ಸೋಮವಾರ, ಜುಲೈ 4, 2022
21 °C
ಸಿಟ್ಸಿಪಾಸ್‌ ಎಂಟರ ಘಟ್ಟಕ್ಕೆ; ಕಾಲಿನ್ಸ್‌ಗೆ ಜಯ; ಸಬಲೆಂಕಾಗೆ ನಿರಾಶೆ

ಆಸ್ಟ್ರೇಲಿಯನ್ ಓಪನ್‌ ಟೆನಿಸ್ ಟೂರ್ನಿ: ಆಗರ್‌ಗೆ ಮೆಡ್ವೆಡೆವ್ ಎದುರಾಳಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಮತ್ತು ಕೆನಡಾದ ಫೆಲಿಕ್ಸ್ ಆಗರ್‌ ಅಲಿಯಾಸಿಮ್ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಎಂಟರ ಘಟ್ಟದಲ್ಲಿ ಮುಖಾಮುಖಿಯಾಗುವರು. ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿರುವ ಮೆಡ್ವೆಡೆವ್‌ ಸೋಮವಾರ ನಡೆದ ಪ್ರಬಲ ಪೈಪೋಟಿಯಲ್ಲಿ ಅಮೆರಿಕದ ಮ್ಯಾಕ್ಸಿಮ್ ಕ್ರೆಸಿ ಸವಾಲನ್ನು ಮೀರಿದರು. ಮಾಜಿ ಫೈನಲಿಸ್ಟ್‌, ಕ್ರೊವೇಷ್ಯಾದ ಮರಿನ್ ಸಿಲಿಕ್ ಅವರ ದಿಟ್ಟ ಆಟಕ್ಕೆ ಉತ್ತರ ನೀಡಿ ಫೆಲಿಕ್ಸ್‌ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಮಾರ್ಗರೆಟ್ ಕೋರ್ಟ್ ಅರೆನಾದಲ್ಲಿ ನಡೆದ ಹಣಾಹಣಿಯಲ್ಲಿ ಮೆಡ್ವೆಡೆವ್ ಅವರಿಗೆ ಮ್ಯಾಕ್ಸಿಮ್ ಕ್ರೆಸಿ ಭಾರಿ ಪೈಪೋಟಿ ನೀಡಿದರು. ಪಂದ್ಯದ ನಡುವೆ ನೋವಿಗೆ ಚಿಕಿತ್ಸೆ ಪಡೆದುಕೊಂಡ ಮೆಡ್ವೆಡೆವ್ ಒಂದು ಹಂತದಲ್ಲಿ ತಾಳ್ಮೆಯನ್ನೂ ಕಳೆದುಕೊಂಡರು. ಕೊನೆಗೆ 6–2, 7–6 (4), 6 (4)–7, 7–5ರಲ್ಲಿ ಜಯ ಗಳಿಸಿದರು.

2018ರ ಫೈನಲ್‌ನಲ್ಲಿ ರೋಜರ್ ಫೆಡರರ್ ವಿರುದ್ಧ ಸೋತ ಮರಿನ್ ಸಿಲಿಕ್ ಅವರು ಜಾನ್ ಕೇನ್ ಅರೆನಾದಲ್ಲಿ ನಡೆದ ಹಣಾಹಣಿಯ ಪ್ರತಿ ಹಂತದಲ್ಲೂ ಜಿದ್ದಾಜಿದ್ದಿಯ ಪೈಪೋಟಿ ನೀಡಿದರು. 3 ತಾಸು 35 ನಿಮಿಷ ನಡೆದ, ನಾಲ್ಕು ಸೆಟ್‌ಗಳ ವರೆಗೆ ಸಾಗಿದ ಪಂದ್ಯದಲ್ಲಿ ಅಲಿಯಾಸಿಮ್ 2-6, 7-6 (9/7), 6-2, 7-6 (7/4)ರಲ್ಲಿ ಗೆಲುವು ಸಾಧಿಸಿದರು. ನಾಲ್ಕನೇ ಶ್ರೇಯಾಂಕಿತ, ಗ್ರೀಸ್‌ನ ಸ್ಟೆಫನೊಸ್ ಸಿಟ್ಸಿಪಾಸ್ 4-6, 6-4, 4-6, 6-3, 6-4ರಲ್ಲಿ ಅಮೆರಿಕದ ಟೇಲರ್ ಫ್ರಿಟ್ಜ್ ವಿರುದ್ಧ ಜಯ ಗಳಿಸಿದರು.

ಮಹಿಳಾ ವಿಭಾಗದಲ್ಲಿ ರೊಮೇನಿಯಾದ ಸಿಮೋನಾ ಹಲೆಪ್ ಎದುರು ಭರ್ಜರಿ ಆಟವಾಡಿದ ಪ್ರಾನ್ಸ್‌ನ ಅಲಿಜ್ ಕಾರ್ನೆಟ್‌ 6-4, 3-6, 6-4ರಲ್ಲಿ ಜಯ ಸಾಧಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಅವರು ಅಮೆರಿಕದ ಡ್ಯಾನಿಯೆಲಿ ಕಾಲಿನ್ಸ್ ಎದುರು ಸೆಣಸುವರು. ಬೆಲ್ಜಿಯಂನ ಎಲಿಸ್ ಮರ್ಟೆನ್ಸ್‌ ಅವರನ್ನು 4-6, 6-4, 6-4ರಲ್ಲಿ ಮಣಿಸಿದ ಕಾಲಿನ್ಸ್‌ ಈ ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಅಮೆರಿಕದ ಮೂರನೇ ಆಟಗಾರ್ತಿ ಎನಿಸಿಕೊಂಡರು. ಮ್ಯಾಡಿಸನ್ ಕೀಸ್ ಮತ್ತು ಜೆಸಿಕಾ ಪೆಗುಲಾ ಭಾನುವಾರ ಈ ಸಾಧನೆ ಮಾಡಿದ್ದರು. ಎರಡನೇ ಶ್ರೇಯಾಂಕಿತೆ ಅರಿನಾ ಸಬಲೆಂಕಾ ಅವರನ್ನು ಕಯಾ ಕನೆಪಿ 5-7, 6-2, 7-6 (10/7)ರಲ್ಲಿ ಮಣಿಸಿದರು.

ಸಿನರ್‌, ಇಗಾ ಸ್ವಾಟೆಕ್‌ಗೆ ಗೆಲುವು

ಸ್ಥಳೀಯ ಆಟಗಾರ ಅಲೆಕ್ಸ್‌ ಡಿ ಮಿನಾರ್ ಎದುರು ಜಯ ಗಳಿಸಿದ ಇಟಲಿಯ ಜನಿಕ್ ಸಿನರ್ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಎಂಟರ ಘಟ್ಟ ಪ್ರವೇಶಿಸಿದರು. ಸೋಮವಾರದ ಪಂದ್ಯದಲ್ಲಿ ಅವರು 7-6(3), 6-3, 6-4ರಲ್ಲಿ ಗೆದ್ದರು. ಏಳನೇ ಶ್ರೇಯಾಂಕಿತೆ ಪೋಲೆಂಡ್‌ನ ಇಗಾ ಸ್ವಾಟೆಕ್ ರೊಮೇನಿಯಾದ ಸೊರಾನ ಸಿರ್ಸ್ಟಿಯಾ ಎದುರು 5-7 6-3 6-3ರಲ್ಲಿ ಗೆದ್ದು ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇರಿಸಿದರು.  

2020ರ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿರುವ 20ರ ಹರಯದ ಸ್ವಾಟೆಕ್‌ ಅವರಿಗೆ 31 ವರ್ಷದ ಸೊರಾನ ಭರ್ಜರಿ ಹೊಡೆತಗಳ ಮೂಲಕ ಭಾರಿ ಸ್ಪರ್ಧೆಯೊಡ್ಡಿದರು. ಆದರೆ ಪಟ್ಟು ಬಿಡದೆ ಆಡಿದ ಸ್ವಾಟೆಕ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೊದಲ ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. 

 

ಲಸಿಕೆ ವೈಯಕ್ತಿಕ ಆಯ್ಕೆ: ಹ್ಯುಬ್ಲೊ

ಜೂರಿಚ್‌ (ರಾಯಿಟರ್ಸ್‌): ನೊವಾಕ್ ಜೊಕೊವಿಚ್ ಅವರ ಪ್ರಾಯೋಜಕರಾದ ಹ್ಯುಬ್ಲೊ ಕೈಗಡಿಯಾರದ ಕಂಪನಿ, ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದು ಅಥವಾ ಬಿಡುವುದು ವೈಯಕ್ತಿಕ ವಿಚಾರ ಎಂದು ಸೋಮವಾರ ಹೇಳಿದೆ.

ಲಸಿಕೆ ಹಾಕಿಸಿಕೊಳ್ಳದೆ ದೇಶ ಪ್ರವೇಶಿಸಿದ್ದರಿಂದಾಗಿ ನೊವಾಕ್ ಜೊಕೊವಿಚ್ ಅವರಿಗೆ ಆಸ್ಟ್ರೇಿಯನ್ ಓಪನ್ ಟೂರ್ನಿಯಲ್ಲಿ ಆಡಲು ಅವಕಾಶ ನೀಡಿರಲಿಲ್ಲ. ಅವರ ವೀಸಾವನ್ನು ಎರಡು ಬಾರಿ ರದ್ದು ಮಾಡಿ ದೇಶದಿಂದ ಹೊರಹಾಕಲಾಗಿತ್ತು. 

ಈ ಘಟನೆಗೆ ಸಂಬಂಧಿಸಿ ಮೊದಲ ಬಾರಿ ಪ್ರತಿಕ್ರಿಯೆ ನೀಡಿರುವ ಹ್ಯುಬ್ಲೊ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಕಾರ್ಡೊ ಗ್ವಡಲುಪೆ ಅವರು ಜೊಕೊವಿಚ್‌ ಅವರ ಅನುಭವವನ್ನು ಅವರಿಂದಲೇ ಕೇಳಿಸಿಕೊಳ್ಳಲು ಕಾತರರಾಗಿರುವುದಾಗಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು