ಗುರುವಾರ , ಜೂನ್ 30, 2022
21 °C

ಸೌಟು ಹಿಡಿದ ಟೆನಿಸ್‌ ಆಟಗಾರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈದಾನದಲ್ಲಿ ಬೆವರಿಳಿಸುವುದಷ್ಟೆ ಅಲ್ಲ, ಈ ಕ್ರೀಡಾಪಟುಗಳು ಸೌಟು ಹಿಡಿದು ತರಹೇವಾರಿ ಖಾದ್ಯ ತಯಾರಿಸಿಯೂ ಕೊಡಬಲ್ಲರು. 

ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯ ಆಟಗಾರರು ಇಂಥದ್ದೊಂದು ವಿನೂತನ ಪ್ರಯೋಗಕ್ಕೆ ಕೈ ಹಾಕಿದರು. 

200ರ ಒಳಗಿನ ಶ್ರೇಯಾಂಕದ 24 ದೇಶಗಳ ಆಟಗಾರರು 2020ರ ಮೆಗಾ ಪಂದ್ಯದಲ್ಲಿ ಭಾಗವಹಿಸಲು ಬಂದಿದ್ದರು. ಅವರಲ್ಲಿ ಕೆಲವರು ಬಿಡುವಿನ ವೇಳೆಯಲ್ಲಿ ನಗರ ಸುತ್ತಾಟ ನಡೆಸಿದರು.

ದೇಸಿ ಭೋಜನದತ್ತ ರುಚಿ ಮೊಗ್ಗುಗಳನ್ನು ಅರಳಿಸಿಕೊಂಡ ಈ ಆಟಗಾರರು  ಭಾರತೀಯ ತಿನಿಸುಗಳನ್ನು ಸವಿಯುವ, ಅದರ ತಯಾರಿಕೆಯ ಸೂತ್ರ ಅರಿಯುವ ಮನಸ್ಸು ಮಾಡಿದರು.

 ಈ ಸಂದರ್ಭದಲ್ಲಿ  ರ್‍ಯಾಡಿಸನ್‌ ಬ್ಲೂ ಏಟ್ರಿಯಾ  ಹೋಟೆಲ್‌ಗೆ ಭೇಟಿ ನೀಡಿದರು. ಉಕ್ರೇನಿನ ಡೇನಿ ಮಾಲ್ಕನೋವ್‌, ತೈವಾನಿನ ಶ ಚೆಂಗ್‌–ಪೆಂಗ್‌, ಭಾರತದ ಆಟಗಾರ ವಿಷ್ಣುವರ್ಧನ್‌ ತಮ್ಮಿಷ್ಟದ ಅಡುಗೆ ಮಾಡಲು ಮುಂದಾದರು. ರಾಗಿ ಉಂಡೆ, ಸಾಲ್ಮನ್‌ ಮೀನಿನ ಖಾದ್ಯವನ್ನು ತಯಾರಿಸಿದರು. 

ಚೆಂಗ್‌–ಪೆಂಗ್‌, ಭಾರತೀಯ ತಿನಿಸುಗಳ ಹದಪಾಕವರಿತು, ಅದನ್ನು ತೈವಾನಿನ ಖಾದ್ಯದೊಂದಿಗೆ ಬೆರೆಸಬಹುದಾ ಎಂಬ ಬಗ್ಗೆ ಯೋಚನೆ ನಡೆಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಭಾರತೀಯ ಸಾಂಬಾರು ಪದಾರ್ಥಗಳು ಅದು  ನೀಡುವ ರುಚಿಯ ಬಗ್ಗೆ ಮೊದಲಿನಿಂದಲೂ ತಿಳಿದುಕೊಂಡಿದ್ದೇನೆ. ಈ ಬಗೆಯ ಖಾರವೆಂದರೆ ನನಗಿಷ್ಟ’ ಎಂದರು. 

ಡೇನಿ, ಇಟಾಲಿಯನ್‌ ಪಾಸ್ತಾಗಳನ್ನು ಬೇಯಿಸಿದರು. ‘ತನ್ನ ಹೆಂಡತಿ ಮತ್ತು ಮಕ್ಕಳಿಗಾಗಿ ಆಗಾಗ ಅಡುಗೆ ಮನೆ ಹೊಕ್ಕು ವಿವಿಧ ಭಕ್ಷ್ಯಗಳನ್ನು ತಯಾರಿಸುತ್ತೇನೆ. ಕ್ರೀಡಾಪಟುವಾಗಿರುವುದರಿಂದ ಸಮಯದ ಅಭಾವ ಹೆಚ್ಚಿರುತ್ತದೆ’ ಎಂದು ತಮ್ಮ ಅಡುಗೆ ಪ್ರೀತಿಯನ್ನು ಹೇಳಿಕೊಂಡರು. 

ತೈವಾನಿನ ತಿನಿಸು ತಯಾರಿಸುತ್ತಿದ್ದ ಚೆಂಗ್‌–ಪೆಂಗ್‌ ಬಿಸಿಯಾದ ತವಾವನ್ನು ಕೆಳಗಿಳಿಸುವ ಶೈಲಿಯನ್ನು ಮೆಚ್ಚಿದ ವಿಷ್ಣುವರ್ಧನ, ‘ಚೆಂಗ್‌ ಪೆಂಗ್‌ಗೆ ಅಡುಗೆಯೆಂಬ ಕಲೆಯಲ್ಲಿ ವಿಪರೀತ ಆಸಕ್ತಿಯಿದ್ದು, ಉತ್ತಮ ಭವಿಷ್ಯವೂ ಇದೆ’ ಎಂದು ಬಣ್ಣಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು