ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Happy Birthday Virat Kohli: ಶತಕ ದಾಖಲೆಯತ್ತ 'ಬರ್ತಡೇ ಬಾಯ್' ಕೊಹ್ಲಿ ಚಿತ್ತ

Published 5 ನವೆಂಬರ್ 2023, 0:30 IST
Last Updated 5 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಕೋಲ್ಕತ್ತ: ಭಾರತದ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಗೆ ಈಡನ್ ಗಾರ್ಡನ್‌ ಅದೃಷ್ಟದ ಅಂಗಳ.

ಏಕೆಂದರೆ; ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅವರು ತಮ್ಮ ಚೊಚ್ಚಲ ಶತಕ ಗಳಿಸಿದ್ದು ಇದೇ ಕ್ರೀಡಾಂಗಣದಲ್ಲಿ. 2009ರ ಡಿಸೆಂಬರ್‌ ತಿಂಗಳಿನಲ್ಲಿ ಶ್ರೀಲಂಕಾ ಎದುರು ಅವರು ತಮ್ಮ ಶತಕದ ಖಾತೆ ಆರಂಭಿಸಿದ್ದರು.  ಇದೀಗ ಅವರು ಸಚಿನ್ ತೆಂಡೂಲ್ಕರ್ ಶತಕಗಳ ದಾಖಲೆ (49) ಸಮೀಪ ಬಂದು ನಿಂತಿದ್ದಾರೆ. ಭಾನುವಾರ ಇಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಈ ಸಾಧನೆ ಮಾಡುವರೇ ಎಂಬ ಕುತೂಹಲ ಈಗ ಗರಿಗೆದರಿದೆ. ಅಲ್ಲದೇ ಅವರು ಇದೇ ದಿನ ತಮ್ಮ 35ನೇ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ.

ಶ್ರೀಲಂಕಾ ವಿರುದ್ಧದ ಆ ಪಂದ್ಯದಲ್ಲಿ ಗೌತಮ್ ಗಂಭೀರ್ ಕೂಡ ಶತಕ ಗಳಿಸಿದ್ದರು.  ಆದಿನ ತಮಗೆ ಲಭಿಸಿದ್ದ ಪಂದ್ಯಶ್ರೇಷ್ಠ ಪ್ರಶಸ್ತಿಯ ಚೆಕ್ ಅನ್ನು ವೇದಿಕೆಯ ಮೇಲೆಯೇ ವಿರಾಟ್ ಅವರಿಗೆ ನೀಡಿ ಬೆನ್ನು ತಟ್ಟಿದ್ದರು. ತಮ್ಮದೇ ಊರಿನ (ದೆಹಲಿ) ಯುವ ಆಟಗಾರನನ್ನು ಗೌತಮ್ ಪ್ರೋತ್ಸಾಹಿಸಿದ್ದರು. 

ಈ ಟೂರ್ನಿಯಲ್ಲಿ ಅವರು ನಾಲ್ಕು ಅರ್ಧಶತಕ ಮತ್ತು ಒಂದು ಶತಕ ಗಳಿಸಿದ್ದಾರೆ. ಅದರಲ್ಲಿ ಮೂರು ಸಲ 80ಕ್ಕಿಂತ ಹೆಚ್ಚು ರನ್‌ ಗಳಿಸಿದ್ದಾರೆ. ಆದರೆ ಅವುಗಳನ್ನು ಶತಕವಾಗಿ ಪರಿವರ್ತಿಸಲು ಸಾಧ್ಯವಾಗಿಲ್ಲ. 

ಈಡನ್ ಗಾರ್ಡನ್ ಮತ್ತು  ವಿರಾಟ್ ನಂಟು ಹಳೆಯದು. 14 ವರ್ಷಗಳ ಹಿಂದೆ ಅವರು ಇದೇ ಕ್ರೀಡಾಂಗಣದಲ್ಲಿ ಮೋಹನ್ ಬಾಗನ್ ಕ್ರಿಕೆಟ್ ತಂಡವು ಪಿ.ಸೇನ್ ಟ್ರೋಫಿ ಜಯಿಸಲೂ ಕಾರಣರಾಗಿದ್ದರು. ಆ ದಿನ ವಿಪರೀತ ಬಿಸಿಲು ಮತ್ತು ಸೆಕೆಯ ವಾತಾವರಣದಲ್ಲಿ ನಡೆದಿದ್ದ ಫೈನಲ್‌ನಲ್ಲಿ ವಿರಾಟ್ 121 ಎಸೆತಗಳಲ್ಲಿ 184 ರನ್‌ ಗಳಿಸಿದ್ದರು. ಎದುರಾಳಿ ಟೌನ್ ಕ್ಲಬ್ ಬೌಲರ್‌ಗಳ ಬೆವರಿಳಿಸಿದ್ದರು. ಮುಂದೊಂದು ದಿನ ಕ್ರಿಕೆಟ್‌ ಲೋಕದ ತಾರೆಯಾಗಿ ಬೆಳೆಯಲು ಸಿದ್ಧ ಎಂದು ತೋರಿಸಿದ್ದರು.

ವಿರಾಟ್ ಅವರ ಜನ್ಮದಿನಚರಣೆಯನ್ನು ಪಂದ್ಯದ ಸಂದರ್ಭದಲ್ಲಿ ಆಚರಿಸಲು ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಯೋಜಿಸಿತ್ತು. ಆದರೆ ಅದಕ್ಕೆ ಬಿಸಿಸಿಐ ಅನುಮತಿ ದೊರೆಯಲಿಲ್ಲ.

 ಕೊಹ್ಲಿಯೇ ನವೆಂಬರ್ 19ರ ಫೈನಲ್ ಮುಗಿದ ನಂತರ  ಆಚರಿಸಲು ನಿರ್ಧಾರ ಮಾಡಿದ್ದಾರೆನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT