ಸೋಮವಾರ, ಫೆಬ್ರವರಿ 24, 2020
19 °C
ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿ: ನಗಾಲ್‌, ಸಾಕೇತ್‌ಗೆ ಗೆಲುವು

ನಿಕಿ ಅಬ್ಬರಕ್ಕೆ ಬೆಚ್ಚಿದ ಲುಕಾಸ್‌

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಟೆನಿಸ್‌ ಆಟದ ಸೊಬಗು ಸವಿಯುವ ಆಸೆಯೊಂದಿಗೆ ಕಬ್ಬನ್‌ ಉದ್ಯಾನದಲ್ಲಿರುವ ಕೆಎಸ್‌ಎಲ್‌ಟಿಎ ಅಂಗಳಕ್ಕೆ ಬಂದಿದ್ದ ಅಭಿಮಾನಿಗಳಿಗೆ ನಿಕಿ ಪೂಣಚ್ಚ ನಿರಾಸೆ ಮಾಡಲಿಲ್ಲ.

ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯಲ್ಲಿ ಮಂಗಳವಾರ ಅಚ್ಚರಿಯ ಗೆಲುವು ದಾಖಲಿಸಿದ 24 ವರ್ಷ ವಯಸ್ಸಿನ ನಿಕಿ, ಪ್ರೀ ಕ್ವಾರ್ಟರ್‌ ಫೈನಲ್‌ಗೆ ದಾಪುಗಾಲಿಟ್ಟರು.

ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಹಣಾಹಣಿಯಲ್ಲಿ ಅವರು 6–4, 2–6, 6–3ರಲ್ಲಿ ಜೆಕ್‌ ಗಣ ರಾಜ್ಯದ ಲುಕಾಸ್‌ ರಸೊಲ್‌ಗೆ ಆಘಾತ ನೀಡಿದರು.

ಟೂರ್ನಿಗೆ ‘ವೈಲ್ಡ್‌ ಕಾರ್ಡ್‌’ ಅರ್ಹತೆ ಗಳಿಸಿದ್ದ ನಿಕಿ ಪಾಲಿಗೆ ಇದು ಸ್ಮರಣೀಯ ಗೆಲುವು. ಏಕೆಂದರೆ, ಲುಕಾಸ್‌ ಟೂರ್ನಿ ಯಲ್ಲಿ 16ನೇ ಶ್ರೇಯಾಂಕ ಹೊಂದಿದ್ದರು. ರ‍್ಯಾಂಕಿಂಗ್‌ನಲ್ಲಿ ನಿಕಿ ಅವರಿಗಿಂತಲೂ 570 ಸ್ಥಾನ ಮೇಲಿದ್ದರು.

34 ವರ್ಷ ವಯಸ್ಸಿನ ಲುಕಾಸ್‌, 2012ರ ವಿಂಬಲ್ಡನ್‌ ಟೂರ್ನಿಯ ಪಂದ್ಯದಲ್ಲಿ ಸ್ಪೇನ್‌ನ ರಫೆಲ್‌ ನಡಾಲ್‌ಗೆ ಆಘಾತ ನೀಡಿದ್ದರು. ಹೀಗಾಗಿ ಜೆಕ್‌ ಗಣರಾಜ್ಯದ ಆಟಗಾರನ ವಿರುದ್ಧ ನಿಕಿ ಸೋಲಬಹುದೆಂದು ಭಾವಿಸಲಾಗಿತ್ತು. 1 ಗಂಟೆ 45 ನಿಮಿಷಗಳ ಕಾಲ ಕೆಚ್ಚೆದೆ ಯಿಂದ ಹೋರಾಡಿದ ನಿಕಿ, ಈ ನಿರೀಕ್ಷೆಯನ್ನು ಹುಸಿಮಾಡಿದರು.

ಲುಕಾಸ್‌ ವಿರುದ್ಧದ ಹೋರಾಟದಲ್ಲಿ ನಿಕಿ, ಆಕ್ರಮಣಕಾರಿಯಾಗಿ ಆಡಿದರು. ಭಾರತದ ಆಟಗಾರನ ಮಿಂಚಿನ ಸರ್ವ್‌ ಗಳನ್ನು ರಿಟರ್ನ್‌ ಮಾಡಲು ಲುಕಾಸ್‌ ಪರದಾಡಿದರು. 10ನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಮುರಿದ ನಿಕಿ, ಸೆಟ್‌ ಜಯಿಸಿದರು.

ಸೋಮವಾರ ಮೊದಲ ಸುತ್ತಿನ ಪಂದ್ಯದಲ್ಲಿ ಆಡಿದ್ದ ನಿಕಿ, ಲುಕಾಸ್‌ ಎದುರಿನ ಎರಡನೇ ಸೆಟ್‌ನ ವೇಳೆ ಸಾಕಷ್ಟು ಸುಸ್ತಾದಂತೆ ಕಂಡರು. ಇದರ ಲಾಭ ಪಡೆದ ಲುಕಾಸ್‌, ಐದು ಮತ್ತು ಏಳನೇ ಗೇಮ್‌ಗಳಲ್ಲಿ ಭಾರತದ ಆಟಗಾರನ ಸರ್ವ್‌ ಮುರಿದು ಸೆಟ್‌ ತಮ್ಮದಾಗಿಸಿಕೊಂಡರು. ಹೀಗಾಗಿ 1–1 ಸಮಬಲ ಕಂಡುಬಂತು.

ನಿರ್ಣಾಯಕ ಮೂರನೇ ಸೆಟ್‌ನ ಎರಡನೇ ಗೇಮ್‌ನಲ್ಲೇ ಎದುರಾಳಿಯ ಸರ್ವ್‌ ಮುರಿದ ನಿಕಿ 2–0 ಮುನ್ನಡೆ ಪಡೆದರು. ಬಳಿಕ ಇನ್ನಷ್ಟು ಆಕ್ರಮಣಕಾರಿಯಾಗಿ ಆಡಿದ ಅವರು ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.

ಸಾಕೇತ್‌ಗೆ ಅಮೋಘ ಗೆಲುವು: 2018ರ ಟೂರ್ನಿಯಲ್ಲಿ ರನ್ನರ್‌ ಅಪ್‌ ಆಗಿದ್ದ ಸಾಕೇತ್‌ ಮೈನೇನಿ ಕೂಡ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

‘ಸೆಂಟರ್‌ ಕೋರ್ಟ್‌’ನಲ್ಲಿ ನಡೆದ ಎರಡನೇ ಸುತ್ತಿನ ಪೈಪೋಟಿಯಲ್ಲಿ ಶ್ರೇಯಾಂಕ ರಹಿತ ಆಟಗಾರ ಸಾಕೇತ್‌ 6–3, 6–3ರಲ್ಲಿ ರಷ್ಯಾದ ಎವಜೆನಿ ಡೊನ್ಸ್‌ಕೊಯ್‌ಗೆ ಆಘಾತ ನೀಡಿದರು. ಎವಜೆನಿ ಅವರು ಟೂರ್ನಿಯಲ್ಲಿ ಆರನೇ ಶ್ರೇಯಾಂಕ ಹೊಂದಿದ್ದರು.

ಸುಮಿತ್‌ ಮಿಂಚು: ಸಂಜೆ ನಡೆದ ಹಣಾಹಣಿಯಲ್ಲಿ ಸುಮಿತ್‌ ನಗಾಲ್‌ ಮೋಡಿ ಮಾಡಿದರು.

ಟೂರ್ನಿಯಲ್ಲಿ ಎಂಟನೇ ಶ್ರೇಯಾಂಕ ಹೊಂದಿದ್ದ ಸುಮಿತ್‌ 6–0, 6–4ರಲ್ಲಿ ಮಲೆಕ್‌ ಜಝಿರಿ ಅವರನ್ನು ಸೋಲಿಸಿದರು. 25 ನಿಮಿಷಗಳ ಕಾಲ ನಡೆದ ಮೊದಲ ಸೆಟ್‌ನಲ್ಲಿ ಏಕಪಕ್ಷೀಯವಾಗಿ ಗೆದ್ದ ನಗಾಲ್‌, ಎರಡನೇ ಸೆಟ್‌ನಲ್ಲಿ ಎದುರಾಳಿಯಿಂದ ಪ್ರಬಲ ಪೈಪೋಟಿ ಎದುರಿಸಿದರು. 9ನಿಮಿಷ ನಡೆದ 10ನೇ ಗೇಮ್‌ನಲ್ಲಿ ಇಬ್ಬರೂ ಜಿದ್ದಾಜಿದ್ದಿನಿಂದ ಸೆಣಸಿದರು. ರೋಚಕ ಘಟ್ಟದಲ್ಲಿ ‘ಡಬಲ್‌ ಫಾಲ್ಟ್‌’ ಎಸಗಿ ಸರ್ವ್‌ ಕಳೆದುಕೊಂಡ ಜಝಿರಿ, ನಿರಾಸೆ ಕಂಡರು.

ಮೂರನೇ ಶ್ರೇಯಾಂಕದ ಆಟಗಾರ ಯುಯಿಚಿ ಸುಗಿಟಾ 6–4, 6–3ರಲ್ಲಿ ವಕ್ಲಾವ್‌ ಸಫ್ರಾನೆಕ್‌ ಎದುರು ಗೆದ್ದರು. ಭಾರತದ ಶಶಿಕುಮಾರ್‌ ಮುಕುಂದ್‌ 5–7, 3–6ರಲ್ಲಿ ಇಲ್ಯಾ ಇವಾಷ್ಕಾ ವಿರುದ್ಧ ಪರಾಭವಗೊಂಡರು.

***

ಚಾಲೆಂಜರ್‌ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್‌ ಫೈನಲ್ ಪ್ರವೇಶಿ ಸುವ ಕನಸು ಇಂದು ನನಸಾಗಿದೆ. ಲುಕಾಸ್‌ ಅವರಂತಹ ಬಲಿಷ್ಠ ಆಟ ಗಾರನನ್ನು ಮಣಿಸಿದ್ದರಿಂದ ಸಂತಸ ಇಮ್ಮಡಿಸಿದೆ.

–ನಿಕಿ ಪೂಣಚ್ಚ, ಭಾರತದ ಆಟಗಾರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು