ಭಾನುವಾರ, ಜೂನ್ 26, 2022
29 °C
ಸಾಜಿದ್ ಖಾನ್ ಗ್ರಾಮದಲ್ಲಿ ಬೆಂಗಳೂರು ಪೊಲೀಸರು

ಶಂಕಿತ ಉಗ್ರನಲ್ಲ, ಶಹನಾಯಿ ವಾದಕ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದಲ್ಲಿ ತಪಾಸಣೆಗೆ ನಿರಾಕರಿಸಿ ಅನುಮಾನಾಸ್ಪದ ನಡೆ ತೋರಿದ್ದ ಸಾಜಿದ್ ಖಾನ್ ಅವರ ಗ್ರಾಮವನ್ನು ತಲುಪಿರುವ ನಗರದ ಇಬ್ಬರು ಇನ್‌ಸ್ಪೆಕ್ಟರ್‌ಗಳು, ಈಗಾಗಲೇ ಅವರ ಪೂರ್ವಾಪರದ ಮಾಹಿತಿಯನ್ನೂ ಕಲೆ ಹಾಕಿದ್ದಾರೆ.

ರಾಜಸ್ಥಾನದ ಜುಂಜುನು ಜಿಲ್ಲೆಯ ನಿರಾಧನು ಗ್ರಾಮದವರಾದ ಸಾಜಿದ್, ಮುಸ್ಲಿಂ ಸಮುದಾಯದವರ ಮದುವೆ ಸಮಾರಂಭಗಳಲ್ಲಿ ಶಹನಾಯಿ ನುಡಿಸುತ್ತಿದ್ದರು. ಹಾಗೆಯೇ ರಂಜಾನ್ ಸಂದರ್ಭದಲ್ಲಿ ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಜಕಾತ್ (ದಾನ) ಸಂಗ್ರಹಿಸಿ, ಆ ಹಣದಲ್ಲಿ ಜೀವನ ಸಾಗಿಸುತ್ತಿದ್ದರು ಎಂಬುದು ಸ್ಪಷ್ಟವಾಗಿದೆ.

ಶೆಡ್ ವಾಸ, ಸಾಧು ಸ್ವಭಾವ: ‘ಕಾಟನ್‌ಪೇಟೆ ಇನ್‌ಸ್ಪೆಕ್ಟರ್ ಕುಮಾರಸ್ವಾಮಿ ಹಾಗೂ ಚಾಮರಾಜಪೇಟೆ ಇನ್‌ಸ್ಪೆಕ್ಟರ್ ಫಾರೂಕ್ ಪಾಷಾ ಅವರು ರಾಜಸ್ಥಾನಕ್ಕೆ ತೆರಳಿದ್ದು, ಅಲ್ಲಿನ ಐಜಿಪಿ ಎಂ.ಎನ್.ದಿನೇಶ್ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಜತೆಗೆ ಜುಂಜುನು ಎಸ್ಪಿ ಗೌರವ್ ಯಾದವ್ ಜತೆ ಸಾಜಿದ್ ಅವರ ಗ್ರಾಮಕ್ಕೇ ಹೋಗಿ ಪರಿಶೀಲನೆ ನಡೆಸಿದ್ದಾರೆ. 10X10 ಅಡಿ ವಿಸ್ತೀರ್ಣದ ಶೆಡ್‌ನಲ್ಲಿ ವಾಸವಿದ್ದ ಅವರ ಕುಟುಂಬ, ಗ್ರಾಮದ ಎಲ್ಲರಿಗೂ ಚಿರಪರಿಚಿತ. ಅವರ ಫೋಟೊ ತೋರಿಸುತ್ತಿದ್ದಂತೆಯೇ ಎಲ್ಲರೂ ಗುರುತು ಹಿಡಿದಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಸಾಜಿದ್‌ ಸಾಧು ಸ್ವಭಾವದವರು. ಯಾವುದೇ ಸಣ್ಣ ಅಪರಾಧ ಪ್ರಕರಣದಲ್ಲೂ ಅವರು ಭಾಗಿಯಾಗಿಲ್ಲ. ನಿರಾಧನು ಗ್ರಾಮದವರೇ ಆದ ಅಬ್ದುಲ್ಲಾ ಎಂಬುವರು 20 ವರ್ಷಗಳಿಂದ ಬೆಂಗಳೂರಿನಲ್ಲಿ ವ್ಯಾಪಾರ ಮಾಡಿಕೊಂಡಿದ್ದಾರೆ. ಅವರ ನೆರವಿನಿಂದಲೇ ಸಾಜಿದ್ 2016ರಿಂದ ಪ್ರತಿ ವರ್ಷ ರಂಜಾನ್ ಸಂದರ್ಭದಲ್ಲಿ ನಗರಕ್ಕೆ ಬರುತ್ತಿದ್ದರು’ ಎಂದು ಮಾಹಿತಿ ನೀಡಿದರು.

ಪಾಸ್‌ಪೋರ್ಟ್ ಪರಿಶೀಲನೆ: ಸಾಜಿದ್ ಬಳಿ ಪಾಸ್‌ಪೋರ್ಟ್ ಸಿಕ್ಕಿದ್ದು, ಎರಡು ಸಲ ಸೌದಿ ಅರೇಬಿಯಾಗೆ ಹೋಗಿ ಬಂದಿರುವುದು ಗೊತ್ತಾಗಿದೆ.  ‘ಮೆಕ್ಕಾ ಮಸೀದಿಯಲ್ಲಿ ಜಕಾತ್ ಸಂಗ್ರಹಿಸಲು ಸಂಬಂಧಿಯೊಬ್ಬರ ಜತೆ ವಿಮಾನದಲ್ಲಿ ಸೌದಿಗೆ ಪ್ರಯಾಣಿಸಿದ್ದೆ’ ಎಂದು ಅವರು ಹೇಳಿಕೆ ಕೊಟ್ಟಿದ್ದಾರೆ. ಆ ಬಗ್ಗೆಯೂ ಪರಿಶೀಲನೆ ನಡೆಸುತ್ತಿರುವುದಾಗಿ ಪೊಲೀಸರು ಹೇಳಿದರು.

ಭದ್ರತೆ ತಪಾಸಣೆಗೆ ನೋಡಲ್ ಅಧಿಕಾರಿ

‘ಮೆಟ್ರೊ ನಿಲ್ದಾಣಗಳಲ್ಲಿ ಇರುವ ಭದ್ರತಾ ಲೋಪಗಳನ್ನು ತಿಳಿಯಲು ಈ ಪ್ರಕರಣದಿಂದ ಸಾಧ್ಯವಾಗಿದೆ. ಬಿಎಂಟಿಸಿ, ಮೆಟ್ರೊ ಹಾಗೂ ರೈಲ್ವೆ ನಿಲ್ದಾಣಗಳಲ್ಲಿನ ಭದ್ರತಾ ಲೋಪಗಳನ್ನು ಗುರುತಿಸಲು ಎಸಿಪಿ ಒಬ್ಬರನ್ನು ನೋಡಲ್ ಅಧಿಕಾರಿಯನ್ನಾಗಿ ಮಾಡಲಾಗಿದೆ. ಎಲ್ಲೆಲ್ಲಿ ಮೆಟಲ್ ಡಿಟೆಕ್ಟರ್ ಹಾಕಬೇಕು? ಎಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸುವುದು ಸೂಕ್ತ ಎಂಬ ಬಗ್ಗೆ ಅವರು ಅಧ್ಯಯನ ನಡೆಸುತ್ತಿದ್ದಾರೆ’ ಎಂದು ಡಿಸಿಪಿ ರವಿ ಚನ್ನಣ್ಣನವರ್ ತಿಳಿಸಿದರು.

‘ನಾನೇನು ಹೇಳಲಿ, ಎಲ್ಲರಿಗೂ ಒಳ್ಳೆಯದಾಗಲಿ’

‘ಜಕಾತ್‌ನಿಂದ ಸಂಗ್ರಹಿಸಿದ್ದ ನಾಣ್ಯಗಳನ್ನು ಪಂಚೆಯಲ್ಲಿ ಸುತ್ತಿಕೊಂಡು ಸೊಂಟಕ್ಕೆ ಕಟ್ಟಿಕೊಂಡಿದ್ದೆ. ಮೆಟ್ರೊ ನಿಲ್ದಾಣದ ಒಳಗೆ ಹೋಗುತ್ತಿದ್ದಂತೆಯೇ ಬಾಗಿಲಿನಲ್ಲಿ ವಿಚಿತ್ರವಾದ ಶಬ್ದ ಬಂತು. ಆ ನಂತರ ಸೆಕ್ಯುರಿಟಿಯವರೂ ನನ್ನನ್ನು ಕರೆದು ವಿಚಾರಿಸಿದರು. ಇದರಿಂದ ನನಗೆ ಆತಂಕವಾಯಿತು. ಮೆಟ್ರೊ ಸಹವಾಹ ಬೇಡವೆಂದು ಅಲ್ಲಿಂದ ಹೊರಟು ಹೋಗಿದ್ದೆ’ ಎಂದು ಸಾಜಿದ್ ಹೇಳಿದರು.

‘ಮಾಧ್ಯಮಗಳಲ್ಲಿ ನನ್ನನ್ನು ಉಗ್ರನಂತೆ ಬಿಂಬಿಸಿರುವ ವಿಷಯವೂ ನನಗೆ ಗೊತ್ತಿರಲಿಲ್ಲ. ಪೊಲೀಸರು ಹೇಳಿದ ಮೇಲೆಯೇ ಅದು ಗೊತ್ತಾಗಿದ್ದು. ಮಾಧ್ಯಮಗಳ ವಿರುದ್ಧ ಹೋರಾಟ ಮಾಡುವಷ್ಟು ದೊಡ್ಡವನು ನಾನಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎಂದಷ್ಟೇ ಪ್ರಾರ್ಥಿಸುತ್ತೇನೆ’ ಎಂದರು.

**

ನಿರಾಧನು ವೈಶಿಷ್ಟ್ಯಪೂರ್ಣ ಗ್ರಾಮ. ಅಲ್ಲಿನ ಜನಸಂಖ್ಯೆಯಲ್ಲಿ ಶೇ 80ಕ್ಕೂ ಹೆಚ್ಚು ಮಂದಿ ಸೈನಿಕರು ಹಾಗೂ ಶಿಕ್ಷಕರೇ ಇದ್ದಾರೆ. ಕೆಲವು ಕುಟುಂಬಗಳು ಮಾತ್ರ ಜಕಾತ್‌ಗೆ ಬರುತ್ತವೆ
- ರವಿ ಚನ್ನಣ್ಣನವರ್, ಡಿಸಿಪಿ, ಪಶ್ಚಿಮ ವಿಭಾಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು