ಗುರುವಾರ , ಫೆಬ್ರವರಿ 27, 2020
19 °C

ಡಬಲ್ಸ್‌ ವಿಭಾಗದಲ್ಲಿ ಶುಭಾರಂಭ ಮಾಡಿದ ಲಿಯಾಂಡರ್‌–ಮ್ಯಾಥ್ಯೂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತದಲ್ಲಿ ಕೊನೆಯ ಎಟಿಪಿ ಚಾಲೆಂಜರ್‌ ಟೂರ್ನಿಯಲ್ಲಿ ಪಾಲ್ಗೊಂಡಿರುವ ಲಿಯಾಂಡರ್‌ ಪೇಸ್‌, ಚಾಕಚಕ್ಯತೆಯ ಆಟದ ಮೂಲಕ ಮಂಗಳವಾರ ‘ಸೆಂಟರ್‌ ಕೋರ್ಟ್‌’ನಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಟೆನಿಸ್‌ ಪ್ರಿಯರನ್ನು ಮಂತ್ರ ಮುಗ್ಧರನ್ನಾಗಿಸಿದರು.

ಪೇಸ್‌ ಅವರು ಹೂಂಕರಿಸಿ ಮಿಂಚಿನ ಸರ್ವ್‌ಗಳನ್ನು ಮಾಡಿದಾಗ, ಪಾದರಸದಂತಹ ಚಲನೆಯ ಮೂಲಕ ಚೆಂಡನ್ನು ಬೇಸ್‌ಲೈನ್‌ಗೆ ಬಾರಿಸಿ ಪಾಯಿಂಟ್ಸ್‌ ಗಿಟ್ಟಿಸಿದಾಗ, ಆಕರ್ಷಕ ಡ್ರಾಪ್‌ಗಳನ್ನು ಮಾಡಿದಾಗಲೆಲ್ಲಾ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟುತ್ತಿತ್ತು. ಗ್ಯಾಲರಿಯ ಮುಂದಿನ ಸಾಲಿನಲ್ಲಿ ಕುಳಿತಿದ್ದ ಪುಟಾಣಿಗಳು ಕಮಾನ್‌ ಪೇಸ್‌... ಕಮಾನ್‌.. ಒನ್‌ ಮೋರ್‌.. ಎಂದು ಕೂಗುತ್ತಾ 46 ವರ್ಷ ವಯಸ್ಸಿನ ಆಟಗಾರನನ್ನು ಹುರಿದುಂಬಿಸುತ್ತಿದ್ದುದು ಗಮನ ಸೆಳೆಯಿತು.

ಪುರುಷರ ಡಬಲ್ಸ್‌ ವಿಭಾಗದಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆಗೂಡಿ ಆಡುತ್ತಿರುವ ಪೇಸ್‌, ಬೆಂಗಳೂರು ಓಪನ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಹೊನಲು ಬೆಳಕಿನಲ್ಲಿ ನಡೆದ ಹಣಾಹಣಿಯಲ್ಲಿ ಪೇಸ್‌ ಮತ್ತು ಮ್ಯಾಥ್ಯೂ 7–6, 6–4ರಲ್ಲಿ ಸ್ಲೊವೇನಿಯಾದ ಬ್ಲಾಜ್‌ ರೋಲಾ ಮತ್ತು ಚೀನಾದ ಜಿಜೆನ್‌ ಜಾಂಗ್‌ ಅವರನ್ನು ಸೋಲಿಸಿದರು. ಈ ಹೋರಾಟ 1 ಗಂಟೆ 31 ನಿಮಿಷ ನಡೆಯಿತು.

ಮೊದಲ ಸೆಟ್‌ನಲ್ಲಿ ಉಭಯ ಜೋಡಿಗಳೂ ಜಿದ್ದಾಜಿದ್ದಿನಿಂದ ಸೆಣಸಿ ತಮ್ಮ ಸರ್ವ್‌ಗಳನ್ನು ಕಾಪಾಡಿಕೊಂಡಿತು. ಹೀಗಾಗಿ 6–6 ಸಮಬಲ ಕಂಡುಬಂತು. ‘ಟೈ ಬ್ರೇಕರ್‌’ನಲ್ಲಿ ಪೇಸ್‌ ಮತ್ತು ಮ್ಯಾಥ್ಯೂ ಮೂರು ಬಾರಿ ಎದುರಾಳಿಗಳ ಸರ್ವ್‌ ಮುರಿದು ಸಂಭ್ರಮಿಸಿದರು.

ಎರಡನೇ ಸೆಟ್‌ನ ಮೂರನೇ ಗೇಮ್‌ನಲ್ಲಿ ಜಾಂಗ್‌ ಮತ್ತೊ ರೋಲಾ ಅವರು ಎದುರಾಳಿಗಳ ಸರ್ವ್‌ ಮುರಿದು 2–1 ಮುನ್ನಡೆ ಪಡೆದರು. ಆಗ ಭಾರತ ಮತ್ತು ಆಸ್ಟ್ರೇಲಿಯಾ ಜೋಡಿ ಮುಗ್ಗರಿಸಬಹುದೆಂದು ಅಂದಾಜಿಸಲಾಗಿತ್ತು. ಐದನೇ ಗೇಮ್‌ನಲ್ಲೂ ಪೇಸ್‌ ಜೋಡಿ ಸರ್ವ್‌ ಕಳೆದುಕೊಳ್ಳುವ ಆತಂಕ ಎದುರಿಸಿತ್ತು. 0–40ರಿಂದ ಹಿನ್ನಡೆ ಕಂಡಿದ್ದ ವೇಳೆ ಅಮೋಘ ಸರ್ವ್‌ಗಳನ್ನು ಮಾಡಿದ ಪೇಸ್‌, ಗೇಮ್‌ ಕೈಜಾರದಂತೆ ನೋಡಿಕೊಂಡರು.

ಬಳಿಕ ಪೇಸ್‌ ಮತ್ತು ಮ್ಯಾಥ್ಯೂ ಅವರ ಆಟ ಇನ್ನಷ್ಟು ರಂಗೇರಿತು. ಆರು ಮತ್ತು 10ನೇ ಗೇಮ್‌ಗಳಲ್ಲಿ ಎದುರಾಳಿಗಳ ಸರ್ವ್‌ ಮುರಿದ ಈ ಜೋಡಿ ತಾವು ಮಾಡಿದ ಸರ್ವ್‌ಗಳನ್ನೂ ಉಳಿಸಿಕೊಂಡು ಗೆಲುವಿನ ತೋರಣ ಕಟ್ಟಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು