ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಿತಾ ಸಮಾಜ ಅಭಿವೃದ್ಧಿಗೆ ₹25 ಕೋಟಿ

ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ
Last Updated 12 ಫೆಬ್ರುವರಿ 2019, 19:41 IST
ಅಕ್ಷರ ಗಾತ್ರ

ಬೆಂಗಳೂರು: ಸವಿತಾ ಸಮಾಜದ ಅಭಿವೃದ್ಧಿ ಉದ್ದೇಶದಿಂದ ಸ್ಥಾಪಿಸಲಾಗಿರುವ ಪ್ರಾಧಿಕಾರದ ಚಟುವಟಿಕೆಗಳಿಗೆ ₹25 ಕೋಟಿ ನೀಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮಂಗಳವಾರ ‘ಸವಿತಾ ಮಹರ್ಷಿ ಜಯಂತಿ’ ಉದ್ಘಾಟಿಸಿದ ಕುಮಾರಸ್ವಾಮಿ, ರಾಜ್ಯದ ಸಣ್ಣಪುಟ್ಟ ಜಾತಿಗಳನ್ನು ಗುರುತಿಸಿ ತಮ್ಮ ಸರ್ಕಾರ ಬಜೆಟ್‌ನಲ್ಲಿ ಆರ್ಥಿಕ ನೆರವು ನೀಡಿದೆ ಎಂದರು.

‘ಸವಿತಾ ಸಮಾಜದ ಅಭಿವೃದ್ಧಿಗಾಗಿ ₹100 ಕೋಟಿ ನೀಡುವಂತೆ ಕೇಳಿದ್ದೀರಿ. ರೈತರ ₹46 ಸಾವಿರ ಕೋಟಿ ಸಾಲ ಮನ್ನಾ, ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ₹16 ಸಾವಿರ ಕೋಟಿ ಹಣವನ್ನು ಸರ್ಕಾರ ಭರಿಸಬೇಕಿದೆ. ಇದೊಂದು ದೊಡ್ಡ ಹೊರೆ ಆಗಿರುವುದರಿಂದ ಈ ವರ್ಷ ಹಣಕಾಸಿನ ಸಮಸ್ಯೆ ಇದೆ’ ಎಂದರು.

’ಹಣಕಾಸು ಸ್ಥಿತಿ ಮುಂದಿನ ವರ್ಷ ಸುಧಾರಿಸಲಿದ್ದು, ನಿಮ್ಮ ಸಮಾಜದ ಅಭಿವೃದ್ಧಿಗೆ ₹ 200 ಕೋಟಿ ಕೊಡಲು ಸಿದ್ಧ. ಮದುವೆ, ದೇವರ ಕಾರ್ಯಗಳು ನೀವಿಲ್ಲದೆ ನಡೆಯುವುದಿಲ್ಲ. ಕುಲ
ಕಸಬು ನಂಬಿಕೊಂಡುನೀವು ಬದುಕುತ್ತಿದ್ದೀರಿ. ಆದರೆ, ನಿಮ್ಮ ಮಕ್ಕಳು ಈ ಕಸುಬು ಮುಂದುವರಿಸಬಾರದು’ ಎಂದು ಕಿವಿಮಾತು ಹೇಳಿದರು.

ಸವಿತಾ ಸಮಾಜ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ನಿಮ್ಮ ಮಕ್ಕಳ ಶಿಕ್ಷಣಕ್ಕೆ ಅಗತ್ಯ ನೆರವು ನೀಡಲು ಸರ್ಕಾರ ಸಿದ್ಧವಿದೆ. ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಲು ವಸತಿ ನಿಲಯಗಳನ್ನು ತೆರೆಯಲಾಗುವುದು ಎಂದರು.

ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮುಜರಾಯಿ ಇಲಾಖೆಯೂ ಸೇರಿದಂತೆ ವಿವಿಧ ಇಲಾಖೆಗಳಿಂದ ಈ ಸಮಾಜಕ್ಕೆ ಸೂಕ್ತ ಸಹಾಯ ದೊರಕಿಸಿಕೊಡಲು ಕ್ರಮ ಕೈಗೊಳ್ಳುವುದಾಗಿಯೂ ಕುಮಾರಸ್ವಾಮಿ ಆಶ್ವಾಸನೆ ನೀಡಿದರು.

ಸಮಾಜ ತೀವ್ರಗತಿಯಲ್ಲಿ ಬದಲಾಗುತ್ತಿದೆ. ನಿಮ್ಮ ಕಸುಬಿಗೆ ಬೇರೆಯವರೂ ಕೈಹಾಕಿದ್ದಾರೆ. ನೀವು ಈ ಕಸುಬಿಗೇ ಜೋತು ಬೀಳದೆ ಬೇರೆ ಉದ್ಯೋಗಗಳನ್ನು ಮಾಡಲು ಸಿದ್ಧರಾಗಬೇಕು. ಸವಿತಾ ಸಮಾಜದ ಹೆಣ್ಣುಮಕ್ಕಳಿಗೆ ಬ್ಯೂಟಿ ಪಾರ್ಲರ್‌ ಆರಂಭಿಸಲು ಸರ್ಕಾರ ಬೆಂಬಲವಾಗಿ ನಿಲ್ಲಲಿದೆ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದರು.

ರಾಜ್ಯದಾದ್ಯಂತ ಸವಿತಾ ಮಹರ್ಷಿ ಜಯಂತಿ ಆಚರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

‘ಸವಿತಾ ಸಮಾಜ ಶೋಷಣೆ ಮತ್ತು ಅವಮಾನಕ್ಕೆ ಒಳಗಾಗಿದೆ. ಸಣ್ಣ‍‍ಪುಟ್ಟ ಸಮಾಜಗಳನ್ನು ಗುರುತಿಸಿ ಮುಖ್ಯಮಂತ್ರಿ ಒಂದು ಕೋಟಿ, ಎರಡು ಕೋಟಿ ನೀಡಿದ್ದಾರೆ. ರಾಜಕೀಯ ಲಾಭ ಗಮನದಲ್ಲಿ ಇಟ್ಟುಕೊಂಡು ಹಣ ಕೊಟ್ಟಿಲ್ಲ. ತುಳಿತಕ್ಕೆ ಒಳಗಾಗಿರುವ ಸಮಾಜಗಳು ಪ್ರಗತಿ ಆಗಬೇಕು ಎಂಬ ಪ್ರಾಮಾಣಿಕ ಉದ್ದೇಶದಿಂದ ಹಣ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಮೆಚ್ಚುಗೆ
ವ್ಯಕ್ತಪಡಿಸಿದರು.

2,500 ವರ್ಷಗಳ ಹಿಂದೆ ಭಗವಾನ್‌ ಬುದ್ಧನಿಗೆ ಕ್ಷೌರ ಮಾಡಿದ ಸಮಾಜ ನಿಮ್ಮದು. ಈ ಸಮಾಜದಲ್ಲಿ ಬೆರಳೆಣಿಕೆಯಷ್ಟು ಸರ್ಕಾರಿ ಅಧಿಕಾರಿಗಳಿದ್ದಾರೆ. ಎಂಜಿನಿಯರ್‌, ಡಾಕ್ಟರ್‌ಗಳನ್ನು ಹುಡುಕಬೇಕು. ನಿಮ್ಮ ಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ಅಣಿಗೊಳಿಸಿ ಎಂದು ಪರಮೇಶ್ವರ್‌ ಸಲಹೆ ಮಾಡಿದರು.

ಸವಿತಾ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು 70 ವರ್ಷ ಬೇಕಾಯಿತು. ವೇಣುಗೋಪಾಲ್‌ ವಿಧಾನ ಪರಿಷತ್‌ನಲ್ಲಿ ನಿಮ್ಮ ಸಮಾಜ ಪ್ರತಿನಿಧಿಸಿರುವ ಮೊದಲ ವ್ಯಕ್ತಿ ಎಂದೂ ಪರಮೇಶ್ವರ್‌ ವಿವರಿಸಿದರು.

ಸವಿತಾ ಸಮಾಜದ ಮುಖಂಡರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದಕ್ಕೂ ಮುನ್ನ ಫ್ರೀಡಂ ಪಾರ್ಕ್‌ನಿಂದ
ಮೆರವಣಿಗೆಯಲ್ಲಿ ಬ್ಯಾಂಕ್ವೆಟ್‌ ಹಾಲ್‌ಗೆ ಆಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT