ಎಚ್‌1ಎನ್‌1 ಪೀಡಿತರಿಗೆ ಬೇರೆ ವಾರ್ಡ್‌

7
‘ಪ್ರಜಾವಾಣಿ’ ವರದಿಗೆ ಸ್ಪಂದಿಸಿದ ಮುಖ್ಯಮಂತ್ರಿ

ಎಚ್‌1ಎನ್‌1 ಪೀಡಿತರಿಗೆ ಬೇರೆ ವಾರ್ಡ್‌

Published:
Updated:
Deccan Herald

ಬೆಂಗಳೂರು: ‘ಎಚ್‌1ಎನ್‌1 ಪೀಡಿತರಿಗೆ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಎಚ್‌1ಎನ್‌1 ತೀವ್ರ ಸ್ವರೂಪದ್ದಾಗಿದ್ದರೆ, ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ‌ಜಿಲ್ಲಾ ಆಸ್ಪತ್ರೆಗಳಲ್ಲಿ ಐದು ಹಾಸಿಗೆಗಳ ಪ್ರತ್ಯೇಕ ವಾರ್ಡ್‌ ಮೀಸಲಿಡಲಾಗಿದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಬುಧವಾರ ಪ್ರಕಟವಾದ ‘ಆಪತ್ತಿಗಿಲ್ಲ ಆರೋಗ್ಯ ಭಾಗ್ಯ’ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ, ‘ಆರೋಗ್ಯ ಕರ್ನಾಟಕ’ ಯೋಜನೆಯ ಸ್ಥಿತಿಗತಿಯ ಬಗ್ಗೆ ಅಧಿಕಾರಿಗಳ ಜತೆ ಬುಧವಾರ ಚರ್ಚಿಸಿದರು. ಈ ಬಗ್ಗೆ ವರದಿ ನೀಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಆರೋಗ್ಯ ಇಲಾಖೆ ಕಾರ್ಯದರ್ಶಿ ಜಾವೇದ್ ಅಖ್ತರ್‌ ಅವರಿಂದಲೂ ಮುಖ್ಯಮಂತ್ರಿ ಮಾಹಿತಿ ಪಡೆದರು. ಬಳಿಕ ‘ಪ್ರಜಾವಾಣಿ’ಗೆ ಮುಖ್ಯಮಂತ್ರಿ ಮಾಹಿತಿ ನೀಡಿದರು.

* ಯಶಸ್ವಿನಿ ಯೋಜನೆಯಡಿ ಲಭ್ಯವಿದ್ದ 823 ಚಿಕಿತ್ಸಾ ವಿಧಾನಗಳನ್ನು ‘ಆರೋಗ್ಯ ಕರ್ನಾಟಕ’ ಯೋಜನೆಗೆ ಸೇರಿಸಿ ಪ್ರಾಥಮಿಕ, ದ್ವಿತೀಯ, ಕ್ಲಿಷ್ಟಕರ ದ್ವಿತೀಯ ಹಾಗೂ ತೃತೀಯ ಹಂತದ ಚಿಕಿತ್ಸೆ ಒಳಗೊಂಡಂತೆ ಒಟ್ಟು 1,516 ಚಿಕಿತ್ಸೆ ಒದಗಿಸಲಾಗುತ್ತಿದೆ.

* ಈವರೆಗೆ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ನಿರಾಕರಿಸಿರುವ ಬಗ್ಗೆ ದೂರುಗಳು ಬಂದಿಲ್ಲ. 90,000 ಫಲಾನುಭವಿಗಳಿಗೆ ಸಾಮಾನ್ಯ ದ್ವಿತೀಯ ಹಂತದ ಚಿಕಿತ್ಸೆ ಮತ್ತು 51,296 ಫಲಾನುಭವಿಗಳಿಗೆ ಕ್ಲಿಷ್ಟಕರ ದ್ವಿತೀಯ, ತೃತೀಯ ಮತ್ತು ತುರ್ತು ಚಿಕಿತ್ಸೆ ನೀಡಲಾಗಿದೆ.

* ಆರೋಗ್ಯ ಕರ್ನಾಟಕ ಯೋಜನೆಯಡಿ ರೋಗಿಗಳು ₹ 2 ಲಕ್ಷಗಳವರೆಗೆ ಚಿಕಿತ್ಸೆ ಪಡೆಯಬಹುದು. ಹೊಸದಾಗಿ ಸಂಯೋಜಿತ ‘ಆಯುಷ್ಮಾನ್‌ ಭಾರತ್‌’ ಮತ್ತು ‘ಆರೋಗ್ಯ ಕರ್ನಾಟಕ’ ಯೋಜನೆಯಡಿ ₹ 5 ಲಕ್ಷಗಳವರೆಗೆ ಚಿಕಿತ್ಸೆ ಪಡೆಯಬಹುದು.

* 531 ಖಾಸಗಿ ಸೂಪರ್‌ ಸ್ಪೆಷಾಲಿಟಿ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಹಾಗೂ 385 ಸಾರ್ವಜನಿಕ ಆರೋಗ್ಯ ಕೇಂದ್ರಗಳನ್ನು ನೋಂದಾಯಿಸಲಾಗಿದೆ. ಫಲಾನುಭವಿಗಳು ಖಾಸಗಿ ಆಸ್ಪತ್ರೆಗಳು ಅಥವಾ ಸಾರ್ವಜನಿಕ ಆರೋಗ್ಯ  ಕೇಂದ್ರಗಳಲ್ಲಿ 1,614 ಚಿಕಿತ್ಸಾ ವಿಧಾನಗಳಿಗೆ ಚಿಕಿತ್ಸೆ ಪಡೆಯಬಹುದು.

* ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯ ಇಲ್ಲದ 169 ತುರ್ತು ಚಿಕಿತ್ಸಾ ವಿಧಾನಗಳಿಗೆ ನೇರವಾಗಿ ಸಾರ್ವಜನಿಕ ಆರೋಗ್ಯ ಕೇಂದ್ರ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ನೇರವಾಗಿ ಹೋಗಬಹುದು.

* ವೆಂಟಿಲೇಟರ್‌ ಅವಶ್ಯಕತೆ ಇದ್ದರೆ ಆಯುಷ್ಮಾನ್‌ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ವೆಂಟಿಲೇಟರ್‌ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕ ಆಸ್ಪತ್ರೆಗಳಲ್ಲೂ ಪ್ರತ್ಯೇಕ ವೆಂಟಿಲೇಟರ್‌ ವ್ಯವಸ್ಥೆ ಕಲ್ಪಿಸಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 5

  Happy
 • 3

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !