ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಿಗೇನಹಳ್ಳಿ ಕಳ್ಳರಿಗೆ ಕಾನ್‌ಸ್ಟೆಬಲ್‌ಗಳ ಶ್ರೀರಕ್ಷೆ!

ಸದಾಶಿವನಗರ ಠಾಣೆ ಪೊಲೀಸರಿಬ್ಬರು ಅಮಾನತು
Last Updated 6 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯ ಹೈ–ಸೆಕ್ಯುರಿಟಿ ವಲಯಗಳಲ್ಲೇ ಗಂಧದ ಮರಗಳನ್ನು ಕತ್ತರಿಸಿಕೊಂಡು ಹೋದರೂ ‘ಕಟ್ಟಿಗೇನಹಳ್ಳಿ ಸ್ಮಗ್ಲರ್‌’ಗಳಿಗೆ ಬಂಧನದ ಭೀತಿಯೇ ಇರಲಿಲ್ಲ. ಅದಕ್ಕೆ ಕಾರಣ, ಅವರಿಗೆ ಶ್ರೀರಕ್ಷೆಯಾಗಿ ನಿಂತಿದ್ದ ಆ ಇಬ್ಬರು ಕಾನ್‌ಸ್ಟೆಬಲ್‌ಗಳು!

ಪೊಲೀಸರು ಯಾವಾಗ ತಮ್ಮನ್ನು ಬಂಧಿಸಲು ಬರುತ್ತಾರೆ? ಕಾರ್ಯಾಚರಣೆಗೆ ಯಾವ ರೀತಿಯ ಸಿದ್ಧತೆ ನಡೆಯುತ್ತಿದೆ? ಸಿಬ್ಬಂದಿಯ ವಿಶೇಷ ತಂಡಗಳು ಯಾವ ಯಾವ ಊರುಗಳಲ್ಲಿ ಬೀಡು ಬಿಟ್ಟಿವೆ ಸೇರಿದಂತೆ ಎಲ್ಲ ಗೋಪ್ಯ ಮಾಹಿತಿಗಳೂ ಆರೋಪಿಗಳಿಗೆ ಮೊದಲೇ ಗೊತ್ತಾಗುತ್ತಿತ್ತು. ಕಮಿಷನ್ ಆಸೆಗೆ ಕಳ್ಳರಿಗೇ ಮಾಹಿತಿದಾರರಂತೆ ಕೆಲಸ ಮಾಡುತ್ತಿದ್ದ ಆ ಕಾನ್‌ಸ್ಟೆಬಲ್‌ಗಳೀಗ, ‘ಸಿಡಿಆರ್‌’ (ಕರೆಗಳ ವಿವರ) ಸುಳಿವಿನಿಂದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

‘ಸಾರಾಯಿಪಾಳ್ಯದ ಮುಜಾದ್ದೀನ್ ವುಲ್ಲಾ (36) ಹಾಗೂ ಆತನ ತಮ್ಮ ಇಮ್ದಾದ್ ವುಲ್ಲಾ (34) ಕುಖ್ಯಾತ ಸ್ಮಗ್ಲರ್‌ಗಳು. ಸದಾಶಿವನಗರ ಠಾಣೆಯ ಕೃಷ್ಣಪ್ಪ ಹಾಗೂ ಅಶ್ವತ್ಥ ರೆಡ್ಡಿ ನಾಲ್ಕು ವರ್ಷಗಳಿಂದ ಆ ಸೋದರರ ಜತೆ ಸಂಪರ್ಕದಲ್ಲಿದ್ದಾರೆ. ಈ ಬಗ್ಗೆ ಇಲಾಖಾ ವಿಚಾರಣೆ ನಡೆಸಿದಾಗ, ಕಾನ್‌ಸ್ಟೆಬಲ್‌ ಗಳು ಕರ್ತವ್ಯಲೋಪ ಎಸಗಿರುವುದು ಸಾಬೀತಾಗಿದೆ. ಫೆ.8ರಂದು ಅವರಿಬ್ಬರನ್ನೂ ಅಮಾನತು ಮಾಡಿದ್ದೇನೆ’ ಎಂದು ಕೇಂದ್ರ ವಿಭಾಗದ ಡಿಸಿ‍ಪಿ ಡಿ.ದೇವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಪ್ಪಿಸಿಕೊಳ್ಳಿ’ ಎಂದು ಸಂದೇಶ: ಕಟ್ಟಿಗೇನಹಳ್ಳಿಯ ಸ್ಮಗ್ಲರ್‌ ಸೈಯದ್ ರಿಯಾಜ್‌ನ ಸಹಚರರಾದ ಮುಜಾದ್ದೀನ್–ಇಮ್ದಾದ್ ಸೋದರರು, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದ ಕಾರ್ಮಿಕರನ್ನು ಕರೆಸಿ ನಗರದಲ್ಲಿ ಗಂಧದ ಮರಗಳನ್ನು ಕಡಿಸುತ್ತಿದ್ದರು. ಬಳಿಕ ಅವುಗಳನ್ನು ಅನಂತಪುರದ ಮಡಕಶಿರ ಕಾರ್ಖಾನೆಗಳಿಗೆ ಸಾಗಿಸುತ್ತಿದ್ದರು. 2018ರ ನವೆಂಬರ್‌ನಲ್ಲೇ ಈ ಗ್ಯಾಂಗ್‌ನ ಮಾಹಿತಿ ಸಂಗ್ರಹಿಸಿಕೊಂಡಿದ್ದ ಕೇಂದ್ರ ವಿಭಾಗದ ಪೊಲೀಸರು, ಬೇಗೂರು ಕ್ರಾಸ್‌ನಲ್ಲಿದ್ದ ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ಪ್ರಾರಂಭಿಸಿದ್ದರು. ಆದರೆ, ಪೊಲೀಸರು ಸ್ಥಳಕ್ಕೆ ತೆರಳುವಷ್ಟರಲ್ಲಿ ಅವರೆಲ್ಲ ಗಂಧದ ತುಂಡುಗಳ ಸಮೇತ ಪರಾರಿಯಾಗಿದ್ದರು. ಅನುಮಾನಗೊಂಡ ಡಿಸಿಪಿ, ಗ್ಯಾಂಗ್‌ನ ಎಲ್ಲ ಸದಸ್ಯರ ಮೊಬೈಲ್‌ ಸಂಖ್ಯೆಗಳ ಸಿಡಿಆರ್ ತೆಗೆಸಿದ್ದರು. ಆಗ ಈ ಇಬ್ಬರು ಕಾನ್‌ಸ್ಟೆಬಲ್‌ಗಳು ಮುಜಾದ್ದೀನ್–ಇಮ್ದಾದ್ ಸೋದರರ ಜತೆ ಸಂಪರ್ಕದಲ್ಲಿರುವುದು ಗೊತ್ತಾಗಿತ್ತು. ‌‘ಬೇಗ ಅಲ್ಲಿಂದ ಹೊರಟು ಹೋಗಿ. ಪೊಲೀಸರು ನಿಮ್ಮನ್ನು ಬಂಧಿಸಲು ಬರುತ್ತಿದ್ದಾರೆ’ ಎಂದು ಇವರು ಆ ಸೋದರರಿಗೆ ಕಳುಹಿಸಿದ್ದ ಸಂದೇಶವೂ ಸಿಕ್ಕಿತ್ತು.

‘ಬೆಂಗಳೂರಿನಿಂದ ಸುಮಾರು 200 ಕಿ.ಮೀ ದೂರ ಹೋಗಿ ಅಡಗಿಕೊಳ್ಳಿ. ನೀವು ಮೊಬೈಲ್ ಬಳಸಬೇಡಿ ಎಂದು ಸಂದೇಶವನ್ನೂ ರವಾನಿಸಿದ್ದರು’ ಎಂದು ಮೂಲಗಳು ತಿಳಿಸಿವೆ.


ದಿಕ್ಕು ತಪ್ಪಿಸಿ ಪೊಲೀಸರ ದಾಳಿ

2018ರ ಡಿ.10ರಂದು ಮುಜಾದ್ದೀನ್–ಇಮ್ದಾದ್‌ ಸೋದರರು ಚಿಕ್ಕಬಳ್ಳಾಪುರದಲ್ಲಿದ್ದ ಬಗ್ಗೆ ಕೇಂದ್ರ ವಿಭಾಗದ ಪೊಲೀಸರಿಗೆ ಮಾಹಿತಿ ಬಂದಿತ್ತು. ಕಾರ್ಯಾಚರಣೆಗೆ ಸಿದ್ಧತೆ ನಡೆಸಿಕೊಂಡ ಅವರು, ‘ಗ್ಯಾಂಗ್ ಶಿವಮೊಗ್ಗದಲ್ಲಿ ಬೀಡು ಬಿಟ್ಟಿರುವ ಬಗ್ಗೆ ಮಾಹಿತಿ ಇದೆ. ತಂಡಗಳು ಅಲ್ಲಿಗೆ ತೆರಳಲು ಸಿದ್ಧರಾಗಿ’ ಎಂದು ಕೆಳ ಹಂತದ ಎಲ್ಲ ಸಿಬ್ಬಂದಿಗೂ ತಪ್ಪು ಮಾಹಿತಿ ಕೊಟ್ಟಿದ್ದರು. ಆ ಮೂಲಕ ಕೃಷ್ಣಪ್ಪ ಹಾಗೂ ಅಶ್ವತ್ಥಶೆಟ್ಟಿ ಅವರ ದಿಕ್ಕು ತಪ್ಪಿಸಿದ್ದರು.

ತಕ್ಷಣ ಆರೋಪಿ ಸೋದರರಿಗೆ ಕರೆ ಮಾಡಿದ್ದ ಅವರು, ‘ನೀವು ಶಿವಮೊಗ್ಗದಲ್ಲಿದ್ದರೆ ಕೂಡಲೇ ತಪ್ಪಿಸಿಕೊಳ್ಳಿ’ ಎಂದಿದ್ದರು. ಆದರೆ, ತಾವು ಬೇರೆ ಸ್ಥಳದಲ್ಲಿದ್ದ ಕಾರಣ ಸೋದರರು ಆ ಕರೆಯನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಮರುದಿನ ಸಂಜೆ ಪೊಲೀಸರು ಚಿಕ್ಕಬಳ್ಳಾಪುರದಲ್ಲೇ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದ್ದರು. ಬಳಿಕ ಡಿಸಿಪಿ ಆ ಕಾನ್‌ಸ್ಟೆಬಲ್‌ಗಳಿಗೇ ಗೊತ್ತಿಲ್ಲದಂತೆ ಇಲಾಖಾ ತನಿಖೆಗೆ ಆದೇಶಿಸಿದ್ದರು. ಅವರಿಬ್ಬರನ್ನೂ ಕಾರ್ಯಾಚರಣೆಯ ತಂಡದಿದ್ದ ಹೊರಗಿಟ್ಟು, ಜ.5ರಂದು ಕಟ್ಟಿಗೇನಹಳ್ಳಿ ಗ್ರಾಮದಲ್ಲೂ ಕಾರ್ಯಾಚರಣೆ ನಡೆಸಿ ಸ್ಮಗ್ಲರ್‌ಗಳಾದ ಸೈಯದ್ ರಿಯಾಜ್ ಹಾಗೂ ಆತನ ಮಗ ಸೈಯದ್ ಷೇರ್ ಅಲಿಯನ್ನು ಸೆರೆಹಿಡಿದಿದ್ದರು.

17 ಮರಗಳು ‌ಉಳಿಯುತ್ತಿದ್ದವು!
‘ಖ್ಯಾತ ವಿಜ್ಞಾನಿ ‌ದಿವಂಗತ ಸಿ.ವಿ.ರಾಮನ್ ಅವರ ಮನೆ ಆವರಣದಲ್ಲಿದ್ದ ಗಂಧದ ಮರ 2017ರ ನ.11ರಂದು ಕಳವಾಗಿತ್ತು. ಮಲ್ಲೇಶ್ವರ ಪೊಲೀಸರು ಆಗಲೇ ಆರೋಪಿಗಳನ್ನು ಬಂಧಿಸುವವರಿದ್ದರು. ಆದರೆ, ಕೃಷ್ಣಪ್ಪ ಹಾಗೂ ಅಶ್ವತ್ಥರೆಡ್ಡಿ ಆ ಮಾಹಿತಿಯನ್ನೂ ಸೋರಿಕೆ ಮಾಡಿದ್ದರಿಂದ ಕೂದಲೆಳೆಯ ಅಂತರದಿಂದ ತಪ್ಪಿಸಿಕೊಂಡಿದ್ದರು. ನಂತರ 17 ಕಡೆ ಗಂಧದ ಮರ ಕಡಿದಿದ್ದರು’ ಎಂದು ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT