ಶನಿವಾರ, ಮಾರ್ಚ್ 6, 2021
30 °C
ನಗರಾಭಿವೃದ್ಧಿ ಇಲಾಖೆಗೆ ಬಿಬಿಎಂಪಿ ಪ್ರಸ್ತಾವ ಕಳುಹಿಸಿದ್ದು, ಇನ್ನಷ್ಟೇ ಅನುಮೋದನೆ ಸಿಗಬೇಕಿದೆ

ಕಸ ವಿಂಗಡಿಸದಿದ್ದರೆ ದುಬಾರಿ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಸಿ, ಒಣ ಹಾಗೂ ನೈರ್ಮಲ್ಯ (ಸ್ಯಾನಿಟರಿ) ತ್ಯಾಜ್ಯ ವಿಂಗಡಣೆ ಸಮರ್ಪಕವಾಗಿ ಮಾಡದವರಿಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರಿಗೆ ವಿಧಿಸುತ್ತಿರುವ ದಂಡ ಮೊತ್ತವನ್ನು ಐದು ಪಟ್ಟು ಹೆಚ್ಚಳ ಮಾಡಲು ಬಿಬಿಎಂಪಿ ಸಿದ್ಧತೆ ನಡೆಸಿದೆ.

ಈ ಕುರಿತ ಪ್ರಸ್ತಾವವನ್ನು ಪಾಲಿಕೆಯು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿದ್ದು, ಇನ್ನಷ್ಟೇ ಅನುಮೋದನೆ ಸಿಗಬೇಕಿದೆ.

‘ಕಸ ನಿರ್ವಹಣೆಯ ಹೊಸ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಹೊಸ ಗುತ್ತಿಗೆದಾರರನ್ನು ನೇಮಿಸಿದ ಬಳಿಕ ಕಸ ವಿಂಗಡಣೆ ಮಾಡದವರಿಗೆ ದಂಡ ವಿಧಿಸುವುದನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲಿದ್ದೇವೆ’ ಎಂದು ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗ ಇರುವ ದಂಡದ ಮೊತ್ತವನ್ನು ಐದು ಪಟ್ಟು ಹೆಚ್ಚಿಸುವಂತೆ ನಾವು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದೇವೆ. ಎಷ್ಟು ಪಟ್ಟು ಹೆಚ್ಚಳ ಮಾಡಲು ಅವರು ಒಪ್ಪಿಗೆ ನೀಡುತ್ತಾರೋ ಗೊತ್ತಿಲ್ಲ. ಈ ಪ್ರಸ್ತಾಪಕ್ಕೆ ಅನುಮೋದನೆ ಸಿಗುವವರೆಗೆ ಪ್ರಸ್ತುತ ಜಾರಿಯಲ್ಲಿರುವಷ್ಟು ದಂಡವನ್ನು ವಸೂಲಿ ಮಾಡುತ್ತೇವೆ’ ಎಂದು ಹೆಚ್ಚುವರಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ರಂದೀಪ್‌ ತಿಳಿಸಿದರು.

‘ಪ್ರಸ್ತುತ ಪಾಲಿಕೆಯ ಆರೋಗ್ಯಾಧಿಕಾರಿ ಹಾಗೂ ಹಿರಿಯ ಆರೋಗ್ಯ ನಿರೀಕ್ಷರು ಪ್ರಸ್ತುತ ಉದ್ದಿಮೆ ಪರವಾನಗಿ ನೀಡುವುದು ಹಾಗೂ ಪ್ಲಾಸ್ಟಿಕ್‌ ನಿಷೇಧ ಜಾರಿಯಂತಹ ಕಾರ್ಯದಲ್ಲಿ ಮಾತ್ರ ತೊಡಗಿದ್ದರು. ಕಸ ವಿಲೇವಾರಿ ಬಗ್ಗೆ ನಿಗಾ ಇಡುವುದಕ್ಕೂ ಅವರ ಸೇವೆ ಬಳಸಿ
ಕೊಳ್ಳಲಿದ್ದೇವೆ’ ಎಂದು  ತಿಳಿಸಿದರು.

ತ್ಯಾಜ್ಯ ನಿರ್ವಹಣೆ ಟೆಂಡರ್‌ ಷರತ್ತುಗಳಿಗೆ ಪಾಲಿಕೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾದ ಬಳಿಕ ಈ ಷರತ್ತುಗಳನ್ನು ಪರಿಶೀಲನೆಗೆ ಒಳಪಡಿಸಲು ಮೇಯರ್‌ ಗಂಗಾಂಬಿಕೆ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯ ಸಭೆಯಲ್ಲಿ ಕಸ ನಿರ್ವಹಣೆ ಕುರಿತ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸುವ ಬಗ್ಗೆ ಚರ್ಚೆ ನಡೆದಿದೆ.

ಹಸಿ ಕಸ ಹಾಗೂ ಒಣ ಕಸವನ್ನು ಸಂಗ್ರಹಿಸಲು ಪ್ರತ್ಯೇಕ ಟೆಂಡರ್‌ ಕರೆಯುವ ಕುರಿತು ಕೆಲವು ಪಾಲಿಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ
ದ್ದರು. ಆದರೆ, ಇದು ಏಕೆ ಅನಿವಾರ್ಯ ಎಂಬುದನ್ನು ಪಾಲಿಕೆ ಆಯುಕ್ತರು ಸಭೆಯಲ್ಲಿ ಮನವರಿಕೆ ಮಾಡಿಕೊಟ್ಟರು.

ಹೋಟೆಲ್‌, ಕಲ್ಯಾಣಮಂಟಪಗಳು, ಅಂಗಡಿಗಳಲ್ಲಿ ಉತ್ಪಾದನೆಯಾಗುವ ಸಗಟು ಕಸವನ್ನು (10 ಕೆ.ಜಿ.ಗಿಂತ ಹೆಚ್ಚು) ಪೌರಕಾರ್ಮಿಕರು
ಸ್ವೀಕರಿಸುವುದಿಲ್ಲ. ಇಂತಹ ಕಸ ಸಂಗ್ರಹಣೆಗೆ 20 ಮಂದಿ ಏಜೆನ್ಸಿಗಳನ್ನು ಪಾಲಿಕೆ ಗುರುತಿಸಿದೆ.

‘ಸಗಟು ಕಸ ಸ್ವೀಕರಿಸುವವರು ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಅದನ್ನೂ ಪಾಲಿಕೆಯ ಕಸ ನಿರ್ವಹಣಾ ಘಟಕಗಳಿಗೇ ಸಾಗಿಸಲಾಗುತ್ತಿದೆ. ಅದರ ಬದಲು ಬಿಬಿಎಂಪಿ ವತಿಯಿಂದಲೇ ಸಂಗ್ರಹಿಸಬೇಕು’ ಎಂಬ ಬೇಡಿಕೆ ಸಭೆಯಲ್ಲಿ ವ್ಯಕ್ತವಾಗಿತ್ತು. ಈ ಕುರಿತು ಪರಿಶೀಲಿಸವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ರಾಕ್‌ ಕ್ರಿಸ್ಟಲ್ ಎಂಬ ಸಂಸ್ಥೆ ಕಟ್ಟಡ ತ್ಯಾಜ್ಯದಿಂದ ಮರುಬಳಕೆ ಮಾಡಬಹುದಾದ ಉತ್ಪನ್ನಗಳನ್ನು ತಯಾರಿಸುತ್ತದೆ. ಕಟ್ಟಡ ಕೆಡಹುವವರು ಈ ಸಂಸ್ಥೆಗೆ ತ್ಯಾಜ್ಯವನ್ನು ನೀಡಲು ಪಾಲಿಕೆ ಅವಕಾಶ ಮಾಡಿಕೊಟ್ಟಿದೆ. ‘ಕಟ್ಟಡ ತ್ಯಾಜ್ಯ ಮರುಬಳಕೆ ಮಾಡುವ ಇನ್ನಷ್ಟು ಸಂಸ್ಥೆಗಳಿಗೆ ಭಗ್ನಾವಶೇಷಗಳನ್ನು ಸಂಗ್ರಹಿಸಲು ಅವಕಾಶ ಕಲ್ಪಿಸಬೇಕು’ ಎಂಬ ಬಗ್ಗೆಯೂ ಚರ್ಚೆ ನಡೆಯಿತು.  

ಯಾವುದಕ್ಕೆ ಎಷ್ಟು ದಂಡ? (ಪ್ರಸ್ತುತ ಜಾರಿಯಲ್ಲಿರುವುದು)

ಸಾರ್ವಜನಿಕ ಸ್ಥಳದಲ್ಲಿ ಕಸ ಬಿಸಾಡುವುದು, ಉಗುಳುವುದು, ಮೂತ್ರ ವಿಸರ್ಜನೆ, ಬಯಲು ಶೌಚ; ₹ 100; ₹ 200

ಪೌರಕಾರ್ಮಿಕರಿಗೆ ಮನೆಯ ಕಸವನ್ನು ವಿಂಗಡಿಸಿ ನೀಡದಿರುವುದು; ₹ 100; ₹ 500

ವಾಣಿಜ್ಯ ಮಳಿಗೆಗಳು ಸಗಟು ತ್ಯಾಜ್ಯ ವಿಂಗಡಿಸಿ ನೀಡದಿರುವುದು; ₹ 500; ₹ 1000

ಉದ್ಯಾನ ತ್ಯಾಜ್ಯ, ನೈರ್ಮಲ್ಯ ತ್ಯಾಜ್ಯ, ಜೈವಿಕ ವೈದ್ಯಕೀಯ ತ್ಯಾಜ್ಯ ಸಮರ್ಪಕವಾಗಿ ವಿಲೇ ಮಾಡದಿರುವುದು; ₹ 500; ₹ 1000

ಕಳಪೆ / ಕೊಳೆತ ತ್ಯಾಜ್ಯ ಶೇಖರಣೆ; ₹ 100; ₹ 200

ಬೀದಿಗಳಿಗೆ ಕೊಳಚೆ ಹರಿಸುವುದು: ₹ 100 : ₹200

ಸತ್ತ ಪ್ರಾಣಿ, ಕೊಳೆತ ವಸ್ತುಗಳ ಅವೈಜ್ಞಾನಿಕ ವಿಲೇವಾರಿ: ₹ 100: ₹200

ಕಟ್ಟಡ ತ್ಯಾಜ್ಯದ ಅವೈಜ್ಞಾನಿಕ ವಿಲೇವಾರಿ: ₹ 1000; ₹ 5000

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು