೆ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು.

ಮಹಿಳೆಯರ ಲಾಂಗ್‌ಜಂಪ್‌ನ ಚಿನ್ನದ ಪದಕ ಜರ್ಮನಿ ಪಾಲಾಯಿತು. ಮಲೈಕಾ ಮಿಹಾಬೊ 7 ಮೀಟರ್ ದೂರ ಜಿಗಿದರು. ಅಮೆರಿಕದ ಬ್ರಿಟ್ನಿ ರೀಸ್ (6.97 ಮೀ) ಮತ್ತು ನೈಜೀರಿಯಾದ ಇಸ್ ಬ್ರೂಮ್ (6.97 ಮೀ) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗಳಿಸಿದರು. ಮಹಿಳೆಯರ ಹ್ಯಾಮರ್ ಥ್ರೋದಲ್ಲಿ ಪೋಲೆಂಡ್‌ನ ಅನಿಟಾ ವ್ಲೊಡಾರ್ಕ್‌ಜಿಕ್‌ (78.48ಮೀ) ಚಿನ್ನ ಗೆದ್ದರು. ಬೆಳ್ಳಿ ಮತ್ತು ಕಂಚಿನ ಪದಕ ಕ್ರಮವಾಗಿ ಚೀನಾದ ಜೆಂಗ್ ವಾಂಗ್ (77.03ಮೀ) ಪೋಲೆಂಡ್‌ನ ಮಾಲ್ವಿನಾ ಕೊಪ್ರೋನ್ (75.49ಮೀ) ಪಾಲಾಯಿತು.

ಅನಿಟಾ, ಒಲಿಂಪಿಕ್ಸ್‌ನ ಟ್ರ್ಯಾಕ್‌ ಮತ್ತು ಫೀಲ್ಡ್‌ನ ಒಂದೇ ಸ್ಪರ್ಧೆಯಲ್ಲಿ ಸತತ ಮೂರು ಚಿನ್ನ ಗೆದ್ದ ಮೊದಲ ಮಹಿಳೆ ಎನಿಸಿದರು. 35 ವರ್ಷದ ಅವರು 2012 ಮತ್ತು 2016ರಲ್ಲೂ ಚಿನ್ನ ಗೆದ್ದಿದ್ದರು.

ಎಲೈನ್ ಥಾಮ್ಸನ್

ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ವೈಯಕ್ತಿಕ ನಾಲ್ಕು ಚಿನ್ನ ಗೆದ್ದ ಮೊದಲ ಮಹಿಳೆ

200 ಮೀಟರ್ಸ್ ಓಟದಲ್ಲಿ ಜಗತ್ತಿನ ಎರಡನೇ ಅತಿವೇಗದ ಮಹಿಳೆ

200 ಮೀಟರ್ಸ್ ವಿಶ್ವದಾಖಲೆ ಅಮೆರಿಕದ ಫ್ಲಾಲೆನ್ಸ್‌ ಗ್ರಿಫಿತ್ ಜಾಯ್ನರ್ ಹೆಸರಿನಲ್ಲಿದೆ

ಫ್ಲಾಲೆನ್ಸ್‌ ಗ್ರಿಫಿತ್ 1988ರ ಒಲಿಂಪಿಕ್ಸ್‌ನಲ್ಲಿ 21.34 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು

ತಜಿಂದರ್‌, ಅನು ‘ವಿಫಲ’ ಯತ್ನ

ಭಾರತದ ತಜಿಂದರ್ ಪಾಲ್‌ ಸಿಂಗ್ ತೂರ್ ಮತ್ತು ಅನುರಾಣಿ ನಿರಾಶೆ ಅನುಭವಿಸಿದರು. ಪುರುಷರ ಶಾಟ್‌ಪಟ್‌ನಲ್ಲಿ ತಜಿಂದರ್ ‘ಎ’ ಗುಂಪಿನ ಅರ್ಹತಾ ಸುತ್ತಿ ನಲ್ಲಿ 13ನೇ ಸ್ಥಾನಕ್ಕೆ ಕುಸಿದರು. ಮಹಿಳೆಯರ ಜಾವೆಲಿನ್ ಎಸೆತದ ‘ಎ’ ಗುಂಪಿನ ಅರ್ಹತಾ ಸುತ್ತಿನಲ್ಲಿ ಅನುರಾಣಿ ಕೊನೆಯವರಾದರು.

ಏಷ್ಯಾದ ದಾಖಲೆ ಹೊಂದಿರುವ ತಜಿಂದರ್ ಪಾಲ್ ಸಿಂಗ್ ಮೊದಲ ಪ್ರಯತ್ನದಲ್ಲಿ ಮಾತ್ರ ಯಶಸ್ಸು ಕಂಡರು. ಉಳಿದೆರಡು ಪ್ರಯತ್ನಗಳು ವಿಫಲವಾಗಿದ್ದವು. 21.49 ಮೀಟರ್‌ಗಳ ಸಾಧನೆಯೊಂದಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದ ಅವರಿಗೆ ಇಲ್ಲಿ19.99 ಮೀಟರ್‌ ಎಸೆಯಲಷ್ಟೇ ಸಾಧ್ಯವಾಯಿತು.

ಅನುರಾಣಿ 54.04 ಮೀಟರ್ ದೂರ ಜಾವೆಲಿನ್ ಎಸೆದರು. ಮೊದಲ ಪ್ರಯತ್ನದಲ್ಲಿ 50.35 ಮೀಟರ್ಸ್ ದೂರ ಎಸೆದ ಅವರು ನಂತರ 53.19 ಮೀಟರ್ಸ್ ಸಾಧನೆ ಮಾಡಿದರು. ಕೊನೆಯ ಯತ್ನದಲ್ಲಿ ಜಾವೆಲಿನ್ ಇನ್ನಷ್ಟು ದೂರ ಸಾಗಿತು. ಆದರೆ 63 ಮೀಟರ್‌ಗಳ ಅರ್ಹತಾ ಮಟ್ಟವನ್ನು ಪೂರೈಸಲು ಸಾಧ್ಯವಾಗಲಿಲ್ಲ. ಫೆಡರೇಷನ್‌ ಕಪ್‌ನಲ್ಲಿ ಅವರು 63.24 ಮೀಟರ್ಸ್ ಸಾಧನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT