ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕ ಓಪನ್ ಟೆನಿಸ್‌ ಟೂರ್ನಿ: ನವೊಮಿ, ವಾವ್ರಿಂಕಾ, ಥೀಮ್‌ಗೆ ವೈಲ್ಡ್‌ಕಾರ್ಡ್

ಇದೇ ತಿಂಗಳ 26ರಂದು ಆರಂಭ
Published 16 ಆಗಸ್ಟ್ 2024, 2:46 IST
Last Updated 16 ಆಗಸ್ಟ್ 2024, 2:46 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಎರಡು ಬಾರಿಯ ಚಾಂಪಿಯನ್ ನವೊಮಿ ಒಸಾಕಾ, ಮಾಜಿ ಚಾಂಪಿಯನ್ನರಾದ ಸ್ಟಾನ್‌ ವಾವ್ರಿಂಕಾ, ಡೊಮಿನಿಕ್ ಥೀಮ್‌ ಮತ್ತು ಬಿಯಾಂಕಾ ಆಂಡ್ರೀಸ್ಯ್ಕು ಅವರಿಗೆ ಈ ವರ್ಷದ ಅಮೆರಿಕ ಓಪನ್ ಟೆನಿಸ್‌ ಚಾಂಪಿಯನ್‌ಷಿಪ್‌ಗೆ ವೈಲ್ಡ್‌ ಕಾರ್ಡ್‌ ನೀಡಲಾಗಿದೆ. ಟೂರ್ನಿ ಇದೇ ತಿಂಗಳ 26ರಂದು ಆರಂಭವಾಗಲಿದೆ.

2018ರಲ್ಲಿ ಒಸಾಕಾ ಅವರು ಫ್ಲಷಿಂಗ್ ಮಿಡೊಸ್‌ನಲ್ಲಿ ತಮ್ಮ ವೃತ್ತಿಜೀವನದ ನಾಲ್ಕು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳಲ್ಲಿ ಮೊದಲನೆಯದನ್ನು ಗೆದ್ದುಕೊಂಡಿದ್ದರು. 2020ರಲ್ಲಿ ಮತ್ತೊಮ್ಮೆ ಅಮೆರಿಕ ಓಪನ್ ಕಿರೀಟ ಧರಿಸಿದ್ದರು. ಜೊತೆಗೆ ಎರಡು ಬಾರಿ ಆಸ್ಟ್ರೇಲಿಯನ್‌ ಓಪನ್‌ನಲ್ಲೂ ಚಾಂಪಿಯನ್ ಆಗಿದ್ದರು.

ಒಸಾಕಾ ಅವರು ಸಾಕಷ್ಟು ಟೂರ್ನಿಗಳನ್ನು ಆಡದ ಕಾರಣ ರ್‍ಯಾಂಕಿಂಗ್ ಗಣನೀಯವಾಗಿ ಕುಸಿದಿದ್ದು, ನೇರವಾಗಿ ಟೂರ್ನಿಗೆ ಅರ್ಹತೆ ಪಡೆಯುವ ಸ್ಥಿತಿಯಲ್ಲಿರ ಲಿಲ್ಲ. ಕಳೆದ ವರ್ಷ ಹೆಣ್ಣುಮಗುವಿಗೆ ಜನ್ಮನೀಡಿದ ನಂತರ ಅವರು ವಿರಾಮ ತೆಗೆದುಕೊಂಡಿದ್ದು, ಈ ವರ್ಷ ಸ್ಪರ್ಧಾಕಣಕ್ಕೆ ಮರಳಿದ್ದಾರೆ.

ಮಾನಸಿಕ ಆರೋಗ್ಯದ ಕಾರಣ ನೀಡಿಯೂ ಅವರು ಟೂರ್ನಿಗಳನ್ನು ತಪ್ಪಿಸಿಕೊಂಡಿದ್ದರು.

ಕೆನಡಾದ ಬಿಯಾಂಕಾ ಅವರು 2019ರ ಅಮೆರಿಕ ಓಪನ್ ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್ ಅವರನ್ನು ಮಣಿಸಿ ಟ್ರೋಫಿ ಎತ್ತಿದ್ದರು. ಬೆನ್ನುನೋವಿನ ಕಾರಣ ಅವರು ಕಳೆದ ವರ್ಷ ಹೆಚ್ಚಿನ ಅವಧಿಗೆ ಆಡಿರಲಿಲ್ಲ.

ವರ್ಷದ ಕೊನೆಯ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಥೀಮ್‌ ಆಡುವ ಅವಕಾಶ ಪಡೆದಿದ್ದಾರೆ. ಈ ವರ್ಷದ ಕೊನೆಯಲ್ಲಿ ಟೆನಿಸ್‌ಗೆ ವಿದಾಯ ಹೇಳುವುದಾಗಿ 30 ವರ್ಷ ವಯಸ್ಸಿನ ಥೀಮ್‌ ಈ ಮೊದಲೇ ತಿಳಿಸಿದ್ದರು. ಅವರು ತಮ್ಮ ಏಕೈಕ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯಾಗಿ 2020ರಲ್ಲಿ ಅಮೆರಿಕ ಓಪನ್‌ ಚಾಂಪಿಯನ್ ಆಗಿದ್ದರು. ಆದರೆ ಮಣಿಕಟ್ಟಿನ ನೋವು ಕಾಡತೊಡಗಿದ ಮೇಲೆ ಅವರು ಮೂರು ವರ್ಷಗಳಿಂದ ಸಕ್ರಿಯವಾಗಿ ಟೂರ್ನಿಗಳಲ್ಲಿ ಭಾಗವಹಿಸುತ್ತಿಲ್ಲ.

39 ವರ್ಷದ ವಾವ್ರಿಂಕಾ ಅವರು 2016ರಲ್ಲಿ ಅಮೆರಿಕ ಓಪನ್ ಚಾಂಪಿಯನ್ ಆಗಿದ್ದಾರೆ. ಇದರ ಜೊತೆಗೆ ಅವರು ಇನ್ನೆರಡು ಪ್ರಮುಖ ಪ್ರಶಸ್ತಿಗಳನ್ನು ವೃತ್ತಿಜೀವನದಲ್ಲಿ ಗಳಿಸಿದ್ದಾರೆ. ಒಂದು ಹಂತದಲ್ಲಿ ಅವರು ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನಕ್ಕೆ ಏರಿದ್ದರು. ಆದರೆ ನಂತರ ಕುಸಿತಕಂಡು ಟಾಪ್‌ 100 ರಿಂದ ಹೊರಬಿದ್ದಿದ್ದಾರೆ.

ಅಮೆರಿಕದ ಅಮಂಡಾ ಅನಿಸಿಮೊವಾ, ಮೆಕ್‌ಕಾರ್ಟ್ನಿ ಕೆಸ್ಲರ್‌, ಅಲೆಕ್ಸಾ ನೊಯೆಲ್ ಮತ್ತು ಇವಾ ಜೋವಿಕ್ ಅವರು ಮಹಿಳೆಯರ ಮುಖ್ಯ ರೌಂಡ್‌ಗೆ ವೈಲ್ಡ್‌ ಕಾರ್ಡ್‌
ಪಡೆದಿದ್ದಾರೆ.

ಪುರುಷರ ವಿಭಾಗದಲ್ಲಿ ಅಮೆರಿಕದ ಕ್ರಿಸ್‌ ಯುಬ್ಯಾಂಕ್ಸ್‌, ಲರ್ನರ್‌ ಟೀನ್‌, ಝಕಾರಿ ಸ್ವಾಯ್ದ ಮತ್ತು ಮ್ಯಾಥ್ಯೂ ಫೋರ್ಬ್ಸ್‌, ಫ್ರಾನ್ಸ್‌ನ ಅಲೆಕ್ಸಾಂಡರ್ ಮುಲ್ಲರ್ ಮತ್ತು ಆಸ್ಟ್ರೇಲಿಯಾದ ಟ್ರಿಸ್ಟನ್ ಸ್ಕೂಲ್‌ಕೇಟ್‌ ಅವರು ವೈಲ್ಡ್ ಕಾರ್ಡ್ ಪಡೆದ ಇತರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT