ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ: ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ–ಡಿಸಿ

Last Updated 8 ಮೇ 2019, 14:28 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ 113 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಸೃಷ್ಟಿಯಾಗಿದ್ದು, ಈ ಪೈಕಿ 74 ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ಮತ್ತು 39 ಹಳ್ಳಿಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದರು.

ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಿಲ್ಲೆಯಲ್ಲಿ 2018ರ ಅಕ್ಟೋಬರ್‌ನಿಂದ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಹೀಗಾಗಿ ಸರ್ಕಾರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಿದೆ’ ಎಂದರು.

‘ನಗರ ಪ್ರದೇಶದ 74 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಸ್ಥಳೀಯ ಸಂಸ್ಥೆಗಳ 10 ಟ್ಯಾಂಕರ್‌ಗಳ ಮೂಲಕ 51 ಲೋಡ್‌ ಹಾಗೂ 45 ಖಾಸಗಿ ಟ್ಯಾಂಕರ್‌ಗಳಿಂದ 105 ಲೋಡ್‌ ನೀರು ಪೂರೈಸಲಾಗುತ್ತಿದೆ. ಮುಂದೆ ಮತ್ತಷ್ಟು ಹಳ್ಳಿ ಮತ್ತು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸುವ ಸಾಧ್ಯತೆಯಿದ್ದು, ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ’ ಎಂದು ಹೇಳಿದರು.

‘ವಿಶೇಷ ಕಾರ್ಯಪಡೆ ಅನುದಾನ ಬಳಸಿಕೊಂಡು ಕೊಳವೆ ಬಾವಿ ಕೊರೆಸಲಾಗಿದೆ. ಅಕ್ಟೋಬರ್‌ನಿಂದ 183 ಹಳ್ಳಿಗಳಲ್ಲಿ ನೀರಿನ ಸಮಸ್ಯೆಯಾಗಿದ್ದು, ಈ ಪೈಕಿ 150 ಹಳ್ಳಿಗಳಲ್ಲಿ ಸಮಸ್ಯೆ ಬಗೆಹರಿದಿದೆ. ನಗರ ಪ್ರದೇಶದಲ್ಲಿ ಅಮೃತ್‌ ಯೋಜನೆ, ನಗರೋತ್ಥಾನ 3ರ ಯೋಜನೆಯಡಿ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.

ಮೇವು ದಾಸ್ತಾನಿದೆ: ‘ಮೇವಿನ ಸಮಸ್ಯೆ ನಿವಾರಣೆಗಾಗಿ ರೈತರಿಗೆ ಮೂರು ಹಂತದಲ್ಲಿ 85,540 ಮೇವಿನ ಮಿನಿಕಿಟ್‌ ವಿತರಿಸಲಾಗಿದೆ. ಸದ್ಯ 12 ವಾರಕ್ಕೆ ಆಗುವಷ್ಟು ಮೇವು ದಾಸ್ತಾನಿದೆ. ಮಾರ್ಚ್‌ನಲ್ಲಿ ಬಿತ್ತಿರುವ ಮೇವು ಈ ತಿಂಗಳ ಅಂತ್ಯದಲ್ಲಿ ಕಟಾವಿಗೆ ಬರಲಿದೆ’ ಎಂದು ಮಾಹಿತಿ ನೀಡಿದರು.

‘ಟೆಂಡರ್ ಕರೆದು ಶ್ರೀನಿವಾಸಪುರದ ಹೊಗಳಗೆರೆ ಬಳಿ 49 ಸಾವಿರ ಮೆಟ್ರಿಕ್‌ ಟನ್‌ ಭತ್ತದ ಹುಲ್ಲು ದಾಸ್ತಾನು ಮಾಡಲಾಗಿದೆ. ಈಗ ಮುಳಬಾಗಿಲು ಬಳಿ 49 ಸಾವಿರ ಮೆಟ್ರಿಕ್ ಟನ್ ದಾಸ್ತಾನು ಮಾಡಲು ಟೆಂಡರ್‌ ನಡೆಯುತ್ತಿದೆ. ಹಸಿರು ಮೇವಿಗೆ ತೊಂದರೆಯಾದರೆ ಪರ್ಯಾಯವಾಗಿ ಒಣ ಮೇವು ಸಂಗ್ರಹಿಸಿದ್ದು, ರೈತರಿಗೆ ಕೆ.ಜಿ ಲೆಕ್ಕದಲ್ಲಿ ನೀಡುತ್ತೇವೆ’ ಎಂದರು.

ಬೆಳೆ ನಷ್ಟ: ‘ಏ.18ರಿಂದ 24ರವರೆಗೆ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದರಿಂದ 2,134 ಹೆಕ್ಟೇರ್ ಬೆಳೆ ನಷ್ಟವಾಗಿತ್ತು. ಬೆಳೆ ಹಾನಿ ಪ್ರಮಾಣ ಸುಮಾರು ₹ 8.65 ಕೋಟಿ ಎಂದು ಅಂದಾಜಿಸಲಾಗಿದೆ. ಶೇ 33ಕ್ಕಿಂತ ಹೆಚ್ಚಿನ ಬೆಳೆ ನಷ್ಟವಾಗಿರುವುದಕ್ಕೆ ₹ 3.72 ಕೋಟಿ ಪರಿಹಾರ ಕಲ್ಪಿಸಬೇಕಿದ್ದು, ಅನುಮತಿಗಾಗಿಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

‘ಹಿಂದಿನ ವರ್ಷ ಮುಂಗಾರು ಹಂಗಾಮಿನ ಬೆಳೆ ಹಾನಿಗೆ ಪರಿಹಾರ ನೀಡುವ ಪ್ರಕ್ರಿಯೆ ಆರಂಭವಾಗಿದೆ. 93,768 ರೈತರಿಗೆ ಬೆಳೆ ಪರಿಹಾರ ನೀಡಬೇಕಿದ್ದು, ಈ ಪೈಕಿ 19,138 ರೈತರಿಗೆ ₹ 2.57 ಕೋಟಿ ಪಾವತಿಯಾಗಿದೆ. ಎರಡನೇ ಹಂತದಲ್ಲಿ ಪಾವತಿ ಪ್ರಕ್ರಿಯೆ ನಡೆಯುತ್ತಿದೆ. ಆಧಾರ್, ಬ್ಯಾಂಕ್ ಖಾತೆ ಮಾಹಿತಿ ಪಡೆದು ರೈತರ ಹೆಸರು ನೋಂದಣಿ ಮಾಡಿಕೊಳ್ಳುತ್ತಿದ್ದು, 63,145 ರೈತರಿಗೆ ಸೌಲಭ್ಯ ದೊರೆಯಲಿದೆ’ ಎಂದು ವಿವರಿಸಿದರು.

ನೀತಿಸಂಹಿತೆ ಅನ್ವಯಿಸುವುದಿಲ್ಲ: ‘ಜಿಲ್ಲೆಯಲ್ಲಿ ನಗರಸಭೆಗಳಿಗೆ ಚುನಾವಣೆಯಿಲ್ಲ. ಹೀಗಾಗಿ ಬರ ಪರಿಹಾರ ಕಾಮಗಾರಿಗಳಿಗೆ ಚುನಾವಣಾ ನೀತಿಸಂಹಿತೆ ಅನ್ವಯಿಸುವುದಿಲ್ಲ. ಕೋಲಾರ ನಗರಸಭೆ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿಗೆ 10 ಎಕರೆ ಜಮೀನು ಗುರುತಿಸಿದ್ದೇವೆ. ಆ ಜಾಗದಲ್ಲಿ ಖಾಸಗಿಯವರು 2.5 ಎಕರೆ ಪ್ರದೇಶದಲ್ಲಿ ಹಸಿ ಮತ್ತು ಒಣ ಕಸ ವಿಂಗಡಿಸಿ ಪರಿಸರಕ್ಕೆ ತೊಂದರೆಯಾಗದಂತೆ ಗೊಬ್ಬರವಾಗಿ ಪರಿವರ್ತಿಸಲು ಮುಂದೆ ಬಂದಿದ್ದಾರೆ’ ಎಂದರು.

‘10 ವಾರ್ಡ್‌ಗಳಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸಲಾಗುತ್ತಿದೆ. ಬೇರೆ ವಾರ್ಡ್‌ಗಳಲ್ಲಿ ಎಲ್ಲೆಂದರಲ್ಲಿ ಕಸ ಸುರಿಯಲಾಗುತ್ತಿದೆ. ಕಸ ಸಾಗಣೆಗೆ 17 ಟಿಪ್ಪರ್‌ ಖರೀದಿಸಲು ಟೆಂಡರ್ ಕರೆಯಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT