ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿಯಲ್ಲಿ ಮತ್ತೆ ನಳನಳಿಸಿದ ಕಮಲ

ಮೋದಿ ಅಲೆಯಲ್ಲಿ ತೇಲಿಬಂದ ಗೆಲುವಿನ ಹಾಯಿದೋಣಿ – ಮೈತ್ರಿಗೆ ಸಿಗದ ಸಮ್ಮತಿಯ ಮುದ್ರೆ * ತೇಜಸ್ವಿ ಸೂರ್ಯಗೆ ಚೊಚ್ಚಲ ಗೆಲುವು
Last Updated 23 ಮೇ 2019, 19:57 IST
ಅಕ್ಷರ ಗಾತ್ರ

ಬೆಂಗಳೂರು: ಕ್ಷೇತ್ರವಾರು ಮರುವಿಂಗಡಣೆ ಬಳಿಕ ನಡೆದ ಎರಡು ಚುನಾವಣೆಗಳಲ್ಲಿ ಬೆಂಗಳೂರು ನಗರದ ಮೂರು ಲೋಕಸಭಾ ಕ್ಷೇತ್ರಗಳಲ್ಲೂ ಪಾರಮ್ಯ ಮರೆದಿದ್ದ ಬಿಜೆಪಿಯ ಗೆಲುವಿನ ನಾಗಾಲೋಟ ಈ ಬಾರಿಯೂ ಮುಂದುವರಿದಿದೆ. ರಾಜಧಾನಿಯ ಮೂರೂ ಕ್ಷೇತ್ರಗಳಲ್ಲೂ ಕಮಲ ಮತ್ತೆ ನಳನಳಿಸಿದೆ.

ಅನಂತ ಕುಮಾರ್‌ ಸತತ 6 ಬಾರಿ ಗೆಲುವು ಸಾಧಿಸಿದ್ದ ‘ದಕ್ಷಿಣ’ದಲ್ಲಿ ತರುಣ ನಾಯಕ ತೇಜಸ್ವಿ ಸೂರ್ಯ ಅವರ ರಾಜಕೀಯ ಬದುಕು ಉದಯವಾಗಿದ್ದು ಈ ಬಾರಿಯ ವಿಶೇಷ. ‘ಉತ್ತರ’ದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ‘ಕೇಂದ್ರ’ದಲ್ಲಿ ತೂಗುಯ್ಯಾಲೆಯಾಡಿದ್ದ ವಿಜಯಲಕ್ಷ್ಮಿ ಕೊನೆಗೂ ಪಿ.ಸಿ.ಮೋಹನ್‌ ಅವರತ್ತ ಕೃಪಾಕಟಾಕ್ಷ ತೋರಿದ್ದಾಳೆ.

ತೇಜಸ್ವಿ ಸೂರ್ಯ ಅವರಿಗಿದು ಚೊಚ್ಚಲ ಗೆಲುವು. ಸದಾನಂದ ಗೌಡರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸತತ ಎರಡನೇ ಬಾರಿ ಸಂಸತ್‌ ಪ್ರವೇಶಿಸುತ್ತಿದ್ದಾರೆ. ಮೋಹನ್‌ ಅವರಿಗೆ ಇದು ಹ್ಯಾಟ್ರಿಕ್‌ ವಿಜಯ. ಮೋದಿ ವರ್ಚಸ್ಸಿನ
ಪ್ರಭಾವಳಿಈ ಮೂವರ ಗೆಲುವಿನಲ್ಲೂ ಎದ್ದು ಕಾಣಿಸುತ್ತಿದೆ.

ಚುನಾವಣೆ ಘೋಷಣೆ ಆಗುವವರೆಗೂ ಮೈಮರೆತು, ‘ಯುದ್ಧಕಾಲದ ಶಸ್ತ್ರಾಭ್ಯಾಸ’ ನಡೆಸಿದ್ದ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟಕ್ಕೆ ನಗರದ ಮತದಾರರು ಸೋಲಿನ ಕಹಿಗುಳಿಗೆ ನೀಡಿದ್ದಾರೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ,
ಮೈತ್ರಿಪಕ್ಷಗಳ ನಾಯಕರ ನಡುವೆ ಸಮನ್ವಯದ ಕೊರತೆ, ಯುವ ಮತದಾರರನ್ನು ಸೆಳೆಯುವಲ್ಲಿ ವೈಫಲ್ಯ, ನಾಯಕರಲ್ಲಿ ಸಮನ್ವಯದ ಕೊರತೆ... ಮೊದಲಾದ ಲೋಪಗಳಿಗೆ ಮೈತ್ರಿಪಕ್ಷಗಳು ತಕ್ಕ ಬೆಲೆ ತೆರಬೇಕಾಗಿ ಬಂದಿದೆ. ಜಾತಿ ಹಾಗೂ ಧರ್ಮ ಆಧರಿಸಿದ ಮತ ಲೆಕ್ಕಾಚಾರದಲ್ಲಿ ಚುನಾವಣೆ ಗೆಲ್ಲುವ ತಂತ್ರಗಾರಿಕೆ ಫಲಿಸದು ಎಂಬ ಸ್ಪಷ್ಟ ಸಂದೇಶವನ್ನು ಈ ಫಲಿತಾಂಶವು ತೋರಿಸಿಕೊಟ್ಟಿದೆ.

ನಗು ಮೊಗದ ಗೌಡರು ಮತ್ತೆ ‘ಉತ್ತರಾ’ಧಿಕಾರಿ

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ.

ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮಲ್ಲೇಶ್ವರ ಕ್ಷೇತ್ರವೊಂದನ್ನು ಹೊರತುಪಡಿಸಿ ಉಳಿದ ಏಳರಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟದ ಶಾಸಕರೇ ಪ್ರತಿನಿಧಿಸುತ್ತಿದ್ದಾರೆ. ತಮಗೆ ಪ್ರತಿಕೂಲವಾಗಿದ್ದ ವಾತಾವರಣವನ್ನು ಭೇದಿಸಿ ವಿಜಯ ಮಾಲೆಯನ್ನು ಕೊರಳಿಗೇರಿಸಿಕೊಳ್ಳುವಲ್ಲಿ ಗೌಡರ ನೆರವಿಗೆ ಬಂದಿದ್ದು ‘ಮೋದಿ ಅಲೆ’.

ಸದಾನಂದ ಗೌಡರು ಚುನಾವಣಾ ಪ್ರಚಾರದ ವೇಳೆಯೂ, ‘ಮೋದಿ ಅವರನ್ನು ಗೆಲ್ಲಿಸಿ’ ಎಂದೇ ಮತ ಕೇಳಿದ್ದರು. ಚುನಾವಣೆ ಘೋಷಣೆ ಆದಂದಿನಿಂದಲೂ ಅಬ್ಬರದ ಪ್ರಚಾರದ ಮೊರೆ ಹೋಗದೇ ಗಲ್ಲಿ ಗಲ್ಲಿಗೆ ತೆರಳಿ ವೋಟ್‌ ಕೇಳಿದ್ದರು.

ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮುಖಂಡರು ಈ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದ್ದರು. ಸೂಕ್ತ ಅಭ್ಯರ್ಥಿ ಸಿಗದ ಕಾರಣ ಜೆಡಿಎಸ್‌ ಕೊನೆಯ ಕ್ಷಣದಲ್ಲಿ ಈ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿತು. ಇಲ್ಲಿ ಅಭ್ಯರ್ಥಿಯಾಗಲು ಮೊದಲು ಹಿಂದೇಟು ಹಾಕಿದ್ದ ಕೃಷ್ಣ ಬೈರೇಗೌಡ ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ಸೂಚಿಸಿದ್ದರು. ಮೈತ್ರಿಕೂಟದ ಈ ಗೊಂದಲವನ್ನು ಡಿ.ವಿ.ಎಸ್‌. ಚೆನ್ನಾಗಿಯೇ ಬಳಸಿಕೊಂಡರು. ಈ ಕ್ಷೇತ್ರದಲ್ಲಿ ಯಾರನ್ನು ಕಣಕ್ಕಿಳಿಸಬೇಕೆಂಬುದನ್ನು ಮೈತ್ರಿಕೂಟವು ನಿರ್ಧರಿಸುವಷ್ಟರಲ್ಲಿ ಡಿವಿಎಸ್‌ ಒಂದು ಸುತ್ತಿನ ಚುನಾವಣಾ ಪ್ರಚಾರ ಮುಗಿಸಿದ್ದರು.

‘ಕೇಂದ್ರ ಸಚಿವರಾಗಿ ಸದಾನಂದ ಅವರು ಈ ಕ್ಷೇತ್ರಕ್ಕೆ ಏನೂ ಕೊಡುಗೆ ನೀಡಿಲ್ಲ. ಅವರು ಕ್ಷೇತ್ರದ ಜನರ ಕೈಗೇ ಸಿಗುವುದಿಲ್ಲ’ ಎಂಬ ವಿಚಾರವನ್ನೇ ಮುಂದಿಟ್ಟುಕೊಂಡು ಮೈತ್ರಿಕೂಟದ ಮುಖಂಡರು ಪ್ರಚಾರ ನಡೆಸಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ನೆನಪಿಸುವ ಮೂಲಕ ಸದಾನಂದ ಗೌಡರು ಅಷ್ಟೇ ಸಮರ್ಥವಾಗಿ ತಿರುಗೇಟು ನೀಡಿದ್ದರು. ಮೈತ್ರಿಕೂಟದ ಮುಖಂಡರು ತಮ್ಮ ‘ನಗುಮೊಗ’ದ ಬಗ್ಗೆ ಟೀಕೆ ಮಾಡಿದ್ದನ್ನೂ ಭಾವನಾತ್ಮಕವಾಗಿ ಬಳಸಿಕೊಂಡರು.

‘ಸದಾನಂದ ಗೌಡರು ಸೋತೇ ಬಿಡುತ್ತಾರೆ ಎಂಬಂತೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರು ಬಿಂಬಿಸಿದ್ದರು. ಅವರು ಋಣಾತ್ಮಕ ಪ್ರಚಾರ ನಡೆಸಿದ್ದೇ ಪರೋಕ್ಷವಾಗಿ ಗೌಡರ ಗೆಲುವಿಗೆ ಕಾರಣವಾಯಿತು. ಅವರ ವ್ಯಕ್ತಿತ್ವದ ಬಗ್ಗೆ ಅರಿವಿದ್ದ ಜನತೆ ಅವರ ಸೋಲನ್ನು ತಪ್ಪಿಸಲು ಪಣತೊಟ್ಟರು. ಅವರ ಸೌಮ್ಯ ಸ್ವಭಾವ ಹಾಗೂ ಮೋದಿ ಕುರಿತು ಜನರಿಗಿದ್ದ ಒಲವು ಅವರನ್ನು ಗೆಲುವಿನ ದಡ ಸೇರಿಸಿದೆ’ ಎಂದು ಡಿವಿಎಸ್‌ ಅವರ ನಿಕಟವರ್ತಿಯೊಬ್ಬರು ಗೆಲುವನ್ನು ವಿಶ್ಲೇಷಿಸಿದರು.

ಈ ಹಿಂದೆ, ದಕ್ಷಿಣ ಕನ್ನಡ ಹಾಗೂ ಉಡುಪಿ–ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ತಲಾ ಒಂದು ಬಾರಿ ಆಯ್ಕೆಯಾಗಿದ್ದ ಡಿ.ವಿ.ಎಸ್‌. ಸತತ ನಾಲ್ಕನೇ ಬಾರಿ ಸಂಸತ್‌ ಪ್ರವೇಶಿಸುತ್ತಿದ್ದಾರೆ.

ಉದಯಿಸುತ್ತಲೇ ಪ್ರಜ್ವಲಿಸಿದ ಸೂರ್ಯ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯ ಎಂಬ ಯುವನಾಯಕನ ಉದಯವಾಗಿದೆ. ಚೊಚ್ಚಲ ಚುನಾವಣೆಯಲ್ಲೇ 3.31 ಲಕ್ಷ ಮತಗಳ ಅಂತರದಿಂದ ಗೆದ್ದಿರುವ ತೇಜಸ್ವಿ ಸೂರ್ಯ ಈ ವಿಚಾರದಲ್ಲಿ ತಮ್ಮ ರಾಜಕೀಯ ನಾಯುಕ ಅನಂತ ಕುಮಾರ್ ಅವರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ (2014ರಲ್ಲಿ ಅನಂತ ಕುಮಾರ್‌ ಅವರು ನಂದನ್‌ ನಿಲೇಕಣಿ ವಿರುದ್ಧ 2.28 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು). ತಮ್ಮ ಉಮೇದುವಾರಿಕೆ ಬಗ್ಗೆ ಪಕ್ಷದೊಳಗೆ ಹೊಗೆಯಾಡಿದ್ದ ಭಿನ್ನಮತವನ್ನು ಮೀರಿ ಸಾಧಿಸಿರುವ ಈ ಭರ್ಜರಿ ಗೆಲುವು ಅವರ ರಾಜಕೀಯ ಭವಿಷ್ಯವನ್ನು ಮತ್ತಷ್ಟು ಉಜ್ವಲಗೊಳಿಸಿದೆ.

ಈ ಕ್ಷೇತ್ರದಲ್ಲಿ ಅನಂತ ಕುಮಾರ್‌ ಅವರ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್‌ ನೀಡಲಾಗುವುದು ಎಂದು ಬಿಜೆಪಿಯ ರಾಜ್ಯಮಟ್ಟದ ನಾಯಕರು ಪ್ರಕಟಿಸಿದ್ದರು. ಆದರೆ, ಪಕ್ಷದ ಹೈಕಮಾಂಡ್‌ ಕೊನೆ ಕ್ಷಣದಲ್ಲಿ ತೇಜಸ್ವಿ ಸೂರ್ಯ ಅವರನ್ನು ಕಣಕ್ಕಿಳಿಸಿತ್ತು. ಇದು ಕಾರ್ಯಕರ್ತರ ಹಾಗೂ ಅನಂತ್‌ ಕುಮಾರ್‌ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಅಭ್ಯರ್ಥಿಯ ಬದಲಾವಣೆಗೆ ಕಾರಣ ಕೇಳಿದ್ದ ಪಕ್ಷದ ಕೆಲವು ಸ್ಥಳೀಯ ಮುಖಂಡರು ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದರು. ಈ ಭಿನ್ನಾಭಿಪ್ರಾಯ ಬೆಳೆಯದಂತೆ ತಡೆಯುವಲ್ಲಿ ಪಕ್ಷದ ನಾಯಕರು ಸಫಲರಾದರು.

ಈ ಕ್ಷೇತ್ರ ಬಿಜೆಪಿ ಭದ್ರಕೋಟೆ ಎಂದೇ ಗುರುತಿಸಿಕೊಂಡಿದ್ದರೂ ಅನಂತ ಕುಮಾರ್‌ ಅಭಿಮಾನಿಗಳು ಕೈಕೊಡಬಹುದು ಎಂಬ ಆತಂಕ ಪಕ್ಷದ ನಾಯಕರಲ್ಲಿ ಮನೆ ಮಾಡಿತ್ತು. ಹಾಗಾಗಿ ಅವರು ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಪಟ್ಟಿದ್ದರು. ತೇಜಸ್ವಿ ಅವರು ಮೋದಿ ಹಾಗೂ ಅಮಿತ್‌ ಶಾ ಅವರ ನೆಚ್ಚಿನ ಅಭ್ಯರ್ಥಿ ಎಂಬ ಅಭಿಪ್ರಾಯ ಕಾರ್ಯಕರ್ತರಲ್ಲಿ ಹೆಚ್ಚಿನ ಉತ್ಸಾಹ ತುಂಬಿತ್ತು. ಮೈತ್ರಿಕೂಟದ ನಾಯಕರ ವರ್ತನೆ, ಅವರ ಬಾಯಿಂದ ಬರುವ ಮಾತುಗಳು ಜನರಲ್ಲಿ ಬೇಸರ ಹುಟ್ಟಿಸಿದ್ದವು. ಈ ಎಲ್ಲ ಅಂಶಗಳು ತೇಜಸ್ವಿ ಅವರ ಗೆಲುವಿನ ಅಂತರ ಹೆಚ್ಚಿಸಲು ಕಾರಣವಾದವು.

ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್‌ 20 ವರ್ಷಗಳ ಹಿಂದೆ ಇದೇ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿ ‘ಕೈ’ಸುಟ್ಟುಕೊಂಡಿದ್ದರು.

ಹೊಂದಾಣಿಕೆ ರಾಜಕೀಯ, ಇಲ್ಲಿ ಪಕ್ಷಕ್ಕೆ ತಳ ಮಟ್ಟದ ಸಂಘಟನೆ ಭದ್ರವಾಗಿಲ್ಲದಿರುವುದು ಹರಿಪ್ರಸಾದ್‌ ಪಾಲಿಗೆ ಮುಳುವಾಯಿತು. ಕೊನೆಯ ಕ್ಷಣದಲ್ಲಿ ಅವರು ಇಲ್ಲಿ ಅಖಾಡಕ್ಕಿಳಿದರೂ ಬಿಜೆಪಿಯಲ್ಲಿ ಹೊಗೆಯಾಡಿದ ಭಿನ್ನಮತದ ಲಾಭ ಪಡೆಯವ ಸಣ್ಣ ಅವಕಾಶವೊಂದು ಅವರ ಪಾಲಿಗೆ ಒದಗಿ ಬಂದಿತ್ತು. ಆದರೆ, ಅದರಲ್ಲಿ ಅವರು
ಸಫಲರಾಗಲಿಲ್ಲ.

ಬೆಂಗಳೂರು ಕೇಂದ್ರದಲ್ಲಿ ಮೋಹನ್ ಹ್ಯಾಟ್ರಿಕ್ ಕಮಾಲ್

ನಗರದ ಮೂರು ಕ್ಷೇತ್ರಗಳಲ್ಲಿ ಹೆಚ್ಚು ಪೈಪೋಟಿ ಇದ್ದುದು ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ. ಕಳೆದ ಬಾರಿ ನಗರದಲ್ಲಿ ಗೆದ್ದಿದ್ದ ಪಕ್ಷದ ಉಳಿದ ಇಬ್ಬರು ನಾಯಕರು ಕೇಂದ್ರ ಸಚಿವರಾಗಿದ್ದರಿಂದ ಪಕ್ಷದ ತಳಮಟ್ಟದ ಕಾರ್ಯಕರ್ತರಿಗೆ ಹಾಗೂ ಮತದಾರರ ಸಮಸ್ಯೆ ಆಲಿಸಲು ಸುಲಭವಾಗಿ ಕೈಗೆ ಸಿಗುತ್ತಿದ್ದುದು ಪಿ.ಸಿ.ಮೋಹನ್‌ ಅವರು. ಸರಳ ಸಜ್ಜನಿಕೆಯ ನಾಯಕ ಎಂಬ ಹೆಗ್ಗಳಿಕೆ ಹೊಂದಿದ್ದರೂ ಅವರಿಗೆ ಈ ಬಾರಿಯ ಗೆಲುವು ಸುಲಭವಾಗಿ ಒಲಿಯಲಿಲ್ಲ. ಗೆಲುವಿಗಾಗಿ ಪಕ್ಷದ ಉಳಿದಿಬ್ಬರು ಅಭ್ಯರ್ಥಿಗಳಿಗಿಂತ ಹೆಚ್ಚು ಬೆವರು ಸುರಿಸಿದ್ದು ಮೋಹನ್‌.

ಹೂಡಿ ರೈಲು ನಿಲ್ದಾಣವನ್ನು ಸಂಸದರ ನಿಧಿಯಿಂದಲೇ ಅಭಿವೃದ್ಧಿಪಡಿಸಿದ್ದು, ಬೈಯಪ್ಪನಹಳ್ಳಿಯಲ್ಲಿ ರೈಲ್ವೆ ಟರ್ಮಿನಲ್‌ ಸ್ಥಾಪನೆಗೆ ಮುತುವರ್ಜಿ ವಹಿಸಿದ್ದು, ಸಬ್‌ಅರ್ಬನ್‌ ರೈಲು ಜಾಲ ಅಭಿವೃದ್ಧಿಗೆ ಒತ್ತಾಯಿಸಿ ನಗರದ ಸಂಘಟನೆಗಳು ದೊಡ್ಡ ಮಟ್ಟದ ಹೋರಾಟ ನಡೆಸಿದಾಗ ಈ ಬೇಡಿಕೆಯನ್ನು ಕೇಂದ್ರದ ಅಂಗಳಕ್ಕೆ ತಲುಪಿಸಲು ಶ್ರಮಿಸಿದ್ದು ಅವರ ಬಗ್ಗೆ ಮತದಾರರಲ್ಲಿ ಒಲವು ಹೆಚ್ಚಲು ಕಾರಣವಾಗಿತ್ತು.

ಆದರೆ, ಮೋಹನ್‌ ಅವರಿಗೆ ಈ ಬಾರಿ ಪ್ರತಿಕೂಲ ವಾತಾವರಣವೂ ಇತ್ತು. ಕಳೆದ ಬಾರಿ ಮೋಹನ್‌ ಅವರೆದುರು ಸೋತಿದ್ದ ಕಾಂಗ್ರೆಸ್‌ನ ಯುವ ನಾಯಕ ರಿಜ್ವಾನ್‌ ಅರ್ಷದ್‌ ಪರ ಅನುಕಂಪವೂ ಇತ್ತು. ಮುಸ್ಲಿಂ ಮತದಾರರು ಗಣನೀಯ ಸಂಖ್ಯೆಯಲ್ಲಿರುವುದು ಮೋಹನ್‌ ಅವರಿಗಿಂತ ರಿಜ್ವಾನ್‌ ಪಾಲಿಗೆ ಅನುಕೂಲವಾಗಿತ್ತು. ಇನ್ನೊಂದೆಡೆ, ಈ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಸಿನಿಮಾ ನಟ ಪ್ರಕಾಶ್‌ ರಾಜ್‌ ಅವರು ಬಿಜೆಪಿಯ ಮತ ಬುಟ್ಟಿಗೆ ಕೈ ಹಾಕದಂತೆ ನೋಡಿಕೊಳ್ಳಬೇಕಾಗಿತ್ತು.

ಇವೆಲ್ಲದರ ನಡುವೆಯೂ ಮೋಹನ್‌ ಅವರು ಮೋದಿ ಅಲೆಯ ಬೆನ್ನೇರಿ ಗೆಲುವಿನ ದಡ ಸೇರಿದ್ದಾರೆ. ಹ್ಯಾಟ್ರಿಕ್‌ ಜಯದ ನಗೆ ಬೀರಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಅವರ ಗೆಲುವಿಗಾಗಿ ಶಕ್ತಿಮೀರಿ ಶ್ರಮಿಸಿದ್ದಾರೆ.

ರಿಜ್ವಾನ್‌ ಅರ್ಷದ್‌ ಪಾಲಿಗೆ ಪಕ್ಷದೊಳಗಿನ ಭಿನ್ನಮತ ಮುಳುವಾಯಿತು. ಶಿವಾಜಿನಗರ ಕ್ಷೇತ್ರದ ಶಾಸಕ ರೋಷನ್‌ ಬೇಗ್‌ ಇಲ್ಲಿನ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ‘ಬೇಗ್‌ ಅವರು ಚುನಾವಣಾ ಪ್ರಚಾರದ ವೇಳೆ ಸಹಕಾರ ನೀಡಿಲ್ಲ’ ಎಂದು ಫಲಿತಾಂಶ ಬರುವ ಮುನ್ನವೇ ರಿಜ್ವಾನ್‌ ಆರೋಪಿಸಿದ್ದರು. ಪ್ರಕಾಶ್‌ ರಾಜ್‌ ಅವರೂ ಕಾಂಗ್ರೆಸ್‌ನ ಒಂದಷ್ಟು ಮತ ಕಸಿದುಕೊಂಡಿದ್ದರು.

‘ಸಿನಿಮಾ ಪರದೆ’ಯಲ್ಲಿನ ನಟನೆಗೆ ಸಿಗುವ ಮೆಚ್ಚುಗೆಗೆ ಹಾಗೂ ರಾಜಕೀಯದಲ್ಲಿ ಜನರ ಒಲವು ಗಳಿಸುವುದಕ್ಕೂ ಅಜಗಜಾಂತರವಿದೆ ಎಂಬುದನ್ನು ಈ ಕ್ಷೇತ್ರದ ಫಲಿತಾಂಶ ತೋರಿಸಿಕೊಟ್ಟಿದೆ. ನಟ ಪ್ರಕಾಶ್‌ ರಾಜ್‌ ಅವರ ‘ಜಸ್ಟ್‌ ಆಸ್ಕಿಂಗ್‌’ಗೆ 28,822 ಮತದಾರರು ಮಾತ್ರ ದನಿಗೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT