ಮೈಸೂರಿನ ಮೋಡಿಗಾರ ಸುಚಿತ್

7

ಮೈಸೂರಿನ ಮೋಡಿಗಾರ ಸುಚಿತ್

Published:
Updated:
Deccan Herald

ತಂಡದಲ್ಲಿ ಆಡುವ ಅವಕಾಶ ಸಿಗದೇ ಇದ್ದಾಗ ನೆಟ್ಸ್‌ನಲ್ಲಿ ಕಠಿಣ ಅಭ್ಯಾಸ ಮಾಡಿದೆ. ಆಗ ಹೊಸ ಹೊಸ ಎಸೆತಗಳನ್ನು ಪ್ರಯೋಗಿಸುತ್ತಿದ್ದೆ. ಅಂತಹ ಎಸೆತಗಳನ್ನು ಪಂದ್ಯದಲ್ಲೂ ಅಷ್ಟೇ ಆತ್ಮವಿಶ್ವಾಸದಿಂದ ಪ್ರಯೋಗಿಸಲು ಸಾಧ್ಯವಾಗಿರುವುದು ಸಂತಸದ ವಿಷಯ. ಈ ಋತುವಿನಲ್ಲಿ ಆಡಿರುವ ಮೂರು ಪಂದ್ಯಗಳಲ್ಲೂ ನನಗೆ ಯೋಜನೆಯ ಪ್ರಕಾರ ಬೌಲಿಂಗ್‌ ಮಾಡಲು ಸಾಧ್ಯವಾಗಿದೆ.

–ರಾಜ್ಯ ರಣಜಿ ಕ್ರಿಕೆಟ್‌ ತಂಡದ ಯುವ ಆಟಗಾರ ಜೆ.ಸುಚಿತ್‌ ಅವರ ಮಾತುಗಳಿವು. 2015ರಲ್ಲಿ ರಣಜಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಸುಚಿತ್‌ ಅವರು ಕಳೆದ ಎರಡು ಋತುಗಳಲ್ಲಿ ಹೆಚ್ಚಿನ ಅವಕಾಶ ಪಡೆದಿರಲಿಲ್ಲ.

ಈಗ ರಾಜ್ಯದಲ್ಲಿರುವ ಪ್ರಮುಖ ಸ್ಪಿನ್ನರ್‌ಗಳೆಂದರೆ ಶ್ರೇಯಸ್‌ ಗೋಪಾಲ್‌ ಮತ್ತು ಕೆ.ಗೌತಮ್‌. ಆದ್ದರಿಂದ ಸುಚಿತ್‌ಗೆ ಹೆಚ್ಚಿನ ಅವಕಾಶ ಲಭಿಸುತ್ತಿರಲಿಲ್ಲ. ಈ ಇಬ್ಬರು ಸ್ಪಿನ್ನರ್‌ಗಳು ಭಾರತ ‘ಎ’ ತಂಡದಲ್ಲಿ ಸ್ಥಾನ ಪಡೆದಾಗ ಮಾತ್ರ ಸುಚಿತ್‌ ಅವರಿಗೆ ರಣಜಿ ತಂಡದ ಅವಕಾಶದ ಬಾಗಿಲು ತೆರೆಯುತ್ತದೆ.

ಈ ಬಾರಿ ರಣಜಿ ಟೂರ್ನಿಯ ಮೊದಲ ಕೆಲವು ಪಂದ್ಯಗಳಲ್ಲಿ ಗೌತಮ್‌ ಲಭ್ಯರಿಲ್ಲದ ಕಾರಣ ಸುಚಿತ್‌ ಅಂತಿಮ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಮೈಸೂರಿನ ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ನಡೆದ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಅವರು ಮೊದಲ ಇನಿಂಗ್ಸ್‌ನಲ್ಲಿ ಕೇವಲ 26 ರನ್‌ ನೀಡಿ ನಾಲ್ಕು ವಿಕೆಟ್‌ ತಮ್ಮದಾಗಿಸಿಕೊಂಡಿದ್ದರು. ತವರೂರಿನ ಅಂಗಳದಲ್ಲಿ ಕೈಚಳಕ ಮೆರೆದಿದ್ದರು.

ವಿದರ್ಭ ವಿರುದ್ಧ ನಾಗಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಒಟ್ಟು 9 ವಿಕೆಟ್‌ಗಳನ್ನು ಪಡೆದು ಈ ಬಾರಿಯ ರಣಜಿ ಕ್ರಿಕೆಟ್‌ ಋತುವನ್ನು ಅವರು ಸ್ಮರಣೀಯವಾಗಿ ಆರಂಭಿಸಿದ್ದರು. ಮೊದಲ ಇನಿಂಗ್ಸ್‌ನಲ್ಲಿ 33 ರನ್‌ಗಳಿಗೆ ನಾಲ್ಕು ವಿಕೆಟ್‌ ಪಡೆದಿದ್ದರೆ, ಎರಡನೇ ಇನಿಂಗ್ಸ್‌ನಲ್ಲಿ 76 ರನ್‌ಗಳಿಗೆ ಐದು ವಿಕೆಟ್‌ ತಮ್ಮದಾಗಿಸಿಕೊಂಡಿದ್ದರು.

ಮುಂಬೈ ವಿರುದ್ಧದ ಪಂದ್ಯದಲ್ಲಿ ಅವರು ಒಂದು ವಿಕೆಟ್‌ ಪಡೆದಿದ್ದರು. ಬ್ಯಾಟಿಂಗ್‌ನಲ್ಲಿ ಎರಡೂ ಇನಿಂಗ್ಸ್‌ಗಳಲ್ಲಿ ಒಟ್ಟು 40 ರನ್‌ ಕಲೆಹಾಕಿದ್ದರು. ಕೆಳಗಿನ ಕ್ರಮಾಂಕದಲ್ಲಿ ತಂಡದ ಬ್ಯಾಟಿಂಗ್‌ಗೆ ಶಕ್ತಿ ತುಂಬಬಲ್ಲ ಸಾಮರ್ಥ್ಯವನ್ನು ಸುಚಿತ್ ಹೊಂದಿದ್ದಾರೆ.

‘ಕಳೆದ ಎರಡು ಅವಧಿಗಳಲ್ಲಿ ರಣಜಿ ಪಂದ್ಯಗಳಲ್ಲಿ ಆಡಲು ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳದಿರುವುದು ಮುಖ್ಯವಾಗಿತ್ತು. ಕಠಿಣ ಅಭ್ಯಾಸದ ಮೂಲಕ ಪ್ರದರ್ಶನಮಟ್ಟವನ್ನು ಉತ್ತಮಪಡಿಸಿಕೊಳ್ಳುವ ಸವಾಲು ನನ್ನ ಮುಂದಿತ್ತು. ಫಿಟ್‌ನೆಸ್‌ ಕಾಪಾಡಿಕೊಳ್ಳುವುದರ ಜತೆಗೆ ನೆಟ್ಸ್‌ನಲ್ಲಿ ಸಾಕಷ್ಟು ಬೆವರು ಸುರಿಸಿದ್ದೇನೆ’ ಎಂದು ಸುಚಿತ್‌ ಹೇಳುತ್ತಾರೆ.

‘ರಣಜಿ ಪಂದ್ಯಗಳು ಆಟಗಾರನ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತದೆ. ಇಲ್ಲಿ ಯಶಸ್ಸು ಪಡೆಯಲು ಯಾವುದೇ ಅಡ್ಡದಾರಿಗಳಿಲ್ಲ. ನಾನು ಕಠಿಣ ಪ್ರಯತ್ನ ನಡೆಸಿರುವುದರಿಂದ ಪ್ರತಿ ಪಂದ್ಯದಲ್ಲೂ ಆತ್ಮವಿಶ್ವಾಸದಿಂದ ಬೌಲಿಂಗ್‌ ಮಾಡಲು ಸಾಧ್ಯವಾಗುತ್ತಿದೆ. ಉತ್ತಮ ಲೈನ್‌ ಮತ್ತು ಲೆಂಗ್ತ್‌ ಅನ್ನು ಗಮನದಲ್ಲಿಸಿಕೊಂಡು ಬೌಲ್‌ ಮಾಡಿದಾಗ ವಿಕೆಟ್‌ಗಳು ತಾವಾಗಿಯೇ ಬರುತ್ತವೆ’ ಎಂಬುದು ಅವರ ಮಾತು.

ಸುಚಿತ್‌ ಅವರು ಐಪಿಎಲ್‌ ಟೂರ್ನಿಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಪ್ರತಿನಿಧಿಸಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೆ ನಡೆದಿದ್ದ ಕೆಪಿಎಲ್‌ ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್‌ ತಂಡವನ್ನು ಮುನ್ನಡೆಸಿದ್ದರು. ಟ್ವೆಂಟಿ–20 ಪಂದ್ಯಗಳಲ್ಲಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಸಾಮರ್ಥ್ಯ ತೋರಿರುವ ಅವರು ರಣಜಿ ಪಂದ್ಯಗಳಲ್ಲೂ ಮಿಂಚಲು ಸಾಧ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !