ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ನಾಲ್ಕನೇ ಸುತ್ತಿಗೆ ಕೊಕೊ, ಜೊಕೊ

ಯುವ ಪಡೆಯ ಹುಮ್ಮಸ್ಸಿಗೆ ತಲೆಬಾಗಿದ ಅನುಭವಿಗಳು
Last Updated 24 ಜನವರಿ 2020, 19:35 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ ಅನುಭವಿ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಅನಿರೀಕ್ಷಿತ ಸೋಲು ಕಂಡರೆ, 15ರ ಬಾಲಕಿ ಕೊಕೊ ಗಫ್‌ ಅಮೋಘ ಯಶಸ್ಸಿನ ಓಟ ಮುಂದುವರಿಸಿದರು. ಆಸ್ಟ್ರೇಲಿಯಾ ಓಪನ್‌ ಮಹಿಳೆಯರ ಸಿಂಗಲ್ಸ್‌ನಲ್ಲಿ ಶುಕ್ರವಾರ ಹೊಸಬರ ಹುಮ್ಮಸ್ಸಿನೆದುರು ಹಳಬರು ಪೆಚ್ಚಾದರು.

24ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡು ಸಾರ್ವಕಾಲಿಕ ದಾಖಲೆ ಸರಿಗಟ್ಟುವ ಸೆರೆನಾ ಪ್ರಯತ್ನ ಕೈಗೂಡಲಿಲ್ಲ. ಅವರ ಹಾದಿಗೆ ತಡೆಯಾದವರು ಚೀನಾದ ಆಟಗಾರ್ತಿ ವಾಂಗ್‌ ಕ್ವಿಯಾಂಗ್‌. ಅವರು 6–4, 6–7 (2–7), 7–5 ರಿಂದ ಸೆರೆನಾ ಅವರನ್ನು ಸೋಲಿಸಿದರು.

15 ವರ್ಷದ ಕೊಕೊ ಗಫ್‌ ಅವರಿಗೆ ಹಾಲಿ ಚಾಂಪಿಯನ್‌, 22 ವರ್ಷದ ನವೋಮಿ ಒಸಾಕಾ (ಜಪಾನ್‌) ಅವ ರನ್ನು ಸದೆಬಡಿಯಲು 67 ನಿಮಿಷ ಸಾಕಾ ಯಿತು. ಮೊದಲ ಸುತ್ತಿನಲ್ಲಿ ವೀನಸ್‌ ವಿಲಿಯಮ್ಸ್‌ ಅವರನ್ನು ಹೊರದೂಡಿದ್ದ ಕೊಕೊ ಈಗ ನಾಲ್ಕನೇ ಸುತ್ತಿಗೆ ಮುನ್ನಡೆದಿದ್ದಾರೆ.

‘ಓ ದೇವರೇ’ ಎಂದು ಉದ್ಗರಿಸಿದ ಗಫ್‌ ‘ಎರಡು ವರ್ಷಗಳ ಹಿಂದೆ ಜೂನಿ ಯರ್‌ ವಿಭಾಗದಲ್ಲಿ ಮೊದಲ ಸುತ್ತಿನಲ್ಲೇ ಸೋತಿದ್ದೆ. ಈಗ ಇಲ್ಲಿವರೆಗೆ ಬಂದಿದ್ದೇನೆ ಎಂದರೆ ನಂಬಲು ಕಷ್ಟ’ ಎಂದು ಹೇಳಿದರು.

ಸೆರೆನಾ ವಿಲಿಯಮ್ಸ್‌ ವಯಸ್ಸು 38. ಕೊಕೊಗಿಂತ 23 ವರ್ಷ ಹಿರಿಯರು. ಈಗ ಇಬ್ಬರು ಆಟಗಾರ್ತಿಯರು ವೃತ್ತಿ ಬದುಕಿನ ವಿರುದ್ಧ ದಿಕ್ಕಿನಲ್ಲಿದ್ದಾರೆ.

ವಿಲಿಯಮ್ಸ್‌ ಸೋದರಿಯರ ಆಪ್ತ ಸ್ನೇಹಿತೆ ಕರೋಲಿನ್‌ ವೋಜ್ನಿಯಾಕಿ ಇದಕ್ಕೆ ಮೊದಲು ಟ್ಯುನೀಷಿಯಾದ ಒನ್ಸ್‌ ಜೇಬಿಯುರ್‌ ಎದುರು ಸೋಲಿನೊಂದಿಗೆ ವಿದಾಯ ಹೇಳಿದ್ದರು. 2018ರಲ್ಲಿ ಕರೋಲಿನ್‌ ಇಲ್ಲಿ ವಿಜೇತರಾಗಿದ್ದರು.

ತಾಯಿಯಾದ ನಂತರ ಸೆರೆನಾ ಎಂಟನೇ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಬರಿಗೈಯಲ್ಲಿ ಮರಳುವಂತಾಗಿದೆ. ಆದರೆ ಅಮೆರಿಕದ ಆಟಗಾರ್ತಿ, 47 ವರ್ಷ ಹಿಂದೆ ಮಾರ್ಗರೇಟ್‌ ಕೋರ್ಟ್‌ ಸ್ಥಾಪಿಸಿದ್ದ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ದಾಖಲೆಯನ್ನು ಸರಿಗಟ್ಟುವ ಆಸೆಯನ್ನು ಇನ್ನೂ ಕೈಬಿಟ್ಟಿಲ್ಲ.

‘ಈಗಲೂ ನನಗೆ (ದಾಖಲೆ ಸರಿಗಟ್ಟುವ) ನಂಬಿಕೆಯಿದೆ. ಇಲ್ಲದಿದ್ದರೆ ನಾನು ಆಡುತ್ತಿರಲಿಲ್ಲ’ ಎಂದು ಸೆರೆನಾ ಹೇಳಿದರು.ವಿಲಿಯಮ್ಸ್‌ ಸೋದರಿಯರ ನಿರ್ಗಮನದಿಂದ, ವಿಶ್ವದ ಅಗ್ರಮಾನ್ಯ ಆಟಗಾರ್ತಿ ಆ್ಯಷ್ಲೆ ಬಾರ್ಟಿ ಅವರ ಪ್ರಶಸ್ತಿಯ ಹಾದಿ ಒಂದಿಷ್ಟು ಸುಗಮ ವಾಗಿದೆ. ಸೆರೆನಾ ಸೆಮಿಫೈನಲ್‌ವರೆಗೆ ತಲುಪಿದ್ದಲ್ಲಿ ಅವರಿಗೆ ಬಾರ್ಟಿ ಎದುರಾಗುತ್ತಿದ್ದರು. 1978ರ ನಂತರ ಇಲ್ಲಿ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾದ ಮೊದಲ ಆಟಗಾರ್ತಿ ಎನಿಸಲು ಹೊರಟಿರುವ 23 ವರ್ಷದ ಬಾರ್ಟಿ 6–2, 6–2 ರಿಂದ ಎಲೆನಾ ರೈಬಕಿನಾ (ಕಜಕಸ್ತಾನ) ಅವರನ್ನು ಹಿಮ್ಮೆಟ್ಟಿಸಿದರು.

ಜೊಕೊವಿಚ್‌ ಮುನ್ನಡೆ: ಪುರುಷರ ಸಿಂಗಲ್ಸ್‌ನಲ್ಲಿ ಎರಡನೇ ಕ್ರಮಾಂಕದ ನೊವಾಕ್‌ ಜೊಕೊವಿಚ್‌ 6–3, 6–2, 6–2 ರಿಂದ ಜಪಾನ್‌ನ ಯೊಶಿಹಿಟೊ ನಿಶಿಯೊಕಾ ಅವರನ್ನು ಬಗ್ಗುಬಡಿದು ಪ್ರೀ ಕ್ವಾರ್ಟರ್‌ಫೈನಲ್‌ಗೆ ದಾಪುಗಾಲಿಟ್ಟರು.

ಅಮೆರಿಕ ಓಪನ್‌ನ ಮಾಜಿ ಚಾಂಪಿಯನ್‌ ಮರಿನ್ ಸಿಲಿಕ್‌, ಐದು ಸೆಟ್‌ಗಳ ಹೋರಾಟದಲ್ಲಿ 9ನೇ ಶ್ರೇಯಾಂಕದ ರಾಬರ್ಟೊ ಬಾಟಿಸ್ಟಾ ಅಗುಟ್‌ (ಸ್ಪೇನ್‌) ಅವರನ್ನು 6–7, 6–4, 6–0, 5–7, 6–3 ರಿಂದಮಣಿಸಿದರೆ, ಅಮೆರಿಕದ ಟೆನ್ನಿಸ್‌ ಸಾಂಡ್‌ಗ್ರೆನ್‌, ಸ್ವದೇಶದ ಸ್ಯಾಮ್‌ ಕ್ವೆರಿ ಅವರನ್ನು ನೇರ ಸೆಟ್‌ಗಳಲ್ಲಿ ಪರಾಭವಗೊಳಿಸಿದರು.

ಫೆಡರರ್‌ಗೆ ‘ಶತಕ’ ಸಂಭ್ರಮ
ಐದು ಸೆಟ್‌ಗಳ ಮ್ಯಾರಥಾನ್ ಹೋರಾಟದಲ್ಲಿ ಸ್ಥಳೀಯ ಆಟಗಾರನ ಸವಾಲು ಮೆಟ್ಟಿನಿಂತ ಸ್ವಿಟ್ಜರ್ಲೆಂಡ್‌ನ ಅನುಭವಿ ರೋಜರ್‌ ಫೆಡರರ್‌, ಆಸ್ಟ್ರೇಲಿಯಾ ಓ‍ಪನ್‌ನಲ್ಲಿ ‘ಶತಕ’ದ ಸಂಭ್ರಮ ಆಚರಿಸಿದರು. ಅವರು ಪುರುಷರ ಸಿಂಗಲ್ಸ್‌ನಲ್ಲಿ ಜಯಿಸಿದ 100ನೇ ಪಂದ್ಯ ಇದಾಗಿದೆ. ಇದ ರೊಂದಿಗೆ ರೋಜರ್‌, ಹದಿ ನಾರರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ. ರಾಡ್‌ ಲೇವರ್‌ ಅರೇನಾದಲ್ಲಿ 4–6, 7–6 (7–2), 6–4, 4–6, 7–6 (8–6) ರಿಂದ 47ನೇ ಕ್ರಮಾಂಕದ ಜಾನ್‌ ಮಿಲ್ಮನ್‌ ಅವರನ್ನು ಸೋಲಿಸಿದರು.

ಸಿಸಿಪಸ್‌ಗೆ ಸೋಲು: ಕೆನಡಾದ ಮಿಲೊಸ್‌ ರಾನಿಕ್‌ ಪುರುಷರ ಸಿಂಗಲ್ಸ್‌ ಮೂರನೇ ಸುತ್ತಿನಲ್ಲಿ ಆರನೇ ಶ್ರೇಯಾಂಕದ ಸ್ಟೆಫಾನೊಸ್‌ ಸಿಸಿಪಸ್‌ (ಗ್ರೀಸ್‌) ಅವರನ್ನು 7–5, 6–4, 7–6 (7–2) ರಲ್ಲಿ ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT