ಮಂಗಳವಾರ, ಮೇ 18, 2021
23 °C
ಶಿವರಾಮ ಕಾರಂತ ಬಡಾವಣೆ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಡೆಗೆ ಸ್ಥಳೀಯರ ವಿರೋಧ

ಸರ್ವೆಗೆ ಡ್ರೋನ್‌ ಮೊರೆ ಹೋದ ಬಿಡಿಎ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಡಾ.ಕೆ.ಶಿವರಾಮ ಕಾರಂತ ಬಡಾವಣೆಗೆ ಭೂಸ್ವಾಧೀನ ನಡೆಸುವ ಗ್ರಾಮಗಳಲ್ಲಿ ವಸ್ತುಸ್ಥಿತಿ ತಿಳಿದುಕೊಳ್ಳಲು ಸರ್ವೆ ನಡೆಸುವುದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ಬಂದ ಬಳಿಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಾರ್ಯತಂತ್ರ ಬದಲಿಸಿದೆ. ಸರ್ವೆಯರ್‌ಗಳ ಬದಲು ಡ್ರೋನ್‌ ಬಳಸಿ ಸರ್ವೆ ನಡೆಸಲಿದೆ. 

‘ಡ್ರೊನ್‌ ಸರ್ವೆ ಶನಿವಾರದಿಂದಲೇ ಆರಂಭವಾಗಿದೆ. ಸ್ಥಳೀಯರು ಸಹಕರಿಸುತ್ತಾರೆ ಎಂಬ ವಿಶ್ವಾಸ ಇದೆ. ಇಲ್ಲದಿದ್ದರೆ ಪೊಲೀಸರ ನೆರವು ಪಡೆದು ಸರ್ವೆ ಮುಂದುವರಿಸಬೇಕಾಗುತ್ತದೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ಡ್ರೋನ್‌ ಬಳಸಿ ಎಲ್ಲಿ ಹಾಗೂ ಹೇಗೆ ಸರ್ವೆ ನಡೆಸಲಾಗುತ್ತದೆ ಎಂಬ ವಿವರ ಹಂಚಿಕೊಳ್ಳಲು ಅವರು ನಿರಾಕರಿಸಿದರು.

‘ಡ್ರೋನ್‌ ನೆರವಿನಿಂದ ಕಟ್ಟಡಗಳ ಸಂಖ್ಯೆ ಹಾಗೂ ವಿಸ್ತೀರ್ಣವನ್ನು ನಿಖರವಾಗಿ ಲೆಕ್ಕಹಾಕಬಹುದು. ಪ್ರಾಥಮಿಕ ಅಧಿಸೂಚನೆ ಹೊರಡಿಸುವಾಗ ಎಷ್ಟು ಕಟ್ಟಡಗಳಿದ್ದವು ಎಂಬ ಮಾಹಿತಿ ನಮ್ಮ ಬಳಿ ಇದೆ. ಹಾಗಾಗಿ ನಂತರ ಎಷ್ಟು ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು’ ಎಂದರು.

ಈ ಬಡಾವಣೆಗಾಗಿ ಭೂಸ್ವಾಧೀನಪಡಿಸಿಕೊಳ್ಳಲು ಪ್ರಾಧಿಕಾರವು 2008ರ ಡಿಸೆಂಬರ್‌ನಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಸುಪ್ರೀಂ ಕೋರ್ಟ್‌ ಸೂಚನೆ ನೀಡಿದ ಬಳಿಕ 2018ರ ನವೆಂಬರ್‌ 1ರಂದು ಅಂತಿಮ ಅಧಿಸೂಚನೆ ಪ್ರಕಟಿಸಿತ್ತು.  ಹೈಕೋರ್ಟ್‌ ಆದೇಶದ ಮೇರೆಗೆ ಹತ್ತು ವರ್ಷಗಳಲ್ಲಿ ಅನೇಕ ಖಾತಾದಾರರಿಗೆ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಬಗ್ಗೆ ಬಿಡಿಎ ಹಿಂಬರಹ ನೀಡಿದೆ. ಅಲ್ಲೆಲ್ಲ  ಮನೆ, ಶಾಲೆ, ಕಾಲೇಜು, ವಾಣಿಜ್ಯ ಮಳಿಗೆಗಳು ಸೇರಿದಂತೆ ಸಾವಿರಾರು ಕಟ್ಟಡಗಳು
ಎತ್ತಿವೆ.

ಸರ್ಕಾರ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಬಳಿಕ ಭೂಮಾಲೀಕರು ಆ ಜಮೀನಿನಲ್ಲಿ ಯಾವುದೇ ನಿರ್ಮಾಣ ಚಟುವಟಿಕೆ ಕೈಗೊಳ್ಳುವಂತಿಲ್ಲ. ಆದರೆ, ಈ ಬಡಾವಣೆಯ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಬಳಿಕ ಹೈಕೋರ್ಟ್‌ ಆದೇಶದ ಮೇರೆಗೆ ಕಟ್ಟಡ ನಿರ್ಮಿಸಲು ಪ್ರಾಧಿಕಾರವೇ ಅನುಮತಿ ನೀಡಿದೆ. ಅಲ್ಲಿ ಎಷ್ಟು ಹೊಸ ಕಟ್ಟಡಗಳು ನಿರ್ಮಾಣವಾಗಿವೆ, ಎಷ್ಟು ಕಟ್ಟಡಗಳಿಗೆ ನಿರಾಕ್ಷೇಪಣಾ ಪತ್ರ ಲಭ್ಯವಿದೆ, ಅನಧಿಕೃತ ಕಟ್ಟಡಗಳಿವೆಯೇ, ಖಾಲಿ ಜಾಗ ಎಷ್ಟಿದೆ ಎಂಬ ಸ್ಪಷ್ಟ ಚಿತ್ರಣ ಪಡೆಯಲು ಬಿಡಿಎ 2019ರ ಜನವರಿಯಲ್ಲಿ ಸರ್ವೆ ನಡೆಸಲು ಮುಂದಾಗಿತ್ತು.

ಸರ್ವೆ ನಡೆಸಲು ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾಗ ವೀರಸಾಗರ ಗ್ರಾಮದಲ್ಲಿ ಸ್ಥಳೀಯರು ಪ್ರತಿರೋಧ ಒಡ್ಡಿದ್ದರು. ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದ ಅವರು ಸರ್ವೆ ನಡೆಸಲು ಅವಕಾಶವನ್ನೇ ನೀಡಿರಲಿಲ್ಲ. ಹಾಗಾಗಿ ಬಿಡಿಎ ಸರ್ವೆ ಕಾರ್ಯವನ್ನು ಮುಂದೂಡಿತ್ತು.

‘ಸುಪ್ರೀಂ ಕೋರ್ಟ್‌ ಆದೇಶ ಇರುವುದರಿಂದ ನಾವು ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ಬರುವುದಿಲ್ಲ. ಬಡಾವಣೆಗೆ ಗುರುತಿಸಿದ ಜಾಗದಲ್ಲಿ ಎಷ್ಟು ಕಟ್ಟಡಗಳು ತಲೆ ಎತ್ತಿವೆ ಎಂಬ ನಿಖರ ಮಾಹಿತಿ ಸಿಕ್ಕರೆ, ಅವುಗಳನ್ನು ಸ್ವಾಧೀನ ಪಡಿಸಿಕೊಳ್ಳಬೇಕೇ ಅಥವಾ ಹಾಗೆಯೇ ಉಳಿಸಿಕೊಂಡು ಖಾಲಿ ಜಾಗದಲ್ಲಿ ಮಾತ್ರ ನಿವೇಶನಗಳನ್ನು ಅಭಿವೃದ್ಧಿಪಡಿಸಬಹುದೇ ಎಂದು ನಿರ್ಧಾರ ತಳೆಯಬಹುದು. ಹಾಗಾಗಿ ಭೂಮಾಲೀಕರು ಸರ್ವೆಗೆ ಸಹಕರಿಸಬೇಕು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ
ತಿಳಿಸಿದರು.

ಈ ಬಡಾವಣೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ಹೈಕೋರ್ಟ್‌ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಬಿಡಿಎ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಈ ಬಡಾವಣೆಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್‌ನ ಪೀಠವು 2018ರ ಆಗಸ್ಟ್‌ 3ರಂದು ನಿರ್ದೇಶನ ನೀಡಿತ್ತು. ಈ ಬಡಾವಣೆಯ ಹೆಸರಿನಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆ ನಡೆಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಎನ್‌.ಕೇಶನಾರಾಯಣ ಅವರನ್ನು ಸುಪ್ರೀಂ ಕೋರ್ಟ್‌ ನೇಮಿಸಿತ್ತು.

1000ಕ್ಕೂ ಹೆಚ್ಚು ಆಕ್ಷೇಪ

ಜಾಗ ಸ್ವಾಧೀನಪಡಿಸಿಕೊಳ್ಳಲು ಬಿಡಿಎ 3299 ಭೂಮಾಲೀಕರಿಗೆ ಭೂಸ್ವಾಧೀನ ಕಾಯ್ದೆಯಡಿ ನೋಟಿಸ್‌ ಜಾರಿ ಮಾಡಿದೆ. ವಡೇರಹಳ್ಳಿ, ಮೇಡಿ ಅಗ್ರಹಾರ, ಹಾರೋಹಳ್ಳಿ ಗ್ರಾಮಗಳಲ್ಲಿ ಭೂಮಾಲೀಕರು ನೋಟಿಸ್‌ ಸ್ವೀಕರಿಸಲು ನಿರಾಕರಿಸಿದ್ದರು. ಇದುವರೆಗೆ 1000ಕ್ಕೂ ಅಧಿಕ ಮಂದಿ ಭೂಸ್ವಾಧೀನಕ್ಕೆ ಆಕ್ಷೇಪಣೆ ಸಲ್ಲಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು