ಸೋಮವಾರ, ಜೂನ್ 27, 2022
21 °C
ಪೌಲಾ ಬಡೋಸಾಗೆ ನಿರಾಸೆ

ಫ್ರೆಂಚ್ ಓಪನ್ ಟೆನಿಸ್ ಟೂರ್ನಿ: ಸೆಮಿಫೈನಲ್‌ಗೆ ತಮಾರ ಜಿಡಾನ್ಸೆಕ್‌

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್‌: ಜಿದ್ದಾಜಿದ್ದಿನ ಪೈಪೋಟಿಯಲ್ಲಿ ತಮಾರ ಜಿಡಾನ್ಸೆಕ್ ಅವರು ಸ್ಪೇನ್‌ನ ಪೌಲಾ ಬಡೋಸಾ ಅವರನ್ನು ಮಣಿಸುವ ಮೂಲಕ ಫ್ರೆಂಚ್‌ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ಮಂಗಳವಾರ ನಡೆದ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಶ್ರೇಯಾಂಕರಹಿತ ಆಟಗಾರ್ತಿ 7-5, 4-6, 8-6ರಿಂದ ಜಯಿಸುವುದರೊಂದಿಗೆ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರ ನಾಲ್ಕರ ಘಟ್ಟ ತಲುಪಿದ ಸ್ಲೋವೆನಿಯಾದ ಮೊದಲ ಮಹಿಳೆ ಎನಿಸಿಕೊಂಡರು.

ಈ ಇಬ್ಬರೂ ಆಟಗಾರ್ತಿಯರು ಮೊದಲ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರ ಕ್ವಾರ್ಟರ್‌ಫೈನಲ್ ತಲುಪಿದ್ದರು. ವಿಶ್ವ ಕ್ರಮಾಂಕದಲ್ಲಿ 85ನೇ ಸ್ಥಾನದಲ್ಲಿರುವ ತಮಾರ ಮೊದಲ ಸೆಟ್‌ ಗೆದ್ದುಕೊಂಡು, ಎರಡನೇ ಸೆಟ್‌ನಲ್ಲಿ ಆರಂಭದಲ್ಲೇ 4–2 ಮುನ್ನಡೆಯಲ್ಲಿದ್ದರು. ಆದರೆ ತಿರುಗೇಟು ನೀಡಿದ 35ನೇ ಕ್ರಮಾಂಕದ ಬಡೋಸಾ ಸತತ ಆರು ಗೇಮ್‌ಗಳನ್ನು ಗಳಿಸಿ ಎರಡನೇ ಸೆಟ್‌ ತಮ್ಮದಾಗಿಸಿಕೊಂಡರು.

ಆವೆ ಮಣ್ಣಿನ ಅಂಗಳದಲ್ಲಿ ಸತತ ಒಂಬತ್ತು ಪಂದ್ಯಗಳನ್ನು ಗೆದ್ದಿದ್ದ ಬಡೋಸಾ, ನಿರ್ಣಾಯಕ ಮೂರನೇ ಸೆಟ್‌ನಲ್ಲಿ 2–0 ಮುನ್ನಡೆ ಸಾಧಿಸಿದಾಗ ಪ್ರಾಬಲ್ಯ ಸಾಧಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ 6–6 ಸಮಬಲ ಸಾಧಿಸುವಲ್ಲಿ ಯಶಸ್ವಿಯಾದ ತಮಾರ, ಮೂರು ಬ್ರೇಕ್ ಪಾಯಿಂಟ್‌ ಉಳಿಸಿಕೊಂಡರು. ಕೊನೆಯಲ್ಲಿ ಎರಡು ‍ಗೇಮ್ ಗೆದ್ದುಕೊಂಡ ಅವರು ಗೆಲುವಿನ ಸಂಭ್ರಮದಲ್ಲಿ ಮಿಂದೆದ್ದರು. ಬಡೋಸಾ ಎರಡು ಲೋಪಗಳನ್ನು ಎಸಗಿದ್ದೂ ಸ್ಲೋವೆನಿಯಾ ಆಟಗಾರ್ತಿಗೆ ನೆರವಾಯಿತು.

ತಮಾರ ಅವರು ನಾಲ್ಕರ ಘಟ್ಟದ ಪಂದ್ಯದಲ್ಲಿ ಅನುಭವಿ ಆಟಗಾರ್ತಿ ಅನಸ್ತೇಸಿಯಾ ಪಾವ್ಲಿಚೆಂಕೊವಾ ಹಾಗೂ ಕಜಕಸ್ತಾನದ ಎಲೆನಾ ರಿಬಾಕಿನಾ ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

ಪುರುಷರ ಡಬಲ್ಸ್ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಫ್ರಾನ್ಸ್‌ನ ಪಿಯರ್ ಹ್ಯೂಜಸ್‌ ಹರ್ಬರ್ಟ್‌–ನಿಕೊಲಾಸ್ ಮಹುಟ್ ಜೋಡಿಯು 7-6, 6-1ರಿಂದ ಬೋಸ್ನಿಯಾದ ಟಾಮಿಸ್ಲಾವ್ ಬ್ರಕಿಕ್‌–ಸರ್ಬಿಯಾದ ನಿಕೊಲಾ ಕ್ಯಾಸಿಕ್ ಜೋಡಿಯನ್ನು ಮಣಿಸಿತು. ಇನ್ನೊಂದು ಪಂದ್ಯದಲ್ಲಿ ಕೋಲಂಬಿಯಾದ ಜುವಾನ್ ಸೆಬಾಸ್ಟಿಯನ್‌ ಕ್ಯಾಬಲ್–ರಾಬರ್ಟ್‌ ಫರಾಹ್ ಜೋಡಿಯು 6-2, 6-7, 7-5ರಿಂದ ಜರ್ಮನಿಯ ಕೆವಿನ್ ಕ್ರಾವಿಟ್ಜ್‌– ರುಮೇನಿಯಾದ ಹೊರಿಯಾ ಟೆಕಾವು ಅವರನ್ನು ಸೋಲಿಸಿ ಸೆಮಿಫೈನಲ್ ತಲುಪಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು