ಕೇಂದ್ರದ ಇ–ಕಾಮರ್ಸ್ ನೀತಿಗೆ ಆಕ್ಷೇಪ
ಬೆಂಗಳೂರು: ಕೇಂದ್ರ ಸರ್ಕಾರದ ಕರಡು ಇ–ಕಾಮರ್ಸ್ ನೀತಿಗೆ ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟವು ಆಕ್ಷೇಪ ವ್ಯಕ್ತಪಡಿಸಿ ಉದ್ಯಮ ಮತ್ತು ಆಂತರಿಕ ವ್ಯಾಪಾರ ಪ್ರಚಾರ ಇಲಾಖೆಗೆ ಪತ್ರ ಬರೆದಿದೆ. ಕೆಲವೊಂದು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದೆ.
‘ಈಗಾಗಲೇ ಕಷ್ಟದಲ್ಲಿರುವ ವ್ಯಾಪಾರಿಗಳಿಗೆ, ಇ–ಕಾಮರ್ಸ್ ಕಂಪನಿಗಳಿಂದ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಕಂಪನಿಗಳು ನೀಡುವಷ್ಟು ರಿಯಾಯಿತಿ ನಮಗೆ ಕೊಡಲು ಸಾಧ್ಯವಿಲ್ಲ. ವಿದೇಶಿ ಕಂಪನಿಗಳ ಹಾವಳಿಯಿಂದಾಗಿ ಸ್ವದೇಶಿ ವಸ್ತುಗಳಿಗೆ ಬೇಡಿಕೆ ಕುಸಿದಿದೆ’ ಎಂದು ಪತ್ರದಲ್ಲಿ ತಿಳಿಸಿದೆ.‘ಬೀದಿ ವ್ಯಾಪಾರಿಗಳ ಮೇಲೆ ಈಗಾಗಲೇ ಇ–ಕಾಮರ್ಸ್, ಜಿಎಸ್‌ಟಿಯಿಂದ ಆಗಿರುವ ಪರಿಣಾಮವನ್ನು ತಿಳಿಸಿಕೊಡಲು ವ್ಯಾಪಾರಿಗಳ ಜತೆ ಮಾತುಕತೆ ನಡೆಸಲು ಅವಕಾಶ ನೀಡಬೇಕು. ಹಾಗೆಯೇ ವ್ಯಾಪಾರ ಕ್ಷೇತ್ರ ಕುಸಿಯುತ್ತಿರುವ ಬಗ್ಗೆ ಸಮೀಕ್ಷೆ ನಡೆಸಬೇಕು. ಅದಕ್ಕೊಂದು ಸಮಿತಿ–ಆಯೋಗ ರಚಿಸಬೇಕು’ ಎಂದು ಒತ್ತಾಯಿಸಿದೆ.
‘ಕರಡು ಇ–ಕಾಮರ್ಸ್ ನೀತಿಯನ್ನು ದೇಶದ ಎಲ್ಲಾ ಭಾಷೆಗಳಲ್ಲಿ ಅನುವಾದಗೊಳಿಸಿ ಸಾರ್ವಜನಿಕರ ಚರ್ಚೆಗಳಿಗೆ ಅವಕಾಶ ಕಲ್ಪಿಸಬೇಕು. ಅದರ ಬಳಿಕ ಅಂತಿಮಗೊಳಿಸಬೇಕು. ಬೀದಿ ವ್ಯಾಪಾರಿಗಳ ಸಂಖ್ಯೆ ಮತ್ತಷ್ಟು ಹೆಚ್ಚಿಸಲು ವ್ಯಾಪಾರಿಳೊಂದಿಗೆ ಜತೆ ಚರ್ಚಿಸಬೇಕು. ಅದಕ್ಕೆ ಸಂಬಂಧಿಸಿದ ಕರಡು ನೀತಿಯೊಂದನ್ನು ಈ ವರ್ಷದಲ್ಲೇ ಜಾರಿ ತರಬೇಕು’ ಎಂದು ಆಗ್ರಹಿಸಿದೆ.
‘ಬೀದಿ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ ನೀಡಬೇಕು. ಮಾರುಕಟ್ಟೆಗಳಿಗೆ ಮೂಲ ಸೌಕರ್ಯಳನ್ನು ಕೊಟ್ಟು ಉದ್ದರಿಸುವುದು ಹೇಗೆ ಎಂಬುದು ಕೂಡ ಕರಡು ನೀತಿಯಲ್ಲಿ ಇರಬೇಕು’ ಎಂದೂ ಒತ್ತಾಯಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.