ಗುರುವಾರ , ಅಕ್ಟೋಬರ್ 29, 2020
20 °C

ಯುವತಿಗೆ ‘ಒಂಟಿಯಾಗಿ ಬಾ’ ಎಂದ ಟೆಕಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತಾನು ಕರೆದ ಜಾಗಕ್ಕೆ ಒಂಟಿಯಾಗಿ ಬರುವಂತೆ ಮಾಜಿ ‍ಪ್ರೇಯಸಿಗೆ ಪೀಡಿಸುತ್ತಿದ್ದ ಆರೋಪದಡಿ ಭಾಸ್ಕರ್ ನರದಾಸಿ (29) ಎಂಬ ಸಾಫ್ಟ್‌ವೇರ್ ಎಂಜಿನಿಯರ್‌ನನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.

ಚಿತ್ತೂರಿನ ಭಾಸ್ಕರ್, ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದು ಕೋನಪ್ಪನ ಅಗ್ರಹಾರದಲ್ಲಿ ನೆಲೆಸಿದ್ದ. ‘ನಾನು ಹಾಗೂ ಭಾಸ್ಕರ್ ಮೊದಲು ಪ್ರೀತಿಸುತ್ತಿದ್ದೆವು. ಆ ಸಂದರ್ಭದಲ್ಲಿ ಒಟ್ಟಿಗೇ ಕೆಲವು ಫೋಟೊಗಳನ್ನೂ ತೆಗೆಸಿಕೊಂಡಿದ್ದೆವು. ಈ ನಡುವೆ ಆತನ ವರ್ತನೆಯಿಂದ ಬೇಸರವಾಗಿ ದೂರವಾಗಿದ್ದೆ. ಇಷ್ಟು ದಿನ ಸುಮ್ಮನಿದ್ದ ಆತ, ಈಗ ಹಳೇ ಫೊಟೊಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ’ ಎಂದು 27 ವರ್ಷದ ಯುವತಿ ಮೇ 1ರಂದು ಠಾಣೆಗೆ ದೂರು ಕೊಟ್ಟಿದ್ದರು.

‘ಭಾಸ್ಕರ್ ಕಿರುಕುಳ ನೀಡುತ್ತಿರುವ ವಿಚಾರ ನನ್ನ ತಂದೆಗೆ ಗೊತ್ತಾಯಿತು. ಆತನನ್ನು ಕರೆಸಿ ಬುದ್ಧಿ ಹೇಳಿ ಕಳುಹಿಸಿದ್ದರು. ಆದರೂ ಆತನ ಕಾಟ ತಪ್ಪಿಲ್ಲ. ‘ನಾನು ಕರೆದ ಜಾಗಕ್ಕೆ ಒಂಟಿಯಾಗಿ ಬರಬೇಕು. ನನ್ನ ಜತೆ ಒಂದು ದಿನ ಇರಬೇಕು. ಇಲ್ಲದಿದ್ದರೆ ಫೋಟೊಗಳನ್ನು ಇಂಟರ್‌ನೆಟ್‌ನಲ್ಲಿ ಹಾಕಿ ಮರ್ಯಾದೆ ತೆಗೆಯುತ್ತೇನೆ’ ಎಂದು ಬೆದರಿಸುತ್ತಿದ್ದಾನೆ’ ಎಂದು ಸಂತ್ರಸ್ತೆ ಮನವಿ ಮಾಡಿದ್ದರು.

ಕರೆ ವಿವರ (ಸಿಡಿಆರ್) ಆಧರಿಸಿ ಬಂಧಿಸಿದ ಪೊಲೀಸರು, ನ್ಯಾಯಾಧೀಶರ ಆದೇಶದ ಮೇರೆಗೆ ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.    

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು