ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆಪತ್ರಿಕೆ ಹಸ್ತಾಂತರಕ್ಕೆ ಶವಾಗಾರವೇ ತಾಣ!

ಬಿಎಂಟಿಸಿ, ಕಾನ್‌ಸ್ಟೆಬಲ್, ಪಿಎಸ್‌ಐ ಪ್ರಶ್ನೆಪತ್ರಿಕೆ ಸೋರಿಕೆ l ಪ್ರಮುಖ ಆರೋಪಿಗಳು ಬಾಯ್ಬಿಟ್ಟ ರಹಸ್ಯ
Last Updated 4 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಮಣಿಪಾಲ್‌ ಪ್ರಿಂಟಿಂಗ್ ಪ್ರೆಸ್‌ನಿಂದ ಪ್ರಶ್ನೆಪತ್ರಿಕೆಗಳನ್ನು ಕದಿಯುತ್ತಿದ್ದ ಅನಿಲ್ ಫ್ರಾನ್ಸಿಸ್, ಪ್ರೆಸ್‌ನ ಸಮೀಪದಲ್ಲಿರುವ ಕಸ್ತೂರಬಾ ಆಸ್ಪತ್ರೆಯ (ಕೆಎಂಸಿ) ಶವಾಗಾರದಲ್ಲಿ ಇನ್ನೊಬ್ಬ ಆರೋಪಿ ಅಮೀರ್ ಅಹ್ಮದ್‌ಗೆ ಆ ಪ್ರಶ್ನೆಪತ್ರಿಕೆಗಳನ್ನು ಹಸ್ತಾಂತರಿಸುತ್ತಿದ್ದ ಎಂಬುದನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

‘ಪ್ರಶ್ನೆಪತ್ರಿಕೆ ಸಂಗ್ರಹಿಸಿಟ್ಟಿರುತ್ತಿದ್ದ ಭದ್ರತಾ ಕೊಠಡಿಗೆ ರಾತ್ರಿ ಹೋಗುತ್ತಿದ್ದ ಅನಿಲ್, ಅಲ್ಲಿಯ ಭದ್ರತಾ ಸಿಬ್ಬಂದಿ ದಿಕ್ಕು ತಪ್ಪಿಸಿ ಕೊಠಡಿಯೊಳಗೆ ಹೋಗಿ ಪ್ರಶ್ನೆಪತ್ರಿಕೆ ಕದ್ದು ತಂದು ಜೆರಾಕ್ಸ್‌ ಮಾಡಿಸುತ್ತಿದ್ದ. ನಿಗದಿಯಂತೆ ಶವಾಗಾರಕ್ಕೆ ಹೋಗಿ, ಅಲ್ಲಿಗೆ ಬರುತ್ತಿದ್ದ ಅಮೀರ್‌ಗೆ ಕೊಟ್ಟು ಹಣ ಪಡೆದುಕೊಂಡು ವಾಪಸ್‌ ಬರುತ್ತಿದ್ದ. ಈ ಬಗ್ಗೆ ಅವರಿಬ್ಬರೂ ಹೇಳಿಕೆ ನೀಡಿದ್ದಾರೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಅಪರಾಧ) ಅಲೋಕ್‌ಕುಮಾರ್ ತಿಳಿಸಿದರು.

‘ಪ್ರಕರಣ ದಾಖಲಾದಾಗಿನಿಂದ ಪ್ರಶ್ನೆಪತ್ರಿಕೆ ಸೋರಿಕೆ ಎಲ್ಲಿಂದ ಆಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದು ದೊಡ್ಡ ತಲೆನೋವಾಗಿತ್ತು. ಜಾಲದ ಒಬ್ಬೊಬ್ಬರನ್ನೇ ಬಂಧಿಸುತ್ತ ಹೋದಂತೆ ಮಾಹಿತಿ ಲಭ್ಯವಾಯಿತು. ಕೊನೆಯಲ್ಲಿ ಅನಿಲ್‌ ಫ್ರಾನ್ಸಿಸ್‌ ಸಿಕ್ಕಿಬಿದ್ದ. ಈ ಮೂಲಕ ಪ್ರಶ್ನೆಪತ್ರಿಕೆ ಸಂಬಂಧ ದಾಖಲಾಗಿದ್ದ 3‍ಪ್ರಕರಣಗಳ ತನಿಖೆ ಅಂತಿಮ ಹಂತಕ್ಕೆ ಬಂದಿದೆ. ಕೆಲವು ಏಜೆಂಟರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದಷ್ಟೇ ಬಾಕಿ ಇದೆ’ ಎಂದರು.

‘2018ರ ಜೂನ್ 10ರಂದು ನಡೆದಿದ್ದ ಬಿಎಂಟಿಸಿಯ ನಿರ್ವಾಹಕ ಕಂ ಚಾಲಕ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಆರೋಪಿಗಳು ಸೋರಿಕೆ ಮಾಡಿದ್ದರು. ಆರೋಪಿ ಸೋಮಪ್ಪ ಮೇಲಿನಮನಿ, ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್‌ ಪಡೆದುಕೊಂಡಿದ್ದ. ನಂತರ, ಪೊಲೀಸ್‌ ಕಾನ್‌ಸ್ಟೆಬಲ್ ಪ್ರಶ್ನೆಪತ್ರಿಕೆಯನ್ನೂ ಸೋರಿಕೆ ಮಾಡಿದ್ದರು. ಆ ಮಾಹಿತಿ ದೊರೆಯುತ್ತಿದ್ದಂತೆ ರಾಜ್ಯದಾದ್ಯಂತ ಕಾರ್ಯಾಚರಣೆ ನಡೆಸಿ ಕೆಲವು ಆರೋಪಿಗಳನ್ನು ಬಂಧಿಸಲಾಗಿತ್ತು. ಪರೀಕ್ಷೆಯನ್ನು ಮುಂದೂಡಲಾಗಿತ್ತು. ಅಷ್ಟಾದರೂ ಉಳಿದ ಆರೋಪಿಗಳು, ಪಿಎಸ್‌ಐ ಪ್ರಶ್ನೆಪತ್ರಿಕೆ ಸೋರಿಕೆಗೆ ಯತ್ನಿಸಿ ಸಿಕ್ಕಿಬಿದ್ದರು’ ಎಂದರು.

ಶನಿವಾರಸಂತೆಯಿಂದ ಶುರುವಾದ ಬೇಟೆ: ‘ಕಳೆದ ನ. 24ರಂದು ಮಡಿಕೇರಿ ಜಿಲ್ಲೆಯ ಶನಿವಾರಸಂತೆಯ ದೊಡ್ಡಕೊಡಲಿ ಗ್ರಾಮದ ಶ್ರೀಕಲ್ಮಠಕ್ಕೆ ಸೇರಿದ್ದ ಎಸ್‌.ಕೆ.ಎಸ್ ಪ್ರೌಢಶಾಲೆ ಮೇಲೆ ದಾಳಿ ಮಾಡುವ ಮೂಲಕ ಸೋರಿಕೆ ಜಾಲದ ಬೇಟೆ ಶುರುವಾಯಿತು. ಪ್ರಮುಖ ಆರೋಪಿ ಶಿವಕುಮಾರಯ್ಯ ಅಲಿಯಾಸ್ ಗುರೂಜಿ, ಸಹಚರ ನವೀನ್ ಹಾಗೂ 117 ಜನ ಅಭ್ಯರ್ಥಿಗಳು ಅಲ್ಲಿ ಸಿಕ್ಕಿಬಿದ್ದಿದ್ದರು’ ಎಂದು ಅಲೋಕ್‌ಕುಮಾರ್‌ ವಿವರಿಸಿದರು.

‘ತುಮಕೂರಿನ ಬಸವರಾಜು ಮನೆ ಮೇಲೂ ದಾಳಿ ಮಾಡಿ ಹಲವು ಅಭ್ಯರ್ಥಿಗಳ ಪರೀಕ್ಷಾ ಪ್ರವೇಶ ಪತ್ರ ಹಾಗೂ ಶೈಕ್ಷಣಿಕ ದಾಖಲೆಗಳನ್ನು ಜಪ್ತಿ ಮಾಡಲಾಯಿತು. ದಾಳಿ ವೇಳೆ ಬಸವರಾಜು, ಮನೆಯ ಬಾತ್‌ರೂಮ್‌ನಲ್ಲಿ ಅವಿತುಕೊಂಡು ಬಚಾವಾಗಿದ್ದ. ಶಿವಕುಮಾರಯ್ಯನ ಪೀಣ್ಯದಲ್ಲಿರುವ ಶೋಭಾ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ ಮೇಲೂ ದಾಳಿ ಮಾಡಿ ₹2.32 ಲಕ್ಷ ನಗದು ಹಾಗೂ ದಾಖಲೆ ಜಪ್ತಿ ಮಾಡಲಾಗಿತ್ತು’ ಎಂದರು.

’ಪ್ರಶ್ನೆಪತ್ರಿಕೆಯ ಫೋಟೊ ಪ್ರತಿಗಳನ್ನು ಸಿದ್ಧಪಡಿಸಿದ್ದ ತುಮಕೂರು ಜಿಲ್ಲೆಯ ಬೆಳ್ಳಾವಿಯ ಸುನೀಲ್‌ಕುಮಾರ್ ಅಲಿಯಾಸ್ ಜೆರಾಕ್ಸ್ ಸುನೀಲ್‌ನನ್ನು ಬಂಧಿಸಲಾಯಿತು. ಆತ ತುಮಕೂರಿನಲ್ಲಿ ಉಲ್ಲಾಸ್ ಎಂಟರ್‌ಪ್ರೈಸಸ್ ಜೆರಾಕ್ಸ್‌ ಅಂಗಡಿ ನಡೆಸುತ್ತಿದ್ದ. ಅದಾದ ನಂತರ, ಏಜೆಂಟರನ್ನು ಬಂಧಿಸಲಾಯಿತು’

‘ಕಾರ್ಯಾಚರಣೆಯ ಕೊನೆಯ ಹಂತದಲ್ಲಿ ತುಮಕೂರಿನ ಸಿ.ಟಿ.ಬಸವರಾಜು ಸಿಕ್ಕಿಬಿದ್ದ. ದಾವಣಗೆರೆಯ ಅಮೀರ್‌ಗೆ ₹55.50 ಲಕ್ಷ ಕೊಟ್ಟು ಪ್ರಶ್ನೆ ಪತ್ರಿಕೆ ಖರೀದಿಸಿದ್ದಾಗಿ ಆತ ಹೇಳಿದ್ದ. ಅದರನ್ವಯ ಅಮೀರ್‌ನನ್ನು ಬಂಧಿಸಲಾಯಿತು. ‘₹55.50 ಲಕ್ಷದಲ್ಲಿ ₹17 ಲಕ್ಷವನ್ನು ಅನಿಲ್‌ ಫ್ರಾನ್ಸಿಸ್‌ಗೆ ಕೊಟ್ಟಿದ್ದೇನೆ. ₹20 ಲಕ್ಷವನ್ನು ದಾವಣಗೆರೆಯ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನಲ್ಲಿದ್ದ ಗೃಹ ಸಾಲದ ಮರುಪಾವತಿಗೆ ನೀಡಿದ್ದೇನೆ. ಸಿನಿಮಾ ಸಹ ಮಾಡಿದ್ದೇನೆ’ ಎಂದು ಹೇಳಿಕೆ ನೀಡಿದ್ದ’.

‘ಅನಿಲ್‌ಗಾಗಿ ಹುಡುಕಾಟ ನಡೆಸಿದಾಗ ಆತ, ಶಾರ್ಜಾದಲ್ಲಿರುವ ಮಾಹಿತಿ ಸಿಕ್ಕಿತು. ಆತನ ವಿಳಾಸವನ್ನು ಕಲೆಹಾಕಿ ವಿಶೇಷ ಕಾರ್ಯಾಚರಣೆ ಮೂಲಕ ಬೆಂಗಳೂರಿಗೆ ಕರೆಸಿಕೊಂಡು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು’ ಎಂದು ಅಲೋಕ್‌ಕುಮಾರ್ ಹೇಳಿದರು.

ಬಂಧಿತ ಸರ್ಕಾರಿ ನೌಕರರು

ರಮೇಶ್ ಮಳ್ಳಿ – ಕಾನ್‌ಸ್ಟೆಬಲ್, ವೈರ್‌ಲೆಸ್ ವಿಭಾಗ, ಡಿಜಿಪಿ ಕಚೇರಿ

ವಿಠ್ಠಲ್ ಬ್ಯಾಕೋಡ – ಕಾನ್‌ಸ್ಟೆಬಲ್, ಹಲಸೂರು ಸಂಚಾರ ಠಾಣೆ

ನಾಮದೇವ ಅಣ್ಣು ಲಮಾಣಿ - ಇಳಕಲ್ ಪುರಸಭೆಯ ಕಂದಾಯ ಅಧಿಕಾರಿ

ಮಹೇಶ್‌ – ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ), ಗೊಂದಿಹಳ್ಳಿ, ಮಧುಗಿರಿ ತಾಲ್ಲೂಕು

ಭೀಮಸಿಂಗ್ ಶಂಕರ್ ರಾಥೋಡ್ – ಶಿಕ್ಷಕ, ದೇವರ ಹಿಪ್ಪರಗಿ, ವಿಜಯಪುರ ಜಿಲ್ಲೆ

ಸೋಮಪ್ಪ ಮೇಲಿನಮನಿ – ನಿರ್ವಾಹಕ, ಬಿಎಂಟಿಸಿ

**
ಹೊರ ರಾಜ್ಯಗಳ ಪ್ರಶ್ನೆಪತ್ರಿಕೆ ಸೋರಿಕೆ
‘ಪ್ರಮುಖ ಆರೋಪಿ ಅಮೀರ್, ಪ್ರಶ್ನೆಪತ್ರಿಕೆ ಸೋರಿಕೆ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದ. ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಪ್ರವೇಶ, ಶಿಕ್ಷಕ ಅರ್ಹತಾ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನೂ ಸೋರಿಕೆ ಮಾಡಿದ್ದಾನೆ’ ಎಂದು ಅಲೋಕ್‌ಕುಮಾರ್‌ ತಿಳಿಸಿದರು.

‘ಪ್ರಶ್ನೆಪತ್ರಿಕೆಗಳು ಎಲ್ಲಿ ಮುದ್ರಣವಾಗುತ್ತವೆ ಎಂಬುದನ್ನು ತಿಳಿದುಕೊಂಡು, ಅಲ್ಲಿ ಕೆಲಸ ಮಾಡುವವರನ್ನು ಪರಿಚಯ ಮಾಡಿಕೊಂಡು ಆತ ಕೃತ್ಯ ಎಸಗುತ್ತಿದ್ದ. ಮುಂದೆ ನಡೆಯಲಿರುವ ಪ್ರತಿ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಲು ಸಂಚು ಸಹ ರೂಪಿಸಿದ್ದ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ನೀಡುವಂತೆ ಕೋರಲಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT