ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳ ಹಿಡಿದ ‘ಹಸಿರು ಮಾಲಾ’ಯೋಜನೆ

ಉಕ್ಕಿನ ಸೇತುವೆಗೆ ಮಾತ್ರ ಉತ್ಸಾಹ l ಹಸಿರೀಕರಣಕ್ಕೆ ಬಿಡಿಗಾಸೂ ನೀಡದ ಬಿಡಿಎ l 2 ವರ್ಷ ಗಿಡವನ್ನೇ ನೆಟ್ಟಿಲ್ಲ
Last Updated 12 ಫೆಬ್ರುವರಿ 2019, 19:47 IST
ಅಕ್ಷರ ಗಾತ್ರ

ಬೆಂಗಳೂರು: ಉಕ್ಕಿನ ಸೇತುವೆ ಯೋಜನೆ ಜಾರಿಗೆ ಮುಂದಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಗರದ ಹಸಿರೀಕರಣದ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸಿಲ್ಲ. ಎರಡು ವರ್ಷಗಳಿಂದ ಪ್ರಾಧಿಕಾರವು ಒಂದೇ ಒಂದು ಗಿಡವನ್ನೂ ‌ನೆಟ್ಟಿಲ್ಲ.

ಹೊಸ ಬಡಾವಣೆಗಳನ್ನು ನಿರ್ಮಿಸುವಾಗ ಹಸಿರೀಕರಣಕ್ಕೂ ಆದ್ಯತೆ ಸಿಗಬೇಕು ಎಂಬ ಕಾರಣಕ್ಕೆ ಬಿಡಿಎ 2010ರಲ್ಲಿ ‘ಹಸಿರು ಮಾಲಾ’ ಕಾರ್ಯಕ್ರಮವನ್ನು ಆರಂಭಿಸಿತ್ತು. ಇದರಡಿ ಬನಶಂಕರಿ ಹಾಗೂ ವಿಶ್ವೇಶ್ವರಯ್ಯ ಬಡಾವಣೆಗಳೂ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ಈ ಯೋಜನೆಗೆ ಬಿಡಿಎ ಬಜೆಟ್‌ನಲ್ಲಿ ಪ್ರತಿವರ್ಷವೂ ಪ್ರತ್ಯೇಕ ಅನುದಾನ ನೀಡಲಾಗುತ್ತಿತ್ತು. ಆದರೆ, ಎರಡು ವರ್ಷಗಳಿಂದ ಈ ಕಾರ್ಯಕ್ರಮಕ್ಕೆ ಅನುದಾನವನ್ನೇ ಕಾಯ್ದಿರಿಸಿಲ್ಲ.

ಸಾಯಿದತ್ತ ಅವರು ಮಾಹಿತಿ ಹಕ್ಕಿನಡಿ ಕೇಳಿದ ಪ್ರಶ್ನೆಗೆ ಪ್ರಾಧಿಕಾರದ ಅರಣ್ಯ ಮತ್ತು ತೋಟಗಾರಿಕಾ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರು, ‘2016–17ರಲ್ಲಿ ಒಟ್ಟು 58 ಸಾವಿರ ಗಿಡಗಳನ್ನು ನೆಡಲಾಗಿತ್ತು. ಆದರೆ, 2017–18 ಮತ್ತು 2018–19ರಲ್ಲಿ ಯಾವುದೇ ಗಿಡಗಳನ್ನು ನೆಟ್ಟಿಲ್ಲ’ ಎಂದು ಉತ್ತರ ನೀಡಿದ್ದಾರೆ.

‘2017–18 ಹಾಗೂ 2018–19ನೇ ಸಾಲಿನಲ್ಲಿ ಅರಣ್ಯ ಮತ್ತು ತೋಟಗಾರಿಕಾ ವಿಭಾಗವು ಗಿಡಗಳನ್ನು ನೆಟ್ಟು ಬೆಳೆಸುವುದಕ್ಕೆ ತಲಾ ₹ 5 ಕೋಟಿ ಅನುದಾನ ನೀಡುವಂತೆ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಆರ್ಥಿಕಸ್ಥಿತಿ ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಗಿಡ ನೆಡುವ ಕಾರ್ಯಕ್ರಮಕ್ಕೆ ಅನುದಾನ ನೀಡಿರಲಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಭಾರಿ ಯೋಜನೆಗಳಿಗೆ ಮರಗಳನ್ನು ಕಡಿಯಬೇಕಾದಾಗ ಅದರ ಹತ್ತು ‍ಪಟ್ಟು ಮರಗಳನ್ನು ಬೆಳೆಸಬೇಕು. ಒಂದು ಮರ ಕಡಿಯುವ ಮುನ್ನವೇ 10 ಸಸಿಗಳನ್ನು ನೆಟ್ಟಿರಬೇಕು. ಅವುಗಳನ್ನು ಪೋಷಿಸಲು ಸಾಕಷ್ಟು ಅನುದಾನವನ್ನೂ ಒದಗಿಸಬೇಕು’ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 2009ರಲ್ಲೇ ಆದೇಶ ಮಾಡಿದೆ. ಈ ಆದೇಶಕ್ಕೆ ಬಿಡಿಎ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡುತ್ತಿಲ್ಲ.

ಪ್ರಾಧಿಕಾರವು 4 ಸಾವಿರ ಎಕರೆ ಪ್ರದೇಶದಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಯನ್ನು ಅಭಿವೃದ್ಧಿಪಡಿಸುತ್ತಿದೆ. ಇಲ್ಲಿ ಸುಮಾರು 2 ಸಾವಿರ ಎಕರೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಅರಣ್ಯ ಕಾಯ್ದೆಯನ್ನು ಪಾಲಿಸದೆಯೇ ಇಲ್ಲಿ ಲಕ್ಷಾಂತರ ಗಿಡಮರಗಳನ್ನು ಕಡಿಯಲಾಗಿದೆ.

2016ರಲ್ಲಿ ಆಗಿನ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅವರು ಕೆಂಪೇಗೌಡ ಬಡಾವಣೆಗೆ ಭೇಟಿ ನೀಡಿದ್ದಾಗ ಅಲ್ಲಿನ ರಾಜಕಾಲುವೆಗಳ ಇಕ್ಕೆಲಗಳ ಮೀಸಲು ಪ್ರದೇಶದಲ್ಲಿ ಹಾಗೂ ಉದ್ಯಾನಕ್ಕೆ ಕಾಯ್ದಿರಿಸಿದ ಜಾಗಗಳಲ್ಲಿ ಗಿಡ ನೆಡಬೇಕು ಎಂದು ಸೂಚನೆ ನೀಡಿದ್ದರು. ಆದರೆ, ಈವರೆಗೂ ಒಂದೇ ಒಂದು ಗಿಡವನ್ನು ಬೆಳೆಸಿಲ್ಲ.

‘ಕೆಂಪೇಗೌಡ ಬಡಾವಣೆ ಅಭಿವೃದ್ಧಿ ಕಾರ್ಯ ಆರಂಭಿಸಿ ಮೂರು ವರ್ಷಗಳೇ ಉರುಳಿವೆ. ರಾಜಕಾಲುವೆ, ರಸ್ತೆಗಳ ಇಕ್ಕೆಲಗಳಲ್ಲಿ ಹಾಗೂ ಉದ್ಯಾನಕ್ಕೆ ಮೀಸಲಿಟ್ಟ ಜಾಗದಲ್ಲಿ ಆರಂಭದಲ್ಲೇ ಗಿಡಗಳನ್ನು ನೆಡುತ್ತಿದ್ದರೆ ಇಷ್ಟು ಹೊತ್ತಿಗೆ ಏಳೆಂಟು ಅಡಿಗಳಷ್ಟು ಬೆಳೆಯುತ್ತಿದ್ದವು. ಮುಂದಿನ ಮಳೆಗಾಲದಲ್ಲಾದರೂ ಇಲ್ಲಿ ಸಾಕಷ್ಟು ಗಿಡಗಳನ್ನು ನೆಟ್ಟು ಬೆಳೆಸಬೇಕು’ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ನಿವೇಶನದಾರರ ಮುಕ್ತ ವೇದಿಕೆಯ ಚೇತನ್‌ ಶಿವಶಂಕರ್‌ ತಿಳಿಸಿದರು.

‘ನಾನು ಕೊಮ್ಮಘಟ್ಟ ಬಳಿ ಐದನೇ ಬ್ಲಾಕ್‌ನಲ್ಲಿ ದತ್ತಾತ್ರೇಯ ಎರಡು ವರ್ಷ ಹಿಂದೆ ಗಿಡ ನೆಟ್ಟಿದ್ದೆ. ಅದು ಈಗಾಗಲೇ 6 ಅಡಿ ಬೆಳೆದಿದೆ’ ಎಂದು ಅವರು ತಿಳಿಸಿದರು.

ಗುರಿ ಸಾಧನೆ ಶೇ 27 ಮಾತ್ರ

‘ಹಸಿರು ಮಾಲಾ ಯೋಜನೆ ಅಡಿ ನಗರದಲ್ಲಿ 10 ವರ್ಷಗಳಲ್ಲಿ 1 ಕೋಟಿ ಗಿಡಗಳನ್ನು ಬೆಳೆಸುವ ಗುರಿಯನ್ನು ಪ್ರಾಧಿಕಾರ ಹೊಂದಿತ್ತು. ಈ ಯೋಜನೆ ಜಾರಿಯಾಗಿ ಒಂಬತ್ತು ವರ್ಷಗಳು ಉರುಳಿವೆ. ಆದರೆ, ಇದುವರೆಗೆ ಶೇ 27ರಷ್ಟು ಮಾತ್ರ ಗುರಿ ಸಾಧನೆ ಆಗಿದೆ. ಗಿಡ ಬೆಳೆಸಲು ಸಾಕಷ್ಟು ಅನುದಾನ ಒದಗಿಸದಿರುವುದೇ ಇದಕ್ಕೆ ಕಾರಣ’ ಎಂದು ಪ್ರಾಧಿಕಾರದ ಅಧಿಕಾರಿ
ಯೊಬ್ಬರು ತಿಳಿಸಿದರು.

‘ಮನೆ ನಿವೇಶನಗಳಲ್ಲೂ ಗಿಡಗಳಿಲ್ಲ’

1976ರ ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆಯ ಸೆಕ್ಷನ್‌ 7ರ ಪ್ರಕಾರ ನಗರ ಪ್ರದೇಶದ ಮನೆ ನಿವೇಶನಗಳಲ್ಲೂ ಮರ ಬೆಳೆಸುವುದು ಕಡ್ಡಾಯ. ಸಂಸ್ಥೆಗಳು ಹಾಗೂ ಕೈಗಾರಿಕೆಗಳೂ ತಮ್ಮ ಖಾಲಿ ಜಾಗದಲ್ಲಿ ಪ್ರತಿ ಹೆಕ್ಟೇರ್‌ಗೆ ಕನಿಷ್ಠ 25 ಮರಗಳನ್ನು ಬೆಳೆಸಬೇಕು. ಈ ನಿಯಮವೂ ಪಾಲನೆ ಆಗುತ್ತಿಲ್ಲ. ನಗರದಲ್ಲಿ ಹಸಿರು ಕಡಿಮೆಯಾಗುತ್ತಿರುವುದಕ್ಕೆ ಇದು ಕೂಡ ಕಾರಣ ಎನ್ನುತ್ತಾರೆ ಪರಿಸರ ಕಾರ್ಯಕರ್ತರು.

‘ಒಬ್ಬ ವ್ಯಕ್ತಿಗೆ ಉಸಿರಾಡಲು ಶುದ್ಧ ಗಾಳಿ ಸಿಗಬೇಕಾದರೆ ಕನಿಷ್ಠ ಏಳು ಮರ
ಗಳ ಅಗತ್ಯವಿದೆ. ಆದರೆ, ನಗರದಲ್ಲಿ ಏಳು ವ್ಯಕ್ತಿಗಳಿಗೆ ಒಂದರಂತೆ ಮರಗಳ ಅನುಪಾತ ಇದೆ’ ಎನ್ನುತ್ತಾರೆ ಪರಿಸರ ಕಾರ್ಯಕರ್ತ ವಿಜಯ್‌ ನಿಶಾಂತ್‌.

‘ಉಕ್ಕಿನ ಸೇತುವೆಗೆ 812 ಮರ ಕಡಿದರೆ ಅದಕ್ಕೆ ಪರ್ಯಾಯವಾಗಿ ಗಿಡ ಬೆಳೆಸುವುದಕ್ಕೆ ಬಿಡಿಎ ಖಂಡಿತಾ ಗಮನ ನೀಡುವುದಿಲ್ಲ ಎಂಬುದು ನಮಗೆ ಚೆನ್ನಾಗಿ ಗೊತ್ತು. ಯಾವುದೇ ಅಭಿವೃದ್ಧಿ ಯೋಜನೆಗೆ ಮರ ಕಡಿಯುವುದಕ್ಕೆ ನಾವು ವಿರೋಧ ವ್ಯಕ್ತಪಡಿಸುವುದು ಇದೇ ಕಾರಣಕ್ಕೆ’ ಎಂದರು.

ಮನೆ ನಿವೇಶನದಲ್ಲಿ ಎಷ್ಟು ಮರ ಇರಬೇಕು?

ವಿಸ್ತೀರ್ಣ; ಮರಗಳ ಸಂಖ್ಯೆ

222 ಚ.ಮೀ.ವರೆಗೆ; ಕನಿಷ್ಠ 2

222ರಿಂದ 892 ಚ .ಮೀ.; ಕನಿಷ್ಠ 3

892 ಚ.ಮೀ.ಗಿಂತ ಹೆಚ್ಚು; 4ಕ್ಕಿಂತ ಹೆಚ್ಚು

***

ಬಿಡಿಎ ಬಳಿ ಗಿಡ ನೆಡುವುದಕ್ಕೆ ಬಿಡಿಗಾಸೂ ಇಲ್ಲ. ಇನ್ನು ಉಕ್ಕಿನ ಸೇತುವೆ ನಿರ್ಮಿಸಲು ಕಡಿಯುವ ಮರಗಳಿಗೆ ಪ್ರತಿಯಾಗಿ ಗಿಡಗಳನ್ನು ಬೆಳೆಸಲು ದುಡ್ಡು ಎಲ್ಲಿಂದ ಬರುತ್ತದೆ

-ಸಾಯಿದತ್ತ, ಮಾಹಿತಿ ಹಕ್ಕು ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT