ಮಂಗಳವಾರ, ಜೂನ್ 2, 2020
27 °C
ಭೀಮನಹಳ್ಳಿ ಗ್ರಾಮದಲ್ಲಿ ಒಬ್ಬರೂ ಸಫಾಯಿ ಕರ್ಮಚಾರಿ ಇಲ್ಲ, ದುರ್ನಾತದಿಂದ ಕಂಗೆಟ್ಟ ಗ್ರಾಮಸ್ಥರು

ಹದಗೆಟ್ಟ ನೈರ್ಮಲ್ಯ, ಸಾಂಕ್ರಾಮಿಕ ರೋಗ ಭೀತಿ

ಮಲ್ಲಿಕಾರ್ಜುನ ಎಚ್. ಮುಡಬೂಳಕರ್ Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ತಾಲ್ಲೂಕಿನ ಭೀಮನಹಳ್ಳಿ ಗ್ರಾಮದಲ್ಲಿ ಪರಿಸರ ನೈರ್ಮಲ್ಯ ಸಂಪೂರ್ಣ ಹದಗೆಟ್ಟಿದೆ. ಪ್ರತಿ ರಸ್ತೆಯಲ್ಲೂ ಕಸಕಡ್ಡಿ, ಕೊಳಚೆ ನೀರು ಕಣ್ಣಿಗೆ ರಾಚುತ್ತಿದೆ. ಜನರು ಕಂಗೆಟ್ಟು ಹೋಗಿದ್ದಾರೆ. ಗ್ರಾಮ ಪಂಚಾಯಿತಿ ಆಡಳಿತ ಸ್ವಚ್ಛತೆಯನ್ನು ಸಂಪೂರ್ಣ ನಿರ್ಲಕ್ಷ್ಯಿಸಿದೆ ಎಂಬುದಕ್ಕೆ ಗ್ರಾಮದ ಹದಗೆಟ್ಟಿರುವ ಪರಿಸ್ಥಿತಿಯೇ ನಿದರ್ಶನವಾಗಿದೆ.

‘ಗ್ರಾಮದ ಸಣ್ಣ ಅಗಸಿ ಹತ್ತಿರ ಕೊಳಚೆ ನೀರಿನಿಂದ ಗಲೀಜಾಗಿದೆ. ಪರಿಶಿಷ್ಟರ ಕ್ರಿಶ್ಚಿಯನ್ ಬಡಾವಣೆಯಲ್ಲಿ ಜನರು ಹದಗೆಟ್ಟ ನೈರ್ಮಲ್ಯದಿಂದ ಕಂಗೆಟ್ಟಿದ್ದಾರೆ. ಜನರು ನಡೆದಾಡುವ ರಸ್ತೆಗಳು ಕೊಳಚೆ ನೀರು, ಕೆಸರಿನಿಂದ ತುಂಬಿವೆ. ಹಸಿರು ಪಾಚಿ ಬೆಳೆದಿದೆ. ದುರ್ವಾಸನೆಯಿಂದ ಬೇಸತ್ತಿದ್ದಾರೆ. ಮನೆ ಮುಂದೆ ಕುಳಿತು ಊಟ ಮಾಡುವಂತ್ತಿಲ್ಲ’ ಎಂದು ಶಾಂತಮ್ಮ ಗಂಗಣ್ಣರ್ ಅವರು ‘ಪ್ರಜಾವಾಣಿ’ಗೆ ತಮ್ಮ ಅಳಲು ತೋಡಿಕೊಂಡರು.

‘ಶರಣಪ್ಪ ಕರಿಚಕ್ರ ಮನೆಯಿಂದ ರಾಜಪ್ಪ ಕರಿಚಕ್ರ ಮನೆಯವರೆಗೆ ಹಾಗೂ ಭಾಸ್ಕರಪ್ಪ ಮನೆಯಿಂದ ಬಸವರಾಜ ಕಡಿಮನಿ ಅವರ ಮನೆಯವರೆಗೆ ಇಡೀ ರಸ್ತೆ ಕೆಸರು ಗದ್ದೆಯಾಗಿದೆ. ಬಚ್ಚಲು ನೀರಿನ ಕೆಸರಿನಲ್ಲಿ ಜನರು ಕಾಲು ಜಾರಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಸ್ವಚ್ಛತೆ ಮಾಡಲು ಪಂಚಾಯಿತಿಗೆ ಅರ್ಜಿ ಸಲ್ಲಿಸಿದರೂ ಮಾಡಿಸುತ್ತಿಲ್ಲ’ ಎಂದು ಗ್ರಾಮದ ಪ್ರೀತಮ ಗಂಗಣ್ಣರ್, ಕ್ರಿಸ್ತಪ್ಪ ಗಂಗಣ್ಣರ್ ಆರೋಪಿಸಿದರು.

ಗ್ರಾಮದ ಪ್ರತಿ ರಸ್ತೆಯೂ ಕಸ ಕಡ್ಡಿಯಿಂದ, ಬಚ್ಚಲು ನೀರಿನಿಂದ ಗಬ್ಬೆದ್ದು ನಾರುತ್ತಿದೆ. ಯಾವ ಗಲ್ಲಿಯಲ್ಲಿ ನೋಡಿದರೂ ಬಚ್ಚಲು ನೀರು ರಸ್ತೆಯಲ್ಲಿಯೇ ಹರಿಯುತ್ತಿವೆ. ಕ್ರಿಶ್ಚಿಯನ್ ಬಡವಾಣೆಯಲ್ಲಿ ನೀರು ಹರಿದು ಹೋಗಲು ದಾರಿಯಿಲ್ಲದೆ ಪಾಚಿ ಬೆಳೆದು ಜನರು ಸಾಂಕ್ರಾಮಿಕ ರೋಗ ಹರಡುವ ಭೀತಿ, ಆತಂಕಕ್ಕೆ ಒಳಗಾಗಿದ್ದಾರೆ.

ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಇರುವ ಸಣ್ಣ ಚರಂಡಿಗಳು ಕಸಕಡ್ಡಿಯಿಂದ ತುಂಬಿ ಗಬ್ಬೆದ್ದು ನಾರುತ್ತಿವೆ. ಮಕ್ಕಳು ಇದೇ ಚರಂಡಿಗಳ ಪಕ್ಕದಲ್ಲಿ ಆಟವಾಡುತ್ತಾರೆ. ಕೈಯಲ್ಲಿ ರೊಟ್ಟಿ ಹಿಡಿದುಕೊಂಡು ತಿರುಗಾಡುತ್ತಾ ಊಟ ಮಾಡುತ್ತಾರೆ. ಏನಾದರೂ ಅದರೆ ಯಾರು ಜವಾಬ್ದಾರಿ ಎಂದು ಗ್ರಾಮದ ಮಹಿಳೆಯರು ಆತಂಕ ವ್ಯಕ್ತ ಮಾಡುತ್ತಿದ್ದಾರೆ.

ಚನ್ನಪ್ಪ ಅಂಬಾರ ಅವರ ಮನೆಯ ಹತ್ತಿರ ಜಮಾವಣೆಯಾಗುವ ಕೊಳಚೆ ದುರ್ವಾಸನೆ ಹರಡುತ್ತಿದೆ. ಹಂದಿಗಳು ಆಶ್ರಯ ಪಡೆಯುತ್ತಿವೆ. ಗ್ರಾಮ ಪಂಚಾಯಿತಿ ಅಧಿಕಾರಿ ಇತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸಫಾಯಿ ಕರ್ಮಚಾರಿ ಇಲ್ಲ

ಗ್ರಾಮ ಪಂಚಾಯಿತಿಯಲ್ಲಿ ಒಬ್ಬರೂ ಸಫಾಯಿ ಕರ್ಮಚಾರಿ ಸಿಬ್ಬಂದಿ ಇಲ್ಲ. ಹೀಗಾಗಿ ಸ್ವಚ್ಛತೆ ಕೆಲಸ ಮಾಡಲು ಆಗದೆ ಗ್ರಾಮದ ಪರಿಸರ ಹದಗೆಟ್ಟಿದೆ. ಸೇಡಂ ತಾಲ್ಲೂಕಿನ ಗ್ರಾಮವೊಂದರಿಂದ 15 ರಿಂದ 20 ಜನ ಸ್ವಚ್ಛತಾ ಕಾರ್ಮಿಕರನ್ನು ಕರೆಸಿ ತಿಂಗಳಿಗೊಮ್ಮೆ, ಕೆಲವು ಸಲ 2 ತಿಂಗಳಿಗೊಮ್ಮೆ ಸ್ವಚ್ಛತೆ ಮಾಡಿಸುತ್ತಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು