ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

80 ಲಕ್ಷ ವಾಹನಗಳಲ್ಲಿ 9 ಸಾವಿರ ಇ–ವಾಹನ!

2018– 19ರಲ್ಲಿ 6.4 ಲಕ್ಷ ವಾಹನ ಸೇರ್ಪಡೆ lವರ್ಷದಲ್ಲಿ 950 ಇ– ವಾಹನ ನೋಂದಣಿ
Last Updated 15 ಮೇ 2019, 19:14 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದು,ಒಟ್ಟು ಸಂಖ್ಯೆ 80.49 ಲಕ್ಷ ದಾಟಿದೆ. ಆದರೆ ಇವುಗಳಲ್ಲಿ ಇ–ವಾಹನಗಳ ಸಂಖ್ಯೆ 9,316 ಮಾತ್ರ. 2018–19ನೇ ಸಾಲಿನಲ್ಲಿ ಮಾರ್ಚ್‌ ಅಂತ್ಯದವರೆಗೆ 6,43,689 ವಾಹನಗಳು ನೋಂದಣಿಯಾಗಿದ್ದು, ಇದರಲ್ಲಿ 950 ಇ–ವಾಹನಗಳು ಸೇರಿವೆ.

ಹೆಚ್ಚು ಜನಸಂಖ್ಯೆ ಹೊಂದಿದ ನಗರಗಳಲ್ಲಿ ಐದನೇ ಸ್ಥಾನದಲ್ಲಿರುವ ಬೆಂಗಳೂರುವಾಹನ ಪ್ರಮಾಣದಲ್ಲಿ ಮುಂಬೈ, ಚೆನ್ನೈ, ಹೈದರಾಬಾದ್‌ಗಳನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಅತಿ ಹೆಚ್ಚು (1.5 ಕೋಟಿ) ವಾಹನಗಳಿವೆ.

ದಕ್ಷಿಣದಲ್ಲಿ ಹೆಚ್ಚು: ಕಳೆದ ಸಾಲಿನಲ್ಲಿಬೆಂಗಳೂರು ದಕ್ಷಿಣ (ಜಯನಗರ) ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಒಟ್ಟು 1,04,786 ವಾಹನಗಳು ನೋಂದಣಿಯಾಗಿವೆ.

ಬೈಕ್‌ಗಳದ್ದೇ ಸಿಂಹಪಾಲು: ನೋಂದಣಿಯಾದ ವಾಹನಗಳಲ್ಲಿದ್ವಿಚಕ್ರ ವಾಹನಗಳದ್ದೇ ಸಿಂಹಪಾಲು. ನಗರದ ವಿವಿಧ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಒಟ್ಟು4 ಲಕ್ಷ ದ್ವಿಚಕ್ರ ವಾಹನ ನೋಂದಣಿಯಾಗಿರುವುದು ಸಾರಿಗೆ ಇಲಾಖೆ ಅಂಕಿ–ಅಂಶಗಳಿಂದ ತಿಳಿದು ಬಂದಿದೆ.

ಇ–ವಾಹನ ನೋಂದಣಿ ನಿರಾಶಾದಾಯಕ: ಇ–ವಾಹನಗಳ ಬಳಕೆ ಉತ್ತೇಜಿಸಲು ಸರ್ಕಾರ ಹಲವಾರು ಕ್ರಮ ಕೈಗೊಂಡಿದ್ದರೂ ಇವುಗಳ ನೋಂದಣಿ ಪ್ರಮಾಣ ಆಶಾದಾಯಕವಾಗಿಲ್ಲ. ಈ ಆರ್ಥಿಕ ವರ್ಷದಲ್ಲಿ ರಸ್ತೆಗಿಳಿದಿದ್ದು ಕೇವಲ 950 ಇ–ವಾಹನಗಳು.

ಬೆಂಗಳೂರು ಪೂರ್ವ (ಇಂದಿರಾನಗರ) ಸಾರಿಗೆ ಕಚೇರಿಯಲ್ಲಿ ಹೆಚ್ಚು (566) ಇ–ವಾಹನಗಳು ನೋಂದಣಿಯಾಗಿವೆ. ಆರ್‌.ಆರ್‌.ನಗರ ಕಚೇರಿ ವ್ಯಾಪ್ತಿಯಲ್ಲಿ ಅತಿ ಕಡಿಮೆ (ಕೇವಲ 4) ಇ–ವಾಹನ ಸೇರ್ಪಡೆಯಾಗಿವೆ.

ನಗರದಲ್ಲಿ ಎನ್‌ಡಿಎಸ್‌ ಹಾಗೂ ಮಹೀಂದ್ರ ಕಂಪನಿಯ ಕಾರು, ಆಟೊ ಮತ್ತು ಸ್ಕೂಟರ್‌ಗಳು ಹೆಚ್ಚು ನೋಂದಣಿಯಾಗಿವೆ.

ಖರೀದಿಗೆ ನಿರಾಸಕ್ತಿ:ಬ್ಯಾಟರಿ ಬಾಳಿಕೆ ಇಲ್ಲದಿರುವುದು, ನಗರದಲ್ಲಿ ವಿದ್ಯುತ್‌ ಚಾರ್ಜಿಂಗ್ ಪಾಯಿಂಟ್‌ಗಳ ಕೊರತೆ ಹಾಗೂ ವಿವಿಧ ಮಾದರಿಗಳು ಲಭ್ಯವಿರದ ಕಾರಣ ಜನ ಇ–ವಾಹನಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರ ಇ–ವಾಹನಗಳ ಕುರಿತು ಹೆಚ್ಚು ಪ್ರಚಾರ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ.

ರಾಜಸ್ವ ಹೆಚ್ಚಳ: ಸಾರಿಗೆ ಇಲಾಖೆಯುಒಂದು ವರ್ಷದ ಅವಧಿಯಲ್ಲಿ ನೋಂದಣಿ ಶುಲ್ಕದ ರೂಪದಲ್ಲಿ ₹6,158 ಕೋಟಿ ಸಂಗ್ರಹಿಸಿದೆ. ₹ 6,006 ಕೋಟಿ ರಾಜಸ್ವ ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿತ್ತು. ರಾಜಸ್ವ ಸಂಗ್ರಹ ಪ್ರಮಾಣದಲ್ಲಿ ಶೇ 102ರಷ್ಟು ಗುರಿಸಾಧನೆಯಾಗಿದೆ ಎಂದು ಇಲಾಖೆ ಹೇಳಿಕೊಂಡಿದೆ.

ಹೆಚ್ಚಿದ ವಾಹನ ದಟ್ಟಣೆ: ವಾಹನ ಪ್ರಮಾಣದ ಹೆಚ್ಚಳ ನಗರದಲ್ಲಿ ಆರೋಗ್ಯ ಮತ್ತು ಸಾಮಾಜಿಕ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಆಂಬುಲೆನ್ಸ್‌ಗಳೂ ಸಕಾಲದಲ್ಲಿ ಆಸ್ಪತ್ರೆ ತಲುಪಲು ಸಾಧ್ಯವಾಗುತ್ತಿಲ್ಲ. ಮನೆಯಿಂದ ಹೊರ ಬಿದ್ದವರು ವಿಷಯುಕ್ತ ಗಾಳಿ ಸೇವಿಸುತ್ತ ಮರಳಬೇಕಾದ ಸ್ಥಿತಿ ಇದೆ.

1,500 ಇ–ಬಸ್‌ ಪೂರೈಕೆಗೆ ಟೆಂಡರ್‌

ಮುಂದಿನ 5 ವರ್ಷಗಳಲ್ಲಿ ಹಂತ ಹಂತವಾಗಿ ಒಟ್ಟು 1,500 ಎಲೆಕ್ಟ್ರಿಕ್‌ ಬಸ್‌ಗಳನ್ನು ಪೂರೈಸಲು ಮತ್ತು ಅವುಗಳಿಗೆ ಚಾರ್ಜಿಂಗ್‌ ಘಟಕಗಳನ್ನು ಸ್ಥಾಪಿಸಲು ಮಾ.8ರಂದು ಬಿಎಂಟಿಸಿ ಟೆಂಡರ್‌ ಕರೆದಿದೆ. ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಆ ಪ್ರಕ್ರಿಯೆ ಸ್ಥಗಿತಗೊಂಡಿದೆ.

‘ಪ್ರತ್ಯೇಕ ಮಾರ್ಗ ನಿರ್ಮಿಸಿ’

‘ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ನಗರದ ರಸ್ತೆಗಳಲ್ಲಿ ದಟ್ಟಣೆ ಹೆಚ್ಚಾಗಿದೆ. ಸಾರ್ವಜನಿಕ ಸಾರಿಗೆ ವಾಹನಗಳಿಗೆ ಪ್ರತ್ಯೇಕ ಮಾರ್ಗ ನಿರ್ಮಿಸಿದರೆ ಜನ ಅವುಗಳ ಬಳಕೆಯತ್ತ ಆಸಕ್ತಿ ತೋರುತ್ತಾರೆ. ಮನೆಯಲ್ಲಿ ನಿಲುಗಡೆಗೆ ಸ್ಥಳವಿದ್ದರೆ ಮಾತ್ರ ವಾಹನ ನೋಂದಣಿಗೆ ಅವಕಾಶ ನೀಡಬೇಕು. ಪ್ರಗತಿಯಲ್ಲಿರುವ ಮೆಟ್ರೊ ಕಾಮಗಾರಿ ಬೇಗ ಪೂರ್ಣಗೊಳಿಸಬೇಕು. ನಗರದ ಹೊರವರ್ತುಲ ರಸ್ತೆಗಳಲ್ಲಿ ವಾಹನ ನಿಲುಗಡೆ ಸ್ಥಳಗಳನ್ನು ಅಭಿವೃದ್ಧಿಪಡಿಸಬೇಕು’ ಎಂದು ಸಲಹೆ ನೀಡುತ್ತಾರೆ ವಿಶ್ವಬ್ಯಾಂಕ್‌ನ ಮೂಲಸೌಕರ್ಯ ಮತ್ತು ರಸ್ತೆ ಸುರಕ್ಷತಾ ಸಲಹೆಗಾರ ಡಾ.ಲೋಕೇಶ್‌ ಹೆಬ್ಬಾನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT