ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೆಲ್ ನಡಾಲ್‌ಗೆ ಫ್ರೆಂಚ್‌ ಓಪ‌ನ್‌ ಕಿರೀಟ; 22 ಗ್ರ್ಯಾನ್‌ ಸ್ಲಾಂ ದಾಖಲೆ

Last Updated 5 ಜೂನ್ 2022, 17:03 IST
ಅಕ್ಷರ ಗಾತ್ರ

ಪ್ಯಾರಿಸ್‌: ಅಪಾರ ಅನುಭವ, ದೈಹಿಕ ಸಾಮರ್ಥ್ಯ ಮತ್ತು ಕೌಶಲವನ್ನು ಸಮಪ್ರಮಾಣದಲ್ಲಿ ಬೆರೆಸಿಕೊಂಡು ಆಡಿದ ಸ್ಪೇನ್‌ನ ರಫೆಲ್‌ ನಡಾಲ್‌, ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯ ಕಿರೀಟ ಮುಡಿಗೇರಿಸಿಕೊಂಡರು.

ರೋಲ್ಯಾಂಡ್‌ ಗ್ಯಾರೋಸ್‌ನ ಫಿಲಿಪ್‌ ಚಾಟ್ರಿಯರ್‌ ಕೋರ್ಟ್‌ನಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಅವರು ನಾರ್ವೆಯ ಕಾಸ್ಪರ್‌ ರೂಡ್‌ ವಿರುದ್ಧ 6–3, 6–3, 6–0 ರ ನೇರ ಸೆಟ್‌ಗಳ ಜಯ ಸಾಧಿಸಿದರು. ಇಲ್ಲಿ ತಮ್ಮ 14ನೇ ಪ್ರಶಸ್ತಿ ಮುಡಿಗೇರಿಸಿಕೊಂಡಲ್ಲದೆ, ‘ಕ್ಲೇ ಕೋರ್ಟ್‌ ಕಿಂಗ್‌’ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಜನವರಿಯಲ್ಲಿ ನಡೆದಿದ್ದ ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಯಲ್ಲಿ ಗೆದ್ದು ದಾಖಲೆಯ 21ನೇ ಟ್ರೋಫಿ ಜಯಿಸಿದ್ದ ನಡಾಲ್‌, ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಳ ಸಂಖ್ಯೆಯನ್ನು 22ಕ್ಕೆ ಹೆಚ್ಚಿಸಿಕೊಂಡರು.

23 ವರ್ಷದ ರೂಡ್‌, ತನಗಿಂತ 13 ವರ್ಷ ಹಿರಿಯ ಆಟಗಾರನಿಗೆ ಸರಿಸಾಟಿಯಾಗಿ ನಿಲ್ಲಲು ವಿಫಲರಾದರು. ರೂಡ್‌ ಬತ್ತಳಿಕೆಯಲ್ಲಿದ್ದ ಅಸ್ತ್ರಗಳು ನಡಾಲ್‌ ಅನುಭವದ ಮುಂದೆ ಸೊರಗಿದವು. ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದ ನಾರ್ವೆಯ ಮೊದಲ ಆಟಗಾರ ಎನಿಸಿಕೊಳ್ಳಬೇಕೆಂಬ ಅವರ ಆಸೆ ಕೈಗೂಡಲಿಲ್ಲ.

ಫ್ರೆಂಚ್ ಓಪನ್‌ನಲ್ಲಿ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಗೌರವ ನಡಾಲ್‌ಗೆ ಒಲಿಯಿತು. ಆಂಡ್ರೆಸ್‌ ಗಿಮೆನೊ ಹೆಸರಲ್ಲಿದ್ದ 50 ವರ್ಷಗಳಷ್ಟು ಹಳೆಯ ದಾಖಲೆಯನ್ನು ಅವರು ಮುರಿದರು. ಸ್ಪೇನ್‌ನವರೇ ಆದ ಗಿಮೆನೊ 1972 ರಲ್ಲಿ ತಮ್ಮ 34ನೇ ವಯಸ್ಸಿನಲ್ಲಿ ಇಲ್ಲಿ ಚಾಂಪಿಯನ್‌ ಆಗಿದ್ದರು.

ಏಕಪಕ್ಷೀಯ ಹೋರಾಟ: ಫೈನಲ್‌ ಪಂದ್ಯದ ಮೊದಲ ಸೆಟ್‌ನ ಎರಡನೇ ಗೇಮ್‌ನಲ್ಲೇ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿದ ನಡಾಲ್‌, ತಮ್ಮ ಉದ್ದೇಶ ಏನೆಂಬುದನ್ನು ಸ್ಪಷ್ಟಪಡಿಸಿದರು. ಮುಂದಿನ ಗೇಮ್‌ನಲ್ಲಿ ರೂಡ್‌, ನಡಾಲ್ ಸರ್ವ್‌ ಮುರಿದು ತಿರುಗೇಟು ನೀಡಿದರು. ನಾಲ್ಕನೇ ಗೇಮ್‌ನಲ್ಲಿ ಮತ್ತೆ ಎದುರಾಳಿಯ ಸರ್ವ್‌ ಮುರಿದ ಸ್ಪೇನ್‌ ಆಟಗಾರ, 3–1ರ ಮುನ್ನಡೆ ಗಳಿಸಿದರು. ಪಂದ್ಯ ಸಾಗಿದಂತೆ ತಮ್ಮ ಹಿಡಿತ ಬಿಗಿಗೊಳಿಸಿ 6–3 ರಲ್ಲಿ ಸೆಟ್‌ ಗೆದ್ದರು.

ಎರಡನೇ ಸೆಟ್‌ನ ನಾಲ್ಕನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಬ್ರೇಕ್ ಮಾಡಿದ ರೂಡ್‌ 3–1 ರಲ್ಲಿ ಮೇಲುಗೈ ಸಾಧಿಸಿ, ಮರುಹೋರಾಟದ ಸೂಚನೆ ನೀಡಿದರು. ಆದರೆ ಮುಂದಿನ ಗೇಮ್‌ನಲ್ಲಿ ರೂಡ್‌ ಸರ್ವ್‌ ಬ್ರೇಕ್‌ ಮಾಡಿ, ಬಳಿಕ ತಮ್ಮ ಸರ್ವ್‌ ಉಳಿಸಿಕೊಂಡ ನಡಾಲ್ 3–3 ರಲ್ಲಿ ಸಮಬಲ ಸಾಧಿಸಿದರು. ಆ ಬಳಿಕದ ಆಟ ಏಕಪಕ್ಷೀಯವಾಗಿ ನಡೆಯಿತು. ಸತತ 11 ಗೇಮ್‌ಗಳನ್ನು ಗೆದ್ದುಕೊಂಡು ಟ್ರೋಫಿಗೆ ಮುತ್ತಿಕ್ಕಿದರು.

ಗಾರ್ಸಿಯಾ–ಕ್ರಿಸ್ಟಿನಾಗೆ ಪ್ರಶಸ್ತಿ: ಮಹಿಳೆಯರ ಡಬಲ್ಸ್‌ ಫೈನಲ್‌ನಲ್ಲಿ ಫ್ರಾನ್ಸ್‌ನ ಕೆರೋಲಿನಾ ಗಾರ್ಸಿಯಾ ಮತ್ತು ಕ್ರಿಸ್ಟಿನಾ ಮ್ಲಾಡೆನೊವಿಚ್ ಜೋಡಿ 2–6, 6–3, 6–2 ರಲ್ಲಿ ಅಮೆರಿಕದ ಕೊಕೊ ಗಫ್‌– ಜೆಸ್ಸಿಕಾ ಪೆಗುಲಾ ಅವರನ್ನು ಮಣಿಸಿ ಟ್ರೋಫಿ ಜಯಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT