ಭಾನುವಾರ, ಏಪ್ರಿಲ್ 11, 2021
27 °C
ಆಟದಮನೆ

PV Web Exclusive: ದಶಕದ ಹೆಮ್ಮೆ ಜೊಕೊವಿಚ್

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ಸರ್ಬಿಯಾದ ನೊವಾಕ್ ಜೊಕೊವಿಚ್ ಬೇಸ್‌ಲೈನ್ ಹೊಡೆತಗಳೆಂದರೆ ಹಬ್ಬ. ಬ್ಯಾಕ್‌ಹ್ಯಾಂಡ್ ಪ್ರತ್ಯುತ್ತರ ಕಬ್ಬ. ತಮಗಿಂತ ಚಿಕ್ಕಪ್ರಾಯದ ರಷ್ಯಾದ ಆಟಗಾರನನ್ನು ಆಸ್ಟ್ರೇಲಿಯಾ ಓಪನ್‌ನಲ್ಲಿ ಮೊನ್ನೆ ಸೋಲಿಸಿ, ಒಂಬತ್ತನೇ ಸಲ ಕಪ್ ಎತ್ತಿಹಿಡಿದರು. ‘ನನಗೆ ಯೋಚಿಸಲು ಈ ಮನುಷ್ಯ ಸಮಯವನ್ನೇ ಕೊಡುವುದಿಲ್ಲವಲ್ಲಪ್ಪ’ ಎಂದು ಆ ರಷ್ಯಾದ ಆಟಗಾರ ಬಿಸಿಯುಸಿರಿನಲ್ಲೇ ಹೇಳಿದ್ದು ಅರ್ಥಪೂರ್ಣ.

 ರೋಜರ್ ಫೆಡರರ್ ಕೆಂಪು ಮೂಗು, ರಫೆಲ್ ನಡಾಲ್ ಭುಜಬಲ ಕ್ಯಾಮೆರಾ ಕಣ್ಣುಗಳನ್ನು ಕೀಲಿಸಿಕೊಂಡಿದ್ದಂಥ ಹೊತ್ತು. ಟೆನಿಸ್‌ನಲ್ಲಿ ಸತತವಾಗಿ 11 ಪ್ರಮುಖ ಟೂರ್ನಿಗಳಲ್ಲಿ ಆ ಇಬ್ಬರನ್ನು ಹೊರತುಪಡಿಸಿ ಬೇರೆ ಯಾರೂ ಗೆಲ್ಲಲು ಆಗಿರಲಿಲ್ಲ. ಆಗ ಸರ್ಬಿಯಾದ ನೊವಾಕ್ ಜೊಕೊವಿಚ್ ಎಂಟ್ರಿ ಕೊಟ್ಟರು. 2008ರಲ್ಲಿ ಆಸ್ಟ್ರೇಲಿಯಾ ಓಪನ್‌ ಚಾಂಪಿಯನ್ ಆಗುವ ಮೂಲಕ ಫೆಡರರ್ ಮೂಗು ಇನ್ನಷ್ಟು ಕೆಂಪಾಗಲು ಕಾರಣರಾದರು. ನಡಾಲ್ ಕಪ್‌ ಅನ್ನು ಹಲ್ಲಿನಿಂದ ಕಡಿದು ಪೋಸ್ ನೀಡುವುದಕ್ಕೆ ತುಸು ಬ್ರೇಕ್ ಹಾಕಿದರು. ಯಾವ ಕಪ್ ಅನ್ನು ಗೆದ್ದು ಟೆನಿಸ್ ದಿಗ್ಗಜರ ಸಾಲಿಗೆ ತಾವೂ ಸೇರುವ ಸೂಚನೆ ನೀಡಿದ್ದರೋ, ಆ ಆಸ್ಟ್ರೇಲಿಯಾ ಟೂರ್ನಿಯಲ್ಲಿ ಒಂಬತ್ತನೇ ಸಲ ಗೆದ್ದು ಜೊಕೊವಿಚ್ ಬೀಗಿದರು. ಎದುರಲ್ಲಿ ಇದ್ದುದು ತಮಗಿಂತ ಒಂಬತ್ತು ವರ್ಷ ಚಿಕ್ಕಪ್ರಾಯದ ಡ್ಯಾನಿಲ್ ಮೆಡ್ವೆಡಿವ್.

ರಷ್ಯಾದ ಮೆಡ್ವೆಡಿವ್ ಲವಲವಿಕೆಯಿಂದ ಟೆನಿಸ್ ಆಡುತ್ತಿರುವ ಹುಡುಗ. ಎಂಥ ಶ್ರೇಷ್ಠರು ಎದುರಾಳಿಯಾದರೂ ಮಾನಸಿಕವಾಗಿ ಕುಗ್ಗದಂತೆ ತಂತ್ರ ಹೆಣೆಯಲು ಹೋಂವರ್ಕ್ ಮಾಡಿಕೊಳ್ಳುವ ಪ್ರತಿಭೆ. ಮೊನ್ನೆ ನೇರ ಸೆಟ್‌ಗಳಿಂದ ಆಸ್ಟ್ರೇಲಿಯಾ ಓಪನ್‌ನಲ್ಲಿ ಸೋತಮೇಲೆ ಅವರು ಜೊಕೊವಿಚ್ ಆಟದ ಕುರಿತು ಆಡಿದ ಮಾತೊಂದು ಗಮನಾರ್ಹ. ‘ನಡಾಲ್ ಒಂದು ಸಲ ನಾನು ಗ್ರ್ಯಾನ್ ಸ್ಲಾಮ್ ಗೆಲ್ಲುವುದನ್ನು ತಪ್ಪಿಸಿದ್ದರು. ಈಗ ಇವರು. ನಡಾಲ್ ಯೋಚಿಸಲು ಅವಕಾಶ ನೀಡುತ್ತಾರೆ. ಹೊಡೆಯುತ್ತಾ ಹೊಡೆಯುತ್ತಾ ನಮ್ಮನ್ನು ಹುಚ್ಚೆಬ್ಬಿಸಿ, ಮುಂದೇನು ಮಾಡಬೇಕು ಎಂದು ಯೋಚಿಸಲು ಪ್ರೇರೇಪಿಸುತ್ತಾರೆ. ಅಂತಹ ಪ್ರತಿತಂತ್ರ ಹೂಡಲು ಸಮಯ ಸಿಗುತ್ತದೆ. ಆದರೆ, ಜೊಕೊವಿಚ್ ಯೋಚಿಸಲು ಸಮಯವನ್ನೇ ಕೊಡುವುದಿಲ್ಲ. ನನಗೆ ಏನು ಮಾಡಬೇಕು ಎನ್ನುವುದು ಗೊತ್ತಾಗುವಷ್ಟರಲ್ಲೇ ಗೆಲುವನ್ನು ಅವರತ್ತ ಸೆಳೆದುಕೊಂಡಿರುತ್ತಾರೆ. ಸರ್ವ್, ರಿಟರ್ನ್ ಹಾಗಿರಲಿ, ಬೇಸ್‌ಲೈನ್ ಹೊಡೆತಗಳಲ್ಲಿ ಚೆಂಡು ಪಡೆಯುವ ತಿರುವು ಅವರ ಚಾಣಾಕ್ಷತನಕ್ಕೆ ಸಾಕ್ಷಿ’ ಎಂದು ಮೆಡ್ವೆಡಿವ್ ಹೇಳಿದ್ದರಲ್ಲಿ ಒಂದಿನಿತೂ ಉತ್ಪ್ರೇಕ್ಷೆ ಇಲ್ಲ.

ಇದುವರೆಗೆ 309 ವಾರಗಳ ಕಾಲ ಜೊಕೊವಿಚ್ ನಂಬರ್ 1 ಸ್ಥಾನದಲ್ಲೇ ಭದ್ರವಾಗಿ ನಿಂತಿದ್ದಾರೆ. ಇನ್ನೊಂದು ತಿಂಗಳು ಅದೇ ಸ್ಥಿತಿಯನ್ನು ಮುಂದುವರಿಸಿದರೆ ದಾಖಲೆ ಅವರದ್ದಾಗಲಿದೆ. 18 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳ ಒಡೆಯನಾದ ಅವರು, ಆರು ಸಲ ವರ್ಷಾಂತ್ಯದ ಹೊತ್ತಿಗೆ ನಂಬರ್ 1 ಆಟಗಾರ ಎಂದೆನಿಸಿಕೊಂಡಿದ್ದಾರೆ. ಒಟ್ಟಾರೆ 82 ಎಟಿಪಿ ಸಿಂಗಲ್ಸ್ ಪ್ರಶಸ್ತಿಗಳನ್ನು ತಮ್ಮ ಹೆಸರಿನೊಟ್ಟಿಗೆ ಬೆಸೆದುಕೊಂಡಿದ್ದಾರೆ. 36 ಮಾಸ್ಟರ್ಸ್ ಇವೆಂಟ್ಸ್‌ನಲ್ಲಿ ಗೆಲುವಿನ ಸವಿಯುಂಡಿರುವ ದಾಖಲೆಯೂ ಅವರದ್ದೇ. ಎಲ್ಲಾ ನಾಲ್ಕು ಗ್ರ್ಯಾನ್ ಸ್ಲಾಮ್‌ಗಳು, ಎಲ್ಲಾ ಮಾಸ್ಟರ್ಸ್ ಇವೆಂಟ್ಸ್‌ನಲ್ಲಿ ವಿಜಯ ಸಾಧಿಸಿ, ಎರಡು ಸಲ ‘ಕೆರಿಯರ್ ಗೋಲ್ಡನ್ ಮಾಸ್ಟರ್ಸ್’ ಎನಿಸಿಕೊಂಡಿರುವ ದಿಗ್ಗಜ.

2011ರಲ್ಲಿ ಮೊದಲ ಸಲ ಅವರು ನಂಬರ್‌ ಒನ್ ಆಟಗಾರ ಎನಿಸಿಕೊಂಡಿದ್ದು. ನಾಲ್ಕು ಗ್ರ್ಯಾನ್ ಸ್ಲಾಮ್‌ಗಳ ಪೈಕಿ ಮೂರನ್ನು ಆಗ ಅವರು ಗೆದ್ದಿದ್ದರು. ಕಳೆದ ಒಂದು ದಶಕದಲ್ಲಿ ಆರು ವರ್ಷ ಅವರು ನಂಬರ್ ಒನ್ ಆಟಗಾರನಾಗಿ, ಮೂರು ವರ್ಷ ನಂಬರ್ 2 ಆಟಗಾರನಾಗಿ ವರ್ಷಾಂತ್ಯಗಳ ಸುಖ ಉಂಡಿದ್ದಾರೆ. ಅರ್ಥಾತ್ ಇಡೀ ದಶಕದಲ್ಲಿ ಅವರದ್ದೇ ಪಾರುಪತ್ಯ.

ಸತತವಾಗಿ 15 ಸಲ ಟೆನಿಸ್‌ ಟೂರ್ನಿಗಳಲ್ಲಿ ಫೈನಲ್ ತಲುಪಿದ ಆಟಗಾರ ಎಂಬ ಹಿರಿಮೆ ಸಂದದ್ದು 2015ರಲ್ಲಿ. 2016ರಲ್ಲಿ ಫ್ರೆಂಚ್ ಓಪನ್ ಗೆದ್ದಮೇಲೆ 1969ರಲ್ಲಿ ರಾಡ್ ಲೆವರ್ ಹೆಸರಲ್ಲಿದ್ದ ಎಲ್ಲಾ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಹಿರಿಮೆಯನ್ನು ಸರಿಗಟ್ಟಿದರು.

ಸರ್ವ್‌ಗಳಿಗೆ ಜವಾಬು ಕೊಡುವುದರಲ್ಲಿ, ರಿಟರ್ನ್ಸ್‌ನಲ್ಲಿ, ಬ್ರೇಕ್‌ ಪಾಯಿಂಟ್‌ಗಳನ್ನು ಹೆಚ್ಚು ಹಣ್ಣಾಗಿಸಿಕೊಳ್ಳುವಲ್ಲಿ ಜೊಕೊವಿಚ್ ಸರಿಸಮ ಸದ್ಯಕ್ಕೆ ಯಾರೂ ಇಲ್ಲ ಎಂದೇ ಟೆನಿಸ್ ಪಂಡಿತರು ವಿಶ್ಲೇಷಿಸುತ್ತಾರೆ. ತಾನು ಪ್ರಮುಖ ಟೂರ್ನಿಗಳಲ್ಲಿ ಗೆಲ್ಲಲು ಪ್ರಾರಂಭಿಸಿದ ಹಂತದಲ್ಲಿ ಫೆಡರರ್ ಹಾಗೂ ನಡಾಲ್ ಹೆಚ್ಚು ಗೆಲುವಿನ ದಾಖಲೆಗಳನ್ನು ಹೊಂದಿದ್ದರು. ಅದನ್ನು ತುಂಡರಿಸಿ, ಅವರನ್ನು ಹಿಂದಿಕ್ಕಿದ ದಿಟ್ಟ ಆಟಗಾರ ಸರ್ಬಿಯಾ ದೇಶಕ್ಕೆ ಟೆನಿಸ್ ನಕಾಶೆಯಲ್ಲಿ ದೊಡ್ಡ ಸ್ಥಾನ ದಕ್ಕಿಸಿಕೊಟ್ಟಿದ್ದು ಇತಿಹಾಸ. 2008ರಲ್ಲಿ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಗ ಗೆದ್ದಾಗಲೇ ತನ್ನ ಭವಿಷ್ಯದ ಮುನ್ನುಡಿಯನ್ನು ಬರೆದಿದ್ದರು. ಆಮೇಲಿನದ್ದೆಲ್ಲಾ ಇತಿಹಾಸ ಸೃಷ್ಟಿಯ ದಶಕ.

ಇದುವರೆಗೆ ಜೊಕೊವಿಚ್ ಆಡಿರುವ ಪಂದ್ಯಗಳ ಪೈಕಿ ಗೆಲುವಿನ ಪ್ರತಿಶತ 87ರಷ್ಟಿದೆ. ಬೇರೆ ಯಾವುದೇ ಪುರುಷ ಆಟಗಾರ ಟೆನಿಸ್ ಸಿಂಗಲ್ಸ್‌ನಲ್ಲಿ ಇಂತಹ ದಾಖಲೆ ಮಾಡಿಲ್ಲ. ಗ್ರ್ಯಾನ್ ಸ್ಲಾಮ್‌ಗಳಲ್ಲಿ 28 ಟೂರ್ನಿಗಳ ಪೈಕಿ 18ರಲ್ಲಿ ಗೆಲುವು ಸಾಧಿಸಿರುವುದು ಇನ್ನೊಂದು ಗರಿಮೆ. ಇನ್ನೆರಡು ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದರೆ ರೋಜರ್ ಫೆಡರರ್ ಹೆಸರಲ್ಲಿನ ದಾಖಲೆಯನ್ನು ಸರಿಗಟ್ಟಲಿರುವ ಸರ್ಬಿಯಾದ ಆಟಗಾರ ಹಾರ್ಡ್‌ಕೋರ್ಟ್‌ನಲ್ಲಿ ಈವರೆಗೆ 12 ಸಲ ಪ್ರಶಸ್ತಿ ತಮ್ಮದಾಗಿಸಿಕೊಂಡು ದಾಖಲೆ ಬರೆದಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾ ಓಪನ್‌ನಲ್ಲಿ ಅವರು ಶೇ 91ರಷ್ಟು ಪಂದ್ಯಗಳಲ್ಲಿ ವಿಜಯ ಸಾಧಿಸಿದ್ದಾರೆ. ವಿವಿಧ ಟೂರ್ನಿಗಳಲ್ಲಿ 52 ಸಲ ಫೈನಲ್ಸ್ ಪ್ರವೇಶಿಸಿದ್ದು, 36 ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 16 ಸಲ ರನ್ನರ್ ಅಪ್ ಆಗಿದ್ದಾರೆ. ಅಲ್ಲಿಗೆ ಅವರ ಗೆಲುವಿನ ಓಟದ ಗಮ್ಮತ್ತು ಎಷ್ಟೆಂದು ಊಹಿಸಬಹುದು.

2010ರಲ್ಲಿ ತಾವು ಸರ್ವ್ ಮಾಡುತ್ತಿದ್ದ ರೀತಿಯನ್ನು ತಿದ್ದಲೆಂದೇ ಟಾಡ್ ಮಾರ್ಟಿನ್ ಅವರನ್ನು ಕೋಚ್ ಆಗಿಸಿಕೊಂಡ ಜೊಕೊವಿಚ್, ಬ್ಯಾಕ್‌ಹ್ಯಾಂಡ್ ಪರಿಣತ ಎಂದೇ ಹೆಸರುವಾಸಿ. ಬೇಸ್‌ಲೈನ್ ಹೊಡೆತಗಳ ಮೂಲಕ ಎದುರಾಳಿಯ ಅಂದಾಜನ್ನೆಲ್ಲ ಚಿಂದಿ ಮಾಡುವ ಅವರ ಅಥ್ಲೆಟಿಸಂ ಅನ್ನು ಹೊಗಳದವರೇ ಇಲ್ಲ. ಸಾಂಪ್ರದಾಯಿಕ ಶೈಲಿಯ ಆಟವನ್ನೇ ಗಟ್ಟಿಯಾಗಿಸಿಕೊಂಡು, ಅದರಲ್ಲೇ ತನ್ನತನದ ರುಜು ಹಾಕುತ್ತಾ ಜೊಕೊವಿಚ್ ಬೆಳೆದಿರುವುದನ್ನು ಅನೇಕ ಟೆನಿಸ್ ದಿಗ್ಗಜರು ಗುರುತಿಸಿದ್ದಾರೆ. 2012ರಲ್ಲಿ ರಾಡ್ ಲೆವರ್ ಅವರನ್ನು ಕಾಣುವ ಸುವರ್ಣಾವಕಾಶ ಜೊಕೊವಿಚ್ ಅವರದ್ದಾಗಿತ್ತು. ‘ನಾನು ಆರಾಧಿಸಿದ ಆಟಗಾರನನ್ನು ಪ್ರತ್ಯಕ್ಷ ನೋಡಿದ್ದು ನನ್ನ ಭಾಗ್ಯ. ಇಷ್ಟು ವರ್ಷ ನಾನು ನೋಡಲೆಂದೇ ತಾವು ಬದುಕಿದ್ದಿರಿ ಎಂದೇ ಭಾವಿಸುವೆ’ ಎಂದು ಆಗ ಸರ್ಬಿಯಾ ಆಟಗಾರ ಭಾವುಕರಾಗಿದ್ದರು.

ಫೆಡರರ್ ಧ್ಯಾನದಂಥ ಆಟ, ನಡಾಲ್ ಭುಜಬಲ ಪರಾಕ್ರಮ ಕಂಡಿರುವ, ಆ್ಯಂಡ್ರೆ ಅಗಾಸ್ಸಿ, ಪೀಟ್ ಸಾಂಪ್ರಾಸ್ ಹೋರಾಟದ ಬನಿಯನ್ನು ಅನುಭವಿಸಿರುವ ಟೆನಿಸ್ ಪ್ರೇಮಿಗಳಿಗೆ ಜೊಕೊವಿಚ್ ಇನ್ನೊಂದು ಮಜಲಿನ ಆಟ ತೋರುತ್ತಿದ್ದಾರೆ. ಟೆನಿಸ್‌ನಲ್ಲಿ ಇಷ್ಟು ಸುದೀರ್ಘ ಕಾಲ ಆಟವಾಡುತ್ತಾ ಗೆಲ್ಲುವ ಪಾದಗಳ ಸಂಖ್ಯೆ ಕಡಿಮೆ. ಫೆಡರರ್ ದಾಖಲೆಯನ್ನು ದಾಟಿ ನಿಲ್ಲುವ ಸಕಲೇಷ್ಟ ಲಕ್ಷಣಗಳನ್ನೂ ಈತ ತೋರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು