ಭಾನುವಾರ, ಸೆಪ್ಟೆಂಬರ್ 20, 2020
21 °C
ಪಾಳುಬಿದ್ದಿದೆ ಭದ್ರತಾ ಸಿಬ್ಬಂದಿ ಕೊಠಡಿ lಗೋರಿಗೆ ಅಕ್ರಮವಾಗಿ ಕಾಂಕ್ರೀಟ್‌ ಚಾವಣಿ ನಿರ್ಮಾಣ

ಕಾಯಕಲ್ಪಕ್ಕೆ ಕಾಯುತ್ತಿದೆ ಬ್ಯಾಡರಹಳ್ಳಿ ಸ್ಮಶಾನ

ಪ್ರವೀಣ್‌ ಕುಮಾರ್ ಪಿ.ವಿ. Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಇಲ್ಲಿ ಬೇಕಾಬಿಟ್ಟಿ ಗೋರಿಗಳನ್ನು ನಿರ್ಮಿಸಿದರೂ ಕೇಳುವವರಿಲ್ಲ. ಆವರಣ ಗೋಡೆ ಕೆಡವಿದರೂ ಬಿಬಿಎಂಪಿ ಚಕಾರ ಎತ್ತುವುದಿಲ್ಲ. ಇಲ್ಲಿ ಕಾವಲುಗಾರರಿಗಾಗಿ ಕೊಠಡಿ ನಿರ್ಮಿಸಲಾಗಿದೆ. ಆದರೆ, ಕಾವಲುಗಾರರೇ ಇಲ್ಲ!

ಈ ಸ್ಮಶಾನದ ಯಶವಂತಪುರ ಹೋಬಳಿಯ ಹೇರೋಹಳ್ಳಿ ವಾರ್ಡ್‌ನ ಬ್ಯಾಡರಹಳ್ಳಿಯ ಸಾರ್ವಜನಿಕ ಸ್ಮಶಾನದ ದುಃಸ್ಥಿತಿ ಇದು.

ಕಸದ ತೊಟ್ಟಿಯಾಗುತ್ತಿದೆ ಸ್ಮಶಾನ:

‘ಸ್ಮಶಾನದ ಸುತ್ತ ಆವರಣಗೋಡೆಯನ್ನು ನಿರ್ಮಿಸಲಾಗಿದೆ. ಕನಕ ಭವನದ ಪಕ್ಕದಲ್ಲಿ ಈ ಆವರಣ ಗೋಡೆಯನ್ನು ಎರಡು ವರ್ಷ ಹಿಂದೆ ಕೆಡವಲಾಗಿತ್ತು. ಅಲ್ಲಿ ಇನ್ನೂ ಒಂದು ಗೇಟ್ ಕೂಡಾ ನಿರ್ಮಿಸಿಲ್ಲ. ಇದಾದ ಬಳಿಕ ಆವರಣ ಗೋಡೆಯನ್ನು ನಾಲ್ಕೈದು ಕಡೆ ಕೆಡವಲಾಗಿದೆ. ಸ್ಮಶಾನಕ್ಕೆ ಎಲ್ಲಿಂದಲೋ ಕಟ್ಟಡ ತ್ಯಾಜ್ಯವನ್ನು ತಂದು ಸುರಿದು ಹೋಗುತ್ತಿದ್ದಾರೆ.

ಕೆಲವರು ಕಸವನ್ನು ತಂದು ಇಲ್ಲಿ ರಾಶಿ ಹಾಕುತ್ತಿದ್ದಾರೆ. ಬಿಬಿಎಂಪಿ ವಾಹನಗಳಲ್ಲೂ ಕಸವನ್ನು ತಂದು ಇಲ್ಲಿ ಸುರಿಯಲಾಗುತ್ತಿದೆ’ ಎಂದು ಬ್ಯಾಡರಹಳ್ಳಿ ಬಿಟಿಎಸ್‌ ಬಡಾವಣೆಯ ನಿವಾಸಿ ಉಮಾನಾಥ ಶಾಸ್ತ್ರಿ ದೂರಿದರು. ‌

ಬೇಕಾಬಿಟ್ಟಿ ಗೋರಿ ನಿರ್ಮಾಣ: ‘ಈ ಸ್ಮಶಾನದಲ್ಲಿ ಮೃತದೇಹ ದಫನ ಮಾಡುವವರು ಮನಬಂದಂತೆ ಗೋರಿಗಳನ್ನು ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ಇಲ್ಲಿ ಗೋರಿಯೊಂದಕ್ಕೆ ಕಾಂಕ್ರೀಟ್‌ ಚಾವಣಿ ನಿರ್ಮಿಸಿದ್ದಾರೆ. ಇದೇ ರೀತಿ ಮುಂದುವರಿದರೆ ಕ್ರಮೇಣ ಇಲ್ಲಿ ಮೃತದೇಹಗಳ ದಫನಕ್ಕೆ ಜಾಗವೇ ಇರುವುದಿಲ್ಲ. ಅಕ್ರಮವಾಗಿ ನಿರ್ಮಿಸಿರುವ ಇಂಥಹ ಸಂರಚನೆಗಳನ್ನು ಬಿಬಿಎಂಪಿಯವರು ತೆರವುಗೊಳಿಸಬೇಕು. ಗೋರಿ ನಿರ್ಮಿಸುವುದಕ್ಕೆ ಸಮಾನ ನೀತಿಯನ್ನು ಜಾರಿಗೊಳಿಸಬೇಕು’ ಎಂದು ಅವರು ಸಲಹೆ ನೀಡಿದರು.

ಪಡ್ಡೆ ಹುಡುಗರ ಅಡ್ಡೆ:  ‘ಆವರಣ ಗೋಡೆಗಳನ್ನು ಕೆಡವಿದ ಬಳಿಕ ಈ ಸ್ಮಶಾನವು ಅಕ್ರಮ ಚಟುವಟಿಕೆಯ ಅಡ್ಡೆಯಾಗಿ ಬದಲಾಗುತ್ತಿದೆ. ಧೂಮಪಾನಕ್ಕೆ, ಮದ್ಯ, ಮಾದಕ ದ್ರವ್ಯ ಸೇವನೆಗೆ ಈ ಜಾಗವನ್ನು ಪಡ್ಡೆ ಹುಡುಗರು ಬಳಸುತ್ತಿದ್ದಾರೆ. ಇವರನ್ನು ಹೇಳುವವರು ಕೇಳುವವರು ಯಾರೂ ಇಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸ್ಥಳೀಯರು.

ಇಲ್ಲಿ ಕಾವಲುಗಾರರಿಗಾಗಿ 2012ರಲ್ಲಿ ಒಂದು ಕೊಠಡಿಯನ್ನು ನಿರ್ಮಿಸಲಾಗಿತ್ತು. ಆದರೆ, ಇಲ್ಲಿಗೆ ಇದುವರೆಗೂ ಕಾವಲುಗಾರರನ್ನೇ ಬಿಬಿಎಂಪಿ ನೇಮಿಸಿಲ್ಲ. ಈ ಕೊಠಡಿಯೂ ಈಗ ಪಾಳುಬಿದ್ದಿದೆ. ಕಾವಲುಗಾರನನ್ನು ನೇಮಿಸಿದರೆ ಇಲ್ಲಿನ ಅಕ್ರಮ ಚಟುವಟಿಕೆಗಳಿಗೆಲ್ಲ ಕಡಿವಾಣ ಹಾಕಬಹುದು ಎಂದು ಸಲಹೆ ನೀಡುತ್ತಾರೆ ಸ್ಥಳೀಯರು.

ಹೇರೋಹಳ್ಳಿ, ಬ್ಯಾಡರಹಳ್ಳಿ, ಅಂಜನಾನಗರ, ಬಿಳೇಕಲ್ಲು, ದನಿನಮಂದೆ, ಮುದ್ದಿನಪಾಳ್ಯ, ಬಾಲಾಜಿ ಬಡಾವಣೆ, ಮುನೇಶ್ವರ ಬಡಾವಣೆ ಹಾಗೂ ಕೆಂಪೇಗೌಡ ನಗರ ಬಡಾವಣೆಗಳ ಸುಮಾರು 50 ಸಾವಿರ ನಿವಾಸಿಗಳು ಈ ಸ್ಮಶಾನವನ್ನು ಅವಲಂಬಿಸಿದ್ದಾರೆ. ಈ ಪ್ರದೇಶದ ಜನರು ವಿದ್ಯುತ್‌ ಚಿತಾಗಾರ ಬಳಸಬೇಕಾದರೆ ಸುಮಾರು 5 ಕಿ.ಮೀ ದೂರದಲ್ಲಿರುವ ಸುಮನಹಳ್ಳಿಗೆ ಹೋಗಬೇಕು.

ಬ್ಯಾಡರಹಳ್ಳಿ ಸ್ಮಶಾನದಲ್ಲೇ ಸಾಕಷ್ಟು ಸ್ಥಳಾವಕಾಶ ಇದೆ. ಇಲ್ಲೇ ಒಂದು ವಿದ್ಯುತ್‌ ಚಿತಾಗಾರ ನಿರ್ಮಿಸಿದರೆ ಆಸುಪಾಸಿನ ಗ್ರಾಮಗಳ ನಿವಾಸಿಗಳಿಗೂ ಅನುಕೂಲವಾಗುತ್ತದೆ ಎಂಬುದು ಸ್ಥಳೀಯರ ಬೇಡಿಕೆ.

ಸ್ಮಶಾನದ ತುಂಬಾ ಗಿಡಗಂಟಿಗಳು ಬೆಳೆದಿವೆ. ಇವುಗಳನ್ನು ಸ್ವಚ್ಛಗೊಳಿಸಿ ಹೂವು ಹಾಗೂ ಹಣ್ಣಿನ ಗಿಡ–ಮರಗಳನ್ನು ಬೆಳೆಸಬೇಕು. ಇದರಿಂದ ಇಲ್ಲಿನ ಪರಿಸರದ ಅಂದವೂ ಹೆಚ್ಚಲಿದೆ ಎಂದು ಸ್ಥಳೀಯರು ಒತ್ತಾಯಿಸಿದರು.

ಹೋರಾಟ ಮಾಡಿ ಜಾಗ ಕಾಯ್ದಿರಿಸಿದರು

ಹೇರೋಹಳ್ಳಿ ಗ್ರಾಮದ ಸರ್ವೆನಂಬರ್‌ 60ರಲ್ಲಿನ 20 ಎಕರೆ ಜಾಗವನ್ನು ಸುಬ್ರಹ್ಮಣ್ಯ ಎಜುಕೇಷನ್‌ ಸೊಸೈಟಿಗೆ ಗುತ್ತಿಗೆ ಆಧಾರದಲ್ಲಿ ನೀಡಲಾಗಿತ್ತು.

ಈ ಪ್ರದೇಶದಲ್ಲಿ ಎಲ್ಲೂ ಸ್ಮಶಾನ ಇರಲಿಲ್ಲ.

ಇದನ್ನು ಪಡೆಯುವ ಸಲುವಾಗಿ ಸ್ಥಳೀಯರು ಸಾಕಷ್ಟು ಹೋರಾಟ ಮಾಡಿದ್ದರು. 2000ರಲ್ಲಿ ಒಮ್ಮೆ ಹೆಣವನ್ನು ಪೊಲೀಸ್‌ ಠಾಣೆಯ ಎದುರು ಇಟ್ಟು ಪ್ರತಿಭಟನೆ ನಡೆಸಿದ್ದರು. ಬಳಿಕ ಸರ್ಕಾರವು ಸುಬ್ರಹ್ಮಣ್ಯ ಎಜುಕೇಷನ್‌ ಸೊಸೈಟಿಗೆ ಗುತ್ತಿಗೆಗೆ ನೀಡಿದ್ದ ಜಾಗದಲ್ಲಿ 5 ಎಕರೆಯಷ್ಟು ಜಾಗದ ಗುತ್ತಿಗೆ ರದ್ದುಪಡಿಸಿ, ಅದನ್ನು ಸ್ಮಶಾನಕ್ಕಾಗಿ ಕಾಯ್ದಿರಿಸಿತ್ತು.

ಈ ಜಾಗವನ್ನು ಅನ್ಯ ಉದ್ದೇಶಕ್ಕಾಗಿ ಬಳಸಿಕೊಳ್ಳುವಂತಿಲ್ಲ ಎಂದು 2009ರ ಜನವರಿ 7ರಂದು ಬೆಂಗಳೂರು ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ ಆದೇಶ ಮಾಡಿದ್ದರು.

‘ಭವನ’ಗಳ ನಿರ್ಮಾಣಕ್ಕೆ ತಡೆ

ಸ್ಮಶಾನಕ್ಕೆ ಕಾಯ್ದಿರಿಸಿದ ಜಾಗದಲ್ಲಿ ವಿಶೇಷ ಜಿಲ್ಲಾಧಿಕಾರಿಯ ಆದೇಶವನ್ನು ಗಾಳಿಗೆ ತೂರಿ ಕನಕ ಭವನ ನಿರ್ಮಿಸಲಾಯಿತು. ಅದರ ಬೆನ್ನಲ್ಲೇ ಇಲ್ಲಿ ಕೆಂಪೇಗೌಡ ಭವನ ನಿರ್ಮಾಣ ಆರಂಭಿಸಲಾಯಿತು.

ಬಸವ ಭವನ ನಿರ್ಮಾಣಕ್ಕೂ ಸಿದ್ಧತೆ ನಡೆದಿತ್ತು. ಇದೇ ರೀತಿ ಮುಂದುವರಿದರೆ ಕ್ರಮೇಣ ಸ್ಮಶಾನದ ಬದಲು ಭವನಗಳೇ ಇಲ್ಲಿ ರಾರಾಜಿಸಲಿವೆ ಎಂಬುದನ್ನು ಅರಿತ ಸ್ಥಳೀಯರು ಮತ್ತೆ ಕಾನೂನು ಹೋರಾಟ ಶುರುಹಚ್ಚಿಕೊಂಡರು. ‘ರಾಜಕೀಯ ನಾಯಕರು ನಿರ್ದಿಷ್ಟ ಸಮುದಾಯಗಳ ಜನರನ್ನು ಓಲೈಸುವ ಸಲುವಾಗಿ ಭವನಗಳ ನಿರ್ಮಾಣಕ್ಕೆ ಮುಂದಾಗಿದ್ದರು. ನಾವು ಸಾಕಷ್ಟು ಪ್ರತಿರೋಧ ಒಡ್ಡಿದ ಬಳಿಕ ಹೊಸ ಭವನಗಳ ನಿರ್ಮಾಣ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡಿದೆ’ ಎಂದು ಉಮಾನಾಥ ಶಾಸ್ತ್ರಿ ವಿವರಿಸಿದರು.

‘ಮಹಾನೀಯರ ಹೆಸರಿನಲ್ಲಿ ಭವನ ನಿರ್ಮಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಅದಕ್ಕಾಗಿ ಸ್ಮಶಾನಕ್ಕೆ ಕಾಯ್ದಿರಿಸಿದ ಜಾಗವನ್ನು ಬಳಸುವುದು ಬೇಡ ಎಂಬುದಷ್ಟೇ ನಮ್ಮ ವಿನಂತಿ’ ಎಂದರು.

**

ಈ ಸ್ಮಶಾನದ ಅವ್ಯವಸ್ತೆಗೆ ಬಿಬಿಎಂಪಿ ಅಧಿಕಾರಿಗಳ ಅಸಡ್ಡೆಯೇ ಕಾರಣ. ಇನ್ನಾದರೂ ಎಚ್ಚೆತ್ತು ಇದನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಬೇಕು
- ಉಮಾನಾಥ ಶಾಸ್ತ್ರಿ, ಬಿಟಿಎಸ್‌ ಬಡಾವಣೆ ನಿವಾಸಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು