ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ದುರಂತಕ್ಕೆ ಬೆಚ್ಚಿತು ಇಸ್ರೊ ಬಡಾವಣೆ

ಪೈಲಟ್‌ಗಳತ್ತ ಸಹಾಯ ಹಸ್ತ ಚಾಚಿದ ಸ್ಥಳೀಯರು
Last Updated 19 ಫೆಬ್ರುವರಿ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ಬಡಾವಣೆಯ ಮೂಲೆ ಮೂಲೆಯಲ್ಲೂ ಬಿದ್ದಿದ್ದ ವಿಮಾನದ ಅವಶೇಷಗಳು. ಬರಡು ಪ್ರದೇಶದಂತಾಗಿದ್ದ ತೆಂಗಿನ ತೋಟ. ದಟ್ಟ ಹೊಗೆಯಿಂದಾಗಿ ಪೂರ್ತಿ ಕಪ್ಪು ಬಣ್ಣಕ್ಕೆ ತಿರುಗಿದ್ದ ಮನೆಗಳು. ಹೊತ್ತಿ ಉರಿದ ಮರ ಹಾಗೂ ಹುಲ್ಲಿನ ಬಣವೆಗಳು. ಸಜೀವ ದಹನವಾದ ನಾಯಿ–ಕೋಳಿಗಳು. ಇವೆಲ್ಲದರ ನಡುವೆಯೂ ಪೈಲಟ್‌ಗಳಿಗೆ ಆಸರೆಯಾದ ಸ್ಥಳೀಯರ ಸಹಾಯ ಹಸ್ತ...

ನಾಗೇನಹಳ್ಳಿಯ ಇಸ್ರೊ ಬಡಾವಣೆಯಲ್ಲಿ ಮಂಗಳವಾರ ಕಂಡು ಬಂದ ಚಿತ್ರಣಗಳಿವು. ಯಲಹಂಕ ವಾಯುನೆಲೆಯಿಂದ ಸುಮಾರು 17 ಕಿ.ಮೀ ದೂರದಲ್ಲಿರುವ ಈ ಬಡಾವಣೆ, ‘ಸೂರ್ಯಕಿರಣ’ ವಿಮಾನ ದುರಂತದಿಂದ ಅಕ್ಷರಶಃ ಬೆಚ್ಚಿ ಬಿದ್ದಿತ್ತು. ಪ್ರತಿದಿನ ಮನೆ ಅಂಗಳದಲ್ಲೇ ನಿಂತು ವಿಮಾನಗಳ ಕಸರತ್ತುಗಳನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದ ನಿವಾಸಿಗಳ ಮೊಗದಲ್ಲಿ ಆತಂಕ ಆವರಿಸಿತ್ತು.

ಕರಕಲಾದ ಟರ್ಕಿ ಕೋಳಿಗಳು!: ‘ವಿಮಾನದ ಅವಶೇಷಗಳು ಮನೆಗಳ ಮಹಡಿ ಮೇಲೂ ಬಿದ್ದಿದ್ದವು. ಅಕ್ಷತ್ ಎಂಬುವರ ಮನೆ ಹೊಗೆಯಿಂದ ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿತ್ತು. ನಾಗೇನಹಳ್ಳಿ ನಿವಾಸಿ ಉಮೇಶ್ ಅವರು, 20 ಟರ್ಕಿ ಕೋಳಿಗಳು ಹಾಗೂ ಎರಡು ನಾಯಿಗಳು ಸಾಕಿದ್ದರು. ಲೋಹದ ಹಕ್ಕಿಯ ಅವಶೇಷ ಅಪ್ಪಳಿಸಿ ಅವರ ಶೆಡ್‌ಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಅಷ್ಟೂ ಪ್ರಾಣಿಗಳು ಸುಟ್ಟು ಕರಕಲಾದವು.

‘ಪ್ರಜಾವಾಣಿ’ ಜತೆ ಮಾತನಾಡಿದ ಉಮೇಶ್, ‘ಕುಟುಂಬದ ಐದು ಮಂದಿ ಬೆಳಿಗ್ಗೆಯಿಂದ ತೋಟದಲ್ಲೇ ಕೆಲಸ ಮಾಡುತ್ತಿದ್ದೆವು. 11.30ಕ್ಕೆ ತಿಂಡಿ ತಿನ್ನಲೆಂದು ಎಲ್ಲರೂ ಹೋಟೆಲ್‌ಗೆ ತೆರಳಿದ್ದೆವು. ಸ್ವಲ್ಪ ಸಮಯದಲ್ಲೇ ಜೋರಾಗಿ ಶಬ್ದ ಕೇಳಿಸಿತು. ವಿಮಾನ ದುರಂತಕ್ಕೀಡಾಗಿದೆ ಎಂಬುದು ತಕ್ಷಣಕ್ಕೇ ಗೊತ್ತಾಯಿತು. ತೋಟಕ್ಕೆ ವಾಪಸ್ ಬರುವಷ್ಟರಲ್ಲಿ ಕೋಳಿ–ನಾಯಿಗಳೆಲ್ಲ ಸುಟ್ಟು ಹೋಗಿದ್ದವು. ತೋಟದ ಮರಗಳೂ ಭಸ್ಮವಾಗಿದ್ದವು. ಒಂಬತ್ತು ಹಸುಗಳನ್ನು ಆಗಷ್ಟೇ ಮೇಯಲು ತೋಟಕ್ಕೆ ಬಿಟ್ಟಿದ್ದೆ. ಇಲ್ಲದಿದ್ದರೆ ಅವುಗಳನ್ನೂ ಕಳೆದುಕೊಳ್ಳುತ್ತಿದ್ದೆ’ ಎಂದರು.

ರುಂಡ ಬೇರ್ಪಟ್ಟಿತ್ತು: ‘ಒಬ್ಬ ಪೈಲಟ್ ನಮ್ಮ ಮನೆಯ ಮುಂದೆಯೇ ಬಿದ್ದಿದ್ದರು. ಅವರಿಗೆ ನೀರು ಕುಡಿಸಿದೆವು. ಅಷ್ಟರಲ್ಲಿ ಆರ್ಮಿಯವರು ಬಂದು ಅವರನ್ನು ಕರೆದುಕೊಂಡು ಹೋದರು. ಆ ನಂತರ ತೋಟದೊಳಗೆ ಹೋದಾಗ ಒಬ್ಬರ ರುಂಡ–ಮುಂಡ ಬೇರ್ಪಟ್ಟಿದ್ದ ಪೈಲಟ್‌ ಒಬ್ಬರ ದೇಹ ಬಿದ್ದಿತ್ತು. ಅಧಿಕಾರಿಗಳಿಗೆ ವಿಷಯ ತಿಳಿಸಿದೆ’ ಎಂದು ಉಮೇಶ್ ವಿವರಿಸಿದರು.

ಪೈಲಟ್‌ಗೆ ವಿದ್ಯಾರ್ಥಿಯ ಆಸರೆ: ‘ಬೆಳಿಗ್ಗೆ ಮಹಡಿಯಲ್ಲಿ ಕುಳಿತು ವಿಮಾನಗಳ ತಾಲೀಮು ವೀಕ್ಷಿಸುತ್ತಿದ್ದೆ. ಕ್ಷಣಮಾತ್ರದಲ್ಲೇ ಡಿಕ್ಕಿ ಸಂಭವಿಸಿತು. ಇಬ್ಬರು ಪೈಲಟ್‌ಗಳು ಹೊರಗೆ ಜಿಗಿದು ಪ್ಯಾರಾಚೂಟ್‌ನಲ್ಲಿ ನೇತಾಡುತ್ತಿದ್ದರು. ಈ ಹಂತದಲ್ಲಿ ಒಂದು ವಿಮಾನ ಆಗಸದಲ್ಲೇ ಸ್ಫೋಟಗೊಂಡಿತು. ಆ ನಂತರ ಪ್ಯಾರಾಚೂಟ್‌ಗಳು ಯದ್ವಾತದ್ವಾ ಸಾಗಿದವು. ಒಬ್ಬ ಪೈಲಟ್ ತೋಟದಲ್ಲಿ ಬಿದ್ದರೆ, ಮತ್ತೊಬ್ಬರು ನಾಗೇನಹಳ್ಳಿ ಮುಖ್ಯರಸ್ತೆಗೆ ಬಿದ್ದಿದ್ದರು. ಆ ಪೈಲಟ್‌ಗಳ ಬಳಿ ಮೊದಲು ಹೋಗಿದ್ದು ನಾನೇ’ ಎಂದು ಸ್ಥಳೀಯ ವಿದ್ಯಾರ್ಥಿ ಚೇತನ್ ಹೇಳಿದರು.

‘ಒಬ್ಬ ಪೈಲಟ್‌ನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡ ನಾನು, ಹೆದರಬೇಡಿ ಸಾರ್. ಏನೂ ಆಗಲ್ಲ. ಸ್ವಲ್ಪ ಸಮಯದಲ್ಲೇ ಆಂಬುಲೆನ್ಸ್‌ಗಳು ಬಂದುಬಿಡುತ್ತವೆ ಎಂದು ಧೈರ್ಯ ಹೇಳುತ್ತಿದ್ದೆ. ಆಗ ಅವರು, ‘ನನ್ನನ್ನು ಇಲ್ಲಿಂದ ಸ್ವಲ್ಪ ದೂರಕ್ಕೆ ಕರೆದುಕೊಂಡು ಹೋಗಿ. ವಿಮಾನದ ಅವಶೇಷಗಳು ಸ್ಫೋಟಗೊಳ್ಳಬಹುದು’ ಎಂದರು. ಅಷ್ಟರಲ್ಲಿ ಸ್ಥಳೀಯರೂ ಬಂದರು. ಅವರ ನೆರವಿನಿಂದ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದೆ.’

‘ಐದಾರು ನಿಮಿಷಗಳಲ್ಲೇ 150ಕ್ಕೂ ಹೆಚ್ಚು ಜವಾನ್‌ಗಳು ಅಲ್ಲಿಗೆ ಬಂದರು. ಅಷ್ಟೂ ಹೊತ್ತು ಆ ಪೈಲಟ್ ಕೂಡ ನನ್ನ ಕೈಯನ್ನು ಗಟ್ಟಿಯಾಗಿಯೇ ಹಿಡಿದುಕೊಂಡರು. ದೇಶಸೇವೆ ಮಾಡಿದಂತೆ ಭಾಸವಾಯಿತು’ ಎಂದು ಭಾವುಕರಾಗಿ ಹೇಳಿದರು.

ನಾನೂ ಹೋಗುತ್ತಿದ್ದೆ: ‘20 ವರ್ಷಗಳಿಂದ ಈ ಬಡಾವಣೆಯ ನಿರ್ವಹಣೆಯನ್ನು ನಾನೇ ಮಾಡುತ್ತಿದ್ದೇನೆ. ‘ಸೂರ್ಯಕಿರಣ’ ವಿಮಾನಗಳೆಂದರೆ ನನಗೆ ಅಚ್ಚುಮೆಚ್ಚು. ಪ್ರತಿದಿನ ಇಲ್ಲಿಂದಲೇ ತಾಲೀಮು ನೋಡುತ್ತಿದ್ದೆ. ನಾನು ಹಾಗೂ ಟ್ರ್ಯಾಕ್ಟರ್ ಚಾಲಕ ಶಂಕರ್ ಬೆಳಿಗ್ಗೆ ಬಡಾವಣೆಯಲ್ಲಿ ಮಾತನಾಡುತ್ತ ನಿಂತಿದ್ದೆವು. ಕರೆ ಬಂದಿದ್ದರಿಂದ ನಾನು ಮೊಬೈಲ್‌ನಲ್ಲಿ ಮಾತನಾಡಿಕೊಂಡು ಸ್ವಲ್ಪ ದೂರಕ್ಕೆ ಬಂದೆ. ಆಗ ಟ್ರ್ಯಾಕ್ಟರ್ ಪಕ್ಕದಲ್ಲೇ ವಿಮಾನದ ಅವಶೇಷಗಳು ಬಿದ್ದವು. ಸದ್ಯ ಶಂಕರ್‌ಗೆ ಅವು ತಾಗಲಿಲ್ಲ. ಅವು ಸ್ವಲ್ಪ ಮುಂಚೆ ಬಿದ್ದಿದ್ದರೂ ನನ್ನ ಪ್ರಾಣವೂ ಹೋಗುತ್ತಿತ್ತು’ ಎಂದು ಸಂಜೀವ್ ರೆಡ್ಡಿ ಆತಂಕ ವ್ಯಕ್ತಪಡಿಸಿದರು.

ಹಿಂದೆಯೂ ಸಂಭವಿಸಿತ್ತು ದುರಂತ
ಸೂರ್ಯಕಿರಣ ಎರಡು ಯುದ್ಧ ವಿಮಾನಗಳ ನಡುವೆ ಮಂಗಳವಾರ ಸಂಭವಿಸಿದ ಡಿಕ್ಕಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ
ದಲ್ಲಿ ನಡೆದ ಮೊದಲ ದುರಂತವೇನಲ್ಲ. ಇದಕ್ಕಿಂತ ಮುನ್ನವೂ ಅನೇಕ ದುರಂತಗಳಿಗೆ ಯಲಹಂಕ ವಾಯುನೆಲೆ ಸಾಕ್ಷಿಯಾಗಿತ್ತು.

ಈ ಹಿಂದಿನ ವಿಮಾನ ಅ‍ಪಘಾತಗಳಲ್ಲಿ ಅತ್ಯಂತ ಕರಾಳವಾದುದು 2007ರ ಫೆಬ್ರುವರಿ 2ರಂದು ನಡೆದ ಸಾರಂಗ್‌ ಹೆಲಿಕಾಪ್ಟರ್‌ ದುರಂತ.

ಏರೋ ಇಂಡಿಯಾ–2007ರಲ್ಲಿ ಸಾರಂಗ್‌ ಹೆಲಿಕಾಪ್ಟರ್‌ನ ಪೈಲಟ್‌ ವಿಂಗ್‌ ಕಮಾಂಡರ್‌ ವಿ.ಜೇಟ್ಲಿ ಹಾಗೂ ಸಹ ಪೈಲಟ್‌ ಸ್ಕ್ವಾಡ್ರರ್ನ್‌ ಲೀಡರ್‌ ಪ್ರಿಯೆ ಶರ್ಮಾ ತಾಲೀಮು ನಡೆಸುತ್ತಿದ್ದ ವೇಳೆ ಧ್ರುವ ಹೆಲಿಕಾಪ್ಟರ್‌ ಪತನಗೊಂಡಿತ್ತು. ಈ ಘಟನೆಯಲ್ಲಿ ಪ್ರಿಯೆ ಶರ್ಮಾ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಜೀವ ಉಳಿಸಿದ್ದು ಹೈಟೆನ್ಶನ್ ವೈರ್!
‘ಹರಿದು ಹೋಗಿದ್ದ ಪ್ಯಾರಾಚೂಟ್ ಸಮೇತ ಪೈಲಟ್ ಕೆಳಗೆ ಬರುತ್ತಿದ್ದರು. ಈ ವೇಳೆ ಅದು ಹೈಟೆನ್ಶನ್ ವೈರ್‌ಗೆ ಸಿಕ್ಕಿಕೊಂಡಿತು. ಆ ನಂತರ ಅದು ಪೂರ್ತಿ ಹರಿದು ಹೋಗಿ ಪೈಲಟ್ ಕೆಳಗೆ ಬಿದ್ದರು. ಒಂದು ವೇಳೆ ಪ್ಯಾರಾಚೂಟ್ ಆ ವೈರ್‌ನ ಮೇಲೆ ಬೀಳದಿದ್ದರೆ ಪೈಲಟ್ ಬದುಕುಳಿಯುತ್ತಿರಲಿಲ್ಲ’ ಎಂದು ಸ್ಥಳೀಯ ನಿವಾಸಿ ಉದಯ್ ಹೇಳಿದರು.

ಬ್ಲ್ಯಾಕ್ ಬಾಕ್ಸ್ ವಶಕ್ಕೆ
ಪೈಲಟ್‌ಗಳಿಗೆ ಏರ್‌ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಅಧಿಕಾರಿಗಳು ನೀಡುತ್ತಿದ್ದ ಸೂಚನೆಗಳು ಮಾತ್ರವಲ್ಲದೆ, ವಿಮಾನಗಳು ಎಷ್ಟು ಎತ್ತರದಲ್ಲಿ ಹಾರುತಿದ್ದವು? ಎಷ್ಟು ಕಿ.ಮೀ ವೇಗದಲ್ಲಿ ಸಾಗುತ್ತಿದ್ದವು... ಸೇರಿದಂತೆ ಎಲ್ಲ ತಾಂತ್ರಿಕ ಮಾಹಿತಿಗಳೂ ಬ್ಲ್ಯಾಕ್‌ ಬಾಕ್ಸ್‌ಗಳಲ್ಲಿ ದಾಖಲಾಗಿರುತ್ತವೆ. ಹೀಗಾಗಿ, ಐಎಎಫ್ ಅಧಿಕಾರಿಗಳು ಎರಡೂ ವಿಮಾನಗಳ ಬಾಕ್ಸ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ನೋವಿನಲ್ಲೂ ಕುಟುಂಬಕ್ಕೆ ಕರೆ
ರಕ್ತಸಿಕ್ತರಾಗಿ ಬಿದ್ದು ಒದ್ದಾಡುತ್ತಿದ್ದ ಪೈಲಟ್‌, ‘ಜೇಬಿನಲ್ಲಿ ಮೊಬೈಲ್ ಇದೆ. ದಯವಿಟ್ಟು ತೆಗೆದು ಕೊಡಿ’ ಎಂದು ತಮ್ಮ ರಕ್ಷಣೆಗೆ ಬಂದಿದ್ದ ಸ್ಥಳೀಯರನ್ನು ಕೇಳಿದರು. ಅವರು ಮೊಬೈಲ್ ತೆಗೆದುಕೊಡುತ್ತಿದ್ದಂತೆಯೇ ಕುಟುಂಬ ಸದಸ್ಯರಿಗೆ ಕರೆ ಮಾಡಿದ ಪೈಲಟ್, ‘ವಿಮಾನ ದುರಂತಕ್ಕೀಡಾಯಿತು. ನನಗೇನೂ ಆಗಿಲ್ಲ. ಯಾರೂ ಹೆದರಬೇಡಿ’ ಎಂದು ಹೇಳಿದರು. ಆ ನಂತರವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಈ ಕಹಿಘಟನೆಯ ನಡುವೆಯೂ ಆ ಸಾಲಿನ ವೈಮಾನಿಕ ಪ್ರದರ್ಶನಕ್ಕೆ ಚಾಲನೆ ನೀಡಲಾಗಿತ್ತು. ಆದರೆ ಆ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ. ಆ ವರ್ಷ ಇಂಟರ್‌ ಮೀಡಿಯೇಟ್‌ ಜೆಟ್‌ ಟ್ರೈನರ್‌ ವಿಮಾನದ ಚಕ್ರ ರನ್‌ವೇಯಲ್ಲಿ ಕಳಚಿ, ಭಸ್ಮಗೊಂಡಿತ್ತು. ಏರೊಬ್ಯಾಟಿಕ್ ಪ್ರದರ್ಶನ ನೋಡಲು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನ ಆ ಸದ್ದು ಕೇಳಿ ಬೆಚ್ಚಿಬಿದ್ದಿದ್ದರು.

2015ರ ವೈಮಾನಿಕ ಪ್ರದರ್ಶನದಲ್ಲಿ ರೆಡ್‌ ಬುಲ್‌ ವಿಮಾನಗಳು ಏರೊಬ್ಯಾಟಿಕ್‌ ಪ್ರದರ್ಶನ ನೀಡುವಾಗ ಪರಸ್ಪರ ಡಿಕ್ಕಿ ಹೊಡೆದಿದ್ದವು. ಒಂದು ವಿಮಾನದ ರೆಕ್ಕೆ ಇನ್ನೊಂದರ ರೆಕ್ಕೆಗೆ ತಾಗಿತ್ತು. ಆದರೆ ಪೈಲಟ್‌ಗಳು ಅಪಾಯದಿಂದ ಪಾರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT