ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯರಾ ವ್ಯಾಲಿ ಕ್ಲಾಸಿಕ್ ಟೆನಿಸ್‌ ಟೂರ್ನಿ: ವೀನಸ್, ಒಸ್ತಪೆಂಕೊಗೆ ಗೆಲುವಿನ ಆರಂಭ

Last Updated 31 ಜನವರಿ 2021, 10:24 IST
ಅಕ್ಷರ ಗಾತ್ರ

ಮೆಲ್ಬರ್ನ್‌: ವಯಸ್ಸಿನ ಹಂಗು ತೊರೆದು ಎದುರಾಳಿಗೆ ಕಠಿಣ ಸವಾಲೊಡ್ಡಿದ ಅಮೆರಿಕದ ವೀನಸ್ ವಿಲಿಯಮ್ಸ್ ಈ ವರ್ಷದ ಮೊದಲ ಪಂದ್ಯದಲ್ಲಿ ಶುಭಾರಂಭ ಮಾಡಿದ್ದಾರೆ. ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಗೆ ಒಂದು ವಾರ ಬಾಕಿ ಇರುವಾಗ ಇಲ್ಲಿ ಭಾನುವಾರ ನಡೆದ ಯರಾ ವ್ಯಾಲಿ ಕ್ಲಾಸಿಕ್ ಟೂರ್ನಿಯ ಪಂದ್ಯದಲ್ಲಿ ಅವರು ಅರಾಂಕ್ಸ ರೂಸ್ ವಿರುದ್ಧ 6–1, 6–3ರಲ್ಲಿ ಜಯ ಗಳಿಸಿದರು.

ಭಾನುವಾರ ನಡೆದ ಇತರ ಟೂರ್ನಿಗಳಲ್ಲಿ ಲ್ಯಾಟ್ವಿಯಾದ ಜೆಲೆನಾ ಓಸ್ತಪೆಂಕೊ ಮತ್ತು ಫ್ರಾನ್ಸ್‌ನ ಕರೊಲಿನಾ ಗಾರ್ಸಿಯಾ ಕೂಡ ವರ್ಷದ ಮೊದಲ ಗೆಲುವು ಸಾಧಿಸಿದರು.

14 ದಿನ ಕ್ವಾರಂಟೈನ್‌ನಲ್ಲಿ ಕಳೆದು ಬಂದಿದ್ದ 40 ವರ್ಷದ ವೀನಸ್ ಅವರು ನೆದರ್ಲೆಂಡ್ ಆಟಗಾರ್ತಿಯ ಎದುರು ಆರಂಭದಲ್ಲಿ ಕೊಂಚ ಹಿನ್ನಡೆ ಅನುಭವಿಸಿದರು. ಆದರೆ ಆಟಕ್ಕೆ ಕುದುರಿಕೊಂಡ ನಂತರ ಸುಲಭವಾಗಿ ಪಾಯಿಂಟ್‌ಗಳನ್ನು ಕಲೆ ಹಾಕಿ ಗೆಲುವು ಸಾಧಿಸಿದರು. ಮೆಲ್ಬರ್ನ್ ಪಾರ್ಕ್‌ನಲ್ಲಿ ನಡೆದ ಈ ಪಂದ್ಯ 65 ನಿಮಿಷಗಳಲ್ಲಿ ಮುಕ್ತಾಯಗೊಂಡಿತು.

ಫ್ರೆಂಚ್ ಓಪನ್ ಟೂರ್ನಿಯ 2017ರ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿರುವ ಜೆಲೆನಾ ಓಸ್ತಪೆಂಕೊ ಗಿಪ್ಸ್ ಲ್ಯಾಂಡ್ ಟ್ರೋಫಿಯ ಪಂದ್ಯದಲ್ಲಿ 4–6, 6–3, 6–1ರಲ್ಲಿ ಸಾರಾ ಎರಾನಿ ಅವರನ್ನು ಮಣಿಸಿದರು. ವಿಶ್ವ ಕ್ರಮಾಂಕದಲ್ಲಿ ಈ ಹಿಂದೆ ನಾಲ್ಕನೇ ಸ್ಥಾನದಲ್ಲಿದ್ದ ಕರೊಲಿನಾ ಗಾರ್ಸಿಯಾ 6–3, 6–4ರಲ್ಲಿ ಆಸ್ಟ್ರೇಲಿಯಾದ ಅರಿನಾ ರೊಡಿಯೊನೊವಾ ವಿರುದ್ಧ ಜಯ ಗಳಿಸಿದರು. ಅರಿನಾ, ವೈಲ್ಡ್ ಕಾರ್ಡ್ ಮೂಲಕ ಟೂರ್ನಿಗೆ ಪ್ರವೇಶ ಪಡೆದಿದ್ದರು.

ಡ್ಯಾನಿಯೆಲಿ ಕೊಲಿನ್ಸ್ 75 ನಿಮಿಷಗಳಲ್ಲಿ 6–3, 6–3ರಲ್ಲಿ ಬೆಲ್ಜಿಯಂನ ಸಲೀನ್ ಬೊನವೆಂಚರ್ ವಿರುದ್ಧ ಗೆಲುವು ಸಾಧಿಸಿದರು. ಅಮೆರಿಕದ ಶೆಲ್ಲಿ ರೋಜರ್ಸ್ 6–2, 7–5ರಲ್ಲಿ ಫಿಯೊನಾ ಫೆರೊ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT