ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವುಕರಾಗಿ ಕಣ್ಣೀರಿಟ್ಟ ಟೆನಿಸ್‌ ದಿಗ್ಗಜ ಲಿಯಾಂಡರ್‌ ಪೇಸ್‌

Last Updated 11 ಫೆಬ್ರುವರಿ 2020, 20:11 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಟೆನಿಸ್‌ ದಿಗ್ಗಜ ಲಿಯಾಂಡರ್‌ ಪೇಸ್‌, ಕೆಎಸ್‌ಎಲ್‌ಟಿಎ ಅಂಗಳದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯ ವೇಳೆ ಭಾವುಕರಾಗಿ ಕಣ್ಣೀರಿಟ್ಟರು.

46 ವರ್ಷ ವಯಸ್ಸಿನ ಲಿಯಾಂಡರ್‌, ಬೆಂಗಳೂರು ಓಪನ್‌ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಉದ್ಯಾನನಗರಿಗೆ ಬಂದಿದ್ದಾರೆ.

ತಮ್ಮ 29 ವರ್ಷಗಳ ಕ್ರೀಡಾ ಬದುಕನ್ನು ಮೆಲುಕು ಹಾಕುವ ವೇಳೆ ಅವರ ಕಣ್ಣುಗಳು ಹನಿಗೂಡಿದವು. ಕಣ್ಣೀರು ಒರೆಸುತ್ತಲೇ ಮಾತು ಮುಂದುವರಿಸಿದ ಅವರು ‘ಮೂರು ದಶಕಗಳ ಕಾಲ ಪ್ರೀತಿ ಹಾಗೂ ಖುಷಿಯಿಂದಲೇ ದೇಶಕ್ಕಾಗಿ ಆಡಿದ್ದೇನೆ. ಇದೊಂದು ವಿಶೇಷ ಅನುಭವ. ಎಲ್ಲದಕ್ಕೂ ಕೊನೆಯೆಂಬುದು ಇದೆ. ಅದರಿಂದ ನಾನೇನು ಹೊರತಾಗಿಲ್ಲ’ ಎಂದರು.

‘2020 ನನ್ನ ಪಾಲಿಗೆ ವಿದಾಯದ ವರ್ಷ. ಹೀಗಾಗಿಯೇ ‘ಒನ್‌ ಲಾಸ್ಟ್‌ ರೋರ್‌’ ಎಂಬ ಘೋಷವಾಕ್ಯದೊಂದಿಗೆ ಎಲ್ಲಾ ಟೂರ್ನಿಗಳಲ್ಲಿ ಭಾಗವಹಿಸುತ್ತಿದ್ದೇನೆ. ನಾನು ಭಾರತದಲ್ಲಿ ಆಡುತ್ತಿರುವ ಕೊನೆಯ ಟೂರ್ನಿ ಬೆಂಗಳೂರು ಓಪನ್‌. ಬುಧವಾರ ನಡೆಯುವ ಡಬಲ್ಸ್‌ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದೇನೆ. ಸೋತರೆ ತವರಿನ ಅಂಗಳದಲ್ಲಿ ಇದೇ ನನ್ನ ಕೊನೆಯ ಪಂದ್ಯವಾಗಬಹುದು. ಇಷ್ಟು ವರ್ಷ ನನ್ನನ್ನು ಪ್ರೋತ್ಸಾಹಿಸಿದ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಬೇಕೆಂಬ ಉದ್ದೇಶದಿಂದ ಎಟಿಪಿ ಚಾಲೆಂಜರ್‌ ಟೂರ್ನಿಗಳಲ್ಲಿ ಆಡುತ್ತಿದ್ದೇನೆ’ ಎಂದು ಹೇಳಿದರು.

‘ಬದುಕಿನಲ್ಲಿ ನಾಳೆ ಏನಾಗುತ್ತದೆಯೋ ಯಾರಿಗೆ ಗೊತ್ತು. ಈ ಕ್ಷಣ ಮಾತ್ರ ನಮ್ಮದು. ಅದನ್ನು ಖುಷಿಯಿಂದ ಕಳೆಯಬೇಕು. ಜೀವನದುದ್ದಕ್ಕೂ ನಾನು ಇದೇ ತತ್ವವನ್ನು ಪಾಲಿಸಿಕೊಂಡು ಬಂದಿದ್ದೇನೆ’ ಎಂದು ನುಡಿದರು.

‘ಎಲ್ಲರಿಗೂ ಕ್ರೀಡಾ ಶಿಕ್ಷಣ ನೀಡುವುದು ಅಗತ್ಯ. ಆಗ ಮಾತ್ರ ಆರೋಗ್ಯಕರ ಭಾರತ ನಿರ್ಮಾಣದ ಕನಸು ಸಾಕಾರಗೊಳ್ಳಲಿದೆ’ ಎಂದು ಪ್ರತಿಪಾದಿಸಿದರು.

‘2021ರ ವೇಳೆಗೆ ಒಂದು ಶ್ರೇಷ್ಠ ತಂಡ ಕಟ್ಟಬೇಕೆಂಬ ಗುರಿ ಇದೆ. ಈ ನಿಟ್ಟಿನಲ್ಲಿ ನನ್ನ ಜೊತೆಗಿರುವವರೆಲ್ಲಾ ಕಾರ್ಯಪ್ರವೃತ್ತರಾಗಿದ್ದಾರೆ. ಮಾರ್ಟಿನಾ ನವ್ರಟಿಲೋವಾ, ಮಾರ್ಟಿನಾ ಹಿಂಗಿಸ್‌, ರಾಡೆಕ್‌ ಸ್ಟೆಫಾನೆಕ್‌, ಮಹೇಶ್‌ ಭೂಪತಿ ಹೀಗೆ ಅನೇಕ ದಿಗ್ಗಜರ ಜೊತೆಗೂಡಿ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಹಲವು ಪ‍ಂದ್ಯಗಳನ್ನು ಆಡಿದ್ದು ನನ್ನ ಅದೃಷ್ಟ. ಎಲ್ಲರಿಂದಲೂ ಹೊಸ ವಿಷಯಗಳನ್ನು ಕಲಿತಿದ್ದೇನೆ’ ಎಂದರು.

ಗಮನ ಸೆಳೆದ ಜೆರ್ಸಿ: ಮಂಗಳವಾರ ಲಿಯಾಂಡರ್‌ ಪೇಸ್‌ ಧರಿಸಿದ್ದ ಜೆರ್ಸಿ ಎಲ್ಲರ ಗಮನ ಸೆಳೆಯಿತು. ಶ್ವೇತವರ್ಣದ ಜೆರ್ಸಿಯ ಹಿಂಭಾಗದಲ್ಲಿ ಅವರು ಒಲಿಂಪಿಕ್ಸ್‌ ಹಾಗೂ 18 ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಗೆದ್ದ ಪ್ರಶಸ್ತಿಗಳ ವಿವರವನ್ನು ಮುದ್ರಿಸಲಾಗಿತ್ತು. ಮುಂಭಾಗದಲ್ಲಿ ‘ಒನ್‌ ಲಾಸ್ಟ್‌ ರೋರ್‌’ ಎಂಬ ಬರಹವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT