ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒ.ಸಿ ಇಲ್ಲದೇ ನೀರು ಸಂಪರ್ಕ ನೀಡಲು ಸಿದ್ಧ

ಪಾಲಿಕೆ ನಿರ್ಣಯ ಕೈಗೊಂಡರೆ ಕ್ರಮ: ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಸ್ಪಷ್ಟನೆ
Last Updated 13 ಫೆಬ್ರುವರಿ 2019, 17:03 IST
ಅಕ್ಷರ ಗಾತ್ರ

ಬೆಂಗಳೂರು: ‘300 ಚದರ ಮೀಟರ್‌ ಗಿಂತಲೂ ಹೆಚ್ಚು ವಿಸ್ತೀರ್ಣದ ಕಟ್ಟಡಗಳಿಗೆ ಸ್ವಾಧೀನ ಪ್ರಮಾಣಪತ್ರ (ಒ.ಸಿ) ಇಲ್ಲದೇ ನೀರಿನ ಸಂಪರ್ಕ ಕಲ್ಪಿಸಬಹುದು ಎಂದು ಪಾಲಿಕೆ ನಿರ್ಣಯಿಸಿದಲ್ಲಿ ಅದರಂತೆ ನಡೆದುಕೊಳ್ಳುತ್ತೇವೆ’ ಎಂದು ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಅವರು ಸ್ಪಷ್ಟಪಡಿಸಿದರು.

ಬಿಬಿಎಂಪಿಯ ವ್ಯಾಪ್ತಿಯಲ್ಲಿಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯ ಕುರಿತಂತೆ ಚರ್ಚಿಸಲು ನಡೆದ ವಿಶೇಷ ಸಭೆ
ಯಲ್ಲಿ ಅವರು ಈ ಸ್ಪಷ್ಟನೆ ನೀಡಿದರು.

30X40, 60X40 ಅಳತೆಯ ನಿವೇಶನದಲ್ಲಿ ಕಟ್ಟಿದ ಮನೆಗಳಿಗೆ ಸ್ವಾಧೀನ ಪ್ರಮಾಣಪತ್ರ ಕೊಡುವುದಿಲ್ಲ. ಸ್ವಾಧೀನ ಪ್ರಮಾಣಪತ್ರ ಇಲ್ಲದೇ ಜಲಮಂಡಳಿ ನೀರಿನ ಸಂಪರ್ಕ ಕೊಡುವುದಿಲ್ಲ. ಬದಲಾಗಿ ತಾತ್ಕಾಲಿಕ ಸಂಪರ್ಕ ಕಲ್ಪಿಸಿ ನೀರಿನ ಶುಲ್ಕದ ಅರ್ಧದಷ್ಟು ದಂಡ ವಿಧಿಸುತ್ತದೆ. ಈ ಗೊಂದಲ ಬೇಡ 5 ಸಾವಿರ ಚದರ ಮೀಟರ್‌ ವಿಸ್ತೀರ್ಣದವರೆಗಿನ ಕಟ್ಟಡಗಳಿಗೆ ಸ್ವಾಧೀನಪತ್ರ ಕೇಳಬಾರದು ಎಂಬುದು ಸದಸ್ಯರ ವಾದ. ದೀರ್ಘಕಾಲ ನಡೆದ ಚರ್ಚೆಗೆ ತುಷಾರ್‌ ಮೇಲಿನಂತೆ ಪ್ರತಿಕ್ರಿಯಿಸಿದರು.

ರಾಜಕಾಲುವೆಯಲ್ಲೇಕೆ ಕೊಳಚೆ ನೀರು?: ಈ ಪ್ರಶ್ನೆಗೆ ವಿವರವಾದ ಉತ್ತರ ನೀಡಿದ ತುಷಾರ್‌, ‘2010–12ರ ಅವಧಿ
ಯಲ್ಲಿ ಕಾವೇರಿ 4ನೇ ಹಂತದ ಯೋಜನೆಯ ಮೂಲಕ ಪ್ರತಿದಿನ 500 ದಶಲಕ್ಷ ಲೀಟರ್‌ ನೀರನ್ನು ನಗರಕ್ಕೆ ಹರಿಸಿ
ದೆವು. ಬಳಕೆಯಾದ ನೀರನ್ನು ಶುದ್ಧೀಕರಿಸುವ ವ್ಯವಸ್ಥೆ ಇರಲಿಲ್ಲ. ಇಂದೂ ಪೂರ್ಣ ಪ್ರಮಾಣದಲ್ಲಿ ಇಲ್ಲ. ತ್ಯಾಜ್ಯ ನೀರನ್ನು ಅದರ ಮೂಲದಲ್ಲೇ ಸಂಸ್ಕರಿಸಿ ಹೊರಬಿಟ್ಟರೆ ಈ ಪ್ರಮಾಣದ ಕೊಳಚೆ ನೀರು ಹರಿಯುತ್ತಿರಲಿಲ್ಲ. 2020ರ ವೇಳೆಗೆ ಪ್ರತಿದಿನ 1,575 ದಶಲಕ್ಷ ಲೀಟರ್‌ ನೀರು ಸಂಸ್ಕರಿಸುವ ಘಟಕಗಳು ವೃಷಭಾವತಿ, ಹೆಬ್ಬಾಳ ಮತ್ತು ಕೆ.ಸಿ. ಕಣಿವೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ’ ಎಂದರು.

ನಗರದಾದ್ಯಂತ ₹ 5 ಸಾವಿರ ಕೋಟಿ ವೆಚ್ಚದಲ್ಲಿ ನೀರು ಪೂರೈಕೆಗೆ ಸಂಬಂಧಿಸಿದ ಕಾಮಗಾರಿಗಳು ನಡೆಯುತ್ತಿವೆ. ಈ ವರ್ಷ ಮೇ ಅಂತ್ಯದೊಳಗೆ 110 ಹಳ್ಳಿಗಳಿಗೆ ನೀರು ಪೂರೈಕೆ ಜಾಲ ಪೂರ್ಣಗೊಳ್ಳಲಿದೆ. ಒಂದು ವರ್ಷ ಇದರ ಮೇಲೆ ನಿಗಾ ವಹಿಸಬೇಕು. 2020ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ನೀರು ಪೂರೈಕೆ ಆಗಲಿದೆ ಎಂದು ವಿವರಿಸಿದರು.

ಮ್ಯಾನ್‌ಹೋಲ್‌ ಸ್ವಚ್ಛತೆ: ನಗರದಲ್ಲಿ 2.40 ಲಕ್ಷ ಮ್ಯಾನ್‌ಹೋಲ್‌ಗಳಿವೆ. ವರ್ಷಕ್ಕೊಮ್ಮೆಯಾದರೂ ಇವುಗಳನ್ನು ಸ್ವಚ್ಛ
ಗೊಳಿಸಬೇಕು. ಡಿ– ಸಿಲ್ಟಿಂಗ್‌ (ಹೂಳು ತೆಗೆಯುವ)ಯಂತ್ರಗಳನ್ನು ನಿಯಮಿತವಾಗಿ ಕಾರ್ಯನಿರ್ವಹಿಸುವಂತೆ ವೇಳಾಪಟ್ಟಿ ಸಿದ್ಧಪಡಿ
ಸಲಾಗಿದೆ. ಆ ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ. ಎಲ್ಲರಿಗೂ ಅನುಕೂಲವಾಗುವಂತೆ ಅವು ಕಾರ್ಯನಿರ್ವಹಿಸಬೇಕು. ಸುಮಾರು 70 ಯಂತ್ರಗಳ ಅಗತ್ಯವಿದೆ. ಅವುಗಳನ್ನು ಖರೀದಿಸಲು ಟೆಂಡರು ಕರೆಯಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಆಯಾ ವಾರ್ಡ್‌ಗಳಲ್ಲಿ ಅಗೆದ ರಸ್ತೆಗಳನ್ನು ಸರಿಪಡಿಸುವುದು, ಸಣ್ಣಪುಟ್ಟ ದುರಸ್ತಿ ಮಾಡಲು ಸಹಾಯಕ ಎಂಜಿನಿಯರ್‌ ಮತ್ತು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಪೂರ್ಣ ಅಧಿಕಾರ ಕೊಟ್ಟಿದ್ದೇವೆ. ಇಬ್ಬರ ಖಾತೆಯಲ್ಲೂ ಅದಕ್ಕೆ ಬೇಕಾದ ಮೊತ್ತವನ್ನೂ ಜಮಾ ಮಾಡಲಾಗಿದೆ. ಹಣಕಾಸಿನ ಕೊರತೆ ಇಲ್ಲ ಎಂದು ಹೇಳಿದರು.

ರೈಲು ತೊಳೆಯಲು ಕಾವೇರಿ ನೀರು

ರೈಲು ತೊಳೆಯಲು ಕಾವೇರಿ ನೀರು ಕೊಡುತ್ತೀರಿ. ಅದನ್ನು ಯಶವಂತಪುರ ಪ್ರದೇಶಕ್ಕೆ ಹರಿಸಿ. ಅಲ್ಲಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ ರೈಲು, ಹಳಿಗಳ ಸ್ವಚ್ಛತೆಗೆ ಪೂರೈಸುತ್ತೇವೆ. ವಿನಾಕಾರಣ ನೀರನ್ನು ವ್ಯರ್ಥ ಮಾಡಬೇಡಿ ಎಂದು ಶಾಸಕ ಮುನಿರತ್ನ ಹೇಳಿದರು.

ಕಾವೇರಿ ನಾಲ್ಕನೇ ಹಂತ ಸಾಲದು

2050ರ ವೇಳೆಗೆ ನಗರದ ಜನಸಂಖ್ಯೆ ಮೂರೂವರೆ ಕೋಟಿಗೆ ಏರಲಿದೆ. ಬೆಳವಣಿಗೆಯ ವೇಗ ನೋಡಿದರೆ ನೀರು ಪೂರೈಕೆ ಸಂಬಂಧಿಸಿ ಕಾವೇರಿ ನಾಲ್ಕನೇ ಹಂತ ಯೋಜನೆ ಏನೇನೂ ಸಾಲದು ಎಂದು ಸದಸ್ಯರು ಆತಂಕ ವ್ಯಕ್ತಪಡಿಸಿದರು.

ಮರಿಯಪ್ಪನಪಾಳ್ಯ ಬಳಿ ಮುಖ್ಯ ವಾಲ್ವ್ ಪ್ರದೇಶದಲ್ಲಿ ದುಷ್ಕರ್ಮಿಗಳು ನೀರನ್ನು ಬೇರೆ ದಿಕ್ಕಿಗೆ ತಿರುಗಿಸುತ್ತಿದ್ದಾರೆ. ಅವರನ್ನು ಎದುರಿಸುವುದು ಸುಲಭವಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯೆ ಪದ್ಮಾವತಿ ಹೇಳಿದರು.

ಗುತ್ತಿಗೆದಾರರಿಗೆ ಅಧಿಕಾರಿಗಳ ಭಯ ಇಲ್ಲ. ನಮ್ಮ ಕರೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನೀರು ಬರದಿದ್ದಾಗ ಜನರಿಗೆ ಉತ್ತರಿಸುವುದು ಕಷ್ಟವಾಗುತ್ತಿದೆ. ಸೋನಿ ಜಂಕ್ಷನ್‌ನಲ್ಲಿ ಚರಂಡಿ ನೀರು ರಸ್ತೆಗೆ ಹರಿಯುತ್ತಿದೆ. ಸಿಂಗಸಂದ್ರ ಎಚ್‌ಎಎಲ್‌ ಲೇಔಟ್‌ ನವರು ಠೇವಣಿ ಹಣ ಕಟ್ಟಿದ್ದರೂ ಅವರಿಗೆ ಇನ್ನೂ ನೀರಿನ ಸಂಪರ್ಕ ಕೊಟ್ಟಿಲ್ಲ ಎಂದು ಸದಸ್ಯರು ಹೇಳಿದರು.

ಅಧ್ಯಕ್ಷರು ಹೇಳಿದ್ದು...

* 2021ರ ವೇಳೆಗೆ ತಿಪ್ಪಗೊಂಡನಹಳ್ಳಿ ಕೆರೆಗೆ ಎತ್ತಿನಹೊಳೆ ನೀರು

* 2023ರ ವೇಳೆಗೆ ನೀರು ಪೂರೈಕೆ ಕಾಮಗಾರಿ ಪೂರ್ಣ

* ಜಲಾಗಾರ ನಿರ್ಮಾಣಕ್ಕೆ ಭೂಮಿ ಅಲಭ್ಯತೆ

* ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ನಿಧಿಯಿಂದ ₹ 600 ಕೋಟಿ ವೆಚ್ಚದಲ್ಲಿ ಹಳೆ ಪೈಪ್‌ಗಳ ಬದಲಾವಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT