ನಡು ನೀರಿನಲ್ಲಿ ಗ್ರಾಮೀಣ ವೈದ್ಯರು

ಬೆಂಗಳೂರು: ಎಂಬಿಬಿಎಸ್ ಮುಗಿಸಿ ಗ್ರಾಮೀಣ ಸೇವೆಗೆಂದು ನೂರಾರು ವೈದ್ಯರನ್ನು ರಾಜ್ಯ ಸರ್ಕಾರ ನಡು ನೀರಿನಲ್ಲಿ ಕೈಬಿಟ್ಟಿದೆ. ಸ್ನಾತಕೋತ್ತರ ಕೋರ್ಸ್ ಮಾಡಿ ವಿಶೇಷಜ್ಞರಾಗಬೇಕು ಎಂಬ ಕನಸು ಕಂಡ ವೈದ್ಯರು ಹತಾಶರಾಗಿದ್ದಾರೆ.
ಇದಕ್ಕೆ ಮುಖ್ಯ ಕಾರಣ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶದಲ್ಲಿ ಈವರೆಗೆ ಇದ್ದ ಇನ್‌ಸರ್ವಿಸ್ ಕೋಟಾವನ್ನು ರಾಜ್ಯ ಸರ್ಕಾರ ಯಾವುದೇ ಮೂನ್ಸೂಚನೆ ಇಲ್ಲದೆ ರದ್ದು ಮಾಡಿರುವುದು. ಈ ಕುರಿತು ಗ್ರಾಮಾಂತರ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ‘ಪ್ರಜಾವಾಣಿ’ಯೊಂದಿಗೆ ಆತಂಕ ತೋಡಿಕೊಂಡರು.
ಎಂಬಿಬಿಎಸ್ ಬಳಿಕ ಗ್ರಾಮಾಂತರ ಭಾಗದಲ್ಲಿ 3 ರಿಂದ 5 ವರ್ಷಗಳ ಕಾಲ ಸೇವೆ ಸಲ್ಲಿಸಿದ ವೈದ್ಯರಿಗೆ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಶೇ 30 ರಷ್ಟು ಮೀಸಲಾತಿ ನೀಡಲಾಗುತ್ತಿತ್ತು. ಅಂದರೆ 1000 ಸೀಟುಗಳು ಇದ್ದರೆ 300 ಸೀಟುಗಳು ಗ್ರಾಮಾಂತರ ಭಾಗದಲ್ಲಿ ಸೇವೆ ಸಲ್ಲಿಸಿದವರಿಗೆ ಸಿಗುತ್ತಿತ್ತು. ಈ 300 ಸೀಟುಗಳಲ್ಲಿ ಶೇ 83 ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ, ಶೇ 17 ಇಎಸ್‌ಐ, ಬಿಬಿಎಂಪಿಗಳಲ್ಲಿ ಸೇವೆ ಸಲ್ಲಿಸಿದ ವೈದ್ಯರಿಗೆ ಮೀಸಲು ಇರುತ್ತಿತ್ತು.
ಈ ಬಾರಿ ಸ್ನಾತಕೋತ್ತರ ಕೋರ್ಸ್ ಪ್ರವೇಶದ ಪರೀಕ್ಷೆ ಮುಗಿದು ರ್‍ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಮೀಸಲು ರದ್ದು ಮಾಡಿರುವುದನ್ನು ಪ್ರಕಟಿಸಲಾಯಿತು. ಇದರಿಂದ ನಮಗೆ ಆಘಾತವಾಗಿದೆ. ಮೊದಲೇ ಈ ವಿಷಯ ಪ್ರಕಟಿಸಿದ್ದರೆ ಅನುಕೂಲವಾಗುತ್ತಿತ್ತು. ಗ್ರಾಮಾಂತರ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ರಜೆ ಹಾಕಿ ಓದಿ ಕೊಳ್ಳಲು ಅವಕಾಶ ಸಿಗುವುದಿಲ್ಲ. ಆದರೆ, ನಗರ
ಪ್ರದೇಶಗಳಲ್ಲಿ ಎಂಬಿಬಿಎಸ್ ಮಾಡಿದವರು 2–3 ವರ್ಷ ಇದಕ್ಕಾಗಿಯೇ ತಯಾರಿ ನಡೆಸುತ್ತಾರೆ. ಯಾವುದೇ ತಯಾರಿ ಇಲ್ಲದೆ ಅವರೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ವೈದ್ಯರೊಬ್ಬರು ತಿಳಿಸಿದರು.
ಸ್ಪಂದಿಸದ ಅಧಿಕಾರಿಗಳು: ‘ಈ ಸಮಸ್ಯೆಯ ಬಗ್ಗೆ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಲು ಹಲವು ಬಾರಿ ಹೋಗಿದ್ದೆವು. ಆದರೆ, ಅವರು ಮಾನವೀಯ ದೃಷ್ಟಿಯಿಂದ ಸ್ಪಂದಿಸದೇ ಬಾಯಿಗೆ ಬಂದಂತೆ ಮಾತನಾಡಿ ಕಳಿಸಿದರು. ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ನಮ್ಮ ಮನವಿ ಆಲಿಸಿದರೂ ಹೆಚ್ಚಿನ ಪ್ರಯೋಜನ ಆಗಲಿಲ್ಲ’ ಎಂದು ಅವರು ವಿವರಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸಮಸ್ಯೆಗಳು ಬಗ್ಗೆ ವಿವರಿಸಿದರೂ ಚುನಾವಣೆ ಗಡಿಬಿಡಿಯಲ್ಲಿ ಇದ್ದ ಅವರು ಯಾವುದೇ ಭರವಸೆ ನೀಡಲಿಲ್ಲ ಎಂದು ಹೇಳಿದರು.
‘ಪಶ್ಚಿಮ ಬಂಗಾಳದಲ್ಲಿ ಸ್ನಾತಕೋತ್ತರ ಕೋರ್ಸ್‌ಗಳಿಗೆ ಶೇ 10 ರಷ್ಟು ಮೀಸಲಾತಿ ಇದೆ. ನಮ್ಮ ರಾಜ್ಯದಲ್ಲಿ ಒಂದೆರಡು ವರ್ಷದ ಮಟ್ಟಿಗಾದರೂ ಇನ್‌ಸರ್ವಿಸ್ ಕೋಟಾ ಜಾರಿಯಲ್ಲಿಡಬೇಕು. ಈ ಕೋಟಾದಡಿ ಆಯ್ಕೆ ಮಾಡಿದರೆ, ಸೇವಾವಧಿ ಪೂರ್ತಿ ಗ್ರಾಮೀಣ ಭಾಗದಲ್ಲಿಯೇ ಸೇವೆ ಸಲ್ಲಿಸುತ್ತವೆ. ಗ್ರಾಮೀಣ ಸೇವೆಯಲ್ಲಿರುವವರು ಬಿಟ್ಟು ತಜ್ಞರಾದವರು ಗ್ರಾಮಾಂತರ ಭಾಗಕ್ಕೆ ಸೇವೆ ಸಲ್ಲಿಸಲು ಬರುವುದಿಲ್ಲ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು’ ಎಂದು ಅವರು ಹೇಳಿದರು.
ಸಮಸ್ಯೆಗೆ ಕಾರಣವೇನು?
ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಸೀಟುಗಳ ಸಂಖ್ಯೆಯನ್ನು 571 ಹೆಚ್ಚಿಸಲು ಭಾರತೀಯ ವೈದ್ಯಕೀಯ ಮಂಡಳಿ(ಎಂಸಿಐ) ಸಮ್ಮತಿ ನೀಡಿದೆ. ಇದರಿಂದ ರಾಜ್ಯದಲ್ಲಿ ವೈದ್ಯಕೀಯ ಸ್ನಾತಕೋತ್ತರ ಸೀಟುಗಳ ಸಂಖ್ಯೆ 771 ರಿಂದ 1,342ಕ್ಕೆ ಏರಿಕೆ ಆಗಲಿದೆ. ಎಂಸಿಐನ ಗವರ್ನರ್‌ಗಳ ಮಂಡಳಿ ಪಿಜಿ ಡಿಪ್ಲೊಮಾಗಳನ್ನು ಸ್ನಾತಕೋತ್ತರ ಕೋರ್ಸ್‌ಗಳನ್ನಾಗಿ ಪರಿವರ್ತಿಸಲು ಒಪ್ಪಿಕೊಂಡಿದೆ. ಇನ್ ಸರ್ವಿಸ್ ಕೋಟಾ ತೆಗೆದು ಹಾಕಲು ಎಂಸಿಐ ಹೇಳಿದ್ದರೂ, ಮೀಸಲಾತಿ ಉಳಿಸಿಕೊಳ್ಳುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.