ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಲ್ಕ ಸಂಕಷ್ಟದಲ್ಲಿ ಸಾಮಾನ್ಯ ಮಕ್ಕಳು

ಆರ್‌ಟಿಇ ಮಕ್ಕಳ ಪ್ರವೇಶಧನ ಮರುಪಾವತಿಯಲ್ಲಿ ಸರ್ಕಾರದ ವಿಳಂಬ ಧೋರಣೆ
Last Updated 5 ಫೆಬ್ರುವರಿ 2019, 20:11 IST
ಅಕ್ಷರ ಗಾತ್ರ

ಬೆಂಗಳೂರು:ಕಡ್ಡಾಯ ಶಿಕ್ಷಣ ಹಕ್ಕಿನ (ಆರ್‌ಟಿಇ) ಅಡಿ ದಾಖಲಾಗಿರುವ ಮಕ್ಕಳ ಸುಮಾರು ₹ 650 ಕೋಟಿ ಯಷ್ಟು ಶುಲ್ಕವನ್ನು ಶಿಕ್ಷಣ ಇಲಾಖೆ ಬಾಕಿ ಉಳಿಸಿಕೊಂಡಿರುವ ಕಾರಣ, ಖಾಸಗಿ ಶಾಲೆಗಳು ಆ ಹೊರೆಯನ್ನು ತಮ್ಮ ಸಂಸ್ಥೆಗಳ ಉಳಿದ ಮಕ್ಕಳ ಶುಲ್ಕದ ಮೇಲೆ ಹಾಕುತ್ತಿವೆ.

‘ಅಪ್ಪ, ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು’ ಎನ್ನುವ ಹಾಗೆ, ಸರ್ಕಾರ ಮತ್ತು ಖಾಸಗಿ ಶಾಲೆಗಳ ತಿಕ್ಕಾಟದಲ್ಲಿ ಮಧ್ಯಮ ವರ್ಗದ ಪೋಷಕರು ಸಂಕಷ್ಟ ಅನುಭವಿಸುತ್ತಿದ್ದಾರೆ.

‘ಖಾಸಗಿ ಶಾಲೆಗಳ ಈಗಿನಶುಲ್ಕದಲ್ಲಿ ಮಕ್ಕಳನ್ನು ಓದಿಸುವುದು ಮಧ್ಯಮ ವರ್ಗದ ನಮ್ಮಂಥವರಿಗೆ ಹರ ಸಾಹಸವೇ ಸರಿ. ವರ್ಷಕ್ಕೆ ಇಂತಿಷ್ಟು ಮೊತ್ತ ಹೆಚ್ಚಾಗುತ್ತದೆ ಎಂದು ನಾವು ಸಿದ್ಧತೆ ಮಾಡಿಕೊಂಡಿರುತ್ತೇವೆ. ಅದಕ್ಕಿಂತ ಒಂದೆರಡು ಪಟ್ಟು ಹೆಚ್ಚಾದಾಗ ಏನು ಮಾಡಬೇಕೆಂದು ತೋಚುವುದಿಲ್ಲ. ಸರ್ಕಾರ ಆರ್‌ಟಿಇ ಮಕ್ಕಳ ಶುಲ್ಕವನ್ನು ಸರಿಯಾಗಿ ಪಾವತಿಸಿದರೆ, ಆಡಳಿತ ಮಂಡಳಿಯಿಂದ ನಮ್ಮ ಮೇಲೆ ಇಷ್ಟೊಂದು ಪ್ರಮಾಣದ ಹೊರೆ ಬೀಳುವುದು ತಪ್ಪುತ್ತದೆ’ ಎಂದು ಪೋಷಕರಾದ ಸಿದ್ಧರಾಜು ತಿಳಿಸಿದರು.

‘ನನ್ನ ಮಗ ಮತ್ತು ಮಗಳು ಪದ್ಮನಾಭನಗರದ ಶಾಲೆಯಲ್ಲಿ ಓದುತ್ತಿದ್ದಾಳೆ. ಹಿಂದೆ ಶುಲ್ಕದಲ್ಲಿ ಒಂದೆರಡು ಸಾವಿರ ರೂಪಾಯಿ ಶುಲ್ಕ ಹೆಚ್ಚಾಗುತ್ತಿತ್ತು. ಈಗ ಅದು ಐದಾರು ಸಾವಿರ ರೂಪಾಯಿಗೆ ಏರಿದೆ.ನನ್ನ ಸ್ನೇಹಿತರೊಬ್ಬರ ಮಗುವಿಗೆ ಹಿಂದಿನ ವರ್ಷದ ಶುಲ್ಕಕ್ಕಿಂತ ಈ ಸಲ ₹7 ಸಾವಿರ ಹೆಚ್ಚಿಗೆ ಪಡೆದಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಪೋಷಕರೊಬ್ಬರು ಹೇಳಿದರು. ತಮ್ಮ ಹೆಸರು ಹೇಳಿದರೆ ಶಾಲಾ ಆಡಳಿತ ಮಂಡಳಿಯಿಂದ ಮಕ್ಕಳಿಗೆ ತೊಂದರೆ ಆಗಬಹುದು ಎಂಬ ಭಯವನ್ನೂ ವ್ಯಕ್ತಪಡಿಸಿದರು.

‘ಶಾಲಾ ಆಡಳಿತ ಮಂಡಳಿಯನ್ನು ಕೇಳಿದಾಗ, ಆರ್‌ಟಿಇ ಮಕ್ಕಳಿಂದ ಆಗುತ್ತಿರುವ ಹೊರೆಯನ್ನು ಭರಿಸಲು ಶುಲ್ಕ ಹೆಚ್ಚಿಸುವುದು ಅನಿವಾರ್ಯ ಎಂದಿದ್ದಾರೆ. ಶಾಲೆ ಎಷ್ಟೇ ಶುಲ್ಕ ಹೆಚ್ಚಿಸಿದರೂ ಪರ್ವಾಗಿಲ್ಲ ಎನ್ನುವುದಕ್ಕೆ ನಾವೇನು ಶ್ರೀಮಂತರಲ್ಲ’ ಎಂದು ನೋವು ತೋಡಿಕೊಂಡರು.

ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಸಂಘಟನಾ ಕಾರ್ಯದರ್ಶಿಡಿ. ಶಶಿಕುಮಾರ್‌, ‘ಸರ್ಕಾರ ನಿಗದಿ ಮಾಡಿದ ಖಾಸಗಿ ಶಾಲೆಗಳ ಶುಲ್ಕದಲ್ಲಿ ಪ್ರತಿವರ್ಷ ಶೇ 15ರಷ್ಟು ಮೊತ್ತ ಹೆಚ್ಚಿಸಲು ಅವಕಾಶವಿದೆ. ಅದಕ್ಕಿಂತ ಹೆಚ್ಚಿನ ಶುಲ್ಕ ವಿಧಿಸುವ ಶಾಲೆಗಳ ವಿರುದ್ಧ ದೂರು ನೀಡಬಹುದು. ಕೆಲವೊಂದು ಶಾಲೆಗಳು ಶೇ 30, 40ರಷ್ಟು ಶುಲ್ಕವನ್ನು ಏರಿಸುತ್ತವೆ ಎನ್ನುವ ಮಾಹಿತಿ ಇದೆ. ಪೋಷಕರು ದೂರು ನೀಡಿದರೆ ಶಿಕ್ಷಣ ಇಲಾಖೆಯೇ ಕ್ರಮ ಕೈಗೊಳ್ಳುತ್ತದೆ’ ಎಂದರು.

‘ಆರ್‌ಟಿಇ ಮಕ್ಕಳ ದಾಖಲಾತಿಯಿಂದಾಗಿ ಖಾಸಗಿ ಶಾಲೆಗಳ ಮೇಲೆ ಖಂಡಿತ ಹೊರೆ ಬೀಳುತ್ತಿದೆ. ದೊಡ್ಡ ದೊಡ್ಡ ಶಾಲೆಗಳು ಡೊನೇಷನ್‌ ರೂಪದಲ್ಲಿ ಹಣ ಪಡೆದು ನಿಭಾಯಿಸುತ್ತವೆ. ಆದರೆ, ₹10 ಸಾವಿರದಿಂದ ₹40 ಸಾವಿರದ ವರೆಗೆ ಶುಲ್ಕ ಪಡೆಯುವ ಶಾಲೆಗಳ ಪರಿಸ್ಥಿತಿ ನಿಜಕ್ಕೂಶೋಚನಿಯವಾಗಿದೆ’ ಎಂದರು.

‘ಆರ್‌ಟಿಇ ಅಡಿ ದಾಖಲಾದ ಪ್ರತಿ ಮಗುವಿನ ಓದಿನ ಖರ್ಚು ಸುಮಾರು ₹50 ಸಾವಿರದವರೆಗೆ ಆಗುತ್ತದೆ. ಸರ್ಕಾರ ನಮಗೆ ನೀಡುವುದು ಕೇವಲ ₹14ಸಾವಿರದಿಂದ ₹15 ಸಾವಿರ. ಹೀಗಾಗಿದ್ದಾಗ ಶಾಲೆಗಳು ಬೇರೆ ಮಕ್ಕಳ ಶುಲ್ಕದಲ್ಲಿ ಹೆಚ್ಚಳ ಮಾಡದೆ ವಿಧಿಯಿಲ್ಲ. ಸರ್ಕಾರ ಮಾಡುತ್ತಿರುವ ಈ ಎಡವಟ್ಟಿನಿಂದ ಶಾಲೆಗಳು ಮತ್ತು ಪೋಷಕರು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಒಳನೋಟ ಬೀರಿದರು.

ಪೋಷಕರ ಒಕ್ಕೂಟದ ಸದಸ್ಯ ಮುರುಗೇಶ್‌, ‘ಕನಿಷ್ಠ ₹1,500ದಿಂದ ₹10 ಸಾವಿರ­ದವರೆಗೆ ಅಭಿವೃದ್ಧಿ ಶುಲ್ಕ ಸಂಗ್ರಹಿಸಲು ಅವಕಾಶ ನೀಡಿರುವುದರಿಂದ ಸುಲಿಗೆ ಮಾಡಲು ಖಾಸಗಿ ಶಾಲೆಗಳಿಗೆ ಸರ್ಕಾರವೇ ಪರ­ವಾನಗಿ ಕೊಟ್ಟಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಜ್ಞರ ಅಭಿಪ್ರಾಯವಿಲ್ಲದೆ ಶುಲ್ಕ ಹೆಚ್ಚಳ

ಶೇ 30ರಿಂದ 40ರಷ್ಟು ಶುಲ್ಕ ಹೆಚ್ಚಿಸಿದ್ದ ಬಗ್ಗೆ ಆಯೋಗಕ್ಕೆ ಸಿಕ್ಕಾಪಟ್ಟೆ ದೂರುಗಳು ಬರುತ್ತವೆ. ಶಿಕ್ಷಣ ಇಲಾಖೆ ಶುಲ್ಕ ಹೆಚ್ಚಳದ ಮಿತಿಯನ್ನು ನಿಗದಿ ಮಾಡುವ ಮುನ್ನ ಶಿಕ್ಷಣತಜ್ಞರು, ಪೋಷಕರ ಅಭಿಪ್ರಾಯವನ್ನು ಪರಿಗಣಿಸಬೇಕು. ಕೇವಲ ಖಾಸಗಿ ಶಾಲೆಗಳ ತಾಳಕ್ಕೆ ಕುಣಿದರೆ, ಈ ರೀತಿಯೇ ಆಗುವುದು

–ಮರಿಸ್ವಾಮಿ, ಮಕ್ಕಳ ಹಕ್ಕುಗಳ ಆಯೋಗದ ಮಾಜಿ ಸದಸ್ಯ

ಶುಲ್ಕ ನಿಯಮ ಏನು ಹೇಳುತ್ತದೆ?

* ಶಾಲೆಗಳು ಹೊಂದಿರುವ ಸೌಲಭ್ಯ­ಗಳನ್ನು ಆಧರಿಸಿ ಅವುಗಳನ್ನು ಎ, ಬಿ, ಸಿ, ಡಿ ಮತ್ತು ಇ ಎಂದು ವರ್ಗೀಕರಣ ಮಾಡಿ, ಇದರ ಆಧಾರದಲ್ಲಿ ಕನಿಷ್ಠ 1,500ರಿಂದ ಗರಿಷ್ಠ 10 ಸಾವಿರದವರೆಗೆ ಅಭಿವೃದ್ಧಿ ಶುಲ್ಕ ಸಂಗ್ರಹಿಸಬಹುದು.

* ಈಜುಕೊಳ, ಕುದುರೆ ಸವಾರಿ, ಕ್ರೀಡಾ ತರಬೇತಿ, ಪ್ರವಾಸ ಸೇರಿದಂತೆ ವಿಶೇಷ ಸೌಲಭ್ಯಗಳನ್ನು ಶಾಲಾ ಆಡಳಿತ ಮಂಡಳಿ ಮಕ್ಕಳಿಗೆ ನೀಡುತ್ತಿದ್ದರೆ, ಪೋಷಕರ ಒಪ್ಪಿಗೆ ಪಡೆದು ಹೆಚ್ಚುವರಿ ಶುಲ್ಕ ವಿಧಿಸಬಹುದು. ಆದರೆ, ಮಕ್ಕಳ ಸಂಪೂರ್ಣ ರಕ್ಷಣೆ ಜವಾಬ್ದಾರಿ ಆಡಳಿತ ಮಂಡಳಿಯ­ದ್ದಾಗಿರುತ್ತದೆ.

* ಒಂದು ವೇಳೆ ನಿಗದಿತ ಶುಲ್ಕಕ್ಕಿಂತ ಹೆಚ್ಚುವರಿ ಶುಲ್ಕ ಪಡೆದರೆ ಅಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಲ್ಲದೆ, ಹೆಚ್ಚುವರಿಯಾಗಿ ಪಡೆದ ಶುಲ್ಕವನ್ನು ಮರು ಪಾವತಿ ಮಾಡಿಸಲಾಗುತ್ತದೆ

1998-99ರಲ್ಲಿ ಶುಲ್ಕ ನಿಗದಿ ಮಾಡಲಾಗಿತ್ತು. ಇದರ ಅನ್ವಯ ಖಾಸಗಿ ಶಾಲೆಯೊಂದರ ಒಟ್ಟಾರೆ ಸಿಬ್ಬಂದಿಯ ಸಂಬಳ ಹಾಗೂ ಶೇ 30ರಷ್ಟು ಹೆಚ್ಚುವರಿ ಮೊತ್ತವನ್ನು ಒಟ್ಟು ಮಾಡಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಭಾಗಿಸಿದ ಮೊತ್ತವನ್ನು ಶುಲ್ಕವಾಗಿ ಪಡೆಯುವ ನಿಯಮವಿತ್ತು. ಹೆಚ್ಚುವರಿ ಪಡೆದ ಶೇ 30ರಷ್ಟು ಶುಲ್ಕದಲ್ಲಿ ಶಾಲೆಯ ಇನ್ನಿತರ ಖರ್ಚುಗಳು ಕರೆಂಟ್ ಬಿಲ್, ಬಾಡಿಗೆ ಹಾಗೂ ಇತರೆ ವೆಚ್ಚಗಳನ್ನು ಮಾಡಬೇಕಿತ್ತು. 2018-19ರಲ್ಲಿ ಖಾಸಗಿ ಶಾಲೆಗಳ ಶುಲ್ಕದ ನಿಯಮವನ್ನು ಪರಿಷ್ಕರಣೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT