ಶುಕ್ರವಾರ, ಜೂನ್ 18, 2021
24 °C
ಪ್ರೇಮಿಗಳಿಗೆ ಹೆದರಿಸಿ ನಗನಾಣ್ಯ ದೋಚುತ್ತಿದ್ದ ಆರೋಪಿಗಳು

ಬೆದರಿಸಿ ಸುಲಿಗೆ: ಇಬ್ಬರಿಗೆ ಗುಂಡೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೆಸರಘಟ್ಟ ಆಚಾರ್ಯ ಕಾಲೇಜು ಸಮೀಪದ ಅರಣ್ಯ ಪ್ರದೇಶದಲ್ಲಿ ವಿಹಾರ ಮಾಡುವ ಜೋಡಿಗಳನ್ನೇ ಟಾರ್ಗೆಟ್ ಮಾಡಿ ಕೊಂಡು, ಅವರನ್ನು ಬೆದರಿಸಿ ನಗ–ನಾಣ್ಯ ದೋಚುತ್ತಿದ್ದ ಸುಲಿಗೆಕೋರರ ಪೈಕಿ ಇಬ್ಬರ ಕಾಲಿಗೆ ಸೋಲದೇವನಹಳ್ಳಿ ಇನ್‌ಸ್ಪೆಕ್ಟರ್ ಗುಂಡು ಹೊಡೆದಿದ್ದಾರೆ.

ಲಕ್ಷ್ಮಿನಗರದ ಕೊಳೆಗೇರಿ ನಿವಾಸಿ ದೇವರಾಜ್‌ ಅಲಿಯಾಸ್ ದೇವರು ಹಾಗೂ ಶೆಟ್ಟಿಹಳ್ಳಿಯ ಚಂದ್ರಶೇಖರ್ ಅಲಿಯಾಸ್ ಚನ್ನ ಗುಂಡೇಟು ತಿಂದವರು. ಅವರ ಜತೆ ಲಗ್ಗೆರೆಯ ಮುನೇಶ್ವರ ಬ್ಲಾಕ್‌ನ ಮಂಜೇಗೌಡ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ.

‘ಮಂಗಳವಾರ ರಾತ್ರಿ ತರಬನಹಳ್ಳಿಯ ಮಾರುತಿ ಬಾರ್ ಬಳಿ ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ಈ ಮೂವರನ್ನು ವಶಕ್ಕೆ ಪಡೆದ ಸಿಬ್ಬಂದಿ, ಮಾರಕಾಸ್ತ್ರಗಳನ್ನು ಜಪ್ತಿ ಮಾಡಲೆಂದು ಆಚಾರ್ಯ ಕಾಲೇಜು ಸಮೀಪದ ಕಾಡಿಗೆ ಕರೆದೊಯ್ದಿದ್ದರು. ಈ ವೇಳೆ ಅವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದರಿಂದ ಇನ್‌ಸ್ಪೆಕ್ಟರ್ ವೆಂಕಟೇಗೌಡ ಅವರು ದೇವರಾಜ ಹಾಗೂ ಚಂದ್ರಶೇಖರ್‌ಗೆ ಗುಂಡು ಹೊಡೆದರು’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದರು.

ಕೂಲಿಗೆ ಬಂದವರು: ದೇವರಾಜ್‌ ಕಲಬುರ್ಗಿಯವನು. ಉಳಿದಿಬ್ಬರು ರಾಯಚೂರಿನವರು. ಮೂವರೂ ಬಾಲ್ಯ ಸ್ನೇಹಿತರಾಗಿದ್ದು, ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕೆಲಸ ಮಾಡಿಕೊಂಡು ಏಳೆಂಟು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದರು. ಮೋಜಿನ ಜೀವನದ ಆಸೆಗೆ ಬಿದ್ದು ಸುಲಿಗೆ ಕೃತ್ಯಕ್ಕೆ ಇಳಿದಿದ್ದ ಈ ಆರೋಪಿಗಳ ವಿರುದ್ಧ 2014ರಿಂದ ನಗರದ ವಿವಿಧ ಠಾಣೆಗಳಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದರು.ವಾರದಲ್ಲಿ 2–3 ಸಲ ಆಚಾರ್ಯ ಕಾಲೇಜು ಸಮೀಪದ ಅರಣ್ಯ ಪ್ರದೇಶದಲ್ಲಿ ಸೇರುತ್ತಿದ್ದ ಇವರು, ಅಲ್ಲೇ ಕಂಠಪೂರ್ತಿ ಕುಡಿದು ನಶೆಯಲ್ಲಿ ಕಾಡಿನಲ್ಲಿ ಸುತ್ತುತ್ತಿದ್ದರು. ಈ ವೇಳೆ ವಿದ್ಯಾರ್ಥಿಗಳು, ಪ್ರೇಮಿಗಳು ಕಣ್ಣಿಗೆ ಬಿದ್ದರೆ ಮಾರಕಾಸ್ತ್ರಗಳಿಂದ ಬೆದರಿಸಿ ಮೊಬೈಲ್, ಚಿನ್ನ, ಹಣ ದೋಚುತ್ತಿದ್ದರು. ಇವರ ಸರಣಿ ಕೃತ್ಯಗಳಿಂದಾಗಿ ಆ ಭಾಗದಲ್ಲಿ ಓಡಾಡುವುದಕ್ಕೇ ನಾಗರಿಕರು ಭಯಪಡುವಂತಹ ವಾತಾವರಣ ನಿರ್ಮಾಣವಾಗಿತ್ತು. ಮಾರ್ಚ್ 8ರಂದು ಹೆಸರುಘಟ್ಟ ರಸ್ತೆಯಲ್ಲಿ ಬಿಹಾರದ ಕಾರ್ಮಿಕ ಪ್ರವೀಣ್ ಎಂಬಾತನ ಶೆಡ್‌ಗೆ ನುಗ್ಗಿದ್ದ ಆರೋಪಿಗಳು, ಆತನಿಗೆ ಚಾಕುವಿನಿಂದ ಇರಿದು ಹಣ ಹಾಗೂ ಮೊಬೈಲ್ ಕಸಿದುಕೊಂಡು ಬಂದಿದ್ದರು. ಮರುದಿನವೇ ಕಾಲೇಜಿನ ಸಮೀಪ ಪ್ರೇಮಿಗಳಿಗೆ ಬೆದರಿಸಿ ಒಡವೆ ದೋಚಿದ್ದರು.

ಈ ಗ್ಯಾಂಗ್‌ನ ಕೃತ್ಯದ ಬಗ್ಗೆ ನಿಯಂತ್ರಣ ಕೊಠಡಿಗೆ ನಿರಂತರವಾಗಿ ದೂರುಗಳು ಬರುತ್ತಿದ್ದರಿಂದ, ಪೊಲೀಸರು ಮೂರು ವಿಶೇಷ ತಂಡ ಗಳನ್ನು ರಚಿಸಿಕೊಂಡು ಬಂಧನಕ್ಕೆ ಬಲೆ ಬೀಸಿದ್ದರು. ಕೊನೆಗೂ ಮಂಗಳವಾರ ರಾತ್ರಿ 7.30ರ ಸುಮಾರಿಗೆ ಸುಲಿಗೆ ಕೋರರು ತರಬರನಹಳ್ಳಿಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. 

ಎಂಟು ಕೃತ್ಯ ಬೆಳಕಿಗೆ: ಠಾಣೆಗೆ ಎಳೆದೊಯ್ದು ವಿಚಾರಣೆ ನಡೆಸಿದಾಗ, ತಾವು ಇತ್ತೀಚೆಗೆ ಮಾಡಿದ 8 ಸುಲಿಗೆ ಪ್ರಕರಣಗಳ ಬಗ್ಗೆ ಬಾಯ್ಬಿಟ್ಟಿದ್ದರು. ತಿರುಮಲಶೆಟ್ಟಿಹಳ್ಳಿಯ ಮನೆಯೊಂದಕ್ಕೆ ನುಗ್ಗಿ ವಿದ್ಯಾರ್ಥಿಗಳಿಗೆ ಬೆದರಿಸಿ ದರೋಡೆ ಮಾಡಿದ್ದನ್ನೂ ಒಪ್ಪಿಕೊಂಡ ಆರೋಪಿಗಳು, ‘ಚಾಕು ಹಾಗೂ ಲಾಂಗುಗಳನ್ನು ಅರಣ್ಯದಲ್ಲಿ ಅಡಗಿಸಿಟ್ಟಿದ್ದೇವೆ’ ಎಂದು ಹೇಳಿದ್ದರು. ಹೀಗಾಗಿ, ಇನ್‌ಸ್ಪೆಕ್ಟರ್ ತಂಡ ಬುಧವಾರ ಬೆಳಿಗ್ಗೆಯೇ ಅವರನ್ನು ಅಲ್ಲಿಗೆ ಕರೆದೊಯ್ದಿತ್ತು. ಮಾರಕಾಸ್ತ್ರಗಳನ್ನು ಹುಡುಕಿ ಹಸ್ತಾಂತರಿಸುವ ಸಂದರ್ಭದಲ್ಲಿ ಪ್ರೊಬೆಷನರಿ ಪಿಎಸ್‌ಐ ವಸಂತ್ ಮೇಲೆ ದೇವರಾಜ್ ಹಲ್ಲೆಗೆ ಯತ್ನಿಸಿದರೆ, ಉಳಿದಿಬ್ಬರು ಹೆಡ್‌ಕಾನ್‌ಸ್ಟೆಬಲ್ ಶಿವಾಜಿರಾವ್ ಅವರ ಮೇಲೆ ಕಲ್ಲು ತೂರಿದರು. ಈ ಹಂತದಲ್ಲಿ ಇನ್‌ಸ್ಪೆಕ್ಟರ್ ಗುಂಡು ಹೊಡೆದಿದ್ದಾರೆ ಎನ್ನಲಾಗಿದೆ.

‘ದೂರು ಕೊಡಿ’

‘ಆಚಾರ್ಯ ಕಾಲೇಜಿನ ಬಳಿಯೇ ಇವರು ಕಾರ್ಯಾಚರಣೆ ನಡೆಸುತ್ತಿದ್ದರು. ಇವರಿಂದ ಸುಲಿಗೆಗೆ ಒಳಗಾದವರು ಠಾಣೆಗೆ ದೂರು ಕೊಡಬಹುದು. ಹೆಸರು–ವಿವರ ಗೋಪ್ಯವಾಗಿಟ್ಟು ತನಿಖೆ ನಡೆಸಲಾಗುವುದು’ ಎಂದು ಡಿಸಿಪಿ ಶಶಿಕುಮಾರ್ ಹೇಳಿದ್ದಾರೆ.‌

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು