ಪ್ಯಾರಿಸ್‌ ಮಾಸ್ಟರ್ಸ್‌ ಟೆನಿಸ್‌ ಟೂರ್ನಿ: ಫೆಡರರ್‌ ಎದುರು ಗೆದ್ದ ಜೊಕೊವಿಚ್‌

7
ಸೆಮಿಫೈನಲ್‌ ಹಣಾಹಣಿ

ಪ್ಯಾರಿಸ್‌ ಮಾಸ್ಟರ್ಸ್‌ ಟೆನಿಸ್‌ ಟೂರ್ನಿ: ಫೆಡರರ್‌ ಎದುರು ಗೆದ್ದ ಜೊಕೊವಿಚ್‌

Published:
Updated:
Deccan Herald

ಪ್ಯಾರಿಸ್‌: ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌, ವೃತ್ತಿಬದುಕಿನಲ್ಲಿ 100ನೇ ಪ್ರಶಸ್ತಿ ಗೆಲ್ಲಲು ಇನ್ನಷ್ಟು ಸಮಯ ಕಾಯಬೇಕಾಗಿದೆ.

ಶನಿವಾರ ರಾತ್ರಿ ನಡೆದ ಪ್ಯಾರಿಸ್‌ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಫೆಡರರ್‌ 6–7, 7–5, 6–7ರಲ್ಲಿ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಎದುರು ಪರಾಭವಗೊಂಡಿದ್ದಾರೆ.

ಟೆನಿಸ್‌ ಲೋಕದ ದಿಗ್ಗಜ ಆಟಗಾರರ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯ ಮೂರು ಗಂಟೆ ನಡೆಯಿತು. ಇದರಲ್ಲಿ ನೊವಾಕ್‌ ಮೇಲುಗೈ ಸಾಧಿಸಿದರು.

ಫೆಡರರ್‌ ಮತ್ತು ಜೊಕೊವಿಚ್‌ ಅವರ 47ನೇ ಮುಖಾಮುಖಿಯನ್ನು ಕಣ್ತುಂಬಿಕೊಳ್ಳಲು ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳಿಗೆ ಭರಪೂರ ಮನರಂಜನೆ ಲಭಿಸಿತು.

ಮೊದಲ ಸೆಟ್‌ನಲ್ಲಿ ಜೊಕೊವಿಚ್‌ ಅಬ್ಬರಿಸಿದರು. ಫೆಡರರ್‌ ಕೂಡಾ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳ ಮೂಲಕ ಮಿಂಚಿದರು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ನೊವಾಕ್‌ ‘ಟೈ ಬ್ರೇಕರ್‌’ನಲ್ಲಿ ಮೇಲುಗೈ ಸಾಧಿಸಿ 1–0 ಮುನ್ನಡೆ ಗಳಿಸಿದರು.

ಆರಂಭಿಕ ನಿರಾಸೆಯಿಂದ ಫೆಡರರ್‌ ಎದೆಗುಂದಲಿಲ್ಲ. ಎರಡನೇ ಸೆಟ್‌ನಲ್ಲಿ ಸ್ವಿಟ್ಜರ್‌ಲೆಂಡ್‌ನ ಆಟಗಾರ ಮೋಡಿ ಮಾಡಿದರು. ಶರವೇಗದ ಸರ್ವ್‌ ಮತ್ತು ಬಲಿಷ್ಠ ಹಿಂಗೈ ಹೊಡೆತಗಳ ಮೂಲಕ ಗೇಮ್‌ಗಳನ್ನು ಗೆದ್ದು ಎದುರಾಳಿಯನ್ನು ಕಂಗೆಡಿಸಿದರು.

ಹೀಗಾಗಿ ಮೂರನೇ ಸೆಟ್‌ ಕುತೂಹಲದ ಗಣಿಯಾಗಿತ್ತು. ನಿರ್ಣಾಯಕ ಎನಿಸಿದ್ದ ಈ ಸೆಟ್‌ನ ಆರಂಭದಿಂದಲೇ ಉಭಯ ಆಟಗಾರರು ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಇಬ್ಬರೂ ಸರ್ವ್‌ ಉಳಿಸಿಕೊಂಡಿದ್ದರಿಂದ 6–6ರ ಸಮಬಲ ಕಂಡುಬಂತು. ಎರಡು ಬ್ರೇಕ್‌ ಪಾಯಿಂಟ್‌ಗಳನ್ನು ಕಾಪಾಡಿಕೊಂಡಿದ್ದ ಫೆಡರರ್‌ಗೆ ಗೆಲುವಿನ ಅವಕಾಶ ಹೆಚ್ಚಿತ್ತು. ಆದರೆ ‘ಟೈ ಬ್ರೇಕರ್‌’ನಲ್ಲಿ ಮತ್ತೊಮ್ಮೆ ಮಿಂಚಿದ ಜೊಕೊವಿಚ್‌ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.

ಫೈನಲ್‌ನಲ್ಲಿ ನೊವಾಕ್‌, ರಷ್ಯಾದ ಕರೆನ್‌ ಕಚನೊವ್‌ ವಿರುದ್ಧ ಸೆಣಸಲಿದ್ದಾರೆ. ನಾಲ್ಕರ ಘಟ್ಟದ ಇನ್ನೊಂದು ಪೈಪೋಟಿಯಲ್ಲಿ ಕರೆನ್‌ 6–4, 6–1ರಲ್ಲಿ ಆಸ್ಟ್ರಿಯಾದ ಡಾಮಿನಿಕ್‌ ಥೀಮ್‌ ವಿರುದ್ಧ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !