ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆದ್ದೇ ತೀರುವೆ ಒಲಿಂಪಿಕ್ಸ್‌ ಚಿನ್ನ

ಭವಿಷ್ಯದ ಕನಸು ಹಂಚಿಕೊಂಡ ಬ್ಯಾಡ್ಮಿಂಟನ್‌ ತಾರೆ ಸಿಂಧು
Last Updated 14 ಜೂನ್ 2020, 19:31 IST
ಅಕ್ಷರ ಗಾತ್ರ
ADVERTISEMENT
""

ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಹೈದರಾಬಾದ್‌ನ ಪಿ.ವಿ. ಸಿಂಧು ಲಾಕ್‌ಡೌನ್‌ನಲ್ಲಿ ಹೇಗೆ ಸಮಯ ಕಳೆದರು? ಏನು ಮಾಡಿದರು? ಅವರಿಗೆ ಏನು ಇಷ್ಟ ಎನ್ನುವ ಕುತೂಹಲದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಟೋ ಕಿಯೊ ಒಲಿಂಪಿಕ್ಸ್‌ಗಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೆ. ದುರದೃಷ್ಟವಶಾತ್‌ ಆ ಕ್ರೀಡಾಕೂಟ ಮುಂದಕ್ಕೆ ಹೋಯಿತು. ಆದರೆ, ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಲೇಬೇಕು ಎನ್ನುವ ನನ್ನ ಹೆಗ್ಗುರಿ ಮಾತ್ರ ಎಂದೂ ಬದಲಾಗುವುದಿಲ್ಲ. ಆ ಆಸೆ ಈಡೇರುವ ತನಕ ವಿಶ್ರಮಿಸುವುದಿಲ್ಲ....

ಭಾರತದ ಭರವಸೆಯ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು ಅವರ ದಿಟ್ಟ ನುಡಿಯಿದು. ಹೋದ ವರ್ಷ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಹೈದರಾಬಾದ್‌ನ ಸಿಂಧು ಈಗ ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಚಿನ್ನದ ನಿರೀಕ್ಷೆಯಲ್ಲಿದ್ದಾರೆ. ಇದಕ್ಕಾಗಿ ಲಾಕ್‌ಡೌನ್‌ನಲ್ಲೂ ಫಿಟ್‌ನೆಸ್‌ ಅಭ್ಯಾಸ ಮತ್ತು ಆಟದ ಹೊಸ ಕೌಶಲಗಳನ್ನು ಕಲಿತುಕೊಂಡಿದ್ದಾರೆ. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ.

* ಹೆಚ್ಚು ಪ್ರವಾಸಗಳಲ್ಲೇ ಇರುತ್ತಿದ್ದ ನೀವು ಲಾಕ್‌ಡೌನ್‌ನಲ್ಲಿ ಹೇಗೆ ಸಮಯ ಕಳೆದಿರಿ?

ಎರಡೂವರೆ ತಿಂಗಳು ಮನೆಯಲ್ಲೇ ಇದ್ದಿದ್ದು ಇದೇ ಮೊದಲು. ನಾನು ಕಂಡ ಮೊದಲ ಲಾಕ್‌ಡೌನ್‌ ಅನುಭವ ಭಿನ್ನವಾಗಿತ್ತು. ಮನೆಯಲ್ಲಿ ನಿತ್ಯ ಫಿಟ್‌ನೆಸ್‌ ಹಾಗೂ ಯೋಗ ಅಭ್ಯಾಸ ಮಾಡುತ್ತಿದ್ದೆ. ಬದುಕಿನ ದೊಡ್ಡ ಗುರಿ ಈಡೇರಿಸಿಕೊಳ್ಳಲು ಈ ತಯಾರಿಗಳೆಲ್ಲವೂ ಅಗತ್ಯ.

* ಏನು ಆ ಗುರಿ?

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವುದು.

* ಒಲಿಂಪಿಕ್ಸ್‌ ಒಂದು ವರ್ಷ ಮುಂದೂಡಲಾಗಿದೆಯಲ್ಲ?

ಒಲಿಂಪಿಕ್ಸ್‌ ಈ ವರ್ಷದ ಮಹತ್ವದ ಕೂಟವಾಗಿತ್ತು. ದಿಢೀರನೇ ಕೊರೊನಾ ಬಿಕ್ಕಟ್ಟು ಸೃಷ್ಟಿಯಾಗಿದ್ದರಿಂದ ಕೂಟ ಮುಂದೂಡಲಾಗಿದೆ. ಇದು ಸ್ವಾಗತಾರ್ಹ ಕ್ರಮ. ಎಲ್ಲಕ್ಕಿಂತ ಜೀವ ಮುಖ್ಯ; ಬಳಿಕ ಕ್ರೀಡೆ. ಒಲಿಂಪಿಕ್ಸ್‌ ಹೊಸ ವೇಳಾಪಟ್ಟಿ ಬಂದಿದೆ. ಅದಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಿ ಸಿದ್ಧತೆ ನಡೆಸುತ್ತಿದ್ದೇನೆ.

* ನಿಮಗೆ ತರಬೇತಿ ನೀಡುತ್ತಿದ್ದ ದಕ್ಷಿಣ ಕೊರಿಯಾದ ಕಿಮ್‌ ಜಿ ಹುಯಾನ್‌ ಅವರು ಕೋಚ್‌ ಹುದ್ದೆಗೆ ದಿಢೀರನೆ ರಾಜೀನಾಮೆ ನೀಡಿದರಲ್ಲ, ಯಾಕೆ?

ಪ್ರತಿ ತರಬೇತುದಾರರೂ ಅವರದ್ದೇ ಆದ ವಿಭಿನ್ನವಾದ ಯೋಜನೆ ಮತ್ತು ಕೌಶಲಗಳನ್ನು ಹೊಂದಿರುತ್ತಾರೆ. ಕಿಮ್‌ ಜಿ ಸಾಕಷ್ಟು ಹೊಸ ವಿಷಯಗಳನ್ನು ಕಲಿಸಿಕೊಟ್ಟಿದ್ದಾರೆ. ಕೋಚಿಂಗ್‌ ತೊರೆದಿದ್ದು ಅವರ ವೈಯಕ್ತಿಕ ವಿಚಾರ. ಅದರ ಬಗ್ಗೆ ಮಾತನಾಡುವುದಿಲ್ಲ. * ಬ್ಯಾಡ್ಮಿಂಟನ್‌ ವೃತ್ತಿ ಜೀವನಕ್ಕೆ ಅತಿದೊಡ್ಡ ತಿರುವು ಸಿಕ್ಕಿದ್ದು ಯಾವಾಗ?

2012ರ ಏಷ್ಯನ್‌ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಜಪಾನ್‌ನ ನೊಜೊಮಿ ಒಕುಹಾರ ಎದುರು ಹಾಗೂ ಅದೇ ವರ್ಷದ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದ ಚೀನಾದ ಲೀ ಕ್ಸುಯೆರುಯಿ ಅವರನ್ನು ಚೀನಾ ಮಾಸ್ಟರ್ಸ್ ಸೂಪರ್‌ ಸೀರಿಸ್ ಟೂರ್ನಿಯಲ್ಲಿ ಸೋಲಿಸಿದ್ದು ನನ್ನ ಬದುಕಿನ ದಿಕ್ಕು ಬದಲಿಸಿತು. ಬಳಿಕ ಹೊಸ ಸವಾಲುಗಳನ್ನು ಎದುರಿಸುವ ಧೈರ್ಯ ಬಂತು.

* ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಸಾಧನೆಯ ಬಗ್ಗೆ ಹೇಳಿ..

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆಲ್ಲಲೇಬೇಕು ಎಂದು ಏಳು ವರ್ಷಗಳಿಂದ ಕಾಯುತ್ತಿದ್ದೆ. ಆ ಆಸೆ ಹೋದ ವರ್ಷ ಈಡೇರಿತು. ಎರಡು ಸಲ ಫೈನಲ್‌ನಲ್ಲಿ ಎಡವಿದ್ದೆ. ಹೀಗಾಗಿ ಚಿನ್ನದ ಪದಕ ಗೆಲ್ಲುವ ಹಂಬಲ ಹೆಚ್ಚಾಗಿತ್ತು. ಕೊನೆಗೂ ಆ ಆಸೆ ಈಡೇರಿದೆ. ಈ ಸಾಧನೆಯು ಹೆಮ್ಮೆಯಿಂದ ಬೀಗುವಂತೆ ಮಾಡಿದೆ.

* ವಿಶ್ವ ಚಾಂಪಿಯನ್‌ಷಿಪ್‌ ಬಳಿಕ ವೈಫಲ್ಯದ ಹಾದಿ ಹಿಡಿದಿದ್ದೀರಲ್ಲ?

ಕ್ರೀಡಾ ಬದುಕಿನಲ್ಲಿ ಏಳು, ಬೀಳು ಸಹಜ. ಹೀಗಾಗಿ ಟೀಕೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ಪಂದ್ಯದಲ್ಲಿ ಶ್ರೇಷ್ಠ ಆಟ ಆಡುವತ್ತ ಮಾತ್ರ ಚಿತ್ತ ಹರಿಸುತ್ತೇನೆ.

* ಏಕಾಗ್ರತೆ ರೂಢಿಸಿಕೊಳ್ಳಲು ಏನು ಮಾಡುತ್ತೀರಿ?

ನಿತ್ಯ ಯೋಗ ಮಾಡುತ್ತೇನೆ. ನನ್ನ ಪಂದ್ಯಗಳು ಇರುವ ಹಿಂದಿನ ದಿನ ಅರ್ಧ ಗಂಟೆ ಹೆಚ್ಚು ಯೋಗ ಮತ್ತು ಧ್ಯಾನ ಮಾಡುವುದನ್ನು ರೂಢಿಸಿಕೊಂಡಿದ್ದೇನೆ.

* ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನಿಂದ (ಪಿಬಿಎಲ್‌) ಭಾರತದ ಕ್ರೀಡಾಪಟುಗಳಿಗೆ ಏನಾದರೂ ಅನುಕೂಲವಾಗಿದೆಯೇ?

ಪಿಬಿಎಲ್‌ನಿಂದ ವಿಶ್ವ ಶ್ರೇಷ್ಠ ಆಟಗಾರರ (ವಿದೇಶಿ) ಜೊತೆ ಆಡುವ ಸದವಕಾಶ ಭಾರತದ ಕ್ರೀಡಾಪಟುಗಳಿಗೆ ಲಭ್ಯವಾಗಿದೆ. ಪ್ರತಿ ಪಂದ್ಯದಿಂದಲೂ ಹೊಸ ವಿಷಯಗಳನ್ನು ಕಲಿಯಲು ಸಾಧ್ಯವಾಗುತ್ತದೆ. ತಮ್ಮ ಇಷ್ಟದ ಕ್ರೀಡಾಪಟುಗಳ ಆಟವನ್ನು ಕ್ರೀಡಾಂಗಣಗಳಲ್ಲಿ ಕುಳಿತು ನೋಡುವ ಅವಕಾಶವೂ ಭಾರತದ ಬ್ಯಾಡ್ಮಿಂಟನ್‌ ಪ್ರಿಯರಿಗೆ ಸಿಕ್ಕಿದೆ. ಕೊರೊನಾ ಮುಗಿದ ಬಳಿಕ ಮತ್ತೆ ಪಿಬಿಎಲ್‌ ಆರಂಭವಾಗಲೆಂದು ಆಶಿಸುತ್ತೇನೆ.

ಪಿ.ವಿ. ಸಿಂಧು

ಲಾಕ್‌ಡೌನ್‌ ಬಿರಿಯಾನಿ, ಐಸ್‌ ಕ್ರೀಂ ಮತ್ತು ಮಹೇಶ್‌ ಬಾಬು...

* ನಿಮಗೆ ಪ್ರಿಯವಾದ ಆಹಾರ?

ಬಿರಿಯಾನಿ, ಬಿರಿಯಾನಿ ಮತ್ತು ಬಿರಿಯಾನಿ. ಅದರಲ್ಲೂ ಹೈದರಾಬಾದ್‌ ಮತ್ತು ಪ್ಯಾರಡೈಸ್‌ ಬಿರಿಯಾನಿಯೆಂದರೆ ಬಹಳ ಅಚ್ಚುಮೆಚ್ಚು. ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೂ ಬಿರಿಯಾನಿ ಕೊಟ್ಟರೂ ತಿನ್ನುತ್ತೇನೆ. ಅದರಲ್ಲೂ ಅಮ್ಮ ಮಾಡಿದ ಬಿರಿಯಾನಿ ಸೂಪರ್‌ ಆಗಿರುತ್ತೆ. ಲಾಕ್‌ಡೌನ್‌ ಅವಧಿಯಲ್ಲಿ ಮನೆಯಲ್ಲೇ ಇರುವ ಕಾರಣ ನಿತ್ಯ ಬಿರಿಯಾನಿ ಸವಿಯುತ್ತಿದ್ದೇನೆ. ಅದಕ್ಕೆ ಲಾಕ್‌ಡೌನ್‌ ಬಿರಿಯಾನಿ ಎಂದೇ ಹೆಸರಿಟ್ಟುಬಿಟ್ಟಿದ್ದೇನೆ.

* ಬಿರಿಯಾನಿ ಯಾಕೆ ಅಷ್ಟೊಂದು ಇಷ್ಟ?

ಶಾಲಾ, ಕಾಲೇಜು ದಿನಗಳಿಂದಲೂ ಬಿರಿಯಾನಿ ತಿನ್ನುತ್ತಿದ್ದೆ. 2016ರ ಒಲಿಂಪಿಕ್ಸ್‌ಗೆ ತಯಾರಿ ನಡೆಸುವಾಗ ಫಿಟ್‌ನೆಸ್‌ಗಾಗಿ ಒಂದಷ್ಟು ಕಾಲ ಇಷ್ಟದ ಆಹಾರವನ್ನು ತ್ಯಜಿಸಲೇಬೇಕಿತ್ತು. ಆಗ ಬಿರಿಯಾನಿ, ಐಸ್ ಕ್ರೀಂ ಮತ್ತು ಚಾಕೊಲೆಟ್‌ ತಿನ್ನಲು ನನ್ನ ಕೋಚ್‌ ಗೋಪಿಚಂದ್‌ (ಪುಲ್ಲೇಲ) ಅವಕಾಶ ಕೊಟ್ಟಿರಲಿಲ್ಲ. ಹೀಗಾಗಿ ಲಾಕ್‌ಡೌನ್‌ನಲ್ಲಿ ಇಷ್ಟದ ಆಹಾರಗಳನ್ನೆಲ್ಲಾ ಸವಿಯಲೇಬೇಕೆಂದು ನಿರ್ಧರಿಸಿದ್ದೆ. ಆ ಆಸೆ ಈಡೇರಿದೆ.

* ಬಿರಿಯಾನಿ ಹೊರತುಪಡಿಸಿದರೆ ಬೇರೆ ಏನು ಇಷ್ಟ?

ಇಟಾಲಿಯನ್‌, ಚೈನಿಸ್‌ ತಿನಿಸುಗಳು, ಜಂಕ್‌ಫುಡ್‌ ಬಹಳ ಇಷ್ಟ. ಸಿಹಿಯಾದ ಐಸ್‌ ಕ್ರೀಮ್‌, ಪಿಸ್ತಾ, ಪಿಜ್ಜಾ. ಚಾಕೊಲೆಟ್‌ ಅಂದರೆ ಪಂಚಪ್ರಾಣ.

* ಅಡುಗೆ ಮಾಡಲು ಬರುತ್ತದೆಯೇ?

ಬಿರಿಯಾನಿ ಮಾಡುವುದನ್ನು ಕಲಿತಿದ್ದೇನೆ. ಯಾವಾಗಲಾದರೊಮ್ಮೆ ತಯಾರಿಸಿ ಮನೆಯವರಿಗೆಲ್ಲಾ ಬಡಿಸುತ್ತೇನೆ.

* ಬಿಡುವಿನ ಸಮಯ ಹೇಗೆ ಕಳೆಯುತ್ತೀರಿ?

ಬ್ಯಾಡ್ಮಿಂಟನ್‌ಗಾಗಿ ಹೆಚ್ಚು ಸಮಯ ಮೀಸಲಿಟ್ಟಿದ್ದರಿಂದ ಗೆಳೆಯರ ಜೊತೆ ಸಮಯ ಕಳೆಯಲು ಆಗಿರಲಿಲ್ಲ. ಹೀಗಾಗಿ ಲಾಕ್‌ಡೌನ್‌ನಲ್ಲಿ ಬಾಲ್ಯದ ಸ್ನೇಹಿತರ ಜೊತೆ ಫೋನ್‌ನಲ್ಲೇ ಸಾಕಷ್ಟು ಹರಟಿದ್ದೇನೆ. ಸಿಕಂದರಾಬಾದ್‌ನಲ್ಲಿರುವ ಆತ್ಮೀಯ ಸ್ನೇಹಿತೆ ಮೃಣಾಲಿನಿ ಅವರಿಗೆ ನಿತ್ಯ ವಿಡಿಯೊ ಕಾಲ್‌ ಮಾಡಿ ಮಾತನಾಡಿದ್ದೇನೆ. ಬಿಡುವಿದ್ದರೆ ಪ್ರತಿ ಭಾನುವಾರ ಶಾಪಿಂಗ್‌ ಹೋಗುತ್ತೇನೆ. ಮನೆಯಲ್ಲಿದ್ದಾಗ ಸಂಗೀತ ಕೇಳುವುದು, ತೆಲುಗು, ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯ ಸಿನಿಮಾಗಳನ್ನು ನೋಡುವುದೇ ಕೆಲಸ.

* ಯಾರ ಸಿನಿಮಾಗಳು ಇಷ್ಟವಾಗುತ್ತವೆ?

ಮಹೇಶ್‌ ಬಾಬು ಮತ್ತು ರಣವೀರ್ ಸಿಂಗ್‌ ಅಚ್ಚುಮೆಚ್ಚಿನ ಹಿರೋಗಳು. ದೀಪಿಕಾ ಪಡುಕೋಣೆ, ಪ್ರಭಾಸ್ ಮತ್ತು ಅನುಷ್ಕಾ ಶರ್ಮಾ ಅವರ ನಟನೆಯೂ ಇಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT