ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯನ್‌ ಒಪನ್‌: ಮೂರನೇ ಸುತ್ತಿಗೆ ನಡೆದ ನಡಾಲ್

ತಲೆನೋವು ತಂದ ಮಳೆ, ರಾಡಿ; ನಿಕ್‌ಗೆ ಗೆಲುವು
Last Updated 23 ಜನವರಿ 2020, 20:00 IST
ಅಕ್ಷರ ಗಾತ್ರ

ಮೆಲ್ಬರ್ನ್‌: ವಿಶ್ವದ ಅಗ್ರ ಕ್ರಮಾಂಕದ ಆಟಗಾರ ರಫೇಲ್‌ ನಡಾಲ್‌, ಆಸ್ಟ್ರೇಲಿಯಾದ ನಿಕ್‌ ಕಿರ್ಗಿಯೋಸ್‌ ಅವರು ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಮೂರನೇ ಸುತ್ತಿಗೆ ದಾಪುಗಾಲಿಟ್ಟರು. ಗುರುವಾರ ಆಕಸ್ಮಿಕ ಎಂಬಂತೆ ‘ಕಲುಷಿತ ಮಳೆ’ಯಾಗಿ ಅಂಕಣಗಳು ರಾಡಿಯಾದವು. ಇದು ಸಂಘಟಕರಿಗೆ ಹೊಸ ತಲೆನೋವು ತಂದೊಡ್ಡಿತು.

ಸ್ವಚ್ಛತಾ ಕಾರ್ಯಾಚರಣೆಯಿಂದಾಗಿ ಪಂದ್ಯಗಳು ವಿಳಂಬವಾಗಿ ಆರಂಭವಾದವು. ಆತಿಥೇಯ ದೇಶದ ಕಿರ್ಗಿಯೋಸ್‌ ನಾಲ್ಕು ಸೆಟ್‌ಗಳ ಹೋರಾಟದಲ್ಲಿ ಫ್ರಾನ್ಸ್‌ನ ಜಿಲ್ಲಿಸ್‌ ಸಿಮೊನ್‌ ಅವರನ್ನು ಮಣಿಸಿದರೆ, ವಿಂಬಲ್ಡನ್‌ ಚಾಂಪಿಯನ್‌ ಸಿಮೊನಾ ಹಲೆಪ್‌ ಮಹಿಳಾ ಸಿಂಗಲ್ಸ್‌ನಲ್ಲಿ ಅಧಿಕಾರಯುತ ಆಟ ಪ್ರದರ್ಶಿಸಿ ಬ್ರಿಟನ್‌ನ ಹ್ಯಾರಿಯೆಟ್‌ ಡಾರ್ಟ್‌ ಅವರನ್ನು ಸದೆಬಡಿದರು.‌

ನಡಾಲ್‌ 6–3, 7–6 (7–4), 6–1 ರಿಂದ ‌ಅರ್ಜೆಂಟೀನಾದ ಫೆಡರಿಕೊ ಡೆಲ್ಬೊನಿಸ್‌ ಅವರನ್ನು ಮಣಿಸಿದರು. ಆಟದ ಮಧ್ಯೆ ರ‍್ಯಾಲಿಯೊಂದರ ಸಂದರ್ಭದಲ್ಲಿ ಚೆಂಡಿನ ಏಟು ತಿಂದ ಬಾಲ್‌ಗರ್ಲ್‌ಗೆ ಸಾಂತ್ವನಗೊಳಿಸಿದ್ದು,ಪ್ರೇಕ್ಷಕರ ಗಮನ ಸೆಳೆಯಿತು.

ಕಾಳ್ಗಿಚ್ಚಿನ ಸಂತ್ರಸ್ತರಿಗೆ ನಿಧಿ ಯೆತ್ತಲು ಮುತ್ತುವರ್ಜಿ ತೋರಿಸಿ ತವರಿನ ಪ್ರೇಕ್ಷಕರ ಕಣ್ಮಣಿಯಾದ ಕಿರ್ಗಿಯೋಸ್‌, ಆಟದ ಮಧ್ಯೆ ಹಿನ್ನಡೆ ಕಂಡರೂ ಅಂತಿಮವಾಗಿ ಗೆಲ್ಲುವಲ್ಲಿ ಯಶಸ್ವಿಯಾದರು. ಕಿರ್ಗಿಯೋಸ್‌ 6–2, 6–4, 4–6, 7–5 ರಿಂದ ಸಿಮೊನ್‌ ಅವರನ್ನು ಹಿಮ್ಮೆಟ್ಟಿಸಿದರು.

ಕಿರ್ಗಿಯೋಸ್‌, ನಡಾಲ್‌ ಮೂರನೇ ಸುತ್ತಿನ ಪಂದ್ಯಗಳನ್ನು ಗೆದ್ದರೆ, ಮುಂದಿನ ಸುತ್ತಿನಲ್ಲಿ ಪರಸ್ಪರ ಮುಖಾಮುಖಿ ಆಗಲಿದ್ದಾರೆ. ಟೂರ್ನಿಗೆ ಪೂರ್ವಭಾವಿಯಾಗಿ, ಅರ್ಹತಾ ಸುತ್ತಿನ ವೇಳೆ ಕಾಳ್ಗಿಚ್ಚಿನ ಧೂಮ, ಭಾರಿ ಮಳೆ, ಗಾಳಿ ಕಾಣಿಸಿಕೊಂಡಿತ್ತು. ಆದರೆ ಕೊಳೆ ದೂಳಿನಿಂದ ಕೂಡಿದ ಮಳೆ ಹೊಸ ಸಮಸ್ಯೆ ತಂದೊಡ್ಡಿತು.

ಕಿರ್ಗಿಯೊಸ್‌ ವಿರುದ್ಧ ಶೀತಲ ಸಮರದಲ್ಲಿರುವ ಇನ್ನೊಬ್ಬ ಆಟಗಾರ, ಏಳನೇ ಶ್ರೇಯಾಂಕದ ಅಲೆಕ್ಸಾಂಡರ್‌ ಜ್ವರೇವ್‌ (ಜರ್ಮನಿ) 7–6 (7–5), 6–4, 7–5 ರಿಂದ ಇಗೊರ್‌ ಗೆರಸಿಮೊವ್‌ (ಬೆಲಾರಸ್‌) ಅವರನ್ನು ಮಣಿಸಿದರು. 22 ವರ್ಷದ ಜ್ವರೇವ್‌,ಎಟಿಪಿ ಕಪ್‌ನಲ್ಲಿ ಒಂದೂ ಪಂದ್ಯ ಗೆಲ್ಲಲಾಗದ ಕಾರಣ ದಿನಕ್ಕೆ ಏಳು ತಾಸುಗಳವರೆಗೆ ಅಭ್ಯಾಸ ನಡೆಸುತ್ತಿದ್ದು, ಅದು ಫಲನೀಡುವಂತೆ ಕಂಡಿತು.

ಆತಂಕಗೊಂಡ ಥೀಮ್‌: ಆದರೆ ಗುರುವಾರ ಮೂರನೇ ಸುತ್ತನ್ನು ತಲುಪುವ ಮೊದಲು ಹೆಚ್ಚು ಹೋರಾಟ ಎದುರಿಸಿದವರು ಆಸ್ಟ್ರೇಲಿಯಾದ ಡೊಮಿನಿಕ್‌ ಥೀಮ್‌. ಅವರು 6–2, 5–7, 6–7 (5–7), 6–1, 6–2 ರಿಂದ ವಿಶ್ವ 140ನೇ ಕ್ರಮಾಂಕದ ಅಲೆಕ್ಸ್‌ ಬೋಲ್ಟ್‌ ಅವರನ್ನು ಹಿಮ್ಮೆಟ್ಟಿಸಲು ಎಲ್ಲ ಶ್ರಮ ಹಾಕಬೇಕಾಯಿತು.ಹಲೆಪ್‌ ಮಹಿಳೆಯರ ಸಿಂಗಲ್ಸ್‌ನಲ್ಲಿ 6–2, 6–4 ರಿಂದ ಡಾರ್ಟ್‌ ಅವರನ್ನು ಸದೆಬಡಿದರೆ, ಬೆಲಿಂಡಾ ಬೆನ್ಸಿಕ್‌ ಎರಡನೇ ಸುತ್ತಿನಲ್ಲಿ ಮಾಜಿ ಫ್ರೆಂಚ್‌ ಓಪನ್‌ ಚಾಂಪಿಯನ್‌ ಯೆಲೆನಾ ಒಸ್ತಪೆಂಕೊ ಅವರನ್ನು ಸೋಲಿಸಿದರು.ಕಳೆದ ವರ್ಷ ಬಿಡುವಿನ ಸಮ ಯದಲ್ಲಿ ಕಿಲಿಮಾಂಜರೊ ಪರ್ವತ ಏರಿದ್ದ ಗಾರ್ಬೈನ್‌ ಮುಗುರುಜಾ ಲಯ ಕಂಡುಕೊಳ್ಳುವ ಹಾದಿಯಲ್ಲಿ 6–3, 3–6, 6–3 ರಿಂದ ಅಜ್ಲಾ ಟಾಮ್‌ಲ್ಯಾನೊವಿಚ್ ಅವರನ್ನು ಮಣಿಸಿದರು. ಎರಡನೇ ಶ್ರೇಯಾಂಕದ ಕರೋಲಿನಾ ಪ್ಲಿಸ್ಕೋವಾ (ಜೆಕ್‌ ರಿಪಬ್ಲಿಕ್‌) 6–3, 6–3 ರಿಂದ ಲಾರಾ ಸೀಗ್ಮಂಡ್‌ (ಜರ್ಮನಿ) ವಿರುದ್ಧ ಜಯಗಳಿಸಿದರು.

ಬಾಲ್‌ಗರ್ಲ್‌ ಸಂತೈಸಿದ ನಡಾಲ್‌
ಬಾಲ್‌ ಗರ್ಲ್‌ಗೆ ಸಾಂತ್ವನ ಹೇಳಿ ಕೆನ್ನೆಗೆ ಮುತ್ತು ಕೊಟ್ಟ ನಡಾಲ್‌ ಕಾಳಜಿಗೆ ಟೆನಿಸ್‌ ಪ್ರಿಯರ ಹೃದಯ ಮಿಡಿಯಿತು. ಫೆಡರಿಕೊ ಡೆಲ್ಬೊನಿಸ್‌ ವಿರುದ್ಧದ ಎರಡನೇ ಸುತ್ತಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ.

ಸ್ಪೇನ್‌ ಆಟಗಾರನ ರ‍್ಯಾಕೆಟ್‌ನಿಂದ ಸಿಡಿದ ಹೊಡೆತವೊಂದು ದುರದೃಷ್ಟ ವಶಾತ್‌ ನೇರವಾಗಿ ಚೆಂಡು ಆಯುವ ಹುಡುಗಿಗೆ (ಬಾಲ್‌ ಗರ್ಲ್‌) ಬಡಿದಿದೆ. ‘ಅವಳಿಗೆ ಅದು ಒಳ್ಳೆಯ ಗಳಿಗೆಯಾಗಿರಲಿಲ್ಲ! ನನಗೆ ದಿಗಿಲಾಯಿತು. ಚೆಂಡು ನೇರವಾಗಿ ಅವಳತ್ತ ಧಾವಿಸಿತು’ ಎಂದು ನಡಾಲ್‌ ಹೇಳಿದರು. ಸಾಂತ್ವನದ ಜೊತೆ ‘ಹೆಡ್‌ಬ್ಯಾಂಡ್‌’ಅನ್ನೂ ಸ್ಮರಣಿಕೆಯಾಗಿ ಬಾಲಕಿಗೆ ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT